ಎಸ್‌ಎಸ್‌ಎಲ್‌ಸಿ ಗ್ರೇಸ್ ಅಂಕ | ಸರ್ಕಾರದ ಸೂಚನೆ ಇಲ್ಲದೆ ತೀರ್ಮಾನ: ಅಧಿಕಾರಿಗಳಿಗೆ ಸಿಎಂ ತರಾಟೆ
ಎಸ್ಎಸ್ಎಲ್‌ಸಿ ಗ್ರೇಸ್ ಅಂಕದ ವಿಷಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ಸರ್ಕಾರದ ಸೂಚನೆಯೇ ಇಲ್ಲದೆ ಸ್ವಯಂ ನಿರ್ಧಾರ ಕೈಗೊಂಡಿರುವ ಸಂಗತಿ ಶುಕ್ರವಾರ ಮುಖ್ಯಮಂತ್ರಿಗಳ ಸಭೆಯಲ್ಲಿ ಬಹಿರಂಗವಾಗಿದೆ.;
ಎಸ್ಎಸ್ಎಲ್‌ಸಿ ಗ್ರೇಸ್ ಅಂಕದ ವಿಷಯದಲ್ಲಿ ಸರ್ಕಾರದ ಸೂಚನೆ ಇಲ್ಲದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳೇ ನಿರ್ಧಾರ ಕೈಗೊಂಡಿರುವ ಸಂಗತಿ ಶುಕ್ರವಾರ ಮುಖ್ಯಮಂತ್ರಿಗಳ ಸಭೆಯಲ್ಲಿ ಬಹಿರಂಗವಾಗಿದೆ.
ವಿಧಾನಸೌಧದಲ್ಲಿ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ವೇಳೆ, ಸ್ವತಃ ಡಿಸಿಎಂ ಡಿ ಕೆ ಶಿವಕುಮಾರ್ ಅವರೇ ಗ್ರೇಸ್ ಅಂಕ ವಿವಾದದ ಕುರಿತು ಪ್ರಸ್ತಾಪಿಸಿದ್ದಾರೆ.
"ಗ್ರೇಸ್ ಅಂಕ ಕೊಡುವ ಮೂಲಕ ವಿದ್ಯಾರ್ಥಿಗಳು ಅರ್ಹತೆಯ ಆಧಾರದ ಮೇಲೆ ಪ್ರಗತಿ ಹೊಂದಬೇಕು. ಆದರೆ, ಅವರಿಗೆ ಹೀಗೆ ಗ್ರೇಸ್ ಅಂಕ ನೀಡುವುದರಿಂದ ಸ್ಪರ್ಧಾ ಸಾಮರ್ಥ್ಯ ಕುಂದುವುದಿಲ್ಲವೆ? ಕಡಿಮೆ ಅಂಕ ಪಡೆದವರು ಅನರ್ಹರು ಎಂದು ಗ್ರೇಸ್ ನೀಡಿದ್ದೀರಾ?" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಯಾರನ್ನು ಕೇಳಿ ನಿರ್ಧಾರ ಕೈಗೊಂಡಿರಿ?
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, "ಗ್ರೇಸ್ ಅಂಕ ನೀಡಿರುವ ಬಗ್ಗೆ ಎಲ್ಲಾ ಕಡೆಯಿಂದ ವಿರೋಧ ಕೇಳಿಬರ್ತಿದೆ. ಅದು ಅವೈಜ್ಞಾನಿಕ ಎಂದು ಶಿಕ್ಷಣ ತಜ್ಞರು ಕೂಡ ಹೇಳುತ್ತಿದ್ದಾರೆ. ಹೀಗೆ ಗ್ರೇಸ್ ಅಂಕ ನೀಡುವ ಅಗತ್ಯವೇನಿತ್ತು? ಯಾರನ್ನು ಕೇಳಿ ನೀವು ಈ ನಿರ್ಧಾರ ಕೈಗೊಂಡಿದ್ದೀರಿ? ಹೀಗೆ ಹೆಚ್ಚುವರಿ ಅಂಕ ಕೊಡುವ ಅಗತ್ಯವೇನಿತ್ತು? ಶಿಕ್ಷಣದ ಗುಣಮಟ್ಟ ಗ್ರೇಸ್ ಅಂಕ ಕೊಡುವ ಮಟ್ಟಿಗೆ ಕುಸಿದಿದ್ದು ಯಾಕೆ?" ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಸಿಎಂ ಅವರ ಪ್ರಶ್ನೆಗಳಿಂದ ತಬ್ಬಿಬ್ಬಾದ ಇಲಾಖೆಯ ಪ್ರಧಾನ ಕಾರ್ಯದರ್ಶಿ, "ಕೋವಿಡ್ ವೇಳೆ ಗ್ರೇಸ್ ಅಂಕ ನೀಡಿದ್ದೆವು. ಆಗ ಶೇ.5-10 ಗ್ರೇಸ್ ಅಂಕ ನೀಡಿದ್ದೆವು. ಈಗ ಅದನ್ನು ಶೇ.20ಕ್ಕೆ ಹೆಚ್ಚಿಸಿದ್ದೇವೆ" ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಆ ಸಮಜಾಯಿಷಿಯಿಂದ ಇನ್ನಷ್ಟು ಗರಂ ಆದ ಸಿಎಂ, “ಇವಾಗ ಕೋವಿಡ್ ಇದೇಯೇನ್ರೀ..” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಿಕ ಮುಂದಿನ ವರ್ಷದಿಂದ ಗ್ರೇಸ್ ಅಂಕ್ ನೀಡುವ ಕುರಿತು ಮರುಪರಿಶೀಲನೆ ನಡೆಸುವಂತೆ ಅಧಿಕಾರಿಗಳು ಮತ್ತು ಸಭೆಯಲ್ಲಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ತಾಕೀತು ಮಾಡಿದ್ದಾರೆ.
ಮುಂದಿನ ವರ್ಷದಿಂದ ಗ್ರೇಸ್ ಅಂಕ ಇಲ್ಲ
ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಮಧು ಬಂಗಾರಪ್ಪ ಕೂಡ ಸಭೆಯಲ್ಲಿ ಸಿಎಂ ಗ್ರೇಸ್ ಅಂಕಗಳ ವಿಷಯದಲ್ಲಿ ಇಲಾಖೆಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ವಿಷಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದು, "ಮುಂದಿನ ವರ್ಷದಿಂದ ಗ್ರೇಸ್ ಅಂಕ ಇರುವುದಿಲ್ಲ. ಸಿಎಂ ಸೂಚನೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.
ಅಂದರೆ, ಸರ್ಕಾರದ ಜೊತೆ ಸಮಾಲೋಚನೆಯನ್ನೇ ನಡೆಸದೆ, ಗ್ರೇಸ್ ಅಂಕ ನೀಡುವ ವಿಷಯದಲ್ಲಿ ಇಲಾಖೆಯ ಅಧಿಕಾರಿಗಳೇ ನಿರ್ಧಾರ ಕೈಗೊಂಡಿದ್ದರು ಎಂಬ ಸಂಗತಿ ಬಹಿರಂಗವಾಗಿದೆ.
ಇಲಾಖೆ ಲೋಪ ಮುಚ್ಚಿಕೊಳ್ಳಲು ಗ್ರೇಸ್ ಮೊರೆ?
ಅಲ್ಲದೆ, ವೆಬ್ ಕ್ಯಾಸ್ಟಿಂಗ್ ತಂತ್ರಜ್ಞಾನವನ್ನು ಬಳಸಿ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಅಳಡಿಸುವ ಮೂಲಕ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾದ ಕ್ರಮದಿಂದಾಗಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಶೇ.30ರಷ್ಟು ಕುಸಿತ ಕಂಡಿತ್ತು. ಅಂದರೆ, ಪರೀಕ್ಷೆ ಬರೆದ ಮಕ್ಕಳಲ್ಲಿ ಅರ್ಧದಷ್ಟು ಮಂದಿ ಫೇಲಾಗಿದ್ದರು. ಈ ಭಾರೀ ಕುಸಿತ ಶಿಕ್ಷಣದ ಗುಣಮಟ್ಟಕ್ಕೆ ಕನ್ನಡಿ ಹಿಡಿದಿತ್ತು. ಈ ಲೋಪವನ್ನು ಮುಚ್ಚಿಕೊಳ್ಳಲು ಇಲಾಖೆಯ ಅಧಿಕಾರಿಗಳು ತಮಗೆ ತಾವೇ ಶೇ.20ರಷ್ಟು ಗ್ರೇಸ್ ಅಂಕ ನೀಡಿ ಫಲಿತಾಂಶಕ್ಕೆ ತೇಪೆ ಹಾಕಲು ನಿರ್ಧರಿಸಿದ್ದಾರೆ ಎಂಬ ಶೈಕ್ಷಣಿಕ ವಲಯದ ಟೀಕೆಗಳಿಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ಸಾಕ್ಷಿ ಸಿಕ್ಕಂತಾಗಿದೆ.
ಇಲಾಖೆಯೇ ನೀಡಿರುವ ಮಾಹಿತಿ ಪ್ರಕಾರ, ಈ ಬಾರಿ ಒಟ್ಟು 8.59 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು. ಆ ಪೈಕಿ ನಿಜವಾಗಿಯೂ ಪರೀಕ್ಷೆಯಲ್ಲಿ ತಮ್ಮ ಸ್ವಂತ ಪ್ರತಿಭೆಯ ಮೇಲೆ ಉತ್ತೀರ್ಣರಾದವರು ಕೇವಲ 4.62 ಲಕ್ಷ ಮಾತ್ರ. ಉಳಿದ 3.97 ಲಕ್ಷ ವಿದ್ಯಾರ್ಥಿಗಳು ಫೇಲಾಗಿದ್ದರು. ಅಂದರೆ ಬರೋಬ್ಬರಿ ಅರ್ಧದಷ್ಟು ಮಕ್ಕಳು ಫೇಲಾಗಿದ್ದರು. ಈ ಪ್ರಮಾಣದ ಫಲಿತಾಂಶ ಕುಸಿತ ಶಿಕ್ಷಣ ಇಲಾಖೆಯ ಕಾರ್ಯದಕ್ಷತೆಯ ಬಗ್ಗೆ ಸಾರ್ವಜನಿಕ ಟೀಕೆಗೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರೇಸ್ ಅಂಕದ ಉಪಾಯ ಕಂಡಿದ್ದರು. ಅದರಂತೆ ಶೇ.20ರಷ್ಟು ಗ್ರೇಸ್ ಅಂಕ ನೀಡಿ 1.69 ಲಕ್ಷ ಮಕ್ಕಳನ್ನು ಪಾಸು ಮಾಡಿ ಒಟ್ಟಾರೆ ಫಲಿತಾಂಶವನ್ನು ಶೇ.53ರಿಂದ ಶೇ.73.40ಗೆ ಏರಿಸಲಾಗಿತ್ತು.
ಗ್ರೇಸ್ ಅಂಕದ ವಿಷಯದಲ್ಲಿ ಇಲಾಖೆ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಶೈಕ್ಷಣಿಕ ತಜ್ಞರು, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರ ಕಡೆಯಿಂದಲೂ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಆದರೆ, ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಶಿಕ್ಷಣ ಸಚಿವರು ಮತ್ತು ಇಲಾಖೆಯ ಉನ್ನತ ಅಧಿಕಾರಿಗಳು ಈ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದರು. ಇದೀಗ ಮುಖ್ಯಮಂತ್ರಿಗಳ ಪ್ರಗತಿಪರಿಶೀಲನೆ ಸಭೆಯಲ್ಲಿ ಕೊನೆಗೂ ವಾಸ್ತವಾಂಶಗಳು ಬಯಲಾಗಿವೆ.