Bengaluru Twin Tunnel | ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಿನ ತಿಂಗಳು ಟೆಂಡರ್‌

ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗಿನ ಒಟ್ಟು 18ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಫೆಬ್ರುವರಿಯಲ್ಲಿ ಟೆಂಡರ್‌ ಕರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.;

Update: 2025-01-28 13:43 GMT
ಅವಳಿ ಸುರಂಗ

ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಮಹತ್ವಕಾಂಕ್ಷೆಯ ಸುರಂಗ ಮಾರ್ಗ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ.  

ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗಿನ ಒಟ್ಟು 18ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಫೆಬ್ರುವರಿಯಲ್ಲಿ ಟೆಂಡರ್‌ ಕರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಟ್ವಿನ್‌ ಟನಲ್‌ ರಸ್ತೆ ನಿರ್ಮಾಣಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ ವಿರೋಧದ ನಡುವೆಯೂ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಈಚೆಗೆ ಯೋಜನೆ ಕುರಿತಂತೆ ರೋಡಿಕ್ಸ್‌ ಸಂಸ್ಥೆ ಸಿದ್ಧಪಡಿಸಿದ್ದ ಡಿಪಿಆರ್‌ಗೆ ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಟನಲ್‌ ರಸ್ತೆ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗಲಿದೆ. ಡಿಪಿಆರ್‌ ಅಧ್ಯಯನವೇ ಅವೈಜ್ಞಾನಿಕವಾಗಿದೆ ಎಂದು ದೂರಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು.

ಫೆಬ್ರವರಿ ಅಂತ್ಯಕ್ಕೆ ಟೆಂಡರ್‌

ಅವಳಿ ಸುರಂಗ ಮಾರ್ಗ ನಿರ್ಮಾಣ ಸಂಬಂಧ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, “ಸುರಂಗ ರಸ್ತೆ ನಿರ್ಮಾಣಕ್ಕಾಗಿ ರೂ. 17,780 ಕೋಟಿ ಮೊತ್ತದ ಟೆಂಡರ್ ಅನ್ನು ಫೆಬ್ರವರಿ ಅಂತ್ಯದಲ್ಲಿ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೂರುವರೆ ವರ್ಷದೊಳಗೆ ಕಾಮಗಾರಿ ಮುಗಿಯಲಿದೆ. ಎರಡು ಹಂತದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. ಬಿಬಿಎಂಪಿ ಹಾಗೂ ಸರ್ಕಾರದಿಂದಲೂ ಅನುದಾನ ನೀಡಲಾಗುವುದು. ಈಗಾಗಲೇ ಯೋಜನೆಗೆ ಸಾಲ ನೀಡಲು ಪವರ್ ಫೈನಾನ್ಸ್ ಕಾರ್ಪೋರೇಷನ್, ಹುಡ್ಕೋ ಸೇರಿದಂತೆ ಒಂದಷ್ಟು ಬ್ಯಾಂಕ್ ಗಳು ಮುಂದೆ ಬಂದಿವೆ. ಇದಕ್ಕೂ ಹರಾಜು ಪ್ರಕ್ರಿಯೆ ಕರೆಯಲಾಗಿದೆ. ಯಾರು ಕಡಿಮೆ ಬಡ್ಡಿದರಕ್ಕೆ ಹಣ ನೀಡುತ್ತಾರೋ ಅವರಿಗೆ ಅವಕಾಶ ನೀಡಲಾಗುವುದು” ಎಂದು ಹೇಳಿದರು.

ಟನಲ್ ರಸ್ತೆ ಬೇಡ ಎಂದು ಸಂಸದ ಪಿ.ಸಿ.ಮೋಹನ್ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಇದರಿಂದ ಯಾರ ಭೂಮಿಯೂ ಹೋಗುವುದಿಲ್ಲ. ಭೂಮಿಯ ಕೆಳಗೆ ಹೋಗುತ್ತದೆ” ಎಂದರು. ಅರಮನೆ ಮೈದಾನದಲ್ಲಿ ಸುರಂಗ ರಸ್ತೆ ಬರುತ್ತದೆಯೇ ಎಂದು ಮರು ಪ್ರಶ್ನಿಸಿದಾಗ, “ಎಲ್ಲಿ ಬಂದರೂ ಭೂಮಿಯ ಒಳಗಡೆ ಬರುತ್ತದೆ” ಎಂದರು.

ಟ್ವಿನ್‌ ಟನಲ್‌ ರಸ್ತೆ ನಿರ್ಮಾಣ ಸಂಬಂಧ ರೋಡಿಕ್ ಕನ್ಸಲ್ಟೆಂಟ್‌ ಲಿಮಿಟೆಡ್‌ 9.5 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಿತ್ತು. ಆದರೆ, ಯೋಜನೆ ಬಗ್ಗೆಯೇ ವಿರೋಧ ವ್ಯಕ್ತವಾಗಿತ್ತು.

ಸುರಂಗ ಮಾರ್ಗ ನಿರ್ಮಾಣದ ಡಿಪಿಆರ್ ಸಿದ್ಧಪಡಿಸಲು ಕನಿಷ್ಠ 12 ರಿಂದ 18 ತಿಂಗಳು ಸಮಯ ಹಿಡಿಯುತ್ತದೆ. ಆದರೆ, ರೋಡಿಕ್ಸ್ ಕನ್ಸಲ್ಟೆಂಟ್‌ ಲಿಮಿಟೆಡ್‌ ಸಂಸ್ಥೆ ಕೇವಲ 3 ತಿಂಗಳಲ್ಲಿ ಡಿಪಿಆರ್ ಸಿದ್ಧಪಡಿಸಿದೆ. ಭೂತಾಂತ್ರಿಕ ಅಧ್ಯಯನ ನಡೆಸಿಲ್ಲ. ಸುರಂಗ ಮಾರ್ಗವು ಭೂ ಮೇಲ್ಭಾಗದಿಂದ 120 ಮೀಟರ್ ಆಳದಲ್ಲಿ ಹಾದು ಹೋಗುವ ಹಿನ್ನೆಲೆಯಲ್ಲಿ ಪ್ರತಿ ಕಿ.ಮೀ.ಗೆ 20 ಕಡೆ ಮಣ್ಣಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಬೇಕು. 18 ಕಿ.ಮೀ ಉದ್ದದ ಮಾರ್ಗದಲ್ಲಿ ಒಟ್ಟು 400 ಕಡೆ ಮಣ್ಣಿನ ಮಾದರಿ ಸಂಗ್ರಹಿಸಬೇಕಿತ್ತು. ಆದರೆ, ರೋಡಿಕ್ಸ್ ಕನ್ಸಲ್ಟೆಂಟ್‌ ಇದ್ಯಾವುದನ್ನೂ ಮಾಡಿಲ್ಲ. ನಗರ ಸಂಚಾರ ಯೋಜನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಂಬೈ ಕೋಸ್ಟಲ್ ರಸ್ತೆ ಯೋಜನೆಯ ಉದಾಹರಣೆ ನೀಡಲಾಗಿದೆ. ಅವೈಜ್ಞಾನಿಕವಾಗಿರುವ ಯೋಜನೆಯಿಂದ ಸುರಕ್ಷತೆಗೆ ಧಕ್ಕೆಯಾಗಲಿದೆ. ಪರಿಸರಕ್ಕೂ ಮಾರಕ ಎಂದು ಪಿ.ಸಿ. ಮೋಹನ್‌ ಆಕ್ಷೇಪ ವ್ಯಕ್ತಪಡಿಸಿದ್ದರು.

ಏನಿದು ಸುರಂಗ ಯೋಜನೆ?

ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ಗ ಒಟ್ಟು 18 ಕಿ.ಮೀ. ಸುರಂಗ ಮಾರ್ಗವನ್ನು 17,780 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಯೋಜನೆಯ ಗುತ್ತಿಗೆ ಪಡೆಯುವ ಸಂಸ್ಥೆ ಶೇ 60 ಹಾಗೂ ಬಿಬಿಎಂಪಿ ಶೇ 40 ರಷ್ಟು ಬಂಡವಾಳ ಹೂಡಲಿದೆ. ಈಗಾಗಲೇ ಬಿಬಿಎಂಪಿ ತನ್ನ ಪಾಲಿನ ಬಂಡವಾಳ ಹೂಡಿಕೆಗೆ 8 ಕೋಟಿ ಸಾವಿರ ಕೋಟಿ ಸಾಲದ ಮೊರೆ ಹೋಗಿದೆ. ಯೋಜನಾ ವೆಚ್ಚ ಆಧರಿಸಿ ಕಿ.ಮೀ.ಗೆ 18 ರಿಂದ 24 ರೂ.ವರೆಗೆ ಟೋಲ್ ಶುಲ್ಕ ಸಂಗ್ರಹಿಸಲು ಚಿಂತನೆ ನಡೆಸಿದೆ. ನಿರ್ಗಮನ ಮತ್ತು ಪ್ರವೇಶ ದ್ವಾರ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಸ್ವಾಧೀನಪಡಿಸಿಕೊಳ್ಳಲು 800 ಕೋಟಿ ರೂ. ನಿಗದಿಪಡಿಸಲಾಗಿದೆ.

ಪ್ರತಿ ಕಿ.ಮೀ.ಗೆ 898 ಕೋಟಿ ರೂ. ವೆಚ್ಚ

ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ ಕೆಎಸ್ಆರ್‌ಪಿ ಜಂಕ್ಷನ್‌ವರೆಗೆ ಒಟ್ಟು 16.67 ಕಿ.ಮೀ. ಉದ್ದದ ಆರು ಪಥದ ಮಾರ್ಗದಲ್ಲಿ ಪ್ರತಿ ನಿರ್ಗಮನ ಹಾಗೂ ಪ್ರವೇಶದ್ವಾರದ ಬಳಿ ಹತ್ತೂವರೆ ಮೀಟರ್ ಅಗಲದ 3 ಪಥ ನಿರ್ಮಿಸಲಾಗುತ್ತಿದೆ.

ಅವಳಿ ಸುರಂಗ ಮಾರ್ಗದ ಆರು ರಸ್ತೆಗಳಲ್ಲಿ ಎರಡು ಪಥಗಳನ್ನು ಆಂಬ್ಯುಲೆನ್ಸ್, ಬಿಎಂಟಿಸಿ ಬಸ್‌ ಹಾಗೂ ಪೊಲೀಸ್ ವಾಹನಗಳ ಸಂಚಾರಕ್ಕೆ ಮೀಸಲಿಡಲಾಗುವುದು. ಸುರಂಗ ಮಾರ್ಗದಲ್ಲಿ ಪ್ರತಿ ಕಿ.ಮೀ. ರಸ್ತೆ ನಿರ್ಮಾಣಕ್ಕೆ 898 ಕೋಟಿ ರೂ. ವೆಚ್ಚವಾಗಲಿದೆ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ, ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳದ ಎಸ್ಟೀಮ್ ಮಾಲ್‌ವರೆಗೆ ಸಂಚರಿಸಲು ಕನಿಷ್ಠ 90 ನಿಮಿಷ ಬೇಕಾಗುತ್ತದೆ. ಆದರೆ, ಸುರಂಗ ಮಾರ್ಗ ನಿರ್ಮಾಣವಾದ ಬಳಿಕ ಕೇವಲ 20 ನಿಮಿಷಗಳಲ್ಲಿ ತಲುಪಬಹುದಾಗಿದೆ.

5 ಕಡೆ ಪ್ರವೇಶ, ನಿರ್ಗಮನ

ಹೆಬ್ಬಾಳದಿಂದ ಸಿಲ್ಕ್ ಬೋಡ್‌ವರೆಗಿನ ಅವಳಿ ಸುರಂಗ ಮಾರ್ಗದಲ್ಲಿ ಒಟ್ಟು ಐದು ಕಡೆ ನಿರ್ಗಮನ ಹಾಗೂ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗುವುದು. ಹೆಬ್ಬಾಳ ಜಂಕ್ಷನ್, ಅರಮನೆ ಮೈದಾನ ಬಳಿಯ ಮೇಖ್ರಿ ವೃತ್ತ, ರೇಸ್‌ಕೋರ್ಸ್‌ ರಸ್ತೆ, ಲಾಲ್‌ಬಾಗ್‌ ಬಳಿಯ ಅಶೋಕ ಪಿಲ್ಲರ್ ಹಾಗೂ ಸಿಲ್ಕ್‌ ಬೋರ್ಡ್ ಬಳಿ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇರಲಿದೆ.

ಸಾಲದ ಮೊರೆ ಹೋಗಿದ್ದ ಸರ್ಕಾರ 

ಬಿಬಿಎಂಪಿ ಅಧಿಕಾರಿಗಳು 8 ಸಾವಿರ ಕೋಟಿ ಸಾಲಕ್ಕಾಗಿ ರಾಜ್ಯ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳು, ಹುಡ್ಕೊ, ಪಿಎಫ್‌ಟಿ, ಆರ್‌ಇಸಿ (ಗ್ರಾಮೀಣ ವಿದ್ಯುದೀಕರಣ ನಿಗಮ) ಸೇರಿದಂತೆ ಇತರೆ ಹಣಕಾಸು ಸಂಸ್ಥೆಗಳ ಮೊರೆ ಹೋಗಿತ್ತು. ಯೋಜನೆಯ ಗುತ್ತಿಗೆಗಾಗಿ ಜಾಗತಿಕ ಟೆಂಡರ್ ನಿರ್ಧರಿಸಿತ್ತು. ಟೆಂಡರ್‌ನಲ್ಲಿ ಭಾಗಿಯಾಗುವ ಅರ್ಹ ಕಂಪನಿಗೆ 20 ವರ್ಷಗಳ ಅವಧಿಗೆ ಟೋಲ್ ಶುಲ್ಕ ಸಂಗ್ರಹಿಸಲು ಅವಕಾಶ ಕಲ್ಪಿಸಲು ಯೋಜನೆಯಲ್ಲಿ ಸೇರಿಸಲಾಗಿದೆ. ಟೋಲ್‌ ಅವಧಿ ಮುಗಿದ ಬಳಿಕ ಸುರಂಗ ಮಾರ್ಗ ಬಿಬಿಎಂಪಿಗೆ ಹಸ್ತಾಂತರವಾಗಲಿದೆ. 

Tags:    

Similar News