Sugar Cane Issue | ಬಾಕಿ ನಡುವೆಯೂ ಕಬ್ಬು ಅರೆಯುವಿಕೆ ಆರಂಭ; ಎಫ್‌ಆರ್‌ಪಿಗಿಂತ ಕಡಿಮೆ ದರ ಪಾವತಿಗೆ ರೈತರ ಆಕ್ರೋಶ

ಕೇಂದ್ರ ಸರ್ಕಾರ ನಿಗದಿ ಮಾಡಿರುವ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ(FRP)ಯಂತೆಯೂ ಕಾರ್ಖಾನೆಗಳು ದರ ಪಾವತಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ರೈತರ ಪ್ರತಿಭಟನೆ ನಡುವೆಯೇ ಉತ್ತರ ಕರ್ನಾಟಕದಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ದೊರೆತಿದೆ.;

Update: 2024-11-08 13:44 GMT
ಕಬ್ಬು ಬೆಳೆ

ಉತ್ತರ ಕರ್ನಾಟಕದಲ್ಲಿ ಕಬ್ಬು ಅರೆಯುವ ಹಂಗಾಮು ಶುಕ್ರವಾರದಿಂದ (ನ.8) ಆರಂಭವಾಗಿದೆ. ನಿಗದಿತ ಅವಧಿಗೂ (ನ.12) ಒಂದು ವಾರ ಮುಂಚೆಯೇ ಕಬ್ಬು ಅರೆಯಲು ಚಾಲನೆ ನೀಡಲಾಗಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸಿರುವ ಕಬ್ಬಿಗೆ ಇನ್ನೂ ನೂರಾರು ಕೋಟಿ ಬಾಕಿ ಉಳಿಸಿಕೊಂಡಿವೆ.

ಕೇಂದ್ರ ಸರ್ಕಾರ ನಿಗದಿ ಮಾಡಿರುವ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ(FRP)ಯಂತೆಯೂ ಕಾರ್ಖಾನೆಗಳು ದರ ಪಾವತಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ರೈತರ ಪ್ರತಿಭಟನೆ ನಡುವೆಯೇ ಉತ್ತರ ಕರ್ನಾಟಕದಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ದೊರೆತಿದೆ.

ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ಈ ಬಾರಿ 3,400 ಎಫ್ಆರ್‌ಪಿ  ದರ ನಿಗದಿ ಮಾಡಿದೆ. ಆದರೆ, ಮೈಸೂರು, ಮಂಡ್ಯ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 3,150 ರೂ. ಪಾವತಿಸುತ್ತಿವೆ. ಪ್ರತಿ ಟನ್ ಕಬ್ಬಿನ ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆಯನ್ನು (ಎಫ್ಆರ್‌ಪಿ) 3,500 ರೂ.ಗೆ ಹೆಚ್ಚಿಸುವಂತೆ ಸಾಕಷ್ಟು ಹೋರಾಟ ನಡೆಸಿ, ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಪ್ರತಿ ಟನ್ ಕಬ್ಬಿಗೆ 102 ಕೆ.ಜಿ. ಸಕ್ಕರೆ ಉತ್ಪಾದನೆಯಾಗಲಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಶೇ.1 ರಷ್ಟು ಮಾತ್ರ ಇಳುವರಿ ತೋರಿಸುತ್ತಿದ್ದಾರೆ. ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದ್ದಾರೆ.

ಸಕ್ಕರೆ ಇಳುವರಿ ಪ್ರಮಾಣ ಕ್ವಿಂಟಲ್‌ಗೆ ಸರಾಸರಿ 10.25 ರಷ್ಟು ಮಾತ್ರ ತೋರಿಸಲಾಗುತ್ತಿದೆ. ಇಳುವರಿ ಕಡಿಮೆ ತೋರಿಸಿದರೆ ರೈತರಿಗೆ ಕಡಿಮೆ ದರ ನೀಡಬಹುದು ಎಂಬುದು ಕಾರ್ಖಾನೆಗಳ ಲೆಕ್ಕಾಚಾರ. ಸಕ್ಕರೆ ಉತ್ಪಾದನೆ ಇಳುವರಿ ಪ್ರಮಾಣ 11.24 ರಷ್ಟಾದರೆ ರೈತರಿಗೆ ಕ್ವಿಂಟಲ್‌ ಕಬ್ಬಿಗೆ 335 ಪಾವತಿಸಬೇಕಾಗುತ್ತದೆ. ಅದೇ ರೀತಿ ಇಳುವರಿ ಪ್ರಮಾಣ 12.25 ರಷ್ಟಾದರೆ 665 ರೂ. ಪಾವತಿಸಬೇಕು. ಆದರೆ, ಸಕ್ಕರೆ ಕಾರ್ಖಾನೆಗಳ ಒಕ್ಕೂಟವು ಬರೀ 10.25 ಇಳುವರಿ ತೋರಿಸುತ್ತಾ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದರು.

ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ರೈತರಿಂದ ಖರೀದಿಸಿರುವ ಕಬ್ಬಿನ ಬಾಕಿ ಹಣವೇ ಅಂದಾಜು 300 ಕೋಟಿ ಇದೆ. ದಕ್ಷಿಣ ಕರ್ನಾಟಕದ ರೈತರಿಗೆ ಬಾಕಿ ಉಳಿಸಿಕೊಂಡಿರುವ ಹಣ 50-60 ಕೋಟಿ ಇದೆ ಎಂದು ಹೇಳಿದರು. ಆದರೆ, ಕಳೆದ ಜುಲೈ ತಿಂಗಳಲ್ಲಿ ಕಬ್ಬು ಬಾಕಿ ಕುರಿತು ಪ್ರತಿಕ್ರಿಯಿಸಿದ್ದ ಸಚಿವ ಶಿವಾನಂದ ಪಾಟೀಲ ಅವರು, ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು 136.12 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಮೂರು ಕಾರ್ಖಾನೆಗಳು 2018 ರಲ್ಲಿ ಪಾವತಿಸಬೇಕಿದ್ದ ಸುಮಾರು 3.94 ಕೋಟಿ ಬಾಕಿ ಇಟ್ಟುಕೊಂಡಿವೆ ಎಂದು ಹೇಳಿದ್ದರು.

ರಾಜ್ಯದಲ್ಲಿ ಶೇ.50 ರಷ್ಟು ಕಬ್ಬು ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲೇ ಬೆಳೆಯಲಾಗುತ್ತದೆ. ಉಳಿದ ಶೇ.50 ರಷ್ಟು ಬೆಳೆಯು ಮೈಸೂರು ಸೇರಿ ಇತರೆ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಬೆಳಗಾವಿಯ 28 ಹಾಗೂ ಬಾಗಲಕೋಟೆಯ 18 ಸಕ್ಕರೆ ಕಾರ್ಖಾನೆಗಳು ವಾರ್ಷಿಕ 3.5 ಕೋಟಿ ಟನ್ ಕಬ್ಬು ಅರೆಯುತ್ತವೆ.

ಕಾರ್ಖಾನೆಗಳ ಪರ ಸರ್ಕಾರ

ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಎಲ್ಲ ಕಡೆ ಪ್ರತಿಭಟನೆ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವರೂ ಆಗಿರುವ ಆರ್.ವಿ. ದೇಶಪಾಂಡೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಪಕ್ಷದ ಕೆಲ ಮುಖಂಡರ ಸಕ್ಕರೆ ಕಾರ್ಖಾನೆಗಳ ಪರವಾದ ನಿಲುವು ಹೊಂದಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ಕಿಡಿಕಾರಿದರು.

ಹಳಿಯಾಳದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಸಕ್ಕರೆ ಕಾರ್ಖಾನೆಗಳು ರೈತರಿಗೆ ವರದಾನ ಎಂದು ಹೇಳುತ್ತಾರೆ. ಅವರೊಬ್ಬ ಅವಿವೇಕಿ ಜನಪ್ರತಿನಿಧಿ. ಜನರ ಪರವಾಗಿ ದನಿಯೆತ್ತಬೇಕಾದವರು ಕಾರ್ಖಾನೆಗಳ ಪರ ಮಾತಾಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಕ್ಕರೆ ಕಾರ್ಖಾನೆಗಳ ಒಕ್ಕೂಟಗಳೊಂದಿಗೆ ಹತ್ತಾರು ಬಾರಿ ಸಭೆ ನಡೆಸಲು ಸರ್ಕಾರದ ಸಚಿವರಿಗೆ ಸಮಯ ಇರುತ್ತದೆ. ರೈತರ ಬೇಡಿಕೆ ಆಲಿಸಲು ಅವರಿಗೆ ಪುರುಸೊತ್ತಿಲ್ಲ. 2022ರಲ್ಲಿ ಕಬ್ಬಿನ ಬೆಲೆ 150 ರೂ. ಹೆಚ್ಚಳ ಮಾಡಿದ್ದ ಸರ್ಕಾರದ ಆದೇಶವನ್ನೇ ಅಂದಿನ ಅಡ್ವೊಕೇಟ್ ಜನರಲ್ ತಪ್ಪು ಎಂದು ನ್ಯಾಯಾಲಯದಲ್ಲಿ ಹೇಳಿದ್ದರು. ಇಂತಹವರಿಗೆ ಏನನ್ನಬೇಕು ಎಂದು ಕಿಡಿಕಾರಿದರು.

ಕಬ್ಬಿನ ಇಳುವರಿ ಕುಂಠಿತ

ರಾಜ್ಯದಲ್ಲಿ ಕಬ್ಬು ಇಳುವರಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ರಾಜ್ಯದ ಒಟ್ಟು 76 ಸಕ್ಕರೆ ಕಾರ್ಖಾನೆಗಳಿಗೆ 10.5 ಕೋಟಿ ಟನ್ ಕಬ್ಬು ಅಗತ್ಯವಿದೆ. ಆದರೆ, ಅಷ್ಟು ಪ್ರಮಾಣದ ಇಳುವರಿ ಬರುತ್ತಿಲ್ಲ. ಸಿಗದ ಸೂಕ್ತ ಬೆಲೆ, ಕಾರ್ಖಾನೆಗಳ ಮೋಸ, ಬರಗಾಲ, ನೀರಿನ ಸಮಸ್ಯೆ ಹಾಗೂ ಇಚ್ಛಾಶಕ್ತಿ ಕೊರತೆಯಿಂದಾಗಿ ಕಬ್ಬು ಬೆಳೆಯ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕಬ್ಬು ಬೆಳೆಯ ವಿಸ್ತೀರ್ಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಮೊದಲು ಕಬ್ಬು ಉತ್ಪಾದನೆ ವಾರ್ಷಿಕ 8 ಕೋಟಿ ಟನ್ ಇತ್ತು. ನಂತರ 6 ಕೋಟಿ ಟನ್ ಗೆ ಇಳಿಯಿತು. ಈಗ 5 ಕೋಟಿ ಟನ್ ಗೆ ಬಂದು ತಲುಪಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಕಬ್ಬಿನ ಬೆಲೆಯಲ್ಲಿ ಕಡಿತ

ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಕೇವಲ 3150 ರೂ. ಪಾವತಿಸುತ್ತಿವೆ. ಆದರೆ, ಕಟಾವು ಶುಲ್ಕ, ಸಾಗಣೆ ವಚ್ಚಗಳನ್ನು ಇದೇ ಹಣದಲ್ಲಿ ಮುರಿದುಕೊಳ್ಳಲಾಗುತ್ತದೆ. ಇದರಿಂದ ರೈತರಿಗೆ ಟನ್‌ಗೆ  ಸಿಗುವುದು ಬರೀ 2800 ರೂ. ಮಾತ್ರ. ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಈಗಾಗಲೇ ಹಳಿಯಾಳ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಶಾಂತಕುಮಾರ್ ಹೇಳಿದರು.

ನೆರೆಯ ಮಹಾರಾಷ್ಟ್ರದಲ್ಲಿ ಪ್ರತಿಟನ್ ಕಬ್ಬಿಗೆ ಅಲ್ಲಿನ ಸಕ್ಕರೆ ಕಾರ್ಖಾನೆಗಳು ಈಗಾಗಲೇ 3500 ರೂ. ಘೋಷಿಸಿದೆ. ಬೆಳಗಾವಿ ಭಾಗದ ಬಹುತೇಕ ರೈತರು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ ಎಂದರು.

ಸಿಪ್ಪೆಗೆ ಸಿಗುವಷ್ಟು ದರ ಕಬ್ಬಿಗಿಲ್ಲ!

ಕಬ್ಬು ಅರೆಯುವ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಸಿಪ್ಪೆಯನ್ನು ದುಬಾರಿ ದರಕ್ಕೆ ಮಾರಿಕೊಳ್ಳುತ್ತವೆ. ಆದರೆ, ರೈತರಿಂದ ಖರೀದಿಸುವ ಕಬ್ಬಿಗೆ ಮಾತ್ರ ಕಡಿಮೆ ಬೆಲೆ ನೀಡುತ್ತಿವೆ. ಕಬ್ಬಿನ ಸಿಪ್ಪೆಯನ್ನು ಅಣಬೆ ತಯಾರಿಕೆಗೆ ಹೆಚ್ಚು ಬಳಸಲಾಗುತ್ತದೆ. ಆದ್ದರಿಂದ ಸಿಪ್ಪೆಗೆ ಹೆಚ್ಚು ಬೇಡಿಕೆ ಇದ್ದು, ಅಣಬೆ ತಯಾರಿಸುವ ಕಂಪನಿಗಳು ಮುಂಗಡವಾಗಿಯೇ ಕಾರ್ಖಾನೆಗಳಿಗೆ ಕೋಟ್ಯಂತರ ರೂ. ಪಾವತಿಸುತ್ತವೆ. ಪ್ರತಿ ಟನ್ ಸಿಪ್ಪೆಗೆ 3300 ರೂ. ನೀಡಿ ಸಿಪ್ಪೆ ಖರೀದಿಸುತ್ತವೆ. ಇದಲ್ಲದೇ ಕಾಕಂಬಿ, ಎಥೆನಾಲ್ ಇನ್ನಿತರ ಕಬ್ಬು ಉತ್ಪನ್ನಗಳ ಮಾರಾಟದಿಂದಲೂ ಕಾರ್ಖಾನೆಗಳು ಲಾಭ ಗಳಿಸುತ್ತಿವೆ. ರೈತರನ್ನು ನಷ್ಟಕ್ಕೆ ದೂಡುತ್ತಿವೆ ಎಂದು ದೂರಿದರು.

ಇಳುವರಿ ಕುಸಿಯುವ ಭೀತಿಯಿಂದ ಈ ತೀರ್ಮಾನ

ಇನ್ನು ದಕ್ಷಿಣ ಕರ್ನಾಟಕಲ್ಲಿ ಕಬ್ಬು ಅರೆಯುವ ಕಾರ್ಯ ಈಗಾಗಲೇ ಶುರುವಾಗಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ಇಂದಿನಿಂದ(ನ.8) ಆರಂಭವಾಗಿದೆ. ಸಾಮಾನ್ಯವಾಗಿ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಏಕಕಾಲಕ್ಕೆ ಕಬ್ಬು ಅರೆಯಲಾಗುತ್ತದೆ. ಆದರೆ, ಈ ಬಾರಿ ಉತ್ತರ ಕರ್ನಾಟಕದಲ್ಲಿ ಒಂದು ವಾರ ಮುಂಚಿತವಾಗಿ ಕಬ್ಬು ಅರೆಯಲು ಆರಂಭಿಸಿದರೆ, ಮಹಾರಾಷ್ಟ್ರದಲ್ಲಿ ನ.12 ರಿಂದ ಕಬ್ಬು ಅರೆಯುವ ಕಾರ್ಯ ಆರಂಭವಾಗಲಿದೆ.

ಬೆಂಗಳೂರಿನಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಸಭೆಯಲ್ಲಿ ಈ ಬಾರಿ ನವೆಂಬರ್ 12 ರಿಂದ ಕಬ್ಬು ನುರಿಸುವಿಕೆ ಆರಂಭಿಸಲು ತೀರ್ಮಾನಿಸಲಾಗಿತ್ತು. ಆದರೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮೇರೆಗೆ ಒಂದು ವಾರ ಮುಂಚಿತವಾಗಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

ನವೆಂಬರ್ 8ರಿಂದಲೇ ಕಬ್ಬು ನುರಿಸುವಿಕೆ ಆರಂಭಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಅಲ್ಲಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಈ ಮೊದಲಿನ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ರಾಜ್ಯದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಒಂದು ವಾರ ಮುಂಚಿತವಾಗಿ ಕಬ್ಬು ನುರಿಸುವಿಕೆ ಆರಂಭಿಸುವ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ನ.12ರವರೆಗೆ ಕ್ರಷಿಂಗ್ ಆರಂಭಿಸಿದ್ದರೆ ಒಂದು ಎಕರೆಗೆ 50 ರಿಂದ 60 ಟನ್ ಇಳುವರಿ ಬದಲಿಗೆ ಕೇವಲ 25 ರಿಂದ 30 ಟನ್ ಇಳುವರಿ ಬರುವ ಸಾಧ್ಯತೆ ಇದೆ. ವಾಡಿಕೆಯಂತೆ ಅಕ್ಟೋಬರ್ ಅಂತ್ಯದೊಳಗೆ ಕ್ರಷಿಂಗ್ ಆರಂಭಿಸಲು ಅನುಮತಿ ನೀಡಬೇಕು ಎಂದು ರೈತರು ಮನವಿ ಮಾಡಿದ್ದರು ಎಂದು ತಿಳಿಸಿದ್ದಾರೆ.

7.5 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ

ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಒಟ್ಟು 7.5 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ 3,400 ರೂ. ಎಫ್ಆರ್‌ಪಿ  ನಿಗದಿ ಮಾಡಿದೆ. ಆದರೆ, ಸಕ್ಕರೆ ಕಾರ್ಖಾನೆಗಳು 3150 ರೂ. ಮಾತ್ರ ಪಾವತಿಸುತ್ತಿವೆ. ರಾಜ್ಯದಲ್ಲಿ ಕಬ್ಬು ಆಶ್ರಿತವಾಗಿಯೇ ಒಟ್ಟು 76 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಸಕ್ಕರೆ ಇಳುವರಿ ಪ್ರಮಾಣ 9.5 ರಿಂದ 12ರವರೆಗೆ ಬರುತ್ತಿದೆ. ಸರಾಸರಿ ಇಳುವರಿ 10.5ರಷ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.

Tags:    

Similar News