ಜೈಲಿನಿಂದಲೇ ಉಗ್ರ ಕೃತ್ಯಕ್ಕೆ ಸಂಚು; ಎನ್​ಐಎ ದಾಳಿ; ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಸೇರಿ ಮೂವರ ಬಂಧನ

ಬೆಂಗಳೂರು, ಉತ್ತರ ಕರ್ನಾಟಕ ಸೇರಿದಂತೆ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಆರೋಪದ ಮೇಲೆ, ನಾಲ್ಕು ಗ್ರೇನೈಡ್, ಮದ್ದುಗುಂಡುಗಳು, ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ಸಂಗ್ರಹಿಸಿದ್ದ.;

Update: 2025-07-08 16:44 GMT

ಜೈಲಿನಿಂದಲೇ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಉಗ್ರ ಕೃತ್ಯಗಳಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಬೆಂಗಳೂರು ಮತ್ತು ಕೋಲಾರದ ಐದು ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ದಾಳಿಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್, ನಗರ ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಚಾನ್‌ಪಾಷಾ ಮತ್ತು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್‌ನ ತಾಯಿ ಅನೀಸ್ ಫಾತೀಮಾ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಆರೋಪಿಗಳ ಮನೆಯಿಂದ ಡಿಜಿಟಲ್ ದಾಖಲೆಗಳು, ನಗದು, ಚಿನ್ನಾಭರಣ ಹಾಗೂ ಕೃತ್ಯಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ನಾಗನಾಥಪುರದಲ್ಲಿರುವ ವೈದ್ಯ ನಾಗರಾಜ್ ಮನೆ, ಸಿಎಆರ್ ಉತ್ತರ ವಿಭಾಗದಲ್ಲಿರುವ ಚಾನ್‌ಪಾಷಾ ವಾಸವಾಗಿರುವ ಸಿಎಆರ್ ಕ್ವಾರ್ಟರ್ಸ್, ಕೋಲಾರದಲ್ಲಿರುವ ಅವರ ಮನೆ, ಆರ್.ಟಿ. ನಗರದಲ್ಲಿರುವ ಜುನೈದ್ ಅಹ್ಮದ್ ಮನೆ, ಮತ್ತು ವೈದ್ಯ ನಾಗರಾಜ್‌ಗೆ ಸಹಾಯಕಿ ಆಗಿದ್ದ ಪವಿತ್ರಾ ಎಂಬಾಕೆಯ ಮನೆ ಸೇರಿ ಒಟ್ಟು ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಆರೋಪಿಗಳ ಪೈಕಿ ಮನೋವೈದ್ಯ ನಾಗರಾಜ್, ಕಳೆದ ನಾಲ್ಕೈದು ವರ್ಷಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಹೆಚ್ಚುವರಿ ಮನೋವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ. ಈತ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಲಷ್ಕರ್ ಎ-ತೊಯ್ಬಾ (LeT) ಸಂಘಟನೆ ದಕ್ಷಿಣ ಭಾರತದ ಮುಖ್ಯಸ್ಥ ಟಿ. ನಾಸೀರ್, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ಹಾಗೂ ಇತರೆ ಕೈದಿಗಳಿಗೆ ಕಳ್ಳಸಾಗಣೆ ಮೂಲಕ ಮೊಬೈಲ್‌ಗಳನ್ನು ತಲುಪಿಸುತ್ತಿದ್ದ ಎನ್ನಲಾಗಿದೆ. ಈತನಿಗೆ ಆತನ ಸಹಾಯಕಿ ಪವಿತ್ರಾ ಎಂಬಾಕೆ ಸಹಾಯ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇನ್ನು ಜುನೈದ್ ಅಹ್ಮದ್ ತಾಯಿ ಅನೀಸ್ ಫಾತೀಮಾ, ಜೈಲಿನಲ್ಲಿರುವ ಟಿ. ನಾಸೀರ್, ಲಷ್ಕರ್​ ತೈಬಾ ಸಂಘಟನೆಗೆ ನಿಧಿ ಸಂಗ್ರಹ ಹಾಗೂ ಇತರೆ ವಿಚಾರಗಳ ಬಗ್ಗೆ ನೀಡುತ್ತಿದ್ದ ಮಾಹಿತಿಯನ್ನು ವಿದೇಶದಲ್ಲಿರುವ ತನ್ನ ಮಗ ಜುನೈದ್ ಅಹ್ಮದ್‌ಗೆ ತಲುಪಿಸುತ್ತಿಳು, ಸೂಚನೆ ಪ್ರಕಾರ ಜುನೈದ್, ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುವ ಹಾಗೂ ಸಂಘಟನೆಗಾಗಿ ನಿಧಿ ಸಂಗ್ರಹಿಸುವ ಕೆಲಸದಲ್ಲಿ ಭಾಗಿಯಾಗುತ್ತಿದ್ದ ಎಂದು ಎನ್​ಐಎ ಮೂಲಗಳು ತಿಳಿಸಿವೆ.

ಎಎಸ್‌ಐ ಚಾನ್‌ಪಾಷಾ 2022ರಿಂದ ಟಿ. ನಾಸೀರ್ ಪರವಾಗಿ ಕೆಲಸ ಮಾಡುತ್ತಿದ್ದ. ಪ್ರಕರಣ ಸಂಬಂಧ ಆಗಾಗ್ಗೆ ಬೆಂಗಳೂರು, ಕೇರಳ ಹಾಗೂ ಇತರೆ ರಾಜ್ಯಗಳ ನ್ಯಾಯಾಲಯಗಳಿಗೆ ನಾಸೀರ್‌ರನ್ನು ಕರೆದೊಯ್ಯುವ ಬಗ್ಗೆ ಸಂಘಟನೆಯ ಕೆಲ ವ್ಯಕ್ತಿಗಳು ಹಾಗೂ ಮೊದಲೇ ಟಿ. ನಾಸೀರ್‌ಗೂ ಮಾಹಿತಿ ನೀಡುತ್ತಿದ್ದ. ಇದಕ್ಕಾಗಿ ಸಂಘಟನೆಯಿಂದ ಹಣ ಪಡೆಯುತ್ತಿದ್ದ ಎಂದು ಎನ್​ಐಎ ಮೂಲಗಳು ಮಾಹಿತಿ ನೀಡಿವೆ. ಇದೇ ಪ್ರಕರಣದಲ್ಲಿ ಎನ್​​ಐಎ ಅಧಿಕಾರಿಗಳು ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ಸೇರಿ 9 ಮಂದಿ ಶಂಕಿತರ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ.

ನಾಲ್ಕು ಕಡೆ ಉಗ್ರ ಕೃತ್ಯಕ್ಕೆ ಸಂಚು

ಬೆಂಗಳೂರು, ಉತ್ತರ ಕರ್ನಾಟಕ ಸೇರಿದಂತೆ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಆರೋಪದ ಮೇಲೆ, ನಾಲ್ಕು ಗ್ರೇನೈಡ್, ಮದ್ದುಗುಂಡುಗಳು, ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ಸಂಗ್ರಹಿಸಿದ್ದ ಬಗ್ಗೆ ಕೇಂದ್ರ ಅಪರಾಧ ವಿಭಾಗದ ಅಂದಿನ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ನೇತೃತ್ವದ ತಂಡ 2023ರ ಜುಲೈ 18ರಂದು ಬೆಂಗಳೂರಿನ ಆರ್.ಟಿ. ನಗರ ಸೇರಿದಂತೆ ವಿವಿಧೆಡೆ ದಾಳಿ ನಡೆಸಿತ್ತು. ಈ ವೇಳೆ ಆರ್.ಟಿ. ನಗರದ ಸುಲ್ತಾನ್ ಪಾಳ್ಯದ ಸೈಯದ್ ಸುಹೈಲ್ ಖಾನ್ (24), ಕೊಡಿಗೇಹಳ್ಳಿಯ ಮಹಮದ್ ಉಮರ್ (29), ಭದ್ರಪ್ಪ ಲೇಔಟ್ ನಿವಾಸಿ ಜಾಹೀದ್ ತಬ್ರೇಜ್ (25), ಸೈಯದ್ ಮುದಾಸಿರ್ ಪಾಷ (28) ಮತ್ತು ಮಹಮ್ಮದ್ ಫೈಸಲ್ (30) ಎಂಬ ಐವರು ಆರೋಪಿಗಳನ್ನು ಸಿಸಿಬಿ ಬಂಧಿಸಿತ್ತು. ಶಂಕಿತರಿಂದ ಏಳು ದೇಶಿ ನಿರ್ಮಿತ ಪಿಸ್ತೂಲುಗಳು, 45 ಸಜೀವ ಗುಂಡುಗಳು, 12 ಮೊಬೈಲ್‌ಗಳು, ಹಲವು ವಾಕಿಟಾಕಿಗಳು, 1 ಡ್ಯಾಗರ್, ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೆಲ ದಿನಗಳ ಬಳಿಕ ಜಾಹೀದ್ ತಬ್ರೇಜ್ ಮನೆಯಲ್ಲಿ 4 ಗ್ರೇನೇಡ್ ಪತ್ತೆಯಾಗಿತ್ತು. ಈ ಸಂಬಂಧ ಎನ್​​ಐಎ ತನಿಖೆ ಆರಂಭಿಸಿತ್ತು. 

Tags:    

Similar News