ಪೋಡಿ ಸಮಸ್ಯೆಗೆ ಶಾಶ್ವತ ಪರಿಹಾರ: ಮತ್ತೊಮ್ಮೆ ಅಭಿಯಾನ ನಡೆಸಲು ಮುಂದಾದ ಸರ್ಕಾರ
ಲಕ್ಷಾಂತರ ರೈತರಿಗೆ ಅವರ ಜಮೀನಿನ ಹಕ್ಕನ್ನು ಅವರಿಗೆ ನೀಡುವ ಮೂಲಕ ನೆಮ್ಮದಿಯ ಬದುಕು ಕಲ್ಪಿಸಲು ನಮ್ಮ ಸರ್ಕಾರ ಸಂಕಲ್ಪ ತೊಟ್ಟಿದೆ. ಹಾಗಾಗಿ ಸೆಪ್ಟೆಂಬರ್ ತಿಂಗಳಿನಿಂದ ಮತ್ತೆ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಸಾಗುವಳಿ ಮಾಡುವ ರೈತರಿಗೆ ಮಂಜೂರು ಮಾಡಿರುವ ಜಮೀನುಗಳು ಹಲವು ವರ್ಷಗಳಿಂದ ಪೋಡಿ ದುರಸ್ತಿ ಮಾಡದೇ ಹಾಗೇ ಉಳಿದುಕೊಂಡಿವೆ. ಈ ಬಗ್ಗೆ ಹಿಂದಿನ ಸರ್ಕಾರದ ಅವಧಿಯಲ್ಲೂ ಚರ್ಚೆ, ನಾನಾ ಪ್ರಯತ್ನಗಳಾಗಿದ್ದರೂ ಈ ವಿಚಾರದಲ್ಲಿ ಸರಿಯಾದ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಆದರೆ, ರೈತರಿಗೆ ಅವರ ಜಮೀನಿನ ಹಕ್ಕನ್ನು ಸಂಪೂರ್ಣವಾಗಿ ನೀಡಲು, ಈ ವಿಚಾರದಲ್ಲಿ ಶಾಶ್ವತ ಪರಿಹಾರ ನೀಡಲು ನಮ್ಮ ಸರ್ಕಾರ ಸಂಕಲ್ಪ ತೊಟ್ಟಿದೆʼʼ ಎಂದು ಭರವಸೆ ನೀಡಿದರು.
ʻʻರೈತರಿಗೆ ಜಮೀನು ಮಂಜೂರಾಗಿದ್ದರೂ ಪೋಡಿ ದುರಸ್ತಿಯಾಗದಿರಲು ಎರಡು ಪ್ರಮುಖ ಕಾರಣಗಳಿವೆ. ದಶಕಗಳ ಹಿಂದಿನಿಂದಲೂ ನಮ್ಮ ಅಧಿಕಾರಿಗಳು 100 ಎಕರೆ ಜಮೀನಿದ್ದರೆ ಅದಕ್ಕಿಂತ ಹೆಚ್ಚು ವಿಸ್ತೀರ್ಣ ಮಂಜೂರು ಮಾಡಿದ್ದಾರೆ. ಇದೊಂದು ಕಾರಣವಾದರೆ, ಕೆಲವು ಸಂದರ್ಭದಲ್ಲಿ ಸಾಗುವಳಿ ಮಾಡದಂತವರಿಗೂ ಮಂಜೂರು ಮಾಡಿದ್ದಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಆರ್‌ಟಿಸಿಯಲ್ಲಿ ಮಂಜೂರುದಾರರ ಹೆಸರಿದೆ. ಆದರೆ, ಅವರಿಗೆ ಮಂಜೂರು ಆಗಿರುವ ಬಗ್ಗೆ ಯಾವುದೇ ನಿಖರ ದಾಖಲೆಗಳಿಲ್ಲ. ಮತ್ತಷ್ಟು ಪ್ರಕರಣಗಳಲ್ಲಿ ಮಂಜೂರಿಗೆ ಅರ್ಜಿ ಕೊಟ್ಟಿರುವ ದಾಖಲೆ ಇದೆ. ಆದರೆ, ಮಂಜೂರು ಆಗಿರುವ ದಾಖಲೆ ಇಲ್ಲʼʼ ಎಂದು ಪೋಡಿ ದುರಸ್ತಿಯಾಗದಿರಲು ಕಾರಣಗಳೇನು ಎಂಬುದನ್ನು ಸಚಿವರು ಬಿಚ್ಚಿಟ್ಟರು.
ʻʻಈ ಎರಡು ಪ್ರಮುಖ ಕಾರಣಗಳಿಂದ ಜಮೀನು ಮಂಜೂರಾಗಿದ್ರೂ ದುರಸ್ತಿಯಾಗಿಲ್ಲ. ಹೀಗಾಗಿ ರೈತರು ಅಂತಹ ಜಮೀನಿನಲ್ಲಿ ಕೃಷಿ ಮಾಡಬಹುದೇ ವಿನಃ ಅವರಿಗೆ ಆ ಭೂಮಿಯಿಂದ ಬೇರೆ ಯಾವುದೇ ಪ್ರಯೋಜನ ಇಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರೂ ಸೇರಿದಂತೆ ಎಲ್ಲಾ ಸಚಿವರ ಒತ್ತಡ ಇದೆ. ಅಲ್ಲದೆ, ರೈತರಿಂದಲೂ ಸಾಕಷ್ಟು ಒತ್ತಡವಿದೆ. ಹೀಗಾಗಿ ಕಳೆದ ಆರೆಂಟು ತಿಂಗಳಿನಿಂದ ಅಧಿಕಾರಿಗಳ ಜೊತೆ ನಿರಂತರ ಚರ್ಚೆ ನಡೆಸಿ ಇದೀಗ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದ್ದೇವೆ. ಯಾರಿಗೆ ಪೋಡಿ ಮಾಡಿಕೊಡಲು ಸಾಧ್ಯವೋ ಅವರಿಗೆಲ್ಲಾ ಪೋಡಿ ಮಾಡಿಕೊಡಲೇಬೇಕು ಎಂದು ನಮ್ಮ ಸರ್ಕಾರ ಸಂಕಲ್ಪ ಮಾಡಿದ್ದು, ಇದಕ್ಕೆಂದು ಪ್ರಾಯೋಗಿಕ ಆ್ಯಪ್ ಸಿದ್ಧಪಡಿಸಲಾಗಿದೆʼʼ ಎಂದು ತಿಳಿಸಿದರು.
ʻʻಪೋಡಿ ದುರಸ್ತಿ ಕೆಲಸವನ್ನು ಕಾಗದದಲ್ಲಿ ಕಾರ್ಯಗತಗೊಳಿಸಿದರೆ ನಮಗೂ ಯಾವುದೇ ಲೆಕ್ಕ ಸಿಗುವುದಿಲ್ಲ. ತಳಮಟ್ಟದ ಅಧಿಕಾರಿಗಳ ಇಚ್ಚೆಯಂತೆಯೇ ಕೆಲಸ ನಡೆಯುತ್ತೇ ವಿನಃ ಜನರಿಗೆ ನ್ಯಾಯ ಸಿಗಲ್ಲ. ಇದೇ ಕಾರಣಕ್ಕೆ ಡಿಜಿಟಲ್ ಆ್ಯಪ್ ಮೂಲಕ ಪೋಡಿ ದುರಸ್ತಿ ಕೆಲಸಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. 1 ರಿಂದ 5 ಹಾಗೂ 6 ರಿಂದ 10 ಪೋಡಿ ದುರಸ್ತಿ ಪ್ರಕರಣ ಬಾಕಿ ಇರುವ ಎಲ್ಲಾ ತಾಲೂಕುಗಳಲ್ಲೂ ನಾವೇ ಹುಡುಕಿ ದಾಖಲೆ ಕಡತ ಸಿದ್ದಪಡಿಸಬೇಕು ಎಂದು ತೀರ್ಮಾನಿಸಿದ್ದೇವೆ. ಹಾಸನದಲ್ಲಿ ಈಗಾಗಲೇ ಪ್ರಾಯೋಗಿಕ ಯೋಜನೆ ನಡೆಯುತ್ತಿದೆ. ಇದರ ಆಧಾರದ ಮೇಲೆ ಸೆಪ್ಟೆಂಬರ್ ತಿಂಗಳಿನಿಂದ ಜನರ ಅರ್ಜಿಗೆ ಕಾಯದೆ ನಾವೇ ಸ್ವಯಂ ಪ್ರೇರಣೆಯಿಂದ ಅಭಿಯಾನದ ಮಾದರಿಯಲ್ಲಿ 1 ರಿಂದ 5 ಹಾಗೂ 6 ರಿಂದ 10 ಪೋಡಿ ದುರಸ್ತಿ ಮಾಡಲಿದ್ದೇವೆ. ಎಲ್ಲಾ ಮಂಜೂರಿದಾರರ ಪರವಾಗಿ ನಾವೇ ಪ್ರಕ್ರಿಯೆ ಆರಂಭಿಸಲಿದ್ದು, ಇದರಿಂದ ಲಕ್ಷಾಂತರ ಜನರಿಗೆ ಅವರ ಜಮೀನಿನ ಹಕ್ಕನ್ನು ಅವರಿಗೆ ನೀಡದಂತಾಗುತ್ತದೆʼʼ ಎಂದು ಸಚಿವರು ತಿಳಿಸಿದರು.
ಪೋಡಿ ದುರಸ್ತಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಎಷ್ಟೇ ಕಾನೂನುಗಳನ್ನು ಅಳವಡಿಸಿದರೂ ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರಿಗಳು ಬಳಸಿಕೊಂಡು ಜನಸಾಮಾನ್ಯರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಕೆಲವೆಡೆ 50 ಎಕರೆ ಪೋಡಿ ಮಾಡಿಕೊಡಿ ಎಂದರೆ 100 ಎಕರೆ ಮಾಡಿಕೊಟ್ಟಿದ್ದಾರೆ, ಬಡ ರೈತನೊಬ್ಬ ತಾನು ಮಾಡುತ್ತಿರುವ ಸಾಗುವಳಿ ಭೂಮಿಗೆ ದಾಖಲೆಗಳನ್ನು ಮಾಡಿಕೊಳ್ಳಲು ಹೊರಟರೆ ಆತನನ್ನು ಅಲೆದಾಡಿಸುತ್ತಿದ್ದಾರೆ. ಇದಕ್ಕೆಲ್ಲಾ ಇತಿಶ್ರೀ ಹಾಡುವ ಉದ್ದೇಶದಿಂದಲೇ ಪೋಡಿ ಅಭಿಯಾನ ಆರಂಭಿಸಿದ್ದೇವೆ, ಈ ಸಂದರ್ಭದಲ್ಲಿ ಇಲಾಖಾ ನೌಕರರು ಮತ್ತು ಅಧಿಕಾರಿಗಳು ಕಾನೂನಿನ ಚೌಕಟ್ಟನಡಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು, ಇಲ್ಲದಿದ್ದರೆ ನಾವು ನಿಮ್ಮ ಮೇಲೆ ಕಠಿಣ ಕ್ರಮ ಜರುಗಿಸಬೇಕಾದೀತು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.