ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗೆ 4 ತಂಡ ರಚನೆ: ಡಾ. ಜಿ ಪರಮೇಶ್ವರ್
ಸರ್ಕಾರ ಮತ್ತು ಪೊಲೀಸ್ ಇಲಾಖೆ ನಿಮ್ಮ ಜೊತೆಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಜನರು ಸಂಯಮದಿಂದ ಇರಬೇಕು ಎಂದು ಡಾ. ಜಿ ಪರಮೇಶ್ವರ್ ಜನರಲ್ಲಿ ಮನವಿ ಮಾಡಿದ್ದಾರೆ.;
ಜಿ.ಪರಮೇಶ್ವರ್
ಮಂಗಳೂರಿನ ಬಜ್ಜೆಯಲ್ಲಿ ಗುರುವಾರ ರಾತ್ರಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಸೇರಿದಂತೆ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಎರಡು ಕೊಲೆ ಘಟನೆಗಳು ಜನರಲ್ಲಿ ಆತಂಕ ಮೂಡಿಸಿವೆ. ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
"ಈ ಕೊಲೆಯ ಹಿಂದಿನ ಆರೋಪಿಗಳು ಯಾರೇ ಆಗಿರಲಿ, ಅವರನ್ನು ಕಾನೂನಿನ ಅಡಿಗೆ ತರಲಾಗುವುದು. ಪೊಲೀಸ್ ಇಲಾಖೆ ಈಗಾಗಲೇ ತನಿಖೆ ಆರಂಭಿಸಿದ್ದು, ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರಕರಣದ ವರದಿಯನ್ನು ಸಹ ಕೇಳಲಾಗಿದೆʼʼ ಎಂದು ಅವರು ತಿಳಿಸಿದರು.
ಶಾಂತಿ ಕಾಪಾಡಲು ಮನವಿ
"ಸರ್ಕಾರ ಮತ್ತು ಪೊಲೀಸ್ ಇಲಾಖೆ ನಿಮ್ಮ ಜೊತೆಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಜನರು ಸಂಯಮದಿಂದ ಇರಬೇಕು ಮತ್ತು ಸರ್ಕಾರದ ಮೇಲೆ ಭರವಸೆ ಇಡಬೇಕು" ಎಂದು ಡಾ. ಜಿ ಪರಮೇಶ್ವರ್ ಜನರಲ್ಲಿ ಮನವಿ ಮಾಡಿದ್ದಾರೆ.
ಕೊಲೆ ಪ್ರಕರಣದ ಸಂಬಂಧ ಬಿಜೆಪಿ ಮಾಡಿರುವ ಆರೋಪಗಳಿಗೆ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. "ಕಾಂಗ್ರೆಸ್‌ನಲ್ಲಿ ಹಿಂದೂಗಳಿಲ್ಲವೇ? ಬಿಜೆಪಿಯ ಆರೋಪಗಳಲ್ಲಿ ಯಾವುದೇ ಅರ್ಥವಿಲ್ಲ. ಯಾವ ಸರ್ಕಾರವೂ ಕೊಲೆ ಘಟನೆಗಳನ್ನು ಬಯಸುವುದಿಲ್ಲ. ಇಂತಹ ಘಟನೆಗಳನ್ನು ರಾಜಕೀಯವಾಗಿ ಬಳಸಿಕೊಂಡು ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನು ಸರ್ಕಾರ ಸಹಿಸುವುದಿಲ್ಲ" ಎಂದು ಅವರು ತಿಳಿಸಿದರು.