ನಾಳೆಯಿಂದ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ; ಸರ್ಕಾರದ ನಡೆಗೆ ಆಕ್ಷೇಪ
x
ವಿಧಾನಸೌಧದ ಆವರಣದಲ್ಲಿ ನಡೆಯಲಿರುವ ಪುಸ್ತಕ ಮೇಳದ ಸಿದ್ಧತೆಯನ್ನು ಸ್ಪೀಕರ್‌ ಯು.ಟಿ.ಖಾದರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪರಿಶೀಲಿಸಿದರು

ನಾಳೆಯಿಂದ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ; ಸರ್ಕಾರದ ನಡೆಗೆ ಆಕ್ಷೇಪ

ಫೆ.28 ಮತ್ತು ಮಾ.2 ರಂದು ಸಂಜೆ 5 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.2ರಂದು ಗಾಯಕ ಸಾಧುಕೋಕಿಲ ಅವರಿಂದ ಸಂಗೀತ ರಸಸಂಜೆ ಏರ್ಪಡಿಸಲಾಗಿದೆ.


ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಇದೇ ಫೆ.27ರಿಂದ ಮಾ.3ರವರೆಗೆ ಪುಸ್ತಕ ಮೇಳ ನಡೆಯಲಿದೆ.

ಪುಸ್ತಕ ಮೇಳದ ಸಿದ್ಧತೆಯನ್ನು ಬುಧವಾರ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪರಿಶೀಲಿಸಿದರು. ಫೆ.27(ನಾಳೆ) ರಂದು ಸಂಜೆ 5ಕ್ಕೆ ಪುಸ್ತಕ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವರು, ಸಾಹಿತಿಗಳು ಭಾಗವಹಿಸಲಿದ್ದಾರೆ.

ಫೆ.28 ಮತ್ತು ಮಾ.2 ರಂದು ಸಂಜೆ 5 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.2ರಂದು ಗಾಯಕ ಸಾಧುಕೋಕಿಲ ಅವರಿಂದ ಸಂಗೀತ ರಸಸಂಜೆ ಏರ್ಪಡಿಸಲಾಗಿದೆ.

ಫೆ.28ರಿಂದ ಮಾ.2ರ ವರೆಗೆ ವಿಧಾನಸೌಧದ ಆವರಣದಲ್ಲಿ ಪ್ರತಿದಿನ ಎರಡು ವೇದಿಕೆಗಳಲ್ಲಿ ವಿವಿಧ ವಿಷಯಗಳ ಕುರಿತು ಸಂವಾದ , ಕವಿಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆಗೂ ಅವಕಾಶ ಮಾಡಿಕೊಡಲಾಗಿದೆ.

ಪ್ರಸಕ್ತ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2 ಲಕ್ಷ ರೂ.ಗಳ ಮಿತಿಯೊಳಗೆ ಶಾಸಕರು ಪುಸ್ತಕ ಖರೀದಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಪುಸ್ತಕ ಮೇಳದಲ್ಲಿ 150 ಮಳಿಗೆ ತೆರೆಯಲು ಅವಕಾಶವಿದ್ದು, ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳು ಇರಲಿವೆ.

ಪುಸ್ತಕ ಮೇಳಕ್ಕೆ ಸಾರ್ವಜನಿಕರ ಆಕ್ಷೇಪ

ವಿಧಾನಸೌಧದ ಎದುರು ಪುಸ್ತಕ ಮೇಳ ಆಯೋಜಿಸಿರುವ ಸರ್ಕಾರದ ಕ್ರಮ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಕಾಯ್ದೆ, ಕಾನೂನು ರೂಪಿಸುವ ಶಾಸಕರು, ಸಚಿವರು ಪುಸ್ತಕ ಮೇಳ ಆಯೋಜಿಸುವ ಮೂಲಕ ಅನಗತ್ಯ ದುಂದುವೆಚ್ಚ ಮಾಡುತ್ತಿದ್ದಾರೆ.

ಪುಸ್ತಕ ಮೇಳ ನಡೆಸಲು ಸಾಹಿತ್ಯ ಪರಿಷತ್‌, ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿಗಳಿವೆ. ಇವು ಮಾಡಬೇಕಾದ ಕೆಲಸವನ್ನು ಶಾಸಕರು, ಸಚಿವರು ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಯಾಣ ದರ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ಹೀಗಿರುವಾಗ ಪುಸ್ತಕ ಮೇಳ, ಸಂಗೀತ ರಸಸಂಜೆ ಹೆಸರಿನಲ್ಲಿ ಸರ್ಕಾರ ಅನುದಾನ ಪೋಲು ಮಾಡುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.

Read More
Next Story