ಭಾಲ್ಕಿಯಲ್ಲಿ ಭೀಕರ ಅಪಘಾತ; ಗಾಣಗಾಪುರ ದೇಗುಲಕ್ಕೆ ತೆರಳುತ್ತಿದ್ದ ತೆಲಂಗಾಣದ ಮೂವರು ಸಾವು

ಮೃತಪಟ್ಟವರನ್ನು ರಾಜಪ್ಪ, ನವೀನ್ ಮತ್ತು ನಾಗರಾಜ್ ಎಂದು ಗುರುತಿಸಲಾಗಿದೆ. ನಾಗರಾಜ್ ಎಂಬುವರು ನಾರಾಯಣ ಖೇಡ್​ನಲ್ಲಿ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Update: 2025-11-05 06:41 GMT

ಡಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾಗಿರುವ ಕಾರು ಹಾಗೂ ಡಿಟಿಡಿಸಿ ವಾಹನ 

Click the Play button to listen to article

ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ಕಾರು ಹಾಗೂ ಕೊರಿಯರ್‌ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ತೆರಳುತ್ತಿದ್ದ ತೆಲಂಗಾಣ ಮೂಲದ ಮೂವರು ಭಕ್ತರು ಮೃತಪಟ್ಟಿದ್ದಾರೆ.

ಬುಧವಾರ (ನ.5) ಬೆಳಿಗ್ಗೆ ಅಪಘಾತ ಸಂಭವಿಸಿದೆ. ಕಾರು ಚಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ರಾಜಪ್ಪ, ನವೀನ್ ಮತ್ತು ನಾಗರಾಜ್ ಎಂದು ಗುರುತಿಸಲಾಗಿದೆ. ನಾಗರಾಜ್ ಎಂಬುವರು ನಾರಾಯಣ ಖೇಡ್​ನಲ್ಲಿ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.

ತೆಲಂಗಾಣ ಮೂಲದ ಈ ಮೂವರು ಕಲಬುರಗಿಯ ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ತೆರಳುತ್ತಿದ್ದರು. ಡಿಟಿಡಿಸಿ ಕೊರಿಯರ್ ವಾಹನವು ಹುಮನಾಬಾದ್ ಕಡೆಗೆ ತೆರಳುತ್ತಿತ್ತು. ಇದೇ ಸಂದರ್ಭದಲ್ಲಿ ಬೀದರ್ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಧನ್ನೂರ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವರಾದ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯೇಕ ಅಪಘಾತ, ಬೈಕ್ ಸವಾರ ಸಾವು

ಮೈಸೂರಿನಲ್ಲಿ ಬುಧವಾರ ಬೆಳಿಗ್ಗೆ ಬೈಕ್ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಬಿ.ಪಿ. ಪರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹುಣಸೂರು – ಮೈಸೂರು ಹೆದ್ದಾರಿಯ ಜಡಗನಕೊಪ್ಪಲು ಗೇಟ್ ಬಳಿ ಅಪಘಾತ ಸಂಭವಿಸಿದೆ. ಮೃತ ಪರಮೇಶ್ ವಕೀಲರಾಗಿದ್ದು, ಹುಣಸೂರು ತಾಲೂಕಿನ ಗ್ರಾಮದ ನಿವಾಸಿಯಾಗಿದ್ದರು. ಜಡಗನಕೊಪ್ಪಲಿನಿಂದ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Similar News