ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ಎಐ ವಿಡಿಯೋ: ಇನ್‌ಸ್ಟಾಗ್ರಾಂ ಖಾತೆದಾರನ ಮೇಲೆ ಎಫ್‌ಐಆರ್
ಸಿ.ಆರ್. ದೀಪು ಎಂಬುವವರು ನೀಡಿದ ದೂರಿನ ಅನ್ವಯ, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಡಿ. ಕೆ ಶಿವಕುಮಾರ್
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಘನತೆಗೆ ಧಕ್ಕೆ ತರುವ ಮತ್ತು ಸಮಾಜದಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ವಿಡಿಯೋ ಸೃಷ್ಟಿಸಿ ಹರಿಬಿಟ್ಟ ಆರೋಪದ ಮೇಲೆ 'ಕನ್ನಡ ಚಿತ್ರದುರ್ಗ' ಎಂಬ ಇನ್‌ಸ್ಟಾಗ್ರಾಂ ಖಾತೆಯ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದೆ
ಸಿ.ಆರ್. ದೀಪು ಎಂಬುವವರು ನೀಡಿದ ದೂರಿನ ಅನ್ವಯ, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುರಿತು ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿಸಲು, ಮೂಲ ವಿಡಿಯೋವನ್ನು ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಈ ಕೃತ್ಯವು ಕೇವಲ ಡಿ.ಕೆ. ಶಿವಕುಮಾರ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದಲ್ಲದೆ, ಸರ್ಕಾರದ ಪ್ರತಿಷ್ಠೆಗೂ ಮುಜುಗರ ಉಂಟುಮಾಡುವ ಮತ್ತು ಸಮಾಜದಲ್ಲಿ ಸುಳ್ಳು ಸುದ್ದಿ ಬಿತ್ತುವ ದುರುದ್ದೇಶವನ್ನು ಹೊಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ನಾಯಕರನ್ನು ಗುರಿಯಾಗಿಸಿ ಮಾಡಿರುವ ವಿಡಿಯೋಗಳನ್ನು ಸೃಷ್ಟಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಈ ಘಟನೆಯು ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಇನ್‌ಸ್ಟಾಗ್ರಾಂ ಖಾತೆದಾರನ ಮಾಹಿತಿ ಕಲೆಹಾಕುತ್ತಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.