ಧರ್ಮಸ್ಥಳ ಪ್ರಕರಣ : ದೂರುದಾರ ಚಿನ್ನಯ್ಯನ ಹೇಳಿಕೆಗಳೆಲ್ಲವೂ ಸುಳ್ಳು: ಹೈಕೋರ್ಟ್‌ಗೆ ರಾಜ್ಯ ಪ್ರಾಸಿಕ್ಯೂಷನ್ ಮಾಹಿತಿ
ದೂರುದಾರ ಚಿನ್ನಯ್ಯ ನೀಡುತ್ತಿರುವ ಹೇಳಿಕೆಗಳು ಆತನ ಸ್ವಂತದ್ದಲ್ಲ. ಬೇರೊಬ್ಬರ ನಿರ್ದೇಶನದಂತೆ ಆತ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾನೆ. "ಇಬ್ಬರು ನನಗೆ ಬುರುಡೆ ಕೊಟ್ಟು, ಮ್ಯಾಜಿಸ್ಟ್ರೇಟ್ ಮುಂದೆ ಏನು ಹೇಳಬೇಕೆಂದು ತಿಳಿಸಿದ್ದರು.
ಹೈಕೋರ್ಟ್
ಧರ್ಮಸ್ಥಳದ ಸುತ್ತಮುತ್ತ ನೂರಾರು ಹೆಣ್ಣು ಮಕ್ಕಳ ಮೃತದೇಹಗಳನ್ನು ಕಾನೂನುಬಾಹಿರವಾಗಿ ಹೂಳಲಾಗಿದೆ ಎಂಬ ದೂರುದಾರ ಚಿನ್ನಯ್ಯನ ಹೇಳಿಕೆಗಳು ಸಂಪೂರ್ಣ ಸುಳ್ಳು ಮತ್ತು ಆತ ಬೇರೊಬ್ಬರ ಆಣತಿಯಂತೆ ಈ ಹೇಳಿಕೆ ನೀಡಿದ್ದಾನೆ ಎಂದು ರಾಜ್ಯ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದೆ. ಈ ಮೂಲಕ ಧರ್ಮಸ್ಥಳ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದೆ.
ಧರ್ಮಸ್ಥಳ ಗ್ರಾಮದಲ್ಲಿ ತಾವು ಗುರುತಿಸಿರುವ ಸ್ಥಳಗಳಲ್ಲಿ ಅಗೆಯಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಗುರುವಾರ ನಡೆಸಿತು.
ಪ್ರಾಸಿಕ್ಯೂಷನ್ ವಾದವೇನಿತ್ತು?
ದೂರುದಾರ ಚಿನ್ನಯ್ಯ ನೀಡುತ್ತಿರುವ ಹೇಳಿಕೆಗಳು ಆತನ ಸ್ವಂತದ್ದಲ್ಲ. ಬೇರೊಬ್ಬರ ನಿರ್ದೇಶನದಂತೆ ಆತ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾನೆ. "ಇಬ್ಬರು ನನಗೆ ಬುರುಡೆ ಕೊಟ್ಟು, ಮ್ಯಾಜಿಸ್ಟ್ರೇಟ್ ಮುಂದೆ ಏನು ಹೇಳಬೇಕೆಂದು ತಿಳಿಸಿದ್ದರು. ಅದರಂತೆಯೇ ನಾನು ಹೇಳಿಕೆ ನೀಡಿದ್ದೇನೆ" ಎಂದು ಸ್ವತಃ ಚಿನ್ನಯ್ಯ ಒಪ್ಪಿಕೊಂಡಿದ್ದಾನೆ.
2014ರಲ್ಲಿ ಧರ್ಮಸ್ಥಳ ತೊರೆದ ನಂತರ ಮತ್ತೆ ಅಲ್ಲಿಗೆ ಬಂದಿಲ್ಲ ಎಂದು ಚಿನ್ನಯ್ಯ ಈ ಹಿಂದೆ ನೀಡಿದ್ದ ಹೇಳಿಕೆ ಸುಳ್ಳು. ಆತ ಎರಡು ವರ್ಷಗಳ ಹಿಂದೆಯೂ ಧರ್ಮಸ್ಥಳಕ್ಕೆ ಬಂದಿದ್ದ. ಚಿನ್ನಯ್ಯ ಹೇಳಿದ 13 ಸ್ಥಳಗಳಲ್ಲಿ ಅಗೆದಾಗ, ಕೇವಲ ಒಂದೇ ಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ವಿಧಿವಿಜ್ಞಾನ ವರದಿ ಪ್ರಕಾರ ಅದು ಸುಮಾರು 30 ವರ್ಷದ ಪುರುಷನದ್ದು ಎಂದು ತಿಳಿದುಬಂದಿದೆ. ಮತ್ತೊಂದು ಸ್ಥಳದಲ್ಲಿ ಭೂಮಿಯ ಮೇಲ್ಭಾಗದಲ್ಲಿ ಸಿಕ್ಕ ಅಸ್ಥಿಪಂಜರವೂ ಪುರುಷನದ್ದೇ ಆಗಿದೆ ಎಂದು ಪ್ರಾಸಿಕ್ಯೂಶನ್ ಮಾಹಿತಿ ನೀಡಿದೆ.
ಅನನ್ಯಾ ಭಟ್ ಕಥೆಯೂ ಸುಳ್ಳು
"ನನ್ನ ಮಗಳು ಅನನ್ಯಾ ಭಟ್ 2003ರಲ್ಲಿ ಧರ್ಮಸ್ಥಳಕ್ಕೆ ಹೋದವಳು ನಾಪತ್ತೆಯಾಗಿದ್ದಾಳೆ" ಎಂದು ಹೇಳಿಕೊಂಡಿದ್ದ ಸುಜಾತಾ ಭಟ್ ಅವರ ಹೇಳಿಕೆಗಳೂ ಸುಳ್ಳು ಎಂಬುದು ಎಸ್‌ಐಟಿ ತನಿಖೆಯಿಂದ ಬಯಲಾಗಿದೆ. ಸುಜಾತಾ ಭಟ್ ತೋರಿಸಿದ್ದ ಫೋಟೋದಲ್ಲಿನ ಯುವತಿ ಅವರ ಮಗಳಲ್ಲ. ಆ ಯುವತಿಯ ವಾರಸುದಾರರನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಹೇಳಿಕೆ ಪಡೆಯಲಾಗಿದ್ದು, ಫೋಟೋದಲ್ಲಿರುವುದು ತಮ್ಮ ಮಗಳೇ ಎಂದು ಅವರು ಖಚಿತಪಡಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತು.
ನ್ಯಾಯಪೀಠದ ಕಳವಳ ಮತ್ತು ಸೂಚನೆ
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, "ನಿಮ್ಮ ಬಳಿ ಹೊಸ ಅಂಶಗಳೇನಾದರೂ ಇದ್ದರೆ ವಿವರಿಸಿ, ಮುಂದಿನ ವಿಚಾರಣೆಯಲ್ಲಿ ಪರಿಶೀಲಿಸೋಣ" ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದರು.
ಇದೇ ವೇಳೆ, ಸಿಆರ್‌ಪಿಸಿ ಕಾಯ್ದೆ 164ರ ಅಡಿ ಚಿನ್ನಯ್ಯನ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಇನ್ನೂ ದಾಖಲಿಸಿಕೊಳ್ಳದಿರುವ ಬಗ್ಗೆ ನ್ಯಾಯಪೀಠವು ತೀವ್ರ ಅಚ್ಚರಿ ಮತ್ತು ಕಳವಳ ವ್ಯಕ್ತಪಡಿಸಿತು.
ತನಿಖೆ ತಾರ್ಕಿಕ ಅಂತ್ಯ ಕಾಣಲಿದೆ: ಪೊನ್ನಣ್ಣ
"ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ಧರ್ಮಸ್ಥಳ ಪ್ರಕರಣದ ತನಿಖೆಯು ತಾರ್ಕಿಕ ಅಂತ್ಯ ಕಾಣುವುದರಲ್ಲಿ ಯಾವುದೇ ಅನುಮಾನ ಬೇಡ" ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಭರವಸೆ ನೀಡಿದ್ದಾರೆ.