ಎಸ್ಎಂ ಕೃಷ್ಣ ವಿಧಿವಶ, ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಿದ ಸರ್ಕಾರ

ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ಅವರ ಗೌರವಾರ್ಥವಾಗಿ ಬುಧವಾರ (ಡಿ.11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿ ಸೇರಿದಂತೆ ರಾಜ್ಯಾದ್ಯಂತ ರಜೆ ಘೋಷಣೆ ಮಾಡಲಾಗಿದೆ.;

Update: 2024-12-10 06:32 GMT
ಎಸ್.ಎಂ. ಕೃಷ್ಣ
Click the Play button to listen to article

ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಮಂಗಳವಾರ (ಡಿಸೆಂಬರ್ 10) ಮುಂಜಾನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇದರ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿದ್ದು, ಅವರ ಗೌರವಾರ್ಥವಾಗಿ ಬುಧವಾರ (ಡಿ.11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿ ಸೇರಿದಂತೆ ರಾಜ್ಯಾದ್ಯಂತ ರಜೆ ಘೋಷಣೆ ಮಾಡಲಾಗಿದೆ.

ಎಸ್ಎಂ ಕೃಷ್ಣ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಡಿಕೆ ಶಿವಕುಮಾರ್ ಬಳಿಕ ಮಾಧ್ಯಮದ ಜೊತೆ ಅಂತ್ಯಸಂಸ್ಕಾರ ವ್ಯವಸ್ಥೆ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಬುಧವಾರ(ಡಿ.11) ರಾಜ್ಯಾದ್ಯಂತ ರಜೆ ಘೋಷಣೆ ಮಾಡಿದ್ದಾರೆ. ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಶೋಕಾಚರಣೆ ಇರಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಸ್ಎಂ ಕೃಷ್ಣ ವಿಧಿವಶರಾದ ಬೆನ್ನಲ್ಲೇ ಹುಟ್ಟೂರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಸ್ಥಳೀಯ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು. ಇದೀಗ ಸರ್ಕಾರ ಅಧಿಕೃತವಾಗಿ ರಾಜ್ಯಾದ್ಯಂತ ರಜೆ ಘೋಷಣೆ ಮಾಡಿದೆ.

 

ಕರ್ನಾಟಕ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದ ಎಸ್.ಎಂ.ಕೃಷ್ಣ ಅವರು 1999 ರಿಂದ 2004 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಬೆಂಗಳೂರಿನ ಆಧುನೀಕರಣ ಮತ್ತು ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವ ಪ್ರಯತ್ನಗಳಿಗೆ ಹೆಸರುವಾಸಿಯಾದ ಕೃಷ್ಣ ಅವರು ರಾಜ್ಯದ ಅಭಿವೃದ್ಧಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ನಿಧನಕ್ಕೆ ರಾಷ್ಟ್ರದಾದ್ಯಂತ  ರಾಜಕೀಯ ನಾಯಕರು, ಸಹೋದ್ಯೋಗಿಗಳು ಮತ್ತು ನಾಗರಿಕರು ಸಂತಾಪ ಸೂಚಿಸಿದ್ದಾರೆ. 

ಬುಧವಾರ ಬೆಳಗ್ಗೆ 8 ಗಂಟೆ ವರೆಗೆ ಬೆಂಗಳೂರಿನ ಮನೆಯಲ್ಲಿ ಎಸ್ಎಂ ಕೃಷ್ಣ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ 10 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆ ವರೆಗೂ ಎಸ್ಎಂ ಕೃಷ್ಣ ಹುಟ್ಟೂರು ಮದ್ದೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಿಸೆಂಬರ್ 11ರ ಮಧ್ಯಾಹ್ನ 3 ಗಂಟೆ ನಂತರ ಎಲ್ಲಾ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕ ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದ್ದ ಎಸ್ಎಂ ಕೃಷ್ಣ ದಕ್ಷ ಆಡಳಿತ ನೀಡಿದ್ದಾರೆ. ಮಗಳು ಹಾಗೂ ಧರ್ಮ ಪತ್ನಿ ಫೋನ್ ಮಾಡಿ ವಿಷಯ ತಿಳಿಸಿದ ತಕ್ಷಣವೇ ಬೆಂಗಳೂರಿಗೆ ಹೊರಟು ಬಂದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಧಿವೇಶನ ಸಂಬಂಧ ಬೆಳಗಾವಿಯಲ್ಲಿದ್ದ ಡಿಕೆ ಶಿವಕುಮಾರ್ ಬೆಂಗಳೂರಿಗೆ ಆಗಮಿಸಿ ಎಂಎಸ್ ಕೃಷ್ಣ ಅಂತಿಮ ದರ್ಶನ ಪಡೆದಿದ್ದಾರೆ.

Tags:    

Similar News