Lal Bagh Flower Show| ʻಮಹರ್ಷಿ ವಾಲ್ಮೀಕಿʼಪರಿಕಲ್ಪನೆಯಲ್ಲಿ ಅರಳಿತು ಹೂವಿನ ಚಿತ್ತಾರ

ಮುಂಗಡ ಟಿಕೆಟ್ ಬುಕಿಂಗ್‌ಗೆ ಆನ್‌ಲೈನ್‌ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಪ್ರದರ್ಶನಕ್ಕೆ ಬರುವವರಿಗೆ ಇದೇ ಮೊದಲ ಬಾರಿಗೆ ಕ್ಯೂಆರ್​ ಕೋಡ್​ ಮೂಲಕ ಟಿಕೆಟ್​ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.;

Update: 2025-01-16 11:52 GMT
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 217ನೇ ಫಲ ಪುಷ್ಪ ಪ್ರದರ್ಶನವನ್ನು ಲಾಲ್‌ಬಾಗ್‌ನಲ್ಲಿ ಉದ್ಘಾಟಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ 217ನೇ ಫಲ ಪುಷ್ಪ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿದರು. ಜನವರಿ 16ರಿಂದ ಜನವರಿ 27ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ವಾಲ್ಮೀಕಿ ಗುರುಪೀಠದ ಸ್ವಾಮೀಜಿಗಳು, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ವಸತಿ ಸಚಿವ ಜಮೀರ್ ಅಹಮದ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ವೇಳೆ ಉಪಸ್ಥಿತರಿದ್ದರು.

ಎಂಟ್ರಿ ಫೀ, ಬುಕಿಂಗ್ ಹೇಗೆ?

ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಸ್ವಂತ ವಾಹನದಲ್ಲಿ ಬರುವವರಿಗೆ ವಾಹನ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮುಂಗಡ ಟಿಕೆಟ್ ಬುಕಿಂಗ್‌ಗೆ ಆನ್‌ಲೈನ್‌ ಸೌಲಭ್ಯ ಕಲ್ಪಿಸಲಾಗಿದೆ. ಪ್ರದರ್ಶನಕ್ಕೆ ಬರುವವರಿಗೆ ಇದೇ ಮೊದಲ ಬಾರಿಗೆ ಕ್ಯೂಆರ್​ ಕೋಡ್​ ಮೂಲಕ ಟಿಕೆಟ್​ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.

https://hasiru.karnataka.gov.in/flowershow/login.aspx ಎಂಬ ವೆಬ್‌ಸೈಟ್‌ಗೆ ಹೋಗಿ ಆನ್‌ಲೈನ್‌ನಲ್ಲಿ  ಮುಂಗಡ ಬುಕಿಂಗ್ ಮಾಡಬಹುದು. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ., ರಜಾ ದಿನಗಳಲ್ಲಿ 100 ರೂ. ಟಿಕೆಟ್ ದರವಿದೆ. 12 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂ. ಶಾಲಾ ಸಮವಸ್ತ್ರ ಧರಿಸಿ ಬರುವ 10 ನೇ ತರಗತಿ ವರೆಗಿನ ಮಕ್ಕಳಿಗೆ ಉಚಿತ ಪ್ರವೇಶವಿರಲಿದೆ.

ಲಾಲ್‌ಬಾಗ್‌ನಲ್ಲಿ ಈವರೆಗೂ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಆಫ್‌ಲೈನ್‌ ಮತ್ತು ಆನ್‌ಲೈನ್‌​ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ನಾಲ್ಕು ದ್ವಾರಗಳಲ್ಲಿ ಟಿಕೆಟ್ ಕೌಂಟರ್​ಗಳನ್ನು ಅಳವಡಿಸಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು.‌ ಅದರಂತೆ ನಗರದ ಬಸ್​ ನಿಲ್ದಾಣಗಳು, ಮೆಟ್ರೊ ರೈಲು ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕ್ಯೂ.ಆರ್​ಕೋಡ್​ ಸ್ಟಿಕ್ಕರ್ ಅಂಟಿಸುವ ಮೂಲಕ ಟಿಕೆಟ್​ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕ ಡಿ.ಎಸ್​.ರಮೇಶ್​ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಪ್ರದರ್ಶನದ ಪ್ರಮುಖ ಆಕರ್ಷಣೆಗಳು 

ಇಂಡೋ ಅಮೆರಿಕನ್​ ಹೈ-ಬ್ರೀಡ್​ ಸೀಡ್ಸ್​ ಕಂಪೆನಿಯ ಆಕರ್ಷಕ ಹೂವುಗಳ ಜೋಡಣೆ ಮತ್ತು ವಾಲ್ಮೀಕಿ ಪುತ್ಥಳಿ ಇದೆ. ಅಲ್ಲದೇ ವೈವಿಧ್ಯಮಯ 1.75 ಲಕ್ಷ ಹೂವುಗಳು ಮತ್ತು ಎಲೆ ಜಾತಿಯ ಗಿಡಗಳ ಪ್ರದರ್ಶನವೂ ಇದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ ವಿವಿಧ ಜಾತಿಯ ಸುಮಾರು 1.5 ಲಕ್ಷ ಹೂವುಗಳಿಂದ ಬೃಹತ್​ ಹುತ್ತವನ್ನು ಅನಾವರಣ ಮಾಡಲಾಗಿದ್ದು, ಇದು ಗಾಜಿನ ಮನೆಯ ಪ್ರಮುಖ ಆಕರ್ಷಣೆಯಾಗಿರಲಿದೆ.

ವಾಲ್ಮೀಕಿ ಆಶ್ರಮ 

ಗಾಜಿನ ಮನೆಯ ಎಡಬದಿಯಲ್ಲಿ ಹೂವಿನಿಂದಲೇ ವಾಲ್ಮೀಕಿ ಆಶ್ರಮ ಮತ್ತು ರಾಮಾಯಣ ರಚನೆಗೆ ಮೂಲ ಕಾರಣವಾದ ಸನ್ನಿವೇಶದ ಪ್ರದರ್ಶನ ಇದೆ.  ಇದಕ್ಕಾಗಿ ವಿವಿಧ ರಾಜ್ಯಗಳಿಂದ ತರಿಸಿರುವ 2.75 ಲಕ್ಷ ರೂ.ಗಳನ್ನು ಬಳಸಲಾಗುತ್ತಿದೆ. 

ರಾಮಾಯಣದ ಓಲೆಗರಿ ಹಸ್ತಪ್ರತಿಗಳು 

ಗಾಜಿನ ಮನೆಯ ಒಳಾಂಗಣದಲ್ಲಿ ಸೂಕ್ತ ಸ್ಥಳದಲ್ಲಿ ರಾಮಾಯಣ ಮಹಾಕಾವ್ಯದ ಓಲೆಗರಿ ಹಸ್ತಪ್ರತಿ ಪ್ರದರ್ಶನ ಮಾಡಲಾಗಿದೆ. ಹೊರಾಂಗಣದಲ್ಲಿ ಪುಷ್ಪಗಳಿಂದ ನರ್ತಿಸುವ ರಾಷ್ಟ್ರಪಕ್ಷಿ ನವಿಲು, ಹೃದಯಾಕಾರದ ಹೂವಿನ ಕಮಾನುಗಳು, ಮೆಗಾ ಫ್ಲೋರಲ್​ ಫ್ಲೋ, ತೂಗುವ ಹೂವುಗಳು, ಸಸ್ಯ ಸಂತೆ ಮತ್ತು ವಿಶೇಷಗಳು ಇರಲಿವೆ. ಅಲ್ಲದೆ, ಭದ್ರತೆಗಾಗಿ ಸಿಸಿ ಕ್ಯಾಮೆರಾಗಳು, ಪೊಲೀಸ್​ ಔಟ್​ ಪೋಸ್ಟ್​, ಕುಡಿಯುವ ನೀರಿನ ಸೌಲಭ್ಯ ಇರಲಿದೆ.

ಪಾರ್ಕಿಂಗ್​ 

ಪ್ರದರ್ಶನಕ್ಕೆ ಆಗಮಿಸುವವರಿಗೆ ಶಾಂತಿ ನಗರ ಬಹುಮಹಡಿ ಕಟ್ಟಡ, ಹಾಪ್​ ಕಾಮ್ಸ್​ ಆವರಣ, ಆಲ್​ ಅಮೀನ್​ ಕಾಲೇಜು ಆವರಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.   

26ರವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ

ಗಣರಾಜ್ಯೋತ್ಸವ ಪ್ರಯುಕ್ತ ಫಲಪುಷ್ಟ ಹಿನ್ನಲೆಯಲ್ಲಿ ಬಾಗ್ ವ್ಯಾಪ್ತಿ ಯಲ್ಲಿ ಜ.16 ರ ಗುರುವಾರದಿಂದ 26ರವರೆಗೆ 11 ದಿನಗಳು ಸಂಚಾರ ವ್ಯವಸ್ಥೆಯಲ್ಲಿ ಬದಲಾ ಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.

ಈ ಫಲಪುಷ್ಪ ಪ್ರದರ್ಶನಕ್ಕೆ ಗಣ್ಯರು, ಸಾರ್ವಜನಿಕರು, ಪ್ರವಾಸಿಗರು ದೇಶ-ವಿದೇಶಿ ಪ್ರೇಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 8ರಿಂದ 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಜನ ಸಂದಣಿ ಹಿನ್ನೆಲೆಯಲ್ಲಿ ವಿಲ್ಸನ್‌ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಸುತ್ತಮುತ್ತಲ್ಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಹನ ನಿಲುಗಡೆ ಸ್ಥಳಗಳು 1. ಡಾ. ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿ-ಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದು. 2. ಕೆ.ಹೆಚ್.ರಸ್ತೆ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆಗೆ ಅವಕಾಶ, 3. ಡಾ|ಮರಿಗೌಡ ರಸ್ತೆ-ಹಾಪ್ ಕಾಮ್ಸ್‌ನಲ್ಲಿ ಬೈಕು ಹಾಗೂ ಕಾರುಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ,  4 ಜೆ.ಸಿ.ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಹಾಗೂ ಕಾರುಗಳ ನಿಲುಗಡೆ ಮಾಡಬಹುದು. 

ನಿಲುಗಡೆ ನಿಷೇಧಿತ ರಸ್ತೆಗಳು

1. ಡಾ: ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿಗಳು.

2. ಕೆ.ಹೆಚ್.ರಸ್ತೆ, ಕೆ.ಹೆಚ್ .ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗೆ ರಸ್ತೆಯ ಎರಡು ಕಡೆ.

3. ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್‌ ಮುಖ್ಯದ್ವಾರದವರೆಗೆ

4.ಸಿದ್ದಯ್ಯ, ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್‌ನಿಂದ ವಿಲ್ಸನ್‌ ಗಾರ್ಡನ್ 12ನೇ ಕ್ರಾಸ್‌ವರೆಗೆ

5. ಬಿಟಿಎಸ್ ಬಸ್ ನಿಲ್ದಾಣದ ಜಂಕ್ಷನ್‌ನಿಂದ ಅಂಚೆ ಕಚೇರಿ ರಸ್ತೆಯ ಎರಡು ಕಡೆ.

6. ಕ್ಟಂಬಿಗಲ್ ರಸ್ತೆಯ ಎರಡೂ ಕಡೆ.

7 ಲಾಲ್‌ಬಾಗ್ ಪಶ್ಚಿಮದ್ವಾರದಿಂದ ಆರ್. ವಿ. ಟೀಚರ್ಸ್ ಕಾಲೇಜುವರೆಗೆ.

8. ಆರ್.ವಿ.ಟೀಚರ್ಸ್ ಕಾಲೇಜ್‌ನಿಂದ ಅಶೋಕ ಪಿಲ್ಲರ್‌ವರೆಗೆ

9. ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್‌ವರೆಗೆ ಮಾರ್ಗ ಬದಲಾವಣೆ

ಮೆಟ್ರೋ ಬಳಸುವಂತೆ ಪೊಲೀಸರ ಮನವಿ

ಫಲಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ ಡಾ. ಮರೀಗೌಡ ರಸ್ತೆ, ಲಾಲ್‌ಬಾಗ್ ರಸ್ತೆ, ಕೆ. ಹೆಚ್. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಕಾರಣ ಬಿಎಂಟಿಸಿ ಬಸ್‌ಗಳು ಹಾಗೂ ಮೆಟ್ರೋ ಬಳಸುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

Tags:    

Similar News