ಜಿಬಿಎ ಸಭೆಗೆ ಗೈರಾದ ಬಿಜೆಪಿ ನಾಯಕರ ವಿರುದ್ಧ ಸಿಎಂ ಗರಂ
ಜಿಬಿಎ ಒಂದು ಪ್ರಜಾಸತ್ತಾತ್ಮಕ ವೇದಿಕೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ನಿಜವಾದ ಕಳಕಳಿ ಇದ್ದರೆ, ಸಭೆಗೆ ಬಂದು ತಮ್ಮ ಅಭಿಪ್ರಾಯಗಳನ್ನು, ವಿರೋಧವನ್ನು ದಾಖಲಿಸಬೇಕಿತ್ತು ಎಂದು ಅವರು ಹೇಳಿದರು.
ಒಂದು ಕಾಲದಲ್ಲಿ ಬೆಂಗಳೂರಿನ ಉತ್ತಮ ಆಡಳಿತಕ್ಕಾಗಿ ನಗರ ವಿಭಜನೆಯ ಪ್ರಸ್ತಾಪವನ್ನು ಮೊದಲು ಮುಂದಿಟ್ಟಿದ್ದೇ ಬಿಜೆಪಿಯವರು. ಆದರೆ, ಈಗ ನಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿದರೆ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ದ್ವಂದ್ವ ನಿಲುವೇಕೆ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಬಿಎ ಸಭೆಗೆ ಬಿಜೆಪಿ ನಾಯಕರು ಗೈರುಹಾಜರಾದ ಕ್ರಮವನ್ನು ಬಲವಾಗಿ ಖಂಡಿಸಿದರು. "ಜಿಬಿಎ ಒಂದು ಪ್ರಜಾಸತ್ತಾತ್ಮಕ ವೇದಿಕೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ನಿಜವಾದ ಕಳಕಳಿ ಇದ್ದರೆ, ಸಭೆಗೆ ಬಂದು ತಮ್ಮ ಅಭಿಪ್ರಾಯಗಳನ್ನು, ವಿರೋಧವನ್ನು ದಾಖಲಿಸಬೇಕಿತ್ತು. ಆದರೆ, ಸಭೆಯನ್ನೇ ಬಹಿಷ್ಕರಿಸುವ ಮೂಲಕ ಅವರು ಆಡಳಿತ ವಿಕೇಂದ್ರೀಕರಣಕ್ಕೆ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ತಾವು ವಿರೋಧಿಗಳು ಎಂಬುದನ್ನು ನಿರೂಪಿಸಿದ್ದಾರೆ," ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
"ಬೆಂಗಳೂರು ಬೃಹದಾಕಾರವಾಗಿ ಬೆಳೆದಿದೆ, ಇಲ್ಲಿನ ಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಆಡಳಿತಾತ್ಮಕ ಸುಧಾರಣೆಗಳು ಅನಿವಾರ್ಯ. ಇದನ್ನು ಅರಿತಿದ್ದರಿಂದಲೇ ಹಿಂದೆ ಬಿಜೆಪಿಯವರೇ ನಗರ ವಿಭಜನೆಯ ಬಗ್ಗೆ ಮಾತನಾಡಿದ್ದರು. ಈಗ ನಾವು ಜಿಬಿಎ ಮೂಲಕ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯಲು ಯತ್ನಿಸಿದರೆ, ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿದ್ದಾರೆ," ಎಂದು ಅವರು ಆರೋಪಿಸಿದರು.
"ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಅವರ ವಿರೋಧ ಕೇವಲ ರಾಜಕೀಯ ಪ್ರೇರಿತ. ನಾವು ಬೆಂಗಳೂರಿನ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ," ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.