ಪ್ರಜ್ವಲ್‌ ಲೈಂಗಿಕ ಹಗರಣ | ಆರೋಪಿ ಬಂಧನಕ್ಕೆ ಆಗ್ರಹಿಸಿ ಮೇ 30ಕ್ಕೆ ಹಾಸನ ಚಲೋ

ಹಾಸನದ ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣನಿಂದ ನಡೆದಿರುವ ವಿಕೃತ ಲೈಂಗಿಕ ಹಗರಣವನ್ನು ವಿರೋಧಿಸಿ ಜನಪರ ಸಂಘಟನೆಗಳು ಮೇ 30ರ ಗುರುವಾರಂದು 'ಹೋರಾಟದ ನಡಿಗೆ ಹಾಸನದ ಕಡೆಗೆ' ಹೆಸರಿನಲ್ಲಿ ಪ್ರತಿಭಟನೆ ಹಾಗೂ ಬಹಿರಂಗ ಸಭೆ ಹಮ್ಮಿಕೊಂಡಿವೆ.;

Update: 2024-05-24 07:57 GMT

ಹಾಸನದ ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣನಿಂದ ನಡೆದಿರುವ ವಿಕೃತ ಲೈಂಗಿಕ ಹಗರಣವನ್ನು ವಿರೋಧಿಸಿ ಜನಪರ ಸಂಘಟನೆಗಳು ಮೇ 30ರ ಗುರುವಾರಂದು 'ಹೋರಾಟದ ನಡಿಗೆ ಹಾಸನದ ಕಡೆಗೆ' ಹೆಸರಿನಲ್ಲಿ ಪ್ರತಿಭಟನೆ ಹಾಗೂ ಬಹಿರಂಗ ಸಭೆ ಹಮ್ಮಿಕೊಂಡಿವೆ.

'ಹೋರಾಟದ ನಡಿಗೆ ಹಾಸನದ ಕಡೆಗೆ' ಪ್ರತಿಭಟನೆಯು ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿದ್ದು, ಇದರಲ್ಲಿ ರಾಜ್ಯ ಜನಪರ ಚಳವಳಿಗಳ ಹಾಗೂ ಮಹಿಳಾ ಸಂಘಟನೆಗಳ ಮುಖಂಡರು, ಸದಸ್ಯರು, ಚಿಂತಕರು, ಸಾಹಿತಿಗಳು, ಕಲಾವಿದರು, ದಲಿತ, ಕಾರ್ಮಿಕ, ರೈತ, ಅಲ್ಪಸಂಖ್ಯಾತ, ಹಿಂದುಳಿದ, ಲೈಂಗಿಕ ಅಲ್ಪಸಂಖ್ಯಾತ, ಆದಿವಾಸಿ, ವಿಜ್ಞಾನ ಚಳವಳಿ, ನಿವೃತ್ತ ಸರ್ಕಾರಿ ಅಧಿಕಾರಿಗಳು/ನೌಕರರ ಸಂಘಟನೆ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಹಾಗೂ ಸಮಾನಮನಸ್ಕರು ಭಾಗಿಯಾಗಲಿದ್ದಾರೆ.

ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ 18 ಮೇ 2024ರಂದು ರಾಜ್ಯ ಮಟ್ಟದ ಸಮಾಲೋಚನಾ ಸಭೆ ನಡೆಸಿ ಹಲವು ನಿರ್ಧಾರ ಹಾಗೂ ಬೇಡಿಕೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಅದರಂತೆ 'ಹೋರಾಟದ ನಡಿಗೆ ಹಾಸನದ ಕಡೆಗೆ' ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ʻʻಈ ವಿಕೃತ ಲೈಂಗಿಕ ಅಪರಾಧಕ್ಕೆ ಕಾರಣನಾದ ಸಂಸದ ಪ್ರಜ್ವಲ್ ರೇವಣ್ಣನ ಮೇಲೆ ಕಣ್ಣಾವಲು ಹಾಕದೆ, ಆತನನ್ನು ಬಂಧಿಸದೆ ಆತ ವಿದೇಶಕ್ಕೆ ಪರಾರಿಯಾಗಲು ಅನುವು ಮಾಡಿಕೊಟ್ಟಿರುವುದು ಅಕ್ಷಮ್ಯ. ಆನಂತರ ಸರ್ಕಾರವು ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಈಗಲೂ ವಿಕೃತ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಲು 'ರೆಡ್ ಕಾರ್ನರ್ ನೋಟಿಸ್‌' ಹೊರಡಿಸಿಲ್ಲ. ಪ್ರಜ್ವಲ್ ರೇವಣ್ಣನಿಗೆ ನೀಡಿರುವ 'ರಾಜತಾಂತ್ರಿಕ ಪಾಸ್ ಪೋರ್ಟ್' ಮತ್ತು 'ವೀಸಾ'ವನ್ನು ಕೇಂದ್ರ ಸರ್ಕಾರ ರದ್ದುಪಡಿಸಿಲ್ಲ. ಆತನ ಬಂಧನಕ್ಕೆ ನೆರವು ನೀಡುವಂತೆ ಕೋರಿದ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅಗತ್ಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿಲ್ಲ. ಯಾಕೆ ಹೀಗೆ? ಯಾರನ್ನು ರಕ್ಷಿಸುತ್ತಿದ್ದೀರಿʼʼ ಎನ್ನುವ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಜನಪರ ಸಂಘಟನೆಗಳು ಹಾಸನ ಚಲೋ ಹಮ್ಮಿಕೊಂಡಿವೆ.

ಈ ಬಗ್ಗೆ ʻದ ಫೆಡೆರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಲೇಖಕಿ, ಸಾಮಾಜಿಕ ಹಾರಾಟಗಾರ್ತಿ ರೂಪ ಹಾಸನ, ʻʻ ದುಷ್ಕೃತ್ಯ ಎಸಗಿ ಪರಾರಿಯಾಗಿರುವ ಪ್ರಜ್ವಲ್‌ನನ್ನು ಆದಷ್ಟು ಬೇಗ ರೆಡ್ ಕಾರ್ನರ್ ನೋಟೀಸ್ ನೀಡಿ ಕರೆತಂದು ಬಂಧಿಸಬೇಕು, ಸರಿಯಾದ ತನಿಖೆ ನಡೆಸಿ ಬಂಧನ ಮಾಡಬೇಕು ಎನ್ನುವುದು ನಮ್ಮ ಮೊದಲ ಬೇಡಿಕೆಯಾಗಿದೆ. ವಿಡಿಯೋಗಳನ್ನು ಹಂಚಿದವರಿಗೂ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಆಗ್ರಹವಾಗಿದೆʼʼ ಎಂದರು.

ʻʻಹೆಣ್ಣುಮಕ್ಕಳಿಗೆ ಬೇಕಿರುವ ರಕ್ಷಣೆ, ಸಂತ್ರಸ್ತರ ಮನೆಯವರಿಗೆ ಬೇಕಿರುವ ಮಾನಸಿಕ ಹಾಗೂ ಕಾನೂನಾತ್ಮಕ ನೆರವು, ಬಡ ಹೆಣ್ಣುಮಕ್ಕಳಿಗೆ ಪರಿಹಾರ,.. ಹೀಗೆ ಅಲ್ಲಿಯ ಹೆಣ್ಣುಮಕ್ಕಳು ಕಷ್ಟದಲ್ಲಿದ್ದಾರೆ. ಅವರಿಗೆಲ್ಲ ಸರ್ಕಾರ ಯಾವ ರೀತಿ ಸಹಾಯ ಮಾಡುತ್ತದೆ? ಸರ್ಕಾರ ಸಂತ್ರಸ್ತ ಹೆಣ್ಣುಮಕ್ಕಳ ಪರವಾಗಿ ಇದೆ ಎನ್ನಲು ಅಲ್ಲಿಗೆ ಬಂದು ಮಾತನಾಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆʼʼ ಎಂದು ತಿಳಿಸಿದರು.

ʻʻಎಸ್ಐಟಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕು. ವಿವಿಧ ಪಕ್ಷಗಳು ಇದರಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು. ಅಧಿಕಾರಿಗಳು ಸಮಚಿತ್ತದಿಂದ ಕೆಲಸ ಮಾಡಲು ಅವರಿಗೆ ಸ್ವಾತಂತ್ರ್ಯ ನೀಡಬೇಕು. ಸಂತ್ರಸ್ತ ಮಹಿಳೆಯರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಆ ಮಹಿಳೆಯರದ್ದೇ ತಪ್ಪು ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅದು ನಿಲ್ಲಬೇಕು. ನಿಜವಾದ ಅಪರಾಧಿಯ ಕಡೆಗೆ ನಮ್ಮ ದೃಷ್ಠಿ ಇರಬೇಕು ಎನ್ನುವುದನ್ನು ನಮ್ಮ ಸಮಾಜ ಅರ್ಥ ಮಾಡಿಕೊಳ್ಳಬೇಕು" ಎಂದು ರೂಪಾ ಅವರು ಹೇಳಿದರು.

ʻದ ಫೆಡರಲ್ ಕರ್ನಾಟಕʼದೊಂದಿಗೆ ಪ್ರತಿಭಟನೆ ಕುರಿತು ಮಾತನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಅವರು, ʻʻರಾಜ್ಯದ್ಯಾಂತ ಎಲ್ಲ ಜನಪರ ಸಂಘಟನೆಗಳು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಆಯಾ ಪ್ರದೇಶದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಸಂಘಟನೆಗಳು ಅಲ್ಲಿಯ ಜನರನ್ನು ಹಾಸನದತ್ತ ಕರೆದುಕೊಂಡು ಬರುವ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಸುಮಾರು 10 ಸಾವಿರ ಜನರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆʼʼ ಎಂದು ತಿಳಿಸಿದರು.

ʻʻಹಾಸನದ ಮಹಿಳೆಯರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಸೇರುತ್ತಿದ್ದೇವೆ. ಅಲ್ಲಿ ಹೆಣ್ಣುಮಕ್ಕಳು ಯಾವ ತಪ್ಪನ್ನೂ ಮಾಡಿಲ್ಲ, ಅವರ ಅಸಹಾಯಕತೆಯನ್ನು ಉನ್ನತ ಸ್ಥಾನದಲ್ಲಿರುವವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಪರಸತಿಯನ್ನು ಮಹಾದೇವಿ ಎಂದೇನು ಎನ್ನುವ ನಾಡಿನವರು ನಾವು. ಆದರೆ ಈ ದುಷ್ಟ ವ್ಯಕ್ತಿ ಪರ ಸ್ತ್ರೀಯರನ್ನು ಈ ರೀತಿಯಾಗಿ ಬಳಸಿಕೊಂಡಿರುವುದು ಅಕ್ಷ್ಯಮ್ಯ ಅಪರಾಧವಾಗಿದೆ. ಅವನನ್ನು ಆದಷ್ಟು ಬೇಗ ಬಂಧಿಸಿ ಕರೆತರಬೇಕುʼʼ ಎಂದು ಅವರು ಆಗ್ರಹಿಸಿದರು.

ʻʻಈ ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ರಾಜಕೀಕರಣ ಮಾಡಬಾರದು, ಎಲ್ಲರ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಯೋಚನೆ ಮಾಡಿ ಹೇಳಿಕೆ ನೀಡಬೇಕು. ಈ ಪ್ರಕರಣದ ಬಗ್ಗೆ ಮುಂಚೆಯೇ ರಾಜಕೀಯ ನಾಯಕರಿಗೆ ಗೊತ್ತಿತ್ತು, ಇದನ್ನು ಯಾರು ಹಂಚಿಕೆ ಮಾಡಿದ್ದಾರೆ, ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎನ್ನುವುದು ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಸಾಧ್ಯ. ಹಾಗಾಗಿ ಎಸ್ಐಟಿ ಅಧಿಕಾರಿಗಳಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡಬೇಕು. ಹೆಣ್ಣುಮಕ್ಕಳು ಬಂದು ಸಾಕ್ಷಿ ಹೇಳಬೇಕು ಎಂದು ನಿರೀಕ್ಷಿಸಬಾರದು. ಏಕೆಂದರೆ ಅಂತಹ ಸಮಾಜ ಇವತ್ತಿನ ದಿನ ಇಲ್ಲ. ನಾಳೆ ಅವರ ಜೀವಕ್ಕೆ ಹಾನಿಯಾದರೆ ಯಾರು ಹೊಣೆ? ಆ ವಿಡಿಯೋಗಳೇ ಸಾಕ್ಷಿಗಳಾಗುತ್ತವೆ. ಆ ನಿಟ್ಟಿನಲ್ಲಿ ತನಿಖೆ ನಡೆಸಬೇಕು" ಎಂದು ಮೀನಾ ಬಾಳಿ ಅವರು ಆಗ್ರಹಿಸಿದರು.

ಪ್ರತಿಭಟನೆಯ ಹಕ್ಕೊತ್ತಾಯಗಳು

1) ವಿಕೃತ ಲೈಂಗಿಕ ಅತ್ಯಾಚಾರ ಆರೋಪಿ ಸಂಸದ ಪ್ರಜ್ವಲ್ ರೇವಣ್ಣನ ಬಂಧನ ಈಗಾಗಲೇ ವಿಳಂಬವಾಗಿದೆ. ಹಾಗಾಗಿ ಕೂಡಲೇ ಆತನನ್ನು ಬಂಧಿಸಬೇಕು ಮತ್ತು ಕಾನೂನಾತ್ಮಕ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಸಂಬಂಧ ರೆಡ್ ಕಾರ್ನರ್ ನೋಟೀಸ್‌ ಹೊರಡಿಸಬೇಕು. ಅವನ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕೇಂದ್ರ ಸರ್ಕಾರವು ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್‌ ಮತ್ತು ವೀಸಾವನ್ನು ಕೂಡಲೇ ರದ್ದುಪಡಿಸಿ, ಇಂಟರ್ಪೋಲ್ ಸಹಾಯ ಪಡೆದು ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಅಲ್ಲಿ ಬಂಧಿಸಲು ರಾಜ್ಯ ಸರ್ಕಾರಕ್ಕೆ ಹಾಗೂ ಎಸ್ಐಟಿಗೆ ಅಗತ್ಯ ನೆರವು ನೀಡಬೇಕು.

2) ವಿಕೃತ ಲೈಂಗಿಕ ಹಗರಣದ ವಿಡಿಯೋಗಳು ಮತ್ತು ಚಿತ್ರಗಳನ್ನು ಸಾರ್ವಜನಿಕರಿಗೆ ಪೆನ್ಡ್ರೈವ್, ಸಾಮಾಜಿಕ ಮಾಧ್ಯಮ ಮತ್ತಿತರೆ ಸಾಧನಗಳ ಮುಖಾಂತರ ಹಂಚಲು ಸಂಚು ನಡೆಸಿದ, ವ್ಯಾಪಕವಾಗಿ ಹಂಚಿದ ಮತ್ತು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಮಹಿಳೆಯರ ಖಾಸಗಿತನ, ಕುಟುಂಬ, ಬದುಕಿನನ್ನು ನಾಶಮಾಡಿರುವ ಪ್ರತಿಯೊಬ್ಬ ಅಪರಾಧಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಮೇಲೆ ಕಠಿಣ ಕಾನೂನು ಪ್ರಕರಣ ದಾಖಲಿಸಬೇಕು.

3) ಈ ವಿಕೃತ ಲೈಂಗಿಕ ಹಗರಣದ ಆರೋಪಿಯಾದ ತಮ್ಮ ಮೊಮ್ಮಗ, ಪ್ರಜ್ವಲ್ ರೇವಣ್ಣನನ್ನು ಯಾವುದೇ ದೇಶದಲ್ಲಿದ್ದರೂ ಶತಾಯಗತಾಯ ಹಿಡಿದು ತರುವಂತೆ- ಮಾಜಿ ಪ್ರಧಾನಿ ದೇವೇಗೌಡರು ಈ ಕೂಡಲೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು, ಒತ್ತಡ ಹಾಕಬೇಕು.

4) ಈ ಲೈಂಗಿಕ ಹಗರಣದಲ್ಲಿ ವಿವಿಧ ಬಗೆಯ ಲೈಂಗಿಕ ದುರ್ಬಳಕೆಗೆ ಒಳಗಾಗಿರುವ ಹಾಗೂ ಪ್ರಕರಣ ದಾಖಲಿಸಲು ಮುಂದಾಗುವ ಮಹಿಳೆಯರ ಗೌಪ್ಯತೆ ಕಾಪಾಡಲು, ಅವರಿಗೆ ಬೇಕಾದ ಮನೋವೈದ್ಯಕೀಯ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರವನ್ನು ತುರ್ತಾಗಿ ನೀಡಬೇಕು.

5) ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾಗದೇ, ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದನ್ನು ಖಾತ್ರಿಪಡಿಸುವ ಗುರುತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಹೀಗಾಗಿ ಆಮೂಲಾಗ್ರವಾಗಿ, ನಿರ್ಭೀತಿಯಿಂದ ತನಿಖೆ ನಡೆಸಲು ಬೇಕಾದ ಅಧಿಕಾರವನ್ನು ಮತ್ತು ಅನುಕೂಲಗಳನ್ನು ಎಸ್ಐಟಿ ಮುಖ್ಯಸ್ಥರಿಗೆ ಸರ್ಕಾರವು ನೀಡಬೇಕು.

6) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೆಟರಿ (ಎಫ್ಎಸ್ಎಲ್) ವರದಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.

7) ಶಾಸಕ ರೇವಣ್ಣ ಅವರ ಮೇಲೆ ಕೂಡ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಜೊತೆಗೆ ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರಕ್ಕೊಳಗಾಗಿರುವ ಸಂತೃಸ್ತ ಮಹಿಳೆಯ ಅಪಹರಣದ ಪ್ರಮುಖ ಆರೋಪಿಯೆಂದು ಕೂಡ ಇವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಇರುವ ಎಲ್ಲ ಆರೋಪಿಗಳ ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆದು ಅಪರಾಧಿಗಳನ್ನು ತಕ್ಷಣವೇ ಬಂಧನಕ್ಕೊಳಪಡಿಸಬೇಕು.

8) ಈ ಸೂಕ್ಷ್ಮ ಮತ್ತು ಸಂಕೀರ್ಣ ಪ್ರಕರಣವನ್ನು ಮಹಿಳೆಯರ ಘನತೆಗೆ ಧಕ್ಕೆ ಬಾರದಂತೆ ಸಮರ್ಪಕವಾಗಿ ಇತ್ಯರ್ಥಪಡಿಸಲು ತ್ವರಿತ 'ವಿಶೇಷ ನ್ಯಾಯಾಲಯ' ಸ್ಥಾಪಿಸಬೇಕು.

9) ಎಸ್ ಐಟಿ ತನಿಖೆಯ ಅಂತಿಮ ವರದಿಯನ್ನು ಹೈಕೋರ್ಟ್ ನ್ಯಾಯಾಧೀಶರೊಬ್ಬರ ಉಸ್ತುವಾರಿ ಮತ್ತು ಪರಿಶೀಲನೆಯಲ್ಲಿ ಅಂತಿಮಗೊಳಿಸಿದ ನಂತರ ವರದಿಯನ್ನು ಸರ್ಕಾರಕ್ಕೆ ನೀಡಬೇಕು.

Tags:    

Similar News