ಎಸ್‌.ಎಂ.ಕೃಷ್ಣ ಅವರ ನೆನಪಿನಾಳ | ಸ್ವಾರಸ್ಯಕರ, ರೋಚಕ ಸಂಗತಿಗಳೇನು?

ಟೆನಿಸ್​​ ಆಟದ ಮೇಲಿನ ಆಸಕ್ತಿಯ ಪರಿಣಾಮ 2000 ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಟೆನ್ನಿಸ್ ಕ್ರೀಡಾಂಗಣ ನಿರ್ಮಿಸಿದರು. ಜೊತೆಗೆ ಏಷ್ಯಾದಲ್ಲೇ ಮೊದಲ ಬಾರಿಗೆ ಎಟಿಎಫ್ ವರ್ಲ್ಡ್ ಡಬಲ್ಸ್ ಚಾಂಪಿಯನ್ ಶಿಪ್ ಆಯೋಜಿಸಿದ್ದ ಖ್ಯಾತಿ ಎಸ್ಎಂ ಕೃಷ್ಣ ಅವರಿಗೆ ಸಲ್ಲುತ್ತದೆ.;

Update: 2024-12-10 09:39 GMT

ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದ ಛಾಪು ಮೂಡಿಸಿ ಇಹಲೋಕ ತ್ಯಜಿಸಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರದ್ದು ಬಹುಮುಖದ ವ್ಯಕ್ತಿತ್ವ. ರಾಜಕಾರಣದ ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ರಾಜಕೀಯ ಒತ್ತಡದಲ್ಲೂ ಟೆನಿಸ್​ ಆಡುವುದನ್ನು ಮರೆತಿರಲಿಲ್ಲ. ಟೆನಿಸ್​ ಆಟದ ಮೇಲಿನ ಆಸಕ್ತಿಯ ಪರಿಣಾಮ 2000 ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಟೆನಿಸ್​ ಕ್ರೀಡಾಂಗಣ ನಿರ್ಮಿಸಿದರು. ಜೊತೆಗೆ ಏಷ್ಯಾದಲ್ಲೇ ಮೊದಲ ಬಾರಿಗೆ ಎಟಿಎಫ್ ವರ್ಲ್ಡ್ ಡಬಲ್ಸ್ ಚಾಂಪಿಯನ್ ಶಿಪ್ ಆಯೋಜಿಸಿದ್ದ ಖ್ಯಾತಿ ಎಸ್ಎಂ ಕೃಷ್ಣ ಅವರಿಗೆ ಸಲ್ಲುತ್ತದೆ.

ಎಸ್ ಎಂ ಕೃಷ್ಣ ಅವರ ಮೊದಲ ಚುನಾವಣಾ ಗೆಲುವಿನಿಂದ ಬಿಜೆಪಿಗೆ ಪಕ್ಷಾಂತರ ಮಾಡುವ ಗಳಿಗೆವರೆಗಿನ ರಾಜಕೀಯ ಪಯಣ ರೋಚಕತೆಯಿಂದ ಕೂಡಿದೆ.

ಎಸ್ಎಂ ಕೃಷ್ಣ ಸಾಹಿತ್ಯ ಕೃಷಿ

ಎಸ್.ಎಂ.ಕೃಷ್ಣ ಅವರ ಜೀವನಚರಿತ್ರೆ 'ಚಿತ್ರ ದೀಪ ಸಾಲುʼ, ನೆನಪುಗಳ ಸಂಕಲನ 'ಸ್ಮೃತಿವಾಹಿನಿ', ಆರು ಸಂಪುಟಗಳ ಜೀವನಚರಿತ್ರೆ 'ಕೃಷ್ಣಪಥ', ಚಿಂತನೆಗಳ ಸಂಕಲನ 'ಭವಿಷ್ಯದರ್ಶನ', ಇಂಗ್ಲಿಷ್ ಕೃತಿಗಳಾದ 'ಡೌನ್ ಮೆಮೊರಿ ಲೇನ್' ಹಾಗೂ 'ಸ್ಟೇಟ್ಸ್‌ಮನ್‌ ಎಸ್ಎಂ ಕೃಷ್ಣ' ಕೃತಿಗಳನ್ನು ಬರೆದಿದ್ದಾರೆ. ಈ ಕೃತಿಗಳು 2020 ರಲ್ಲಿ ಬಿಡುಗಡೆಯಾಗಿದ್ದವು.

ʼಸ್ಮೃತಿ ಪಟಲʼದ ರೋಚಕ ಸಂಗತಿಗಳು

ತಮ್ಮ ಜೀವನದಲ್ಲಿ ಎಸ್‌.ಎಂ. ಕೃಷ್ಣ ಅನುಭವಿಸಿದ ರಾಜಕೀಯ ಏಳು ಬೀಳುಗಳನ್ನು ನೆನಪುಗಳ ಕವನ ಸಂಕಲನ ಸ್ಮೃತಿಪಟಲದಲ್ಲಿ ದಾಖಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಮೊದಲ ಸಂದರ್ಭದಲ್ಲಿ ನಡೆದ ಸಂಭಾಷಣೆ, ಎರಡನೇ ಸಂದರ್ಭದಲ್ಲಿ ತಮ್ಮ ಬಗ್ಗೆ ನೀಡಿದ್ದ ದೂರುಗಳಿಗೆ ನೀಡಿದ ಸಷ್ಟೀಕರಣವನ್ನು ಕೃತಿಯಲ್ಲಿ ದಾಖಲಿಸಿದ್ದಾರೆ.

ನಾನು ಟೆನಿಸ್​ ಆಡುತ್ತೇನೆ, ಜನಸಾಮಾನ್ಯರ ಕೈಗೆ ಸಿಗುವುದಿಲ್ಲ, ವೈಟ್ ಕಾಲರ್ ರಾಜಕಾರಣಿ ಎಂದು ಪಕ್ಷದಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡಿರಬಹುದು. ಆದರೆ, ನಾನು 30 ವರ್ಷಗಳಿಂದ ಟೆನಿಸ್​ ಆಡುತ್ತಿದ್ದೇನೆ. ಆದರೆ, ಈ ನನ್ನ ಆಸಕ್ತಿ ಸಾರ್ವಜನಿಕ ಜೀವನದ ಯಾವುದೇ ಚಟುವಟಿಕೆಗಳಿಗೆ ಅಡ್ಡಿಯಾಗಿಲ್ಲ ಎಂದು ಸೋನಿಯಾಗಾಂಧಿ ಅವರ ಬಳಿ ಹೇಳಿದ್ದರು.

ಎಸ್‌.ಎಂ. ಕೃಷ್ಣ ಅವರ ನೇರ ಸ್ವಭಾವ ಗಮನಿಸಿದ ಸೋನಿಯಾ ಗಾಂಧಿ ಅವರು, 1999ರ ಫೆಬ್ರವರಿ ತಿಂಗಳಲ್ಲಿ ಖುದ್ದು ಕರೆ ಮಾಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವ ತೀರ್ಮಾನದ ಬಗ್ಗೆ ತಿಳಿಸಿದ್ದರು. ಅದೇ ವರ್ಷ ನನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಯಿತು ಎಂದು ದಾಖಲಿಸಿದ್ದಾರೆ.

ಮೊದಲ ಗೆಲುವಿನಲ್ಲೇ ಅಸಿಂಧುವಾದ ಆಯ್ಕೆ

1962ರಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ವೀರಣ್ಣಗೌಡರ ವಿರುದ್ಧ ಸ್ಪರ್ಧಿಸಿ, ಸೋಲಿಸಿದೆ. ಆದರೆ, ವೀರಣ್ಣಗೌಡರು ನನ್ನ ಆಯ್ಕೆ ಪ್ರಶ್ನಿಸಿ ಸೆಷನ್ಸ್ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಹಾಕಿದ್ದರು. ನಾನು ಹಳ್ಳಿಯೊಂದಕ್ಕೆ ಹೋಗಿದ್ದಾಗ ನಾಟಕ ಆಡುವವರಿಗೆ ಹಣ ನೀಡಿದ್ದೆ. ಇದನ್ನೇ ನ್ಯಾಯಾಲಯಕ್ಕೆ ಸಲ್ಲಿಸಿ, ಶಾಸಕ ಸ್ಥಾನ ರದ್ದತಿಗೆ ಮನವಿ ಮಾಡಿದ್ದರು.

ನ್ಯಾಯಾಲಯ ಕೂಡ ಎಸ್.ಎಂ.ಕೃಷ್ಣ ಅವರ ಮದ್ದೂರು ಚುನಾವಣೆ ಗೆಲುವು ಅಸಿಂಧು ಎಂದು ತೀರ್ಪು ನೀಡಿ ಆರು ವರ್ಷಗಳ ಚುನಾವಣೆಗೆ ನಿಲ್ಲುವಂತಿಲ್ಲ' ಎಂದು ಹೇಳಿತ್ತು. ನಂತರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ವಾದ-ಪ್ರತಿವಾದಗಳ ಬಳಿಕ ಆಯ್ಕೆ ಕ್ರಮಬದ್ಧ ಎಂದು ಆದೇಶ ನೀಡಿತು ಎಂದು ಸ್ಮರಿಸಿದ್ದಾರೆ.

ಗಲಾಟೆ ನೋಡಿ ವಿಧಾನಸೌಧಕ್ಕೆ ಬೇಲಿ ಹಾಕಿಸಿದೆ

1994ರ ಚುನಾವಣೆಯಲ್ಲಿ ಜನತಾದಳ ಅಧಿಕಾರಕ್ಕೆ ಬಂದಿತು. ಆಗ ಸಿಎಂ ಆಯ್ಕೆಗೆ ದೇವೇಗೌಡರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಆಗ ವಿಧಾನಸೌಧದ ಒಳಗಿದ್ದ ರಾಮಕೃಷ್ಣ ಹೆಗಡೆ, ಎಂ.ಪಿ. ಪ್ರಕಾಶ್, ಆರ್. ವಿ. ದೇಶಪಾಂಡೆ ಮುಂತಾದವರ ಮೇಲೆ ದಾಳಿ ನಡೆಯಿತು. ಹೆಗಡೆಯವರ ಅಂಗಿ ಹರಿದರು. ಆಗಲೇ ವಿಧಾನಸೌಧಕ್ಕೆ ರಕ್ಷಣೆ ನೀಡಬೇಕೆಂಬ ಯೋಜನೆ ಹೊಳೆಯಿತು. 1999ರಲ್ಲಿ ಮುಖ್ಯಮಂತ್ರಿಯಾಗುತ್ತಿದ್ದಂತೆ ವಿಧಾನಸೌಧ, ಅಡ್ವೊಕೇಟ್ ಜನರಲ್ ಕಚೇರಿ, ಉದ್ಯೋಗ ಸೌಧ, ಬಹುಮಹಡಿ ಕಟ್ಟಡ , ರಾಜಭವನ, ಶಾಸಕರ ಭವನ ಎಲ್ಲವನ್ನೂ ಸೇರಿಸಿ ಬೇಲಿ ಹಾಕಿಸಲಾಯಿತು ಎಂದು ಸ್ಮೃತಿ ಪಟಲದಲ್ಲಿ ವಿವರಿಸಿದ್ದಾರೆ.

ಹುಂಡಿಗೆ ದೇಣಿಗೆಯಾಗಿ ವಾಚ್ ಹಾಕಿದ್ದರು

ಎಸ್ಎಂ ಕೃಷ್ಣ ಅವರು 1993 ರಲ್ಲಿ ಆಂಧ್ರಪ್ರದೇಶದ ತಿರುಪತಿ ತಿರುಮಕ್ಕೆ ಹೋಗಿದ್ದಾಗ ವೆಂಕಟೕಶ್ವರ ಸ್ವಾಮಿಯ ಮಂಗಳಾರತಿ ಬಂದಿತ್ತು. ಆಗ ಆಚಾನಕ್ಕಾಗಿ ಕೈಗಡಿಯಾರ ಸಹ ಕಳಚಿತು. ಆಗ ಅರ್ಚಕರೇ ಗಮನಿಸಿ 'ಆ ವಾಚ್ ದೇವರ ಹುಂಡಿಗೆ ಹಾಕಿʼ ಎಂದು ಸಲಹೆ ನೀಡಿದ್ದರು. ನಾನು ಕೂಡ ಮರುಮಾತಾಡದೆ ವಾಚ್ ಅನ್ನು ದೇವರಿಗೆ ಅರ್ಪಿಸಿದ್ದೆ. ಅಂದು ರಾತ್ರಿಯೇ ದೆಹಲಿಯಿಂದ ಕರೆ ಬಂತು. ಮರುದಿನ ದೆಹಲಿಗೆ ಹೋದಾಗ ಮನಮೋಹನಸಿಂಗ್ ನೇತೃತ್ವದ ಸರ್ಕಾರದಲ್ಲಿ ಕೈಗಾರಿಕಾ ಖಾತೆ ರಾಜ್ಯ ಸಚಿವ ಸ್ಥಾನ ಅರಸಿ ಬಂದಿತ್ತು. ತಿರುಪತಿ ಸನ್ನಿಧಿಯ ಈ ಪವಾಡ ಅಚ್ಚಳಿಯದೆ ಉಳಿದಿದೆ ಎಂದು ಕೃತಿಯಲ್ಲಿ ಬರೆದಿದ್ದಾರೆ. ಇನ್ನು ಅದೇ ರೀತಿಯ ಹಲವು ಅಚ್ಚರಿಗಳು, ರಾಜಕಾರಣದ ರೋಚಕ ತಿರುವುಗಳನ್ನು ಸ್ಮೃತಿ ಪಟಲ ಹಾಗೂ ಜೀವನ ಚರಿತ್ರೆ 'ಕೃಷ್ಣ ಪಥ'ದಲ್ಲಿ ದಾಖಲಿಸಿದ್ದಾರೆ.

Tags:    

Similar News