ಕರ್ನಾಟಕ ರಾಜ್ಯೋತ್ಸವ | ನಾಡದ್ರೋಹಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಅವಮಾನ ಮಾಡುವುದು ನಾಡದ್ರೋಹ. ಅಂತಹ ನಾಡದ್ರೋಹಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.;
ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಅವಮಾನ ಮಾಡುವುದು ನಾಡದ್ರೋಹ. ಅಂತಹ ನಾಡದ್ರೋಹಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
69ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ(ನ.1) ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರದಿಂದ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಮತ್ತು ಕನ್ನಡಿಗರ ಅವಹೇಳನ ಮಾಡುವುದು, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಕನ್ನಡ ಭಾಷೆ ಮತ್ತು ಕನ್ನಡಿಗರ ವಿಷಯದಲ್ಲಿ ತೋರುವ ಇಂತಹ ವರ್ತನೆ ನಾಡದ್ರೋಹ. ಕನ್ನಡಿಗರ ಅವಹೇಳನ ಮಾಡುವವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಿಗರಿಗೆ ಅನ್ಯಾಯ: ಕೇಂದ್ರದ ವಿರುದ್ಧ ಹರಿಹಾಯ್ದ ಸಿಎಂ
ಕನ್ನಡಿಗರು ಮತ್ತು ಕರ್ನಾಟಕದ ಅಭಿವೃದ್ಧಿಗೆ ತಮ್ಮ ಸರ್ಕಾರದ ಯೋಜನೆಗಳು, ಕ್ರಮಗಳ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ, ರಾಜ್ಯದ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭವಿಷ್ಯದ ಕರ್ನಾಟಕವನ್ನು ಸದೃಢಗೊಳಿಸುವ ರಚನಾತ್ಮಕ ಯೋಜನೆಗಳು ಜಾರಿಯಲ್ಲಿವೆ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ಮತ್ತು ಕನ್ನಡಿಗರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ತೆರಿಗೆ ಮತ್ತು ಅನುದಾನಗಳ ಪಾಲನ್ನು ನೀಡದೇ ವಂಚಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದರು.
ಕರ್ನಾಟಕಕ್ಕೆ 15ನೇ ಹಣಕಾಸಿನ ಆಯೋಗದಲ್ಲಿ ಆದ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಿಲ್ಲ. ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿದೆ. ಆದರೂ ನಾವು ಶಾಲಾ ಕಾಲೇಜು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ವಾರಕ್ಕೆ 6 ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುತ್ತಿದ್ದೇವೆ. ಪ್ರತಿ ದಿನ 57 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡುತ್ತಿದ್ದೇವೆ. ವಾರದಲ್ಲಿ 3 ದಿನ ರಾಗಿ ಮಾಲ್ಟ್ ನೀಡುತ್ತಿದ್ದೇವೆ. ಅಪೌಷ್ಟಿಕತೆ ದೂರ ಮಾಡಲು ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ ಎಂದು ಸಿಎಂ ಹೇಳಿದರು.
ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕು: ಸಿಎಂ
ರಾಜ್ಯಕ್ಕೆ ನ್ಯಾಯಯುತವಾಗಿ ತೆರಿಗೆ ಪಾಲು ಕೊಡಿ ಎಂದು ನಾವು ಕೇಳುತ್ತಿದ್ದೇವೆ. ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳುವ ಯತ್ನಕ್ಕೆ ರಾಜ್ಯದ ಸಂಸದರು ದನಿಗೂಡಿಸಬೇಕಿದೆ. ರಾಜ್ಯ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕಿದೆ. ರಾಜ್ಯಸಭಾ ಸದಸ್ಯರೂ ತೆರಿಗೆ ಪಾಲು ಕೊಡಿ ಎಂದು ಕೇಳಬೇಕು ಎಂದು ತಾಕೀತು ಮಾಡಿದ ಸಿಎಂ, ಕನ್ನಡ, ಕನ್ನಡಿಗರ ಹಿತ ಕಾಯಲು ಬದ್ಧತೆ ತೋರಬೇಕು ಎಂದು ಹೇಳಿದರು.
ಕನ್ನಡ ದೀವಿಗೆ ಬಿಡುಗೆಡೆ
ಕನ್ನಡ ದೀವಿಗೆ ಬಿಡುಗಡೆ ಮಾಡಿದ್ದೇವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಕ್ಕಳಿಗಾಗಿ ದೀವಿಗೆ ಬಿಡುಗಡೆ ಮಾಡಿದ್ದೇವೆ. ಎಲ್ಲರೂ ಕೂಡ ಕನ್ನಡ ಭಾಷೆ ಮಾತನಾಡಬೇಕು. ಭಾಷೆ ಕುರಿತು ದುರಾಭಿಮಾನ ಇರಬಾರದು, ಅಭಿಮಾನ ಇರಬೇಕು. ಕನ್ನಡ ಮಾತನಾಡಲು ಬರದೇ ಇರುವವರ ಬಳಿ ಬೇರೆ ಭಾಷೆ ಮಾತನಾಡಬಾರದು. ಕನ್ನಡವನ್ನೇ ಅವರಿಗೆ ಕಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಕರೆ ನೀಡಿದರು.