ಸಭಾಪತಿ vs ಸಭಾಧ್ಯಕ್ಷ: ಹೊರಟ್ಟಿ-ಖಾದರ್ ನಡುವೆ 'ಏಕಪಕ್ಷೀಯ' ನಿರ್ಧಾರದ ಬಗ್ಗೆ ಅಸಮಾಧಾನದ ಪತ್ರ

ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಸಂಸದೀಯ ಸಂಘದ (ಸಿಪಿಎ) ಸಮ್ಮೇಳನದ ಆಯೋಜನೆ ಮತ್ತು ರೂಪುರೇಷೆಗಳ ಬಗ್ಗೆಯೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೊರಟ್ಟಿ ಆರೋಪಿಸಿದ್ದಾರೆ.;

Update: 2025-09-10 05:40 GMT

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ ಹಾಗೂ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ

Click the Play button to listen to article

ರಾಜ್ಯ ವಿಧಾನಮಂಡಲದ ಎರಡು ಸದನಗಳ ಮುಖ್ಯಸ್ಥರ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಸಭಾಧ್ಯಕ್ಷ (ಸ್ಪೀಕರ್) ಯು.ಟಿ. ಖಾದರ್ ಅವರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯು.ಟಿ. ಖಾದರ್ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, "ಯಾವುದೇ ಕಾರ್ಯಕ್ರಮ ನಡೆದರೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ. ಪುಸ್ತಕ ಮೇಳ, ಲೇಸರ್ ಲೈಟ್ ಅಳವಡಿಕೆ ಸೇರಿದಂತೆ ಯಾವುದೇ ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ಪಡೆಯುತ್ತಿಲ್ಲ" ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಸಂಸದೀಯ ಸಂಘದ (ಸಿಪಿಎ) ಸಮ್ಮೇಳನದ ಆಯೋಜನೆ ಮತ್ತು ರೂಪುರೇಷೆಗಳ ಬಗ್ಗೆಯೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೊರಟ್ಟಿ ಆರೋಪಿಸಿದ್ದಾರೆ. "ಯಾವುದೇ ಕಾರ್ಯಕ್ರಮ ನಡೆದರೂ ಮುಂಚಿತವಾಗಿ ಮಾಹಿತಿ ನೀಡುವುದಿಲ್ಲ. ಇವೆಲ್ಲವನ್ನೂ ಇಲ್ಲಿಯವರೆಗೆ ಸಹಿಸಿಕೊಂಡು ಬಂದಿದ್ದೇನೆ. ಇನ್ನು ಮುಂದೆ ಹೀಗೆ ಆಗುವುದಿಲ್ಲ ಎಂದು ಭಾವಿಸುತ್ತೇನೆ" ಎಂದು ಅವರು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ 45 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮತ್ತು 8 ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರಿಂದ ಇಂತಹ ಪತ್ರ ಬಂದಿರುವುದು, ಸಭಾಧ್ಯಕ್ಷ ಮತ್ತು ಸಭಾಪತಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿರುವುದನ್ನು ಸೂಚಿಸುತ್ತದೆ. ಇದು ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Tags:    

Similar News