ವರುಣನ ವೈರುಧ್ಯ: ಒಂದೆಡೆ ಹಸಿರಿನ ಸಂಭ್ರಮ, ಇನ್ನೊಂದೆಡೆ ಕಣ್ಣೀರಿನ ಕಡಲು

ರಾಜ್ಯದ ಕರಾವಳಿ ಕರ್ನಾಟಕದಲ್ಲಿ 4,235 ಮಿ.ಮೀಟರ್‌ ಶೇ. 23, ಮಲೆನಾಡು ಪ್ರದೇಶದಲ್ಲಿ 2,263 ಮಿ.ಮೀಟರ್‌ ಶೇ. 20, ದಕ್ಷಿಣ ಒಳನಾಡಿನಲ್ಲಿ 802 ಮಿ.ಮೀಟರ್‌ ಶೇ. 23, ಉತ್ತರ ಒಳನಾಡಿನಲ್ಲಿ 767 ಮಿ.ಮೀಟರ್‌ ಶೇ.15 ರಷ್ಟು ಹೆಚ್ಚು ಮಳೆಯಾಗಿದೆ.

Update: 2025-10-12 01:30 GMT

ಮಳೆಯಿಂದ ನಳನಳಿಸುತ್ತಿರುವ ರಾಗಿ ಬೆಳೆ, ಅಕಾಲಿಕ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಹಾಳಾಗಿರುವ ಭತ್ತ 

Click the Play button to listen to article

ಈ ವರ್ಷದ ಮುಂಗಾರು ಮಳೆಯು ಕರ್ನಾಟಕದ ರೈತರ ಪಾಲಿಗೆ ದ್ವಂದ್ವದ ಚಿತ್ರಣವನ್ನು ನೀಡಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ವರುಣನ ಕೃಪೆಯಿಂದ ಹಸಿರು ನಳನಳಿಸುತ್ತಿದ್ದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅದೇ ಮಳೆ ಅಟ್ಟಹಾಸ ಮೆರೆದು ರೈತರ ಬದುಕನ್ನು ಅಕ್ಷರಶಃ ಬೀದಿಗೆ ತಂದಿದೆ. ವಾಡಿಕೆಗಿಂತ ಶೇ.16ರಷ್ಟು ಹೆಚ್ಚು ಮಳೆಯಾಗಿದ್ದರೂ, ಅದರ ಅಸಮರ್ಪಕ ಹಂಚಿಕೆ ರಾಜ್ಯದಲ್ಲಿ ಎರಡು ವಿಭಿನ್ನ ಮತ್ತು ತೀವ್ರ ಭಾವನಾತ್ಮಕ ಸ್ಥಿತಿಗಳನ್ನು ಸೃಷ್ಟಿಸಿದೆ. ಹೀಗಾಗಿ ಒಂದೆಡೆ ಆಶಾಭಾವ, ಇನ್ನೊಂದೆಡೆ ಘೋರ ನಿರಾಶ ಎಂಬಂತಾಗಿದೆ.

ರಾಜ್ಯದ ಕರಾವಳಿ ಕರ್ನಾಟಕದಲ್ಲಿ 4,235 ಮಿ.ಮೀಟರ್‌ ಶೇ. 23, ಮಲೆನಾಡು ಪ್ರದೇಶದಲ್ಲಿ 2,263 ಮಿ.ಮೀಟರ್‌ ಶೇ. 20, ದಕ್ಷಿಣ ಒಳನಾಡಿನಲ್ಲಿ 802 ಮಿ.ಮೀಟರ್‌ ಶೇ. 23, ಉತ್ತರ ಒಳನಾಡಿನಲ್ಲಿ 767 ಮಿ.ಮೀಟರ್‌ ಶೇ.15 ರಷ್ಟು ಹೆಚ್ಚು ಮಳೆಯಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಪ್ರತಿ ವರ್ಷ ವಾಡಿಕೆಯಂತೆ 675.6 ಮಿ.ಮೀಟರ್‌ ಮಳೆಯಾಗುತ್ತದೆ. ಆದರೆ ಈ ಬಾರಿ ಉತ್ತಮ ಮುಂಗಾರಿನಿಂದ 786 ಮಿ.ಮೀಟರ್‌ ಮಳೆ ದಾಖಲಾಗಿದ್ದು, ವಾಡಿಕೆಗಿಂತ ಶೇ.16ರಷ್ಟು ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರದಲ್ಲಿ ಕಣ್ಣೀರು

ಸೆಪ್ಟೆಂಬರ್ ಅಂತ್ಯದಿಂದ ಅಕ್ಟೋಬರ್ ಆರಂಭದವರೆಗೆ ಸುರಿದ ಅಕಾಲಿಕ ಹಾಗೂ ನಿರಂತರ ಮಳೆ, ಜೊತೆಗೆ ಮಹಾರಾಷ್ಟ್ರದ ಜಲಾಶಯಗಳಿಂದ ಹರಿದುಬಂದ ಭಾರೀ ಪ್ರಮಾಣದ ನೀರು ಉತ್ತರ ಕರ್ನಾಟಕದ ಪಾಲಿಗೆ 'ಮೃತ್ಯುಪಾಶ'ವಾಗಿ ಪರಿಣಮಿಸಿದೆ. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿದು, ಸಾವಿರಾರು ಎಕರೆ ಕೃಷಿ ಭೂಮಿಯನ್ನು ಆಪೋಶನ ತೆಗೆದುಕೊಂಡಿವೆ. ಈ ಜಿಲ್ಲೆಗಳಲ್ಲಿಯೇ ಸುಮಾರು 7.24 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ ಪಾಟೀಲ್‌ ಅವರು ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.

ಕಟಾವಿನ ಹೊಸ್ತಿಲಲ್ಲಿದ್ದ ತೊಗರಿ, ಹತ್ತಿ, ಸೋಯಾಬೀನ್, ಉದ್ದು, ಈರುಳ್ಳಿಯಂತಹ ಲಾಭದಾಯಕ ಬೆಳೆಗಳು ನೀರಿನಲ್ಲಿ ಕೊಳೆತು ಹೋಗಿವೆ. ರೈತರು ಕಣ್ಣೆದುರೇ ತಮ್ಮ ಶ್ರಮದ ಫಲ ಕೊಚ್ಚಿಹೋಗುವುದನ್ನು ಅಸಹಾಯಕರಾಗಿ ನೋಡುವಂತಾಗಿದೆ. ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜಿನ ಪ್ರಕಾರ, ರಾಜ್ಯಾದ್ಯಂತ ಒಟ್ಟಾರೆ 13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದು ರೈತರ ಆರ್ಥಿಕ ಭವಿಷ್ಯವನ್ನೇ ಅಂಧಕಾರಕ್ಕೆ ತಳ್ಳಿದೆ.

ದಕ್ಷಿಣ ಕರ್ನಾಟಕದಲ್ಲಿ ಆಶಾದಾಯಕ ಚಿತ್ರಣ

ಇದಕ್ಕೆ ಸಂಪೂರ್ಣ ವ್ಯತಿರಿಕ್ತ ಚಿತ್ರಣ ದಕ್ಷಿಣ ಕರ್ನಾಟಕದಲ್ಲಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಂತಹ ಬಯಲುಸೀಮೆ ಪ್ರದೇಶಗಳಲ್ಲಿ ಇದೇ ಮಳೆ 'ಅಮೃತಧಾರೆ'ಯಾಗಿ ಪರಿಣಮಿಸಿದೆ. ಬರಗಾಲದ ಅಂಚಿನಲ್ಲಿದ್ದ ಈ ಪ್ರದೇಶಗಳಲ್ಲಿ ಕೆರೆ-ಕಟ್ಟೆಗಳು ತುಂಬಿ, ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

ಈ ಬಗ್ಗೆ 'ದ ಫೆಡರಲ್​ ಕರ್ನಾಟಕ'ದ ಜತೆ ಮಾತನಾಡಿದ ರೈತ ಮುಖಂಡ ವಾಸುದೇವ ಟಿ.ಜಿ., "ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಬಯಲು ಸೀಮೆ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬೆಳೆಗಳು ನಳನಳಿಸುತ್ತಿವೆ. ಕೊರಟಗೆರೆ, ಶಿರಾ ಭಾಗದಲ್ಲಿ ಶೇಂಗಾ ಬೆಳೆ ಕಟಾವು ಮಾಡಲು ಇದೀಗ ಮಳೆ ಬೇಕಿತ್ತು. ಮಳೆ ಬಂದಿರುವುದು ರೈತರಿಗೆ ಅನುಕೂಲವಾಗಿದೆ. ತೆನೆ ಕಟ್ಟುತ್ತಿರುವ ರಾಗಿ ಹಾಗೂ ಕೆಲವೆಡೆ ಹುರುಳಿ ಬೆಳೆಗೂ ಇದು ವರದಾನವಾಗಿದೆ. ಈ ಬಾರಿ ರಾಗಿ ಉತ್ತಮ ಇಳುವರಿಯಾಗುವ ಸಾಧ್ಯತೆ ಇದೆ" ಎಂದು ಸಂತಸ ವ್ಯಕ್ತಪಡಿಸಿದರು.

ಪರಿಹಾರಕ್ಕಾಗಿ ಮೊರೆ

ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ರೈತರು ಈಗ ಸಂಪೂರ್ಣವಾಗಿ ಸರ್ಕಾರದ ನೆರವನ್ನೇ ನೆಚ್ಚಿಕೊಂಡಿದ್ದಾರೆ. ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರಿಗೆ ಮರುಪಾವತಿ ಮಾಡುವಂತೆ ನೋಟಿಸ್‌ಗಳು ಬರುತ್ತಿದ್ದು, ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ.

ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಎಚ್ ಕೊಮಾರ್‌, "ಅಕಾಲಿಕ ಮಳೆಯಿಂದ ಈರುಳ್ಳಿ, ಉದ್ದು, ತೊಗರಿ, ಸೋಯಾಬಿನ್‌ ಸಂಪೂರ್ಣ ನಾಶವಾಗಿವೆ. ಕ್ವಿಂಟಾಲ್ ಉದ್ದಿಗೆ 9,000 ಬೆಲೆ ಇರುತ್ತಿತ್ತು, ಇದೀಗ 4,000 ದಿಂದ ಇಳಿಕೆಯಾಗಿದೆ.. ಪ್ರತಿಪಕ್ಷದ ನಾಯಕರು ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಸೂಕ್ತ ಪರಿಹಾರ ಕೊಡಿಸಬೇಕು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕುಸಿದ ಮನೆಗಳಿಗೆ ತಲಾ 5 ಲಕ್ಷ ರೂ. ಹಾಗೂ ಬೆಳೆಗಳಿಗೆ ಉತ್ತಮ ಪರಿಹಾರ ನೀಡಿದ್ದರು. ಅದೇ ರೀತಿ, ಈಗಿನ ಸರ್ಕಾರವೂ ಹೆಚ್ಚಿನ ಪರಿಹಾರ ಘೋಷಿಸಬೇಕು" ಎಂದು ಆಗ್ರಹಿಸಿದರು.

ಬೆಲೆ ಇಲ್ಲ

ಇತ್ತ ದಕ್ಷಿಣದಲ್ಲಿ, ಉತ್ತಮ ಇಳುವರಿ ಬಂದರೂ ರಾಗಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಎಂಬ ಅಸಮಾಧಾನವಿದೆ. ಈ ಬಗ್ಗೆ ಅಭಿಪ್ರಾಯಪಟ್ಟ ರಾಜ್ಯ ರೈತ ಪ್ರಾಂತ ಸಂಘದ ಮುಖಂಡ ವಸಂತ್‌ ಕುಮಾರ್‌ ಸಿ.ಕೆ. ಮಾತನಾಡಿ, "ರಾಗಿ ಉತ್ತಮವಾಗಿ ಇಳುವರಿ ಬಂದರೂ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಸರ್ಕಾರ ಕ್ವಿಂಟಾಲ್‌ ರಾಗಿಗೆ 4,200 ರೂ. ನಿಗದಿಪಡಿಸಿದೆ. ಆದರೆ ಬೇಸಾಯದ ಖರ್ಚು ಹೆಚ್ಚಾಗಿದ್ದು, ಸರ್ಕಾರ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು" ಎಂದು ಒತ್ತಾಯಿಸಿದ್ದಾರೆ.

Tags:    

Similar News