ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 15ನೇ ಆಯವ್ಯಯವನ್ನು ಫೆಬ್ರವರಿ 16ರಂದು ಮಂಡನೆ ಮಾಡಲಿದ್ದಾರೆ. ಬಾಲರಾಮನ ಪ್ರಾಣಪ್ರತಿಷ್ಠೆ ಮೂಲಕ ಬಿಜೆಪಿ ದೇಶದೆಲ್ಲೆಡೆ ಹವಾ ಎಬ್ಬಿಸಿದೆ ಮತ್ತು ಇದನ್ನು ಚುನಾವಣೆವರೆಗೆ ಕಾಯ್ದುಕೊಳ್ಳಲಿದೆ. ದೀರ್ಘ ಕಾಲದ ಸಂದಿಗ್ಧದ ಬಳಿಕ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಬಿಜೆಪಿ ಪ್ರಾಯೋಜಿತವಾಗಿದ್ದು, ತಾನು ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಹೇಳಿತು. ಇದನ್ನು ಬಳಸಿಕೊಂಡ ಬಿಜೆಪಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ʻಹಿಂದು ವಿರೋಧಿʼ ಎಂದು ಆರೋಪ ಮಾಡಿತು. ಇದಕ್ಕೆ ಮುಖ್ಯಮಂತ್ರಿ/ಉಪಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು, ʻನಾವೆಲ್ಲರೂ ಗಾಂಧಿಯ ರಾಮನ ಭಕ್ತರುʼ ಎಂದು ಪ್ರತಿಕ್ರಿಯಿಸಿದರು.
ಈ ಬಿಸಿ ಆರುವ ಮುನ್ನವೇ ನಡೆದ ಕೆರಗೋಡು ಹನುಮ ಧ್ವಜ ಪ್ರಕರಣ ಉದ್ಭವಿಸಿತು. ರಾಜಕೀಯ ಕಾರಣಗಳಿಗಾಗಿ ಬಿಜೆಪಿ-ಜೆಡಿಎಸ್ ಪ್ರಕರಣವನ್ನು ಉಬ್ಬಿಸಿದವು ಎನ್ನುವುದು ಸ್ಪಷ್ಟ. ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆಗೆ ಕೂಡಿಕೆ ಮಾಡಿಕೊಂಡಿದೆ. ರಾಜ್ಯ ಬಿಜೆಪಿ ಮತ್ತೆ ಯಡಿಯೂರಪ್ಪ ಅವರ ಹಿಡಿತಕ್ಕೆ ಬಂದಿದ್ದು, ಅದರ ಮೊದಲ ನಡೆ ಶೆಟ್ಟರ್ ಸೇರ್ಪಡೆ. ಪ್ರಹ್ಲಾದ ಜೋಷಿ ಮತ್ತು ಸಂತೋಷ್ ಜೋಡಿಗೆ ಹಿನ್ನಡೆಯಾಗಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬಿಜೆಪಿ ಚುರುಕಾಗಿದೆ; ಆದರೆ, ಬೆಳಗಾವಿ ಅಧಿವೇಶನದಲ್ಲೇ ಈ ನೇಮಕಕ್ಕೆ ಬಹಿರಂಗವಾಗಿ ವಿರೋಧವೂ ವ್ಯಕ್ತವಾಗಿದೆ.
ಬಿಜೆಪಿಯ ಟ್ರಂಪ್ ಕಾರ್ಡ್ ಹಿಂದುತ್ವದ ವಿರುದ್ಧ ಕಾಂಗ್ರೆಸ್ ಯಾವ ದಾಳ ಉರುಳಿಸಲಿದೆ? ಕೇಂದ್ರ ಬಜೆಟ್ಟಿನಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ, ಕಾಂಗ್ರೆಸ್ ಫೆಬ್ರವರಿ 7ರಂದು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲಿದೆ. ಮುಖ್ಯಮಂತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊನ್ನೆ ಮಂಡನೆಯಾದ ಕೇಂದ್ರ ಆಯವ್ಯಯದಲ್ಲಿ ದಕ್ಷಿಣ ಭಾರತಕ್ಕೆ 1,92,272 ಕೋಟಿ ರೂ. ಹಾಗೂ ಉತ್ತರಪ್ರದೇಶ ರಾಜ್ಯವೊಂದಕ್ಕೇ 2,18,816 ಕೋಟಿ ರೂ. ನೀಡಲಾಗಿದೆ. 100 ರೂ. ನೇರ ತೆರಿಗೆಯಲ್ಲಿ ಬಿಹಾರಕ್ಕೆ ಗರಿಷ್ಠ (ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ) 922.50 ರೂ. ಹಾಗೂ ಉತ್ತರ ಪ್ರದೇಶಕ್ಕೆ 333.20 ರೂ. ಪಾಲು ಸಿಗುತ್ತಿದೆ. ಆದರೆ, ಮಹಾರಾಷ್ಟ್ರಕ್ಕೆ ಅತಿ ಕಡಿಮೆ 7.7 ರೂ. ಹಾಗೂ ಕರ್ನಾಟಕಕ್ಕೆ 13.9 ರೂ ಸಂದಾಯವಾಗುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ನಾವು ಹಿಂದುಳಿದ ರಾಜ್ಯಗಳಿಗೆ ಪಾಲು ನೀಡಬೇಕು ಎನ್ನುವುದು ಸರಿ. ಆದರೆ, ಈಗಿನ ಪಾಲು ಹಂಚಿಕೆ ವ್ಯವಸ್ಥೆ ತೀರಾ ಅನ್ಯಾಯದ್ದು ಎಂಬ ಕೂಗು ಬಹಳ ಹಿಂದಿನಿಂದಲೂ ಇದೆ. ಇದರ ವಿರುದ್ಧ ಕನ್ನಡಿಗರು ಫೆಬ್ರವರಿ 4ರಂದು ನಡೆಸಿದ ಟ್ವಿಟರ್ ಅಭಿಯಾನಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ ಮತ್ತು ದಕ್ಷಿಣದ ಬೇರೆ ರಾಜ್ಯಗಳವರೂ ಅಭಿಯಾನವನ್ನು ಬೆಂಬಲಿಸಿದ್ದಾರೆ. ಅಸಮರ್ಪಕ ಅನುದಾನ ನೀಡಿಕೆಯನ್ನು ಪ್ರತಿಭಟಿಸಿ, ಸಂಸದ ಡಿ.ಕೆ.ಸುರೇಶ್ ಅವರು ನೀಡಿದ ʻಪ್ರತ್ಯೇಕ ರಾಷ್ಟ್ರʼ ಹೇಳಿಕೆಯನ್ನು ಮತ್ತೊಂದು ವಿವಾದವಾಗಿಸಲು ಬಿಜೆಪಿ ಪ್ರಯತ್ನಿಸಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಕ್ಷಮೆ ಕೇಳಬೇಕು ಮತ್ತು ವಿಷಯ ಕುರಿತು ನೀತಿ ಸಮಿತಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಜತೆಗೆ, ಹಲವು ಕಡೆ ಪ್ರಕರಣ ದಾಖಲಿಸಲಾಗಿದೆ. ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಹೊರಗಟ್ಟಲು ಇಂಥದ್ದೇ ತಂತ್ರ ಬಳಸಲಾಗಿತ್ತು ಮತ್ತು ನೀತಿ ಸಮಿತಿಯ ಶಿಫಾರಸನ್ನು ʻಕಾಂಗರೂ ಕೋರ್ಟ್ ನ್ಯಾಯʼ ಎಂದು ಅವರು ಖಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಾಲರಾಮನ ಪ್ರಾಣಪ್ರತಿಷ್ಠೆ ಮತ್ತು ಕೇಂದ್ರದ ʻಪ್ಲೀಸ್ ಆಲ್ʼ ಆಯವ್ಯಯಕ್ಕೆ ಸಿದ್ದರಾಮಯ್ಯ ಹೇಗೆ ಪ್ರತಿಕ್ರಿಯಿಸುತ್ತಾರೆ? ಹಿಂದುತ್ವಕ್ಕೆ ಪ್ರತಿಯಾಗಿ ಅಹಿಂದವನ್ನು ಹಾಗೂ ಮೃದು ಹಿಂದುತ್ವವನ್ನು ಮುಂದೊಡ್ಡುವರೇ? ಹನುಮಂತನ ಜನ್ಮಸ್ಥಾನ ಎನ್ನಲಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರ್ಕಾರ 100 ಕೋಟಿ ರೂ. ಅನುದಾನ ಘೋಷಿಸಿತ್ತು. ಆದರೆ, ಬಿಡುಗಡೆಯಾಗಿದ್ದು 10 ಕೋಟಿ ರೂ. ಮಾತ್ರ. ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಚುನಾವಣೆಗೆ ಕೆಲವೇ ದಿನಗಳ ಮುನ್ನ ಶಿಲಾನ್ಯಾಸ ನೆರವೇರಿಸಿದ್ದರು. ಮೂಲಗಳ ಪ್ರಕಾರ, ಬೆಟ್ಟವನ್ನು ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವ ಬಜೆಟ್‌ನಲ್ಲಿ ಇರಲಿದೆ. ರಸ್ತೆ ನಿರ್ಮಾಣ, ಪರ್ಯಾಯ ಮಾರ್ಗಗಳ ಅಭಿವೃದ್ಧಿ, ಬೆಟ್ಟಕ್ಕೆ 430 ಮೀಟರ್ ಉದ್ದದ ರೋಪ್‌ವೇ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಘೋಷಿಸುವ ಸಾಧ್ಯತೆಯಿದೆ. ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಂಪಿ ಮತ್ತು ಅಂಜನಾದ್ರಿ ಬೆಟ್ಟವನ್ನು ತುಂಗಭದ್ರಾ ನದಿ ಬೇರ್ಪಡಿಸುತ್ತದೆ ಮತ್ತು ಈ ಎರಡರ ನಡುವೆ ಅಂದಾಜು 20 ಕಿಮೀ ಅಂತರವಿದೆ. ಹಂಪಿ ಹಿಂದೆ ವಾನರರ ರಾಜಧಾನಿಯಾಗಿತ್ತು ಎಂಬ ನಂಬಿಕೆಯಿದೆ. ಸರ್ಕಾರ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಯೋಜನೆಗೆ 60 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಕೊಪ್ಪಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಆದರೆ, ಯುನೆಸ್ಕೋ, ಪುರಾತತ್ವ ಇಲಾಖೆ ಮತ್ತು ಹಂಪಿ ವಿಶ್ವ ಪುರಾತತ್ವ ಪ್ರದೇಶ ನಿರ್ವಹಣೆ ಪ್ರಾಧಿಕಾರ(ಎಚ್‌ಡಬ್ಲ್ಯುಎಚ್‌ಎಎಂಎ) ಅನುಮತಿ ನೀಡಲು ವಿಳಂಬ ಮಾಡುತ್ತಿವೆ. ಎಚ್‌ಡಬ್ಲ್ಯುಎಚ್‌ಎಎಂಎ ಶರತ್ತಿನನ್ವಯ ಸಮ್ಮತಿ ನೀಡಿದ್ದು, 23 ಕೋಟಿ ರೂ. ವೆಚ್ಚದ ಕಾಮಗಾರಿಗಳು ಆರಂಭಗೊಂಡಿವೆ.
ಇದರೊಟ್ಟಿಗೆ ರಾಜ್ಯದೆಲ್ಲೆಡೆಯ 100 ರಾಮ ದೇವಾಲಯಗಳ ಪುನರುಜ್ಜೀವನಕ್ಕೆ ಅನುದಾನ ನೀಡಬೇಕೆಂದು ಮುಜರಾ ಯಿ ಇಲಾಖೆ ಒತ್ತಾಯಿಸುತ್ತಿದೆ. ಒಂದು ವೇಳೆ ಅನುದಾನ ಲಭ್ಯವಾಗದೆ ಇದ್ದಲ್ಲಿ ನಮ್ಮದೇ ಸಂಪನ್ಮೂಲದಿಂದ ಪುನರುಜ್ಜೀವನ ಮಾಡುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಮುಜರಾಯಿ ಇಲಾಖೆ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಗ್ಯಾರಂಟಿಗಳು ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿವೆ. ಹೀಗಿದ್ದರೂ, ಅದರ ಮುಂದುವರಿಕೆ ಸರ್ಕಾರಕ್ಕೆ ಅನಿವಾರ್ಯ. ಜನರು ಗ್ಯಾರಂಟಿ ಮತ್ತು ಅಕ್ಷತೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಜನರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ ಎಂದು ದೂರಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮುಂದುವರಿಕೆ ಜೊತೆಗೆ ಬಿಜೆಪಿಯ ಹಿಂದುತ್ವ ಕಾರ್ಯಸೂಚಿಗೆ ಪ್ರತಿಯಾಗಿ ಅಹಿಂದ ಹಾಗೂ ಮೃದು ಹಿಂದುತ್ವದ ದಾಳವನ್ನು ಹೂಡಬೇಕಾದ ಅನಿವಾರ್ಯತೆ ಕಾಂಗ್ರೆಸ್ ಮೇಲೆ ಇದೆ. ಇದರೊಟ್ಟಿಗೆ ಜಾತಿ ಸಮೀಕ್ಷೆಯ ಬಿಸಿ ತುಪ್ಪ ಕೂಡ ಇದೆ. ಸಿಎಂ ಇದನ್ನು ಹೇಗೆ ನಿರ್ವಹಿಸುತ್ತಾರೆ ಮತ್ತು ಲೋಕಸಭೆ ಚುನಾವಣೆ ಮೇಲೆ ಇದೆಲ್ಲವೂ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾಯ್ದುನೋಡಬೇಕಿದೆ.