Mysore Sandal Soap: ರಾಯಭಾರಿಯಾಗಿ ಪರಭಾಷಾ ನಟಿ ʼಮಿಲ್ಕೀ ಬ್ಯೂಟಿʼ ತಮನ್ನಾ; ದಿನಕ್ಕೆ 82 ಸಾವಿರದಂತೆ 6.20 ಕೋಟಿ ಸಂಭಾವನೆ
The Federal Exclusive| ಹಣಕಾಸು ಹೊಂದಾಣಿಕೆ ನಡೆಸಲು ಸರ್ಕಾರ ಹೆಣಗಾಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿ.ನ ಅಧಿಕೃತ ಅಂಬಾಸಡರ್ ಆಗಿ ಪರಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು 6.20 ಕೋಟಿ ರೂ ವೆಚ್ಚದಲ್ಲಿ ನೇಮಿಸಲು ನಿರ್ಧರಿಸಲಾಗಿದೆ.;
ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ವ್ಯವಸ್ಥೆಯನ್ನು ಸರಿದೂಗಿಸಲು ಮತ್ತು ರಾಜ್ಯದ ಇತರ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸು ಹೊಂದಾಣಿಕೆ ನಡೆಸಲು ಸರ್ಕಾರ ಹೆಣಗಾಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿ.ನ ಅಧಿಕೃತ ಅಂಬಾಸಡರ್ ಆಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ.
ಕರ್ನಾಟಕದ ಮತ್ತು ಕರ್ನಾಟಕ ಮೂಲದ ಖ್ಯಾತ ನಟ-ನಟಿಯರಿದ್ದರೂ, ಪರಭಾಷಾ ನಟಿ, ʼಮಿಲ್ಕೀ ಬ್ಯೂಟಿʼ ಖ್ಯಾತಿಯ ತಮನ್ನಾ ಭಾಟಿಯಾ ಅವರನ್ನು ರಾಯಭಾರಿ ಮಾಡಲು ಮುಂದಾಗಿರುವ ಸರ್ಕಾರ, ಎರಡು ವರ್ಷಗಳ ಅವಧಿಗೆ 6.20 ಕೋಟಿ ರೂ ವೆಚ್ಚದಲ್ಲಿ ಆಕೆಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿರುವುದು ಎಲ್ಲರ ಹುಬ್ಬೇರಿಸಿದೆ.
ಒಂದು ಅಂದಾಜಿನ ಪ್ರಕಾರ ಈ ಅಧಿಸೂಚನೆ ಪ್ರಕಾರ ಪ್ರತಿದಿನ ತಮನ್ನಾ ಭಾಟಿಯಾಗೆ ರೂ. ೮೨ ಸಾವಿರದಂತೆ ಎರಡು ವರ್ಷ ಎರಡು ದಿನ ನೀಡಬೇಕಾಗುತ್ತದೆ. ಅದಕ್ಕೆ ಟೆಂಡರ್ ನಿಯಮಗಳಿಗೆ ವಿನಾಯಿತಿಯನ್ನೂ ನೀಡಲಾಗಿದೆ!
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ಅಧಿಕಾರ ಚಲಾಯಿಸಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ಈ ನೇಮಕಾತಿಯ ದರ ನಿಗದಿ ಸಂಬಂಧ ವಿನಾಯಿತಿಯನ್ನೂ ನೀಡಲಾಗಿದೆ.
ಅಷ್ಟು ದೊಡ್ಡಮೊತ್ತದ ಹಣವನ್ನು ರಾಯಭಾರಿಯನ್ನು ನೇಮಿಸಲು ನೀಡುವುದು ಮತ್ತು ರಾಜ್ಯದ ನಟಿಯರನ್ನು ಪರಿಗಣಿಸದೆ ಅನ್ಯಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿರುವುದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಕಾಂತಮ್ಮ ಎನ್.ಎಂ. ಅವರ ಸಹಿಯಿರುವ ಅಧಿಸೂಚನೆಯಲ್ಲಿ "ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜಂಟ್ಸ್ ಲಿ. ನ ಅಧಿಕೃತ ಬ್ರಾಂಡ್ ರಾಯಭಾರಿಯಾಗಿ ಕು. ತಮನ್ನಾ ಭಾಟಿಯ ಅವರನ್ನು 2 ವರ್ಷ 2 ದಿನ ಗಳ ಅವಧಿಗೆ ರೂ. 6. 20 ಕೋಟಿ ವೆಚ್ಚದಲ್ಲಿ ನೇಮಕ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ಅಧಿಕಾರ ಚಲಾಯಿಸಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ," ಎಂದು ತಿಳಿಸಲಾಗಿದೆ.
ಜತೆಗೆ, ಉತ್ತಮ ಗುಣಮಟ್ಟದ ಸೇವೆಯನ್ನು ಸಂಜಸದ ದರದಲ್ಲಿ ಸಂಗ್ರಹಿಸುವುದನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ದೃಢಪಡಿಸಿಕೊಳ್ಳುವುದು, ಎಂದು ವಿವರಣೆ ನೀಡಲಾಗಿದೆ.