ನಾಯಿಗಳ ಹಾವಳಿ ಹಿನ್ನೆಲೆ: ಲೋಕಾಯುಕ್ತ ಆದೇಶ ಪಾಲನೆ ಮಾಡದ ಅಧಿಕಾರಿಗಳು

ಕಳೆದ ಒಂದು ವರ್ಷದ ಅವಧಿಯಲ್ಲಿ ಬೀದಿ ನಾಯಿಗಳು ಕಚ್ಚಿದ ಪ್ರಕರಣಗಳು, ರಾಬಿಸ್ ಪ್ರಕರಣಗಳು ಸೇರಿದಂತೆ ಇತರೆ ವಿಷಯಗಳ ಬಗ್ಗೆ ವರದಿ ನೀಡುವಂತೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ.;

Update: 2025-08-15 02:40 GMT

ಬೀದಿನಾಯಿಗಳ ಹಾವಳಿ ಬೆಂಗಳೂರಿನ ಜನತೆಯ ನಿದ್ದೆಗೆಡಿಸಿರುವುದು ವಿಧಾನಮಂಡಲದಲ್ಲಿ ಪ್ರತಿಧ್ವನಿಸಿದ್ದು, ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ. ವ್ಯಗ್ರ ಬೀದಿ ನಾಯಿಗಳ ಅಟಾಟೋಪಕ್ಕೆ ಮಕ್ಕಳು, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇದು ಕೇವಲ ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಮಾತ್ರ ಸಿಮೀತವಾಗಿಲ್ಲ. ಬದಲಿಗೆ ಇಡೀ ರಾಜ್ಯಕ್ಕೂ ವ್ಯಾಪಿಸಿದೆ. 

ಕೇವಲ ಬೆಂಗಳೂರಲ್ಲಿ ಮಾತ್ರವಲ್ಲದೇ, ಬೀದಿ ನಾಯಿಗಳ ಆಟಾಟೋಪವು ರಾಜ್ಯಕ್ಕೆ ವ್ಯಾಪಿಸಿರುವುದಕ್ಕೆ ಲೋಕಾಯುಕ್ತ ನ್ಯಾ. ಬಿ.ಎಸ್‌.ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪಶು ಸಂಗೋಪನಾ ಇಲಾಖೆಯ ಆಯುಕ್ತರು ಹಾಗೂ ಆಯುಕ್ತರು, ಮಹಾನಗರ ಪಾಲಿಕೆ, ನಗರಸಭೆ ವಿರುದ್ಧ ಕಿಡಿಕಾರಿ, ಕಳೆದ ಒಂದು ವರ್ಷದಲ್ಲಿ ಬೀದಿ ನಾಯಿಗಳು ಕಚ್ಚಿದ ಪ್ರಕರಣಗಳು, ರಾಬಿಸ್ ಪ್ರಕರಣಗಳು, ವ್ಯಾಕ್ಸಿನೇಷನ್, ಎಬಿಸಿ ಮಾಡಿಸಿದ ಪ್ರಕರಣಗಳ ಸಂಖ್ಯೆ, ನಾಯಿಗಳ ಆಶ್ರಯತಾಣ ಸೇರಿದಂತೆ ಇತರೆ ವಿಷಯಗಳ ಬಗ್ಗೆ ವರದಿ ನೀಡುವಂತೆ ಖಡಕ್‌ ಸೂಚನೆ ನೀಡಿದ್ದಾರೆ. 

ಬೀದಿನಾಯಿಗಳ ಹಾವಳಿ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇವಲ ಕಾಗದದಲ್ಲಿ ಮಾತ್ರ ಇದೆ. ಆದರೆ, ವಾಸ್ತವವಾಗಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತ ಸಂಪೂರ್ಣ ವರದಿಯನ್ನು ನೀಡುವಂತೆ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ. ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದೆ. ವಿಚಾರಣೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನ ಸ್ಪಷ್ಟವಾಗಿ ತಿಳಿದುಬಂದಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳದಿದ್ದರೆ ಸರ್ಕಾರಕ್ಕೆ ಪತ್ರ ಬರೆದು ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶ ಪಾಲನೆ ಮಾಡದ ಅಧಿಕಾರಿಗಳು

ಯಾವುದೇ ವ್ಯಕ್ತಿಯನ್ನು ಕಚ್ಚಿರುವ ನಾಯಿಗಳನ್ನು ಹಿಡಿದ ಸಿಬ್ಬಂದಿಯು ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಹಿಡಿದ ಸ್ಥಳಕ್ಕೆ ಹೋಗಿ ಬಿಡಲಾಗುತ್ತದೆ. ಇದು ಸುಪ್ರೀಂಕೋರ್ಟ್‌ನ ಆದೇಶಕ್ಕೆ ವ್ಯತಿರಿಕ್ತವಾಗಿದೆ. ನ್ಯಾಯಾಲಯದ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಳ್ಳದ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ. ಕ್ರೂರ ಮನೋಭಾವ ಹೊಂದಿರುವ ನಾಯಿಗಳಿಗೆ ಡಾಗ್ ಪಾಂಡ್ಸ್ ಅಥವಾ ಶೆಲ್ಟರ್‌  ಸ್ಥಾಪಿಸಿ ಅವುಗಳಲ್ಲಿ ಇಡಬೇಕೆಂದು ಆದೇಶ ಇದೆ. ಆದರೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗೊತ್ತಾಗಿದೆ. 

ಇತ್ತೀಚೆಗೆ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ನಾಯಿಗಳ ಹಾವಳಿ ಕುರಿತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಇದೇ ವಿಷಯದ ಬಗ್ಗೆಯೂ ಚರ್ಚೆ ನಡೆಯಿತು. ಲೋಕಾಯುಕ್ತರು ಸಹ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿದರುವ ಬಗ್ಗೆ ಪ್ರಸ್ತಾಪವಾಗಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಡಾಗ್ ಪಾಂಡ್ಸ್‌ಗಳನ್ನು ಸ್ಥಾಪನೆ ಮಾಡಬೇಕು ಮತ್ತು ಕಚ್ಚಿರುವ ನಾಯಿಯನ್ನು ಹಿಡಿದುಕೊಂಡು ಹೋಗಿ ನಂತರ ಅದೇ ಸ್ಥಳದಲ್ಲಿ ಬಿಡುವ ಬದಲಿಗೆ ಡಾಂಗ್‌ಪಾಂಡ್ಸ್‌ಗಳಲ್ಲಿ ಬಿಡಬೇಕು ಎಂಬ ಸೂಚನೆ ನೀಡಿದರು ಎಂದು ಹೇಳಲಾಗದೆ. ನಿಯಮಗಳನ್ನು, ನ್ಯಾಯಾಲಯಗಳ ಆದೇಶಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಅವುಗಳನ್ನು ಪಾಲನೆ ಮಾಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. 

ಲೋಕಾಯುಕ್ತ ಪೊಲೀಸರ ವರದಿಯಲ್ಲಿಯೂ ಅಧಿಕಾರಿಗಳ ಲೋಪ

ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌, ಲೋಕಾಯುಕ್ತ ಎಸ್‌ಪಿ ವಂಶಿಕೃಷ್ಟ ಅವರಿಗೆ ನಾಯಿ ಕಚ್ಚಿರುವ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸೂಚನೆ ನೀಡಿದ್ದರು. ಲೋಕಾಯುಕ್ತರ ಈ ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳ ಲೋಪಗಳ ಕುರಿತು ಉಲ್ಲೇಖ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. 

ಕೊಡಿಗೆಹಳ್ಳಿಯಲ್ಲಿ ಸೀತಪ್ಪಎಂಬುವವರು ನಾಯಿಗಳ ದಾಳಿಯಿಂದಾಗಿ ಸಾವನ್ನಪ್ಪಿದ್ದರು. ಅಲ್ಲದೇ, ಇತರೆ ನಾಯಿಗಳ ದಾಳಿಯ ಘಟನೆಗಳು ಸಹ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯತನ ಕಾರಣವಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಕೈಗೊಂಡಿಲ್ಲ. ಬಿಬಿಎಂಪಿಯಲ್ಲಿನ ವಿವಿಧ ವಿಭಾಗಗಳ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲವಾಗಿದೆ. ಕ್ರೂರಿ ನಾಯಿಗಳ ನಿಯಂತ್ರಣಕ್ಕೆ ಮಾಡಬೇಕಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂಬುದು ವರದಿಯಲ್ಲಿದೆ ಎಂದು ತಿಳಿದುಬಂದಿದೆ. 

ವೀಕ್ಷಣಾ ಗೃಹ ಸ್ಥಾಪನೆ ಮಾಡಿರುವುದು ಪತ್ತೆ

ಆಕ್ರಮಣಕಾರಿ ನಾಯಿಗಳಿಗಾಗಿ ವೀಕ್ಷಣಾ ಗೃಹಗಳನ್ನು ಸ್ಥಾಪಿಸಲು ಬಿಬಿಎಂಪಿ ವಿಫಲವಾಗಿರುವುದು ಪ್ರಮುಖ ಲೋಪಗಳಲ್ಲಿ ಒಂದಾಗಿದೆ. ಅಧಿಕಾರಿಗಳು ಅಬ್ಸರ್‌ವೇಷನ್‌ ಹೋಮ್‌ಗಳನ್ನು ಸ್ಥಾಪಿಸಿ ನಿಗಾವಹಿಸಬೇಕು. ಆದರೆ, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕ್ರೂರ ಪ್ರವೃತ್ತಿ ಹೊಂದಿರುವ ನಾಯಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ಅಬ್ಸರ್‌ವೇಷನ್‌ ಹೋಮ್‌ನಲ್ಲಿಡಬೇಕು. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂಬುದಾಗಿ ಲೋಕಾಯುಕ್ತ ಪೊಲೀಸರು ವರದಿಯಲ್ಲಿ ತಿಳಿಸಿದೆ ಎಂದು ಹೇಳಲಾಗಿದೆ.

ಯಲಹಂಕದಲ್ಲಿ ಅಬ್ಸರ್‌ವೇಷನ್‌ ಹೋಮ್‌ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ತಿಂಗಳ ಅಂತ್ಯಕ್ಕೆ ಅದು ಪೂರ್ಣಗೊಳ್ಳುವ ನಿರೀಕ್ಷೆ ಇದೆ.  40 - 50 ನಾಯಿಗಳನ್ನು ನಿಗಾವಹಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಈ ಸ್ಥಳ ಸಾಕಾಗುವುದಿಲ್ಲ ಎಂಬುದು ಲೋಕಾಯುಕ್ತರ ಅಭಿಪ್ರಾಯವಾಗಿದೆ. ಬೀದಿ ನಾಯಿಗಳು ಪದೇ ಪದೇ ಜನರನ್ನು ಕಚ್ಚುತ್ತಿರುವ ಘಟನೆ ವರದಿಯಾಗುತ್ತಿದ್ದು, ಅವುಗಳ ಮೇಲೆ ನಿಗಾವಹಿಸಲು ಅಬ್ಸರ್‌ವೇಷನ್‌ ಹೋಮ್‌ಗಳನ್ನು ಎಲ್ಲಾ ವಾರ್ಡ್‌ಗಳಲ್ಲಿಯೂ ಸ್ಥಾಪಿಸಬೇಕು ಎಂದು ಸೂಚನೆ ನೀಡಿದ್ದಾರೆ. 

ಸೆಪ್ಟೆಂಬರ್‌ 19ಕ್ಕೆ ಮುಂದಿನ ವಿಚಾರಣೆ

ಇತ್ತೀಚೆಗೆ ಕೊಡಿಗೆಹಳ್ಳಿಯಲ್ಲಿ ವೃದ್ಧರೊಬ್ಬರ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾದ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಾಯುವಿಹಾರಕ್ಕೆ ಆಗಮಿಸಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಗಾಯಗೊಳಿಸಿದೆ. ನಗರದ ಹಲವು ಪ್ರದೇಶ, ಮೈದಾನ, ರಸ್ತೆಗಳಲ್ಲಿ ಕತ್ತಲಾದ ಮೇಲೆ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಒಬ್ಬರೇ ನಡೆದು ಹೋಗದಂತಹ ಪರಿಸ್ಥಿತಿ ಇದೆ. ಕಳೆದ ಎರಡು ವಾರದ ಹಿಂದೆ ಬೀದಿ ನಾಯಿಗಳು ದಾಳಿಯಿಂದ ಕೊಡಿಗೇಹಳ್ಳಿಯಲ್ಲಿ ವೃದ್ದ ಸೀತಪ್ಪ ಎಂಬುವವರು ಮೃತ ಪಟ್ಟಿದ್ದರು. ಆ ಬಳಿಕ ಜೆ.ಪಿ.ನಗರದಲ್ಲಿ ಮೂರು ವರ್ಷದ ಮಗುವಿನ ಮೇಲೆ ದಾಳಿಯಾಗಿತ್ತು. ದಾಳಿ ಮಾಡಿದ ನಾಯಿಯಲ್ಲಿ ರೇಬಿಸ್‌ ಪತ್ತೆಯಾಗಿತ್ತು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ  ಇಬ್ಬರು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದು, ಚಿಕಿತ್ಸೆಗೊಳಗಾಗಿದ್ದಾರೆ. 

ಸೀತಪ್ಪ ಸಾವಿನ ಘಟನೆ ಬಳಿಕ ಬಿಬಿಎಂಪಿ ಅಧಿಕಾರಿಗಳ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌, ಘಟನೆಯ ಕುರಿತು ಸಂಪೂರ್ಣ ವರದಿಯನ್ನು ನೀಡುವಂತೆ ಸೂಚನೆ ನೀಡಿ ಸೆ.19ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಲಾಗಿದೆ. ಅಂದು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಾಗಿ ತಮ್ಮ ವರದಿಗಳನ್ನು ಸಲ್ಲಿಸುವಂತೆ ಸೂಚಿಸಿದರು. ಅಲ್ಲದೇ, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡಯ್ಯುವವರವಿಗೂ ವಿರಮಿಸುವುದಿಲ್ಲ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. 


Tags:    

Similar News