ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ; ಗ್ರಾಮೀಣ ಪ್ರದೇಶಗಳಲ್ಲಿ ತಟ್ಟಿದ ಬಿಸಿ

ಸುಮಾರು 8000ಕ್ಕೂ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದ ಬಿಸಿ ಗ್ರಾಮೀಣ ಪ್ರದೇಶಗಳಿಗೂ ತಟ್ಟಿದ್ದು, ಅತ್ಯಗತ್ಯವಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆ, ವಿವಿಧ ಯೋಜನೆಗಳ ಫಲಾನುಭವಿಗಳ ಆಧಾರ್ ಜೋಡಣೆ ಇತ್ಯಾದಿ ಪ್ರಮುಖ ಕೆಲಸ-ಕಾರ್ಯಗಳು ಸ್ಥಬ್ಧವಾಗಿದೆ.

Update: 2024-09-28 13:45 GMT
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಎದುರು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಶನಿವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು

ಕಂದಾಯ ಇಲಾಖೆ ಆಡಳಿತದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳು( ಈ ಹಿಂದೆ ವಿಲೇಜ್‌ ಅಕೌಂಟೆಂಟ್‌-ವಿಎ ಅಥವಾ  ಗ್ರಾಮ ಲೆಕ್ಕಿಗರು) ಈಗ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಅನ್ಯ ಇಲಾಖೆಗಳ ಕಾರ್ಯದೊತ್ತಡ ನಿವಾರಣೆ, ಸೇವಾಭದ್ರತೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಸೆ.26 ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಸಾಂಕೇತಿಕ ಪ್ರತಿಭಟನೆಗಳೂ ಆರಂಭವಾಗಿವೆ. ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದ ಬಿಸಿ ಗ್ರಾಮೀಣ ಪ್ರದೇಶಗಳಿಗೂ ತಟ್ಟಿದ್ದು, ಅತ್ಯಗತ್ಯವಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆ, ವಿವಿಧ ಯೋಜನೆಗಳ ಫಲಾನುಭವಿಗಳ ಆಧಾರ್ ಜೋಡಣೆ ಇತ್ಯಾದಿ ಪ್ರಮುಖ ಕೆಲಸ-ಕಾರ್ಯಗಳು ಸ್ಥಬ್ಧವಾಗಿದೆ. ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟ ಮುಷ್ಕರದ ಬಳಿಕ ಎಚ್ಚತ್ತುಕೊಂಡಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು  ಗ್ರಾಮ ಆಡಳಿತಾಧಿಕಾರಿಗಳ ಸಂಘಟನೆಯ ಪದಾಧಿಕಾರಿಗಳನ್ನು ಸೋಮವಾರ (ಸೆ. 30) ಮಾತುಕತೆಗೆ ಆಹ್ವಾನಿಸಿದ್ದಾರೆ.

ರಾಜ್ಯದಲ್ಲಿ ಇ-ಆಡಳಿತ ಜಾರಿಯಾದ ಮೇಲೆ 8000ಕ್ಕೂ ಹೆಚ್ಚು ಗ್ರಾಮ ಆಡಳಿತಾಧಿಕಾರಿಗಳು ಕಂದಾಯ ಇಲಾಖೆಯ ಕಾರ್ಯಗಳೊಟ್ಟಿಗೆ ಅನ್ಯ ಇಲಾಖೆಗಳ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. 17 ವಿವಿಧ ಮೊಬೈಲ್ ತಂತ್ರಾಂಶ ಹಾಗೂ ವೆಬ್ ಅಪ್ಲಿಕೇಷನ್ ಮೂಲಕ ಬೆಳೆ ಸಮೀಕ್ಷೆ, ಮನೆಗಣತಿ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ವಿತರಣೆ, ಆಧಾರ್ ಜೋಡಣೆ, ಲ್ಯಾಂಡ್ ಬೀಟ್, ನಮೂನೆ 1-5, ಪೌತಿ ಖಾತೆ ಆಂದೋಲನ ಸೇರಿದಂತೆ ಹಲವು ಕಾರ್ಯಗಳನ್ನು ಆನ್ಲೈನ್ ಮೂಲಕವೇ ಮಾಮಾಡುತ್ತಿದ್ದಾರೆ. ಆದರೆ, ಗ್ರಾಮ ಆಡಳಿತಾಧಿಕಾರಿಗಳಿಗೆ ಸಮರ್ಪಕ ಸೌಲಭ್ಯ ಮಾತ್ರ ಸರ್ಕಾರ ನೀಡುತ್ತಿಲ್ಲ ಎಂಬುದು ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಆರೋಪ.

ಮೊಬೈಲ್ ತಂತ್ರಾಂಶದ ಮೂಲಕ ಮಾಡಬೇಕಾದ ಕೆಲಸಗಳಿಗೆ ಪ್ರತ್ಯೇಕ ಮೊಬೈಲ್, ಇಂಟರ್ ನೆಟ್ ಸೇವೆ ಒದಗಿಸಿಲ್ಲ. ವೆಬ್ ಅಪ್ಲಿಕೇಷನ್ ಗಳಲ್ಲಿ ಕಾರ್ಯ ನಿರ್ವಹಿಸಲು ಲ್ಯಾಪ್ ಟಾಪ್ ನೀಡದ ಕಾರಣ ಆಡಳಿತಾಧಿಕಾರಿಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಾಡಳಿತಾಧಿಕಾರಿಗಳ ಅಗತ್ಯತೆಗಳಿಗೆ ಇಲ್ಲ ಸ್ಪಂದನೆ

ಗ್ರಾಮಾಡಳಿತ ಅಧಿಕಾರಿಗಳಿಗೆ ಹೆಗಲಿಗೆ ಕಂದಾಯ ಇಲಾಖೆಯು ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕುಂ, ಹಕ್ಕುಪತ್ರ, ನಮೂನೆ 1-5, ಪೌತಿ ಆಂದೋಲನದ ಕೆಲಸ ವಹಿಸಲಾಗಿದೆ. ಈ ಎಲ್ಲ ಕೆಲಸಗಳಿಗೆ ಮೊಬೈಲ್, ಲ್ಯಾಪ್ ಟಾಪ್, ಗೂಗಲ್ ಕ್ರೋಮ್ ಬುಕ್, ಪ್ರಿಂಟರ್, ಇಂಟರ್ ನೆಟ್ ಸೌಲಭ್ಯ ಅಗತ್ಯವಾಗಿದೆ. ಆದರೆ, ಇದ್ಯಾವುದನ್ನೂ ನೀಡದೇ ಕೆಲಸ ನಿರ್ವಹಿಸಲು ಕಾಲಮಿತಿ ವಿಧಿಸಿ, ತಪ್ಪಿದ್ದಲ್ಲಿ ಕಠಿಣ ಕ್ರಮ ಜರುಗಿಸುವುದು ಯಾವ ನ್ಯಾಯ ಎಂಬುದು ಗ್ರಾಮಾಡಳಿತ ಅಧಿಕಾರಿಗಳ ಅಳಲು.

"2006ರಲ್ಲಿ ಇ-ಆಡಳಿತ ಜಾರಿಯಾದಾಗಿನಿಂದ ತಾಳ್ಮೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಈಗ ಮತ್ತಷ್ಟು ಕಾರ್ಯದೊತ್ತಡ ಹೇರುತ್ತಿದ್ದು, ವೈಯಕ್ತಿಕ ಜೀವನವನ್ನೇ ಮರೆಯುವಂತಾಗಿದೆ. ಹಾಗಾಗಿ ಸೆ.22 ರಂದು ಬೆಂಗಳೂರಿನ ಕಂದಾಯ ಭವನದಲ್ಲಿ ರಾಜ್ಯ ಸಂಘದ ಕಾರ್ಯಕಾರಿಣಿ ಸಭೆ ನಡೆಸಿ, ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಣಯ ತೆಗೆದುಕೊಂಡಿದ್ದೇವೆ," ಎಂದು ಗ್ರಾಮ ಆಡಳಿತಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಯೋಗೇಶ್ ನಾಯ್ಕ್ ʼದ ಫೆಡರಲ್‌ ಕರ್ನಾಟಕʼ ಕ್ಕೆ ತಿಳಿಸಿದ್ದಾರೆ. " ಅ. 1 ರೊಳಗೆ ಎಲ್ಲ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಇಡೀ ಕಂದಾಯ ಇಲಾಖೆ ಕೆಲಸಗಳನ್ನೇ ನಿಲ್ಲಿಸುತ್ತೇವೆ," ಎಂದೂ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚುತ್ತಿರುವ ಹಲ್ಲೆ, ಇಲ್ಲದ ರಕ್ಷಣೆ

ಗ್ರಾಮಾಂತರ ಪ್ರದೇಶದಲ್ಲಿ ಬೆಳೆ ಸರ್ವೆ, ವಿವಾದಿತ ಭೂಮಿಗಳ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವ ಹಲವು ಸಂದರ್ಭಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದ ಉದಾಹರಣೆಗಳಿವೆ. ಭೂಮಿಯ ಬೆಲೆ ಗಗನಕ್ಕೇರಿದ ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಾಗಿದೆ. ಭೂ ವ್ಯಾಜ್ಯಗಳು ವಿಪರೀತವಾಗಿವೆ. ಮೇಲಾಧಿಕಾರಿಗಳ ಆದೇಶದ ಮೇರೆಗೆ ಗ್ರಾಮ ಆಡಳಿತಾಧಿಕಾರಿಗಳು ವಿವಾದಾತ್ಮಕ ಜಮೀನುಗಳಿಗೆ ಹೋಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಹಲ್ಲೆಯಾದರೂ ಏನೂ ಮಾಡಲಾಗದ ಸ್ಥಿತಿ ನಮ್ಮದಾಗಿದೆ ಎಂದು ಗ್ರಾಮ ಆಡಳಿತಾಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ. ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಬೆಳೆ ಸರ್ವೇ ಮಾಡಲು ಖಾಸಗಿ ಜಮೀನಿಗೆ ಹೋದ ಗ್ರಾಮ ಆಡಳಿತಾಧಿಕಾರಿ ರಾಜೇಂದ್ರ ಬಾಬು ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಅದಾದ ಮರುದಿನವೇ ಧಾರವಾಡದಲ್ಲೂ ಸ್ಥಳೀಯರು ಪಾನಮತ್ತರಾಗಿ ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂಬ ಸಂಗತಿಯನ್ನು ಯೋಗೇಶ್ ನಾಯ್ಕ್ ಬಹಿರಂಗಪಡಿಸಿದರು.

ರಾಜ್ಯದಲ್ಲಿ ಮಂಜೂರಾತಿ ಹುದ್ದೆಗಳು 10 ಸಾವಿರ ಇವೆ. ಆದರೆ, 8000 ಗ್ರಾಮ ಆಡಳಿತಾಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 1500 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆ ಭರ್ತಿ ಮಾಡುವುದಾಗಿ ಸರ್ಕಾರ ಮೂರು ವರ್ಷಗಳಿಂದ ಹೇಳುತ್ತಲೇ ಇದೆ. ಈವರೆಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಸಹಾಯಧನವನ್ನು ನೇರ ನಗದು ವರ್ಗಾವಣೆ ಮಾಡಲು ಫಲಾನುಭವಿಗಳಿಗೆ ತಲುಪಿಸಲು ನಾವೇ ಎಫ್ಐಡಿ ಮಾಡಬೇಕು. ಸತ್ತ ಜಾನುವಾರುಗಳಿಗೆ ಪರಿಹಾರ ಕೊಡಿಸಲು ನಾವೇ ಬೇಕು. ಹೀಗೆ ಸರ್ವೇ ಇಲಾಖೆ, ಆಹಾರ ಇಲಾಖೆ, ಪಂಚಾಯತ್ರಾಜ್ ಇಲಾಖೆಯ ಕೆಲಸಗಳನ್ನು ನಾವೇ ಮಾಡುವುದಾದರೆ ಆಯಾ ಇಲಾಖೆ ಅಧಿಕಾರಿಗಳ ಕೆಲಸವೇನು, ನಮಗೂ ವೈಯಕ್ತಿಕ ಜೀವನ ಇಲ್ಲವೇ ಎಂದು ಯೋಗೇಶ್ ನಾಯ್ಕ್ ಅವರು ʼದ ಫೆಡರಲ್ ಕರ್ನಾಟಕʼದ ಜೊತೆ ಅಳಲು ತೋಡಿಕೊಂಡರು.

ತಂತ್ರಾಂಶಗಳ ಕಿರಿಕಿರಿ

ಕಂದಾಯ ಇಲಾಖೆಯು 17 ತಂತ್ರಾಂಶಗಳನ್ನು ನೀಡಿದೆ. ಕೃಷಿ ಗಣತಿ, ಬೆಳೆ ಸರ್ವೇಗೆ ಸಂಯೋಜನೆ ತಂತ್ರಾಂಶ, ಮನೆ ಮನೆ ಗಣತಿಗೆ ಗುರುಡ ತಂತ್ರಾಂಶ ಸೇರಿದಂತೆ ಆಧಾರ್ ಸೀಡಿಂಗ್ ಇತ್ಯಾದಿ ಕೆಲಸಗಳಿಗೆ ಪ್ರತ್ಯೇಕ ತಂತ್ರಾಂಶಗಳಿವೆ. ಆದರೆ, ನಮಗೆ ಕನಿಷ್ಠ ಕಚೇರಿ, ಇಂಟರ್ ನೆಟ್ ಸೌಲಭ್ಯ ಕೊಟ್ಟಿಲ್ಲ. ಜಮೀನಿನ ಆಧಾರ್ ಸೀಡಿಂಗ್ ಸರ್ಕಾರದ ಒಳ್ಳೆಯ ಯೋಜನೆ. ಆದರೆ, ಆಧಾರ್ ಸೀಡಿಂಗ್ ಕುರಿತು ಯಾವುದೇ ಅಧಿಕೃತ ಆದೇಶ, ಅಧಿಸೂಚನೆ ಹೊರಡಿಸಿಲ್ಲ. ಆಧಾರ್ ಸೀಡಿಂಗ್ ಮಾಡುವಾಗ ಮೂರು ಬಾರಿ ಒಟಿಪಿ ಬರಲಿದೆ. ಗ್ರಾಮಾಂತರ ಪ್ರದೇಶದ ರೈತರು ಪರಿಚಯವಿರುವ ಕಾರಣ ಅವರಿಂದ ಒಟಿಪಿ ಪಡೆದು ಸೀಡಿಂಗ್ ಮಾಡಬಹುದು. ಆದರೆ, ಕೆಲ ಭೂ ಮಾಲೀಕರು ಬೆಂಗಳೂರಿನಲ್ಲಿರುತ್ತಾರೆ. ಅವರಿಗೆ ಒಟಿಪಿ ನೀಡುವಂತೆ ಕೇಳಿದರೆ ಆದೇಶ ಇದೆಯಾ ಎಂದು ಪ್ರಶ್ನಿಸುತ್ತಾರೆ. ಅನಧಿಕೃತವಾಗಿ ಅವರ ಜಮೀನಿಗೆ ಹೋದರೆ ಗಲಾಟೆಗಳಾಗುತ್ತವೆ ಎಂದು ದೊಡ್ಡಬಳ್ಳಾಪುರ ತಾಲೂಕು ಕಸಬಾ ವೃತ್ತದ ಗ್ರಾಮದ ಆಡಳಿತಾಧಿಕಾರಿ ಗುರುಪ್ರಸಾದ್ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಬೆಳೆ ಸರ್ವೇಗೆ ಸ್ಥಳೀಯ ಯುವಕರನ್ನು ಬಳಳಸಿಕೊಳ್ಳಲು ಸರ್ಕಾರ ಸೂಚಿಸಿದೆ. ಒಂದು ಪೋಟೊ ತೆಗೆದರೆ 10 ರೂ . ಪಾವತಿಸಲಿದೆ. ಈ ಯೋಜನೆ ಆರಂಭವಾದ ಕೆಲ ದಿನದ ಮಟ್ಟಿಗೆ ರೈತರು ಮಕ್ಕಳು, ಪರಿಚಯದ ಯುವಕರನ್ನು ಬಳಸಿಕೊಂಡು ಕೆಲಸ ಮಾಡಿಸಿದೆವು. ಹಲ್ಲೆ ಪ್ರಕರಣಗಳು ಹೆಚ್ಚಳ, ಸಂಭಾವನೆ ಕಡಿಮೆಯಾದ ಕಾರಣ ಯುವಕರು ಬರುತ್ತಿಲ್ಲ. ನಾವೇ ಜಮೀನಿಗೆ ಹೋಗಿ ಸಮೀಕ್ಷೆ ಮಾಡಬೇಕಾಗಿದೆ. ನಿಗದಿತ ಅವಧಿಯಲ್ಲಿ ಗುರಿ ತಲುಪದಿದ್ದರೆ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.

ಅನ್ಯ ಇಲಾಖೆಯ ಕಾರ್ಯದೊತ್ತಡ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲ್ಯಾಂಡ್ ಬೀಟ್ ತಂತ್ರಾಂಶದ ಮೂಲಕ ಸರ್ಕಾರಿ ಸ್ವತ್ತುಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಸರ್ಕಾರ ಜಾಗ ಕಬಳಿಕೆಯಾಗಿದ್ದರೆ ಅನ್ನು ಮೇಲಾಧಿಕಾರಿಗಳಿಗೆ ತಂತ್ರಾಂಶದಲ್ಲಿ ವರದಿ ಮಾಡಬೇಕಾಗುತ್ತದೆ. ವಿಪರ್ಯಾಸವೆಂದರೆ ಲ್ಯಾಂಡ್ ಬೀಟ್ ಕೆಲಸ ಭೂದಾಖಲೆ ಮತ್ತು ಸರ್ವೇ ಇಲಾಖೆಯ ಕೆಲಸವಾಗಿದೆ. ಏಕೆಂದರೆ, ಇಲಾಖೆ ಬಳಿಯೇ ಗ್ರಾಮ ನಕ್ಷೆ, ಅಟ್ಲಾಸ್, ಆಕಾರಬಂಧಿ, ಜಮೀನಿನ ಪೋಡಿ ಇರುತ್ತದೆ. ಯಾವುದು ಸರ್ಕಾರಿ ಸ್ವತ್ತು, ಯಾವುದು ಒತ್ತುವರಿಯಾಗಿದೆ ಎಂಬ ವಿವರ ಅವರ ಬಳಿ ಲಭ್ಯವಿರುತ್ತದೆ. ಸರ್ವೇ ಇಲಾಖೆ ಇಂತಹ ಜಾಗ ಒತ್ತುವರಿಯಾಗಿದೆ ಎಂದು ಹೇಳಿದರೆ ಕಂದಾಯ ಇಲಾಖೆ ತೆರವು ಮಾಡಬಹುದು. ಆದರೆ, ಸರ್ವೇ ಇಲಾಖೆಯ ಕೆಲಸವನ್ನೂ ನಮ್ಮ ಮೇಲೆಯೇ ಹಾಕಿರುವುದು ಎಷ್ಟು ಸರಿ ಎಂಬುದು ಗ್ರಾಮ ಆಡಳಿತಾಧಿಕಾರಿ ಗುರುಪ್ರಸಾದ್ ಅವರ ವಾದ.

ಲ್ಯಾಪ್ ಟಾಪ್ ನೀಡಲು ಸರ್ಕಾರ ನಿರ್ಧಾರ?

ಮೊಬೈಲ್ ತಂತ್ರಾಂಶ ಹಾಗೂ ವೆಬ್ ಅಪ್ಲಿಕೇಷನ್ ಗಳ ಮೂಲಕ ಗ್ರಾಮ ಆಡಳಿತಾಧಿಕಾರಿಗಳ ಕೆಲಸವನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ಲ್ಯಾಪ್ ಟಾಪ್ ನೀಡಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸೋಮವಾರ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ರಾಜ್ಯ ಸಂಘದ ಪದಾಧಿಕಾರಿಗಳನ್ನು ಮಾತುಕತೆಗೆ ಕರೆದಿದ್ದಾರೆ ಎನ್ನಲಾಗಿದೆ. ಆದರೆ, ಎಷ್ಟು ಪ್ರಮಾಣದ ಲ್ಯಾಪ್ ಟಾಪ್ ಕೊಡುತ್ತಾರೆ, ಯಾವ ಬೇಡಿಕೆ ಈಡೇರಿಸುತ್ತಾರೆ ಎಂಬ ಬಗ್ಗೆ ಖಚಿತತೆ ಇಲ್ಲ. ಈ ಕುರಿತು ʼದ ಫೆಡರಲ್ ಕರ್ನಾಟಕʼ ಕಂದಾಯ ಸಚಿವರನ್ನು ಸಂಪರ್ಕಿಸಿದಾಗ ಸೋಮವಾರ ಮಾತುಕತೆಗೆ ಕರೆದಿದ್ದೇವೆ ಎಂದಷ್ಟೇ ಹೇಳಿದರು.

ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳೇನು?

  • ಮೊಬೈಲ್ ತಂತ್ರಾಂಶದ ವಿಚಾರವಾಗಿ ಇದುವರೆಗೆ ಆಗಿರುವ ಸಿಬ್ಬಂದಿಗಳ ಅಮಾನತನ್ನು ಕೂಡಲೇ ಹಿಂಪಡೆಯಬೇಕು.
  • 30 ವರ್ಷ ಸೇವಾಔಧಿ ಪೂರೈಸಿದ ಹಾಗೂ ನಿವೃತ್ತಿ ಅಂಚಿನಲ್ಲಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಪದೋನ್ನತಿ ನೀಡಬೇಕು.
  • ಅಂತರ ಜಿಲ್ಲಾ ಪತಿ-ಪತ್ನಿ ವರ್ಗಾವಣೆ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕು.
  • ಆಹಾಯ ಇಲಾಖೆಯ ಕೆಲಸವನ್ನು ಕಂದಾಯ ಇಲಾಖೆಗೆ ಆದೇಶಿಸುತ್ತಿರುವ ಕಾರಣ ಈ ಹಿಂದಿನಂತೆ ಆಹಾರ ನಿರೀಕ್ಷಕರ ಹುದ್ದೆಗೆ ಪದೋನ್ನತಿ ನೀಡಬೇಕು.
  • ಕೆಸಿಎಸ್ಆರ್ ನಿಯಮಾವಳಿಯಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೊ ಹಾಕಬಾರದು. ಮೆಮೊ ಹಾಕುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು.
  • ಮೂರು ವರ್ಷಗಳ ಸೇವೆ ಪರಿಗಣಿಸಿ ಅಂತರ ಜಿಲ್ಲಾ ವರ್ಗಾವಣೆಗೆ ಹೊಸ ಮಾರ್ಗಸೂಚಿ ರಚಿಸಬೇಕು.
  • ಗ್ರಾಮ ಆಡಳಿತಾಧಿಕಾರಿಗಳ ಮೇ ಲೆ ಪದೇ ಪದೇ ಹಲ್ಲೆ ನಡೆಯುತ್ತಿದ್ದು, ಅರಣ್ಯ ಹಾಗೂ ಪೊಲಿಸ್ ಇಲಾಖೆಯಲ್ಲಿರುವಂತೆ ಆಪತ್ತಿನ ಭತ್ಯೆ(ರಿಸ್ಕ್ ಅಲೊಯನ್ಸ್ ) ೩೦೦೦ ರೂ. ನೀಡಬೇಕು.
  • ಕೆಲಸದ ಅವಧಿಗೂ ಮುನ್ನ , ಕೆಲಸ ಮುಗಿದ ಬಳಿಕ ವರ್ಚುಯಲ್ ಸಭೆಗೆ ನಿಷೇಧ, ಪ್ರಯಾಣ ಭತ್ಯೆ ದರ, ಪ್ರಭಾರ ಭತ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು.
  • ಗ್ರಾಮ ಆಡಳಿತಾಧಿಕಾರಿಗಳ ವೃತ್ತ ಹಾಗೂ ಹೋಬಳಿಗಳನ್ನು ಜನಸಂಖ್ಯೆ ಆಧಾರದ ಮೇಲೆ ಪರಿಷ್ಕರಿಸಿ, ಪುನರ್ ವಿಂಗಡಣೆ ಮಾಡಬೇಕು.
  • ಸೇವಾ ವಿಷಯಗಳಾದ ಪ್ರೊಬೆಷನರಿ, ಟೈಮ್ ಬಾಂಡ್, ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ ಪದೋನ್ನತಿ ವಿಷಯಗಳ ಇತ್ಯರ್ಥಕ್ಕೆ ಸಕಾಲ ಮಾದರಿಯ ವಿಧಾನ ಅನುಸರಿಬೇಕು.
  • ದಫ್ತರ್, ಜಮಾಬಂದಿ ರದ್ದುಪಡಿಸಿ, ಪ್ರೊಟೋಕಾಲ್ ಕೆಲಸದಿಂದ ಗ್ರಾಮ ಆಡಳಿತಾಧಿಕಾರಿಗಳನ್ನು ಕೈ ಬಿಡಬೇಕು.
Tags:    

Similar News