ಧರ್ಮಸ್ಥಳ ಪ್ರಕರಣ | ಸತ್ಯ ಹೊರಬರಬೇಕು ಎಂಬುದು ನಮ್ಮ ಧ್ಯೇಯ; ಗೃಹ ಸಚಿವ ಪರಮೇಶ್ವರ್‌

ಧರ್ಮಸ್ಥಳ ಪ್ರಕರಣದ ವಿಷಯ ಯಾವುದೇ ರಾಜಕೀಯ ಹಾಗೂ ಧಾರ್ಮಿಕ ತಿರುವು ಪಡೆಯಬಾರದು. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿಲ್ಲ. ಸತ್ಯ, ನ್ಯಾಯ ಹೊರಬರಬೇಕು ಎಂಬುದು ನಮ್ಮ ಧ್ಯೇಯ ಎಂದು ಪರಮೇಶ್ವರ್‌ ಹೇಳಿದರು.;

Update: 2025-08-14 09:26 GMT

ಧರ್ಮಸ್ಥಳದ ಅಸಹಜ ಸಾವುಗಳ ಕುರಿತ ಎಸ್‌ಐಟಿ ತನಿಖೆ ಕುರಿತಂತೆ ವಿಪಕ್ಷ ಸದಸ್ಯರ ಸುದೀರ್ಘ ಚರ್ಚೆಗೆ ಸೋಮವಾರ ಉತ್ತರ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. 

ವಿಧಾನಸಭೆ ಅಧಿವೇಶನದ ಕಲಾಪದಲ್ಲಿ ವಿಪಕ್ಷ ಸದಸ್ಯರ ಚರ್ಚೆ ಬಳಿಕ ಮಾತನಾಡಿದ ಪರಮೇಶ್ವರ್‌ ಅವರು, ಧರ್ಮಸ್ಥಳ ಪ್ರಕರಣದ ವಿಷಯ ಯಾವುದೇ ರಾಜಕೀಯ ಹಾಗೂ ಧಾರ್ಮಿಕ ತಿರುವು ಪಡೆಯಬಾರದು. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿಲ್ಲ. ಸತ್ಯ, ನ್ಯಾಯ ಹೊರಬರಬೇಕು ಎಂಬುದು ನಮ್ಮ ಧ್ಯೇಯ ಎಂದು ಹೇಳಿದರು. 

ನಾನು ಹಲವಾರು ಬಾರಿ ದೇವಾಲಯಕ್ಕೆ ಹೋಗಿದ್ದೇನೆ.  ಈ ಹಿಂದೆ ಅಬ್ದುಲ್‌ ಕಲಾಂ ಅವರನ್ನು ಕರೆದುಕೊಂಡು ಹೋಗಿದ್ದೆ. ಅವರನ್ನು ಬೇರೆ ಧರ್ಮದವರೆಂದು ಕಾಣಲಿಲ್ಲ. ಧರ್ಮಸ್ಥಳಕ್ಕೆ ದೇಶಾದ್ಯಂತ ಭಕ್ತರಿದ್ದು, ವಿರೇಂದ್ರ ಹೆಗ್ಗಡೆಯವರಿಗೆ ಪದ್ಮಶ್ರೀ ಪುರಸ್ಕಾರ ನೀಡಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಲಕ್ಷಾಂತರ  ಹೆಣ್ಣು ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ.  ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು. 

ಧರ್ಮಸ್ಥಳದ ಕುರಿತು ಆರೋಪ ಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ಮೂಲಕ ಸತ್ಯ ಶೋಧ ಮಾಡುತ್ತಿದ್ದೇವೆ. ದೂರುದಾರ ಹೇಳಿದಂತೆಯೇ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಆತ ಸುಳ್ಳು ಹೇಳಿದ್ದರೆ ಖಂಡಿತಾ ಶಿಕ್ಷೆ ಆಗಲಿದೆ. ಸುಳ್ಳು ಆಪಾದನೆ ಮಾಡಿದವರಿಗೆ ಶಿಕ್ಷೆ ವಿಧಿಸಲು ಬಿಎನ್‌ಎಸ್‌ ಕಾಯ್ದೆಯಲ್ಲಿ ಅವಕಾಶವಿದೆ. ಈ ಪ್ರಕರಣದಲ್ಲಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಸತ್ಯ ತಿಳಿಯಲು ಪ್ರಯತ್ನ ಮಾಡಿದ್ದೇವೆ. ಈ ವಿಚಾರ ನ್ಯಾಯಯುತವಾಗಿರಬೇಕು, ನ್ಯಾಯ ಹೊರಬರಬೇಕು. ಸೋಮವಾರ ಸದನಕ್ಕೆ ಉತ್ತರ ನೀಡುತ್ತೇನೆ ಎಂದು ಹೇಳಿದರು.

Tags:    

Similar News