ಸರ್ಕಾರದಿಂದ ಕ್ಯಾಬಿನೆಟ್ ಅಧಿಕಾರ ದುರುಪಯೋಗ: ಜಗದೀಶ ಶೆಟ್ಟರ್ ಆರೋಪ
ಪೊಲೀಸರ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿತ್ತು. ಗಂಭೀರವಾದ ಈ ಪ್ರಕರಣ ಹಿಂದಕ್ಕೆ ಪಡೆಯುವ ನಿರ್ಣಯ ವಾಪಸ್ ಪಡೆಯದಿದ್ದರೆ, ಬಿಜೆಪಿಯಿಂದ ಉಗ್ರಹೋರಾಟ ಮಾಡಬೇಕಾಗುತ್ತದೆ' ಎಂದು ಎಚ್ಚರಿಕೆ ಕೊಟ್ಟರು.
“ಅಲ್ಪಸಂಖ್ಯಾತರ ಮತ ಗಟ್ಟಿಗೊಳಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರವು ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಹಿಂದಕ್ಕೆ ಪಡೆಯುವ ನಿರ್ಣಯ ಕೈಗೊಂಡು, ಕಾನೂನುಬಾಹಿರ ಕೆಲಸ ಮಾಡಿದೆ. ಕ್ಯಾಬಿನೆಟ್ ದುರುಪಯೋಗ ಪಡಿಸಿಕೊಂಡಿದೆ' ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇದು ದಂಗೆ ಪ್ರಕರಣ. ಹಲವರು ಪೊಲೀಸ್ ಠಾಣೆ, ಮನೆಗಳ ಮೇಲೆ ದಾಳಿ ಮಾಡಿದ್ದರು. ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಯಾಗಿತ್ತು. ಆದರೆ, ಪೊಲೀಸರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿತ್ತು. ಗಂಭೀರವಾದ ಈ ಪ್ರಕರಣ ಹಿಂದಕ್ಕೆ ಪಡೆಯುವ ಕುರಿತಾಗಿ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ ವಾಪಸ್ ಪಡೆಯದಿದ್ದರೆ, ಬಿಜೆಪಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ' ಎಂದು ಎಚ್ಚರಿಕೆ ಕೊಟ್ಟರು.
'ಗೃಹ ಇಲಾಖೆ ಮೂಲಕ ಸಿದ್ದರಾಮಯ್ಯ ಈ ವಿಷಯವನ್ನು ಸಂಪುಟದ ಗಮನಕ್ಕೆ ತಂದಿದ್ದಾರೆ. ಆ ಕಡತದಲ್ಲಿರುವ ವಿಚಾರಗಳನ್ನು ಬಹಿರಂಗಪಡಿಸಬೇಕು' ಎಂದು ಆಗ್ರಹಿಸಿದ ಅವರು, 'ಈ ಹಿಂದೆಯೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಿಎಫ್‌ಐ ಮೇಲಿನ ಪ್ರಕರಣ ಹಿಂದಕ್ಕೆ ಪಡೆದಿತ್ತು. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು' ಎಂದು ಆರೋಪಿಸಿದರು.
'ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿರುವ ಸಿದ್ದರಾಮಯ್ಯ ಅವರು, ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ನಡೆದ ಹೋರಾಟದಲ್ಲಿ ಭಾಗಿಯಾದವರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ನಾವು ಹಿಂದಕ್ಕೆ ಪಡೆದಿದ್ದೇವೆ. ಆದರೆ, ಈ ಪ್ರಕರಣ ಹಿಂದಕ್ಕೆ ಪಡೆಯುವಂಥದ್ದಲ್ಲ. ಇದನ್ನು ವಾಪಸ್ ಪಡೆಯುವುದಾದರೆ, ಮಹದಾಯಿ ಹೋರಾಟದಲ್ಲಿ ರೈತರ ಮೇಲೆ ಪ್ರಕರಣ ಏಕೆ ಹಿಂದಕ್ಕೆ ಪಡೆಯಲಿಲ್ಲ' ಎಂದು ಪ್ರಶ್ನಿಸಿದರು. 'ದುಷ್ಟರನ್ನು ಸಂಹರಿಸುವುದಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ದಿನಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿದೆ' ಎಂದು ಆರೋಪಿಸಿದರು.