ಟೆಕ್ಕಿ ಅತುಲ್ ಸುಭಾಷ್ ಪ್ರಕರಣ; ಕಾನೂನು ತಜ್ಞರು, ಮನೋವಿಜ್ಞಾನಿಗಳು ಏನು ವ್ಯಾಖ್ಯಾನಿಸುತ್ತಾರೆ?
ಪ್ರಕರಣದ ಕಾನೂನು ಸಾಧ್ಯಾಸಾಧ್ಯತೆ ಬಗ್ಗೆ ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ.ಎನ್. ಅಮೃತೇಶ್ ಹಾಗೂ ಡಾ. ಅ. ಶ್ರೀಧರ್ ಹಲವು ವಿಚಾರಗಳನ್ನು ‘ದ ಫೆಡರಲ್ ಕರ್ನಾಟಕ’ದೊಂದಿಗೆ ಹಂಚಿಕೊಂಡರು.;
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲಿಯೇ ಅಘಾತಕಾರಿ ಅಂಶಗಳು ಹೊರಗೆ ಬರುತ್ತಿವೆ. ಐಟಿ ಪ್ರಪಂಚದಲ್ಲಿನ ಒತ್ತಡಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಆ ಕ್ಷೇತ್ರದಲ್ಲಿನ ಕೆಲಸದ ಒತ್ತಡಗಳು, ಸಂಬಂಧಗಳನ್ನು ಸಂಬಾಳಿಸುವುದು, ಜೊತೆಗೆ ವೈಯಕ್ತಿಕ ಜೀವನವನ್ನು ಸರಿದೂಗಿಸುವುದು ಸೇರಿದಂತೆ ಕೋವಿಡ್ ಲಾಕ್ಡೌನ್ ಬಳಿಕ ಇಂತಹ ಪ್ರಕರಣಗಳು ಹೆಚ್ಚಾಗಿವೆ ಎನ್ನುತ್ತಾರೆ ತಜ್ಞರು.
ಇಂತಹ ತೀವ್ರ ನಿರ್ಧಾರಗಳನ್ನು ಕೇವಲ ಕಾನೂನುಗಳಿಂದ ಪರಿಹಾರ ಮಾಡಲು ಆಗುವುದಿಲ್ಲ. ಯುವ ಜನರ ಇಂತಹ ನಿರ್ಧಾರದ ಹಿಂದೆ ಇರುವ ಕಾರಣಗಳ ಬಗ್ಗೆ ದ ಫೆಡರಲ್ ಕರ್ನಾಟಕ ವಿವಿಧ ಕ್ಷೇತ್ರಗಳ ತಜ್ಞರನ್ನು ಮಾತಾಡಿಸಿತು.
ಈ ಪ್ರಕರಣದ ಕಾನೂನು ಸಾಧ್ಯಾಸಾಧ್ಯತೆ ಬಗ್ಗೆ ಹಲವು ವಿಚಾರಗಳನ್ನು ‘ದ ಫೆಡರಲ್ ಕರ್ನಾಟಕ’ದೊಂದಿಗೆ ಹಂಚಿಕೊಂಡಿರುವ ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ.ಎನ್. ಅಮೃತೇಶ್, ‘ಹೈಕೋರ್ಟ್‌ನ ಒಬ್ಬ ಹಿರಿಯ ನ್ಯಾಯವಾದಿಯಾಗಿ ನಾನು ಹೇಳುತ್ತೇನೆ, ಬೆಂಗಳೂರಿನ ಐಟಿ ಕ್ಷೆತ್ರದಲ್ಲಿ ಕೆಲಸ ಮಾಡುತ್ತಿರುವ 30ರಷ್ಟು ಉದ್ಯೋಗಿಗಳು ಇಂತಹ ಒತ್ತಡದಲ್ಲಿದ್ದಾರೆ. ಅತುಲ್ ಸುಭಾಷ್‌ನಂತೆಯೇ ತಮ್ಮ ವೈಯಕ್ತಿಕ ಜೀವನವನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೆ ಬದುಕುತ್ತಿದ್ದಾರೆ. ಇದು ಕೇವಲ ಒಬ್ಬ ಅತುಲ್ ಸಮಸ್ಯೆ ಅಲ್ಲ," ಎಂದು ವಿಶ್ಲೇಷಣೆ ಮಾಡಿದ್ದಾರೆ.
"ಅತುಲ್ ಸುಭಾಷ್ ಮೂಲಕ ಇಂತಹ ಬೆಳವಣಿಗೆ ಈಗ ಹೊರ ಜಗತ್ತಿಗೆ ಗೊತ್ತಾಗಿದೆ. ಆದರೆ ಕೆಲಸದ ಒತ್ತಡ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬಹುತೇಕರನ್ನು ಕಾಡುತ್ತಿದೆ. ಅದರಿಂದಾಗಿ ಪತಿ-ಪತ್ನಿಯರ ಮಧ್ಯದ ವೈಮನಸ್ಸು ಹೆಚ್ಚಾಗುತ್ತಿದೆ. ಜೊತೆಗೆ ಆ ಕ್ಷೇತ್ರದಲ್ಲಿ ಪತಿ, ಪತ್ನಿ ಒಂದೇ ಸೂರಿನಡಿ ಇದ್ದರೂ ಕೂಡ ಸ್ವಾವಲಂಬಿಗಳಾಗಿರುವುದು ಕೂಡ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ," ಅವರು ವ್ಯಾಖ್ಯಾನಿಸಿದ್ದಾರೆ.
"ಒಂದೆಡೆ ವೈಯಕ್ತಿಕ ಜೀವನದಲ್ಲಿನ ಏರುಪೇರು. ಮತ್ತೊಂದೆಡೆ ವೃತ್ತಿ ಜೀವನದಲ್ಲಿನ ಪೈಪೋಟಿ, ಅದರೊಂದಿಗೆ ಪಾಲಕರ ಕುರಿತು ಇರುವ ಕಾಳಜಿ ಈ ಎಲ್ಲವುಗಳ ಹಿನ್ನೆಲೆಯಲ್ಲಿ ಜಿವನವನ್ನು ಸರಿದೂಗಿಸಿಕೊಂಡು ಹೋಗುವುದೇ ಕಷ್ಟ ಎಂಬ ಹಂತಕ್ಕೆ ಆ ಕ್ಷೇತ್ರದ ಉದ್ಯೋಗಿಗಳು ಅನುಭಿಸುತ್ತಿದ್ದಾರೆ. ಅತುಲ್ ಸುಭಾಷ್ ನಂತೆ ಕೆಲವೊಂದು ಗಂಭೀರ ಪರಿಸ್ಥಿತಿಯಲ್ಲಿ ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದಿದ್ದಾರೆ.
ಕಾನೂನಿನಲ್ಲಿ ತೊಡಕಿಲ್ಲ
ಐಪಿಸಿ ಸೆಕ್ಷನ್ 498 ಎ (ವರದಕ್ಷಿಣೆ ನಿಷೇಧ ಕಾಯಿದೆ) ಕಾನೂನು ಸರಿಯಾಗಿಯೇ ಇತ್ತು. ಕೌಟುಂಬಿಕ ಪ್ರಕರಣಗಳ ಸಮಸ್ಯೆ ಪರಿಹರಿಸಲು ಸೂಕ್ತವಾಗಿತ್ತು. ಆದರೆ ಆ ಕಾನೂನಿನ ದುರುಪಯೋಗ ಶುರುವಾದಾಗ ಸಮಸ್ಯೆ ಉಂಟಾಯ್ತು. ಈಗ ಇಡೀ ಕಾನೂನನ್ನು ಹಿಂದಕ್ಕೆ ಪಡೆಯುವ ಅಗತ್ಯವಿಲ್ಲ. ಅದರಲ್ಲಿರುವ ಜಾಮೀನು ರಹಿತ ಎಂಬುದನ್ನು ಬಿಟ್ಟು ಜಾಮೀನು ಸಹಿತ ಎಂದು ಬದಲಾವಣೆ ಮಾಡಿದರೆ ಬಹಳಷ್ಟು ಜನರಿಗೆ ಸಹಾಯವಾಗುತ್ತದೆ. ಆಗ ಈ ವ್ಯವಸ್ಥೆಗಳಿಗೆ ಯಾರೂ ಹೆದರುವುದು ಅಗತ್ಯವಿರುವುದಿಲ್ಲ ಎಂದು ವಿವರಿಸಿದ್ದಾರೆ.
ಈ ಹಿಂದೆ ಐಪಿಸಿ ಸೆಕ್ಷನ್ 498 ಎ ಪ್ರಕಾರ ಪ್ರಕರಣ ದಾಖಲಾದಾಗ ಬಹಳಷ್ಟು ನ್ಯೂನತೆಗಳಿದ್ದವು. ನಂತರ ಅದಕ್ಕೆ ಸುಪ್ರೀಂಕೋರ್ಟ್ ಬದಲಾವಣೆ ತಂದಿದೆ. ಒಂದು ಪ್ರಕರಣ ದಾಖಲಾದ ತಕ್ಷಣ ಗಂಡ, ಗಂಡನ ತಂದೆ-ತಾಯಿ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಬೇರೆ ಬೇರೆಯಾಗಿದ್ದು, ಬೇರೆ ಊರಿನಲ್ಲಿದ್ದರೂ ಅವರನ್ನೆಲ್ಲ ಬಂಧಿಸಿ ವಿಚಾರಣೆ ಮಾಡುವ ಅಧಿಕಾರ ಪೊಲೀಸರಿಗಿತ್ತು.
ಅದರಿಂದ ಸಮಸ್ಯೆಗಳು ಶುರುವಾದಾಗ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಪತಿಯ ಮೇಲೆ ಪತ್ನಿ ದೂರು ದಾಖಲಿಸಿದ ತಕ್ಷಣ ಗಂಡನನ್ನು, ಆತನ 70-80 ವಯಸ್ಸಿನ ವಯೋವೃದ್ಧ ತಂದೆ-ತಾಯಿಯನ್ನು, ಗಂಡನ ಅಕ್ಕ ಮದುವೆಯಾಗಿ ಬೇರೆ ಊರಿನಲ್ಲಿ ಇದ್ದರೂ ಅವಳನ್ನೂ ಕೂಡ ಬಂಧಿಸಲು ಅವಕಾಶವಿತ್ತು. ಇದು ಸರಿಯಾಗಿ ಜಾರಿ ಆಗುತ್ತಿಲ್ಲ ಎಂಬುದು ಕಂಡು ಬಂದ ನಂತರ 498 ಎ ಕಾನೂನಿಗೆ ಸುಪ್ರೀಂ ಕೋರ್ಟ್ ತಿದ್ದುಪಡಿ ಮಾಡಿದೆ.
ಈಗ ದೂರು ದಾಖಲಾದ ತಕ್ಷಣ ಪ್ರಾಥಮಿಕ ತನಿಖೆ ಮಾಡಿ ನಂತರ ದೂರು ದಾಖಲಿಸಿಕೊಂಡು ಎಫ್ಐಆರ್ ಹಾಕಲು ಸುಪ್ರೀಂಕೋರ್ಟ್ ತಿದ್ದುಪಡಿ ತಂದಿದೆ. ಪತ್ನಿ ದೂರು ಕೊಟ್ಟ ಬಳಿಕ ಕೌಟಂಬಿಕ ಸಲಹಾ ಸಮಿತಿ ತೆರೆಯಲಾಗಿದೆ. ಅಲ್ಲಿ ಮೊದಲಿಗೆ ಕೊಟ್ಟಿರುವ ದೂರು ಸರಿಯಾಗಿದೆಯಾ ಎಂಬುದನ್ನು ಪರಿಶೀಲನೆ ಮಾಡುತ್ತಾರೆ. ಅದರಲ್ಲಿ ಏನಾದರೂ ದೌರ್ಜನ್ಯ ಮಾಡಲಿದ್ದಾರೆ, ವರದಕ್ಷಿಣೆ ಕಿರುಕುಳ ಕೊಟ್ಟಿದ್ದಾರೆ ಎಂಬುದು ಸಮಿತಿಯ ಗಮನಕ್ಕೆ ಬಂದ ನಂತರವಷ್ಟೇ ಎಫ್ಐಆರ್ ದಾಖಲಾಗುತ್ತದೆ ಎಂದವರು ವಿವರಿಸಿದರು.
ಮನೋವಿಜ್ಞಾನಿ ಡಾ. ಅ. ಶ್ರೀಧರ್ ವಿಶ್ಲೇಷಣೆ:
ತಂತ್ರಜ್ಞಾನದ ಜೊತೆಗೆ ಬೆಳೆದಿರುವಂತಹ 1999ರ ನಂತರ ಹುಟ್ಟಿರುವ ಮಕ್ಕಳಿಗೆ ಆರಂಭದಿಂದಲೇ ಹೊಂದಾಣಿಕೆಯಲ್ಲಿ ವ್ಯಕ್ತಿಗಳ ನಡುವೆ ಇರಬೇಕಾದಂತಹ ಹೊಂದಾಣಿಕೆ, ಅದರ ಜೊತೆಗೆ ತಂತ್ರಜ್ಞಾನದಿಂದ ತಮ್ಮದೇ ಆದಂತಹ ಮಾನಸಿಕತೆಯನ್ನು ತಂತ್ರಜ್ಞಾನ ಆಧಾರಿತ ಮನಸ್ಸನ್ನು ಮಾಡಿಕೊಳ್ಳುತ್ತಾರೆ. ಹೆಚ್ಚಿನ ಸಮಯದಲ್ಲಿ ಅವರಿಗೆ ಕೆಲವೊಂದು ಪ್ರತಿಕ್ರಿಯೆಗಳು ತುಂಬಾ ಕಾಣುತ್ತವೆ. ಅಂಥವರಿಗೆ ಯಾರಾದರೂ ‘ಏಯ್ ಏನೋ ನೀನು’ ಅಂದರೂ ಸಿಟ್ಟಾಗಬಹುದು. ಅವರಲ್ಲಿ ಸೂಕ್ಷ್ಮತೆ ಹೆಚ್ಚಾಗುತ್ತದೆ. ಯಾಕೆ ಅಂದರೆ ಅವರು ಯಂತ್ರಗಳ ಜೊತೆ ಇರುತ್ತಾರೆ. ಯಂತ್ರಗಳೊಂದಿಗೆ ಏಕಮುಖದ ಸಂಪರ್ಕವನ್ನು ಹೊಂದಿರುತ್ತಾರೆ. ಇದು ಒಂದು ಕಾರಣ. ಇದು ಪರಸ್ಪರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ. ಅ. ಶ್ರೀಧರ ವಿವರಿಸಿದ್ದಾರೆ.
ಇಂತಹ ಯುವಕರು ಮಧ್ಯ ವಯಸ್ಸಿಗೆ ಬರುವಂತೆ ಸಂದರ್ಭದಲ್ಲಿ 35ರ ವಯಸ್ಸಿನ ಆಸುಪಾಸಿನಲ್ಲಿ ಕುಟುಂಬದ ಅಗತ್ಯಗಳನ್ನು ಪೂರೈಸಲು, ಹೊಂದಿಕೊಂಡಿರಲು ಸಮಸ್ಯೆ ಆಗುತ್ತದೆ. ಯಶಸ್ಸಿಗೆ ಸಂಬಂಧಿಸಿದ ಪೈಪೋಟಿಯು ಅದೊಂದು ರೀತಿಯ ಸವಾಲುಗಳನ್ನು ಹುಟ್ಟು ಹಾಕುತ್ತದೆ.
ಇದೇ ಸಂದರ್ಭದಲ್ಲಿ ದಾಂಪತ್ಯದ ವಿಚಾರಕ್ಕೆ ಬರುವುದಾದರೆ, ಈ ತರಹದ ಪರಿಸ್ಥಿತಿಯಲ್ಲಿ ಗಂಡು ಅಥವಾ ಹೆಣ್ಣು ಇಬ್ಬರಿಗೂ ಒಂದಲ್ಲ ಒಂದು ರೀತಿಯ ಸಮಾನ ಒತ್ತಡಗಳು ಇರುತ್ತವೆ. ಹೀಗಾಗಿ ಸಣ್ಣಪುಟ್ಟ ವಿಷಯದಲ್ಲಿಯೂ ಮನಸ್ಸಿಗೆ ಬೇಜಾರಾಗುವಂತೆ ರೀತಿಯಲ್ಲಿಯೂ ವರ್ತಿಸುತ್ತಾರೆ. ಇವು 3 ಪ್ರಮುಖ ಕಾರಣಗಳು ಆತ್ಮಹತ್ಯೆ ನಿರ್ಧಾರಗಳನ್ನು ಕೈಗೊಳ್ಳಲು ಕಾರಣವಾಗುತ್ತದೆ ಎಂದು ವಿವರಿಸಿದ್ದಾರೆ.