ಮಳವಳ್ಳಿಯ ಖಾಸಗಿ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿ ಸಾವು; ಪರಿಹಾರದ ಭರವಸೆ ನೀಡಿದ ಸಿಎಂ
ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದ ಖಾಸಗಿ ವಸತಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಕೇರ್ಲಾಂಗ್ (13) ವಿಷಾಹಾರ ಸೇವನೆಯಿಂದ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ.;
ಹೋಳಿ ಹಬ್ಬದ ಅಂಗವಾಗಿ ಉದ್ಯಮಿಯೊಬ್ಬರು ಖಾಸಗಿ ವಸತಿ ಶಾಲೆಯ ಮಕ್ಕಳಿಗೆ ನೀಡಿದ್ದ ಊಟ ಸೇವಿಸಿ 29 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು, ಓರ್ವ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ. ಘಟನೆಗೆ ಕಳವಳ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದು, ಘಟನೆಯ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿರುವ ಖಾಸಗಿ ವಸತಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಕೇರ್ಲಾಂಗ್ (13) ವಿಷಾಹಾರ ಸೇವನೆಯಿಂದ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಅಸ್ವಸ್ಥರೆಲ್ಲರೂ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡಿದ್ದಾರೆ.
ಉದ್ಯಮಿಯೊಬ್ಬರು ಶುಕ್ರವಾರ ಹೋಳಿ ಹಬ್ಬದ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಉಳಿದಿದ್ದ ಊಟವನ್ನು ಟಿ.ಕಾಗೇಪುರ ಗ್ರಾಮದ ಖಾಸಗಿ ವಸತಿ ಶಾಲೆಗೆ ನೀಡಲಾಗಿತ್ತು. ಮಕ್ಕಳು ಈ ಊಟ ಸೇವಿಸಿದ ಬಳಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇನ್ನು ಊಟ ಸೇವಿಸಿದ್ದ ಸಾರ್ವಜನಿಕರು ಹಾಗೂ ಉದ್ಯಮಿಯ ಕುಟುಂಬದವರು ಕೂಡ ಅಸ್ವಸ್ಥರಾಗಿದ್ದಾರೆ. ಊಟದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವೈದ್ಯರು ಹೇಳುವುದೇನು?
ವಿಷಾಹಾರ ಸೇವನೆ ಕುರಿತಂತೆ ಪ್ರತಿಕ್ರಿಯಿಸಿರುವ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಅವರು, ಹೋಳಿ ಹಬ್ಬದ ಪ್ರಯುಕ್ತ ಶುಕ್ರವಾರ ರಾತ್ರಿ ಊಟ ಮಾಡಿಸಿದ್ದರು. ಗೋಕುಲಂ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೂ ಅದೇ ಊಟ ವಿತರಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಶುರುವಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಬಂದಿದ್ದರು. ಚೆನ್ನಾಗಿ ಓಡಾಡಿಕೊಂಡಿದ್ದ ವಿದ್ಯಾರ್ಥಿಯೊಬ್ಬ ದಿಢೀರ್ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಲ್ಲಿ 27 ಮಂದಿ ವಿದ್ಯಾರ್ಥಿಗಳು ಹೊರರಾಜ್ಯದವರಾಗಿದ್ದು, ಇಬ್ಬರು ಸ್ಥಳೀಯರಿದ್ದರು. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.