ಮೆಟ್ರೋ ದರ ಹೆಚ್ಚಳ ಸಮಿತಿ ವರದಿ ಸಾರ್ವಜನಿಕಗೊಳಿಸಿ: ತೇಜಸ್ವಿ ಸೂರ್ಯ ಅರ್ಜಿ; ಹೈಕೋರ್ಟ್‌ನಿಂದ ಬಿಎಂಆರ್ಸಿಎಲ್ಗೆ ನೋಟಿಸ್
ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ದೆಹಲಿ, ಮುಂಬೈ ಮತ್ತು ಹೈದರಾಬಾದ್ ಮೆಟ್ರೋ ರೈಲು ನಿಗಮಗಳು ದರ ನಿಗದಿಗೆ ಸಂಬಂಧಿಸಿದ ವರದಿಗಳನ್ನು ಸಾರ್ವಜನಿಕಗೊಳಿಸಿವೆ.;
ಬೆಂಗಳೂರು ಮೆಟ್ರೋ ರೈಲು ನಿಗಮ ದರ ನಿಗದಿ ಸಮಿತಿ ಸಲ್ಲಿಸಿರುವ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಕೋರಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ BMRCL, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ತಾರಿಣಿ ಅವರ ನೇತೃತ್ವದ ಮೆಟ್ರೋ ರೈಲು ದರ ನಿಗದಿ ಸಮಿತಿಯು ಸಲ್ಲಿಸಿರುವ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ತೇಜಸ್ವಿ ಸೂರ್ಯ ತಮ್ಮ ಅರ್ಜಿಯಲ್ಲಿ ಕೋರಿದ್ದರು. ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.
ತೇಜಸ್ವಿ ಸೂರ್ಯ ಪರ ವಕೀಲರು "ವರದಿ ಬಹಿರಂಗಪಡಿಸುವಂತೆ ಪತ್ರ ಬರೆದಿದ್ದು, ಸಂಬಂಧಿತ ಬಿಎಂಆರ್ಸಿಎಲ್ ಅಧಿಕಾರಿಯನ್ನು ಭೇಟಿ ಮಾಡಲಾಗಿದೆ. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ನೇರವಾಗಿ ತೇಜಸ್ವಿ ಸೂರ್ಯ ಭೇಟಿ ಮಾಡಿದ್ದಾರೆ. ಆದರೆ, ಅವರು ಪ್ರತಿಕ್ರಿಯಿಸುತ್ತಿಲ್ಲ. ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಬಿಎಂಆರ್ಸಿಎಲ್ ಹೇಳುತ್ತಿದೆ. ಕಾಯಿದೆಯಲ್ಲಿ ಬಿಎಂಆರ್ಸಿಎಲ್ಗೆ ಯಾವುದೇ ವಿನಾಯಿತಿಯಲ್ಲ" ಎಂದು ಪೀಠದ ಮುಂದೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, "ನೀವು ತುಂಬಾ ಪ್ರಭಾವಿಯಾಗಿದ್ದೀರಿ, ಬಿಎಂಆರ್ಸಿಎಲ್ಗೆ ವರದಿ ಬಿಡುಗಡೆ ಮಾಡುವಂತೆ ಮಾಡಲಾಗುವುದಿಲ್ಲವೇ?" ಎಂದು ಪ್ರಶ್ನಿಸಿತು.
ಪಾರದರ್ಶಕತೆ ಮತ್ತು ದುಬಾರಿ ದರದ ಆರೋಪ
ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ದೆಹಲಿ, ಮುಂಬೈ ಮತ್ತು ಹೈದರಾಬಾದ್ ಮೆಟ್ರೋ ರೈಲು ನಿಗಮಗಳು ದರ ನಿಗದಿಗೆ ಸಂಬಂಧಿಸಿದ ವರದಿಗಳನ್ನು ಸಾರ್ವಜನಿಕಗೊಳಿಸಿವೆ. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಸಹ ಸ್ವೇಚ್ಛೆಯಿಂದ ನಡೆದುಕೊಳ್ಳದೆ ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಮೆಟ್ರೋ ರೈಲು (ಕಾರ್ಯನಿರ್ವಹಣೆ ಮತ್ತು ನಿರ್ವಹಣೆ) ಕಾಯಿದೆ ಸೆಕ್ಷನ್ 34ರ ಅನ್ವಯ 2024ರ ಸೆಪ್ಟೆಂಬರ್ 7ರಂದು ನಿವೃತ್ತ ನ್ಯಾ. ತಾರಣಿ ಅವರ ನೇತೃತ್ವದಲ್ಲಿ ಪರಿಷ್ಕೃತ ದರ ಪಟ್ಟಿ ಶಿಫಾರಸ್ಸು ಮಾಡಲು ದರ ನಿಗದಿ ಸಮಿತಿಯನ್ನು ಬಿಎಂಆರ್ಸಿಎಲ್ ರಚಿಸಿತ್ತು. ಈ ಸಮಿತಿಯು ದೇಶದ ವಿವಿಧೆಡೆ ಮತ್ತು ಸಿಂಗಾಪುರ ಹಾಗೂ ಹಾಂಗ್‌ಕಾಂಗ್ ಸೇರಿದಂತೆ ಜಾಗತಿಕ ಮೆಟ್ರೋ ರೈಲು ಪ್ರಯಾಣ ದರಗಳನ್ನು ಅಧ್ಯಯನ ಮಾಡಿ 2024ರ ಡಿಸೆಂಬರ್ 16ರಂದು ವರದಿಯನ್ನು ಸಲ್ಲಿಸಿತ್ತು. ಈ ಬಗ್ಗೆ 2025ರ ಫೆಬ್ರವರಿ 8ರಂದು ಬಿಎಂಆರ್ಸಿಎಲ್ ಮಾಧ್ಯಮ ಹೇಳಿಕೆಯ ಮೂಲಕ ಜನರಿಗೆ ತಿಳಿಸಿತ್ತು.
ಇದರ ಭಾಗವಾಗಿ 2025ರ ಫೆಬ್ರವರಿ 9ರಂದು ಕೆಲವು ಮಾರ್ಗಗಳಲ್ಲಿ ಮೆಟ್ರೋ ರೈಲು ಟಿಕೆಟ್ ದರವನ್ನು ಶೇ.100ರಷ್ಟು, ಅಂದರೆ 60 ರಿಂದ 90 ರೂಪಾಯಿಗೆ ಹೆಚ್ಚಿಸಲಾಗಿತ್ತು. ಆ ಮೂಲಕ ಇಡೀ ದೇಶದಲ್ಲೇ ದುಬಾರಿ ಎಂಬ ಅಪಖ್ಯಾತಿಗೆ ಮೆಟ್ರೋ ದರ ಗುರಿಯಾಗಿತ್ತು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2025ರ ಫೆಬ್ರವರಿ 14ರಂದು ಬಿಎಂಆರ್ಸಿಎಲ್ ಗರಿಷ್ಠ ಟಿಕೆಟ್ ದರವನ್ನು ಶೇ.71ಕ್ಕೆ ಮಿತಿಗೊಳಿಸಿತ್ತು.
ದರ ನಿಗದಿ ಸಮಿತಿ ವರದಿ ಬಹಿರಂಗಗೊಳಿಸುವಂತೆ ಬಿಎಂಆರ್ಸಿಎಲ್ ಹಲವು ಬಾರಿ ಮನವಿ ಮಾಡಿದ್ದರೂ ಅದಕ್ಕೆ ಸ್ಪಂದಿಸಿಲ್ಲ ಎಂದು ಆಕ್ಷೇಪಿಸಿ ತೇಜಸ್ವಿ ಸೂರ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಕೀಲ ಅನಿರುದ್ಧ್ ಕುಲಕರ್ಣಿ ಅವರು ತೇಜಸ್ವಿ ಪರವಾಗಿ ವಕಾಲತ್ತು ಹಾಕಿದ್ದಾರೆ. ಪೀಠವು ಬಿಎಂಆರ್ಸಿಎಲ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಎರಡು ವಾರ ಮುಂದೂಡಿತು.