ಲೈಂಗಿಕ ದೌರ್ಜನ್ಯ ಪ್ರಕರಣ | ಪ್ರಜ್ವಲ್ ವಿರುದ್ಧ ಲುಕ್ ಔಟ್ ನೋಟಿಸ್
ಇಡೀ ದೇಶಾದ್ಯಂತ ಚರ್ಚೆಯಾಗುತ್ತಿರುವ ಆಘಾತಕಾರಿ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ, ಏ.30 ರಂದೇ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಎಚ್ ಡಿ ರೇವಣ್ಣ ಅವರಿಗೆ ನೋಟಿಸ್ ನೀಡಿತ್ತು. ಆದರೆ, ಪ್ರಜ್ವಲ್ ತಾನು ಬೆಂಗಳೂರಿನಿಂದ ಹೊರಗಿರುವುದಾಗಿ ಹೇಳಿ, ವಕೀಲರ ಮೂಲಕ ಎಸ್‌ಐಟಿಗೆ ಮನವಿ ಸಲ್ಲಿಸಿ, ಒಂದು ವಾರ ಕಾಲಾವಕಾಶ ಕೋರಿದ್ದರು.;
ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯವನ್ನು ವಿಡಿಯೋ ಮಾಡಿಕೊಂಡು ವೈರಲ್ ಮಾಡಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪತ್ತೆಗಾಗಿ ಎಸ್ ಐಟಿ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.
ಇಡೀ ದೇಶಾದ್ಯಂತ ಚರ್ಚೆಯಾಗುತ್ತಿರುವ ಆಘಾತಕಾರಿ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ, ಏ.30 ರಂದೇ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಎಚ್ ಡಿ ರೇವಣ್ಣ ಅವರಿಗೆ ನೋಟಿಸ್ ನೀಡಿತ್ತು. ಆದರೆ, ಪ್ರಜ್ವಲ್ ತಾನು ಬೆಂಗಳೂರಿನಿಂದ ಹೊರಗಿರುವುದಾಗಿ ಹೇಳಿ, ವಕೀಲರ ಮೂಲಕ ಎಸ್‌ಐಟಿಗೆ ಮನವಿ ಸಲ್ಲಿಸಿ, ಒಂದು ವಾರ ಕಾಲಾವಕಾಶ ಕೋರಿದ್ದರು.
ಆದರೆ, ವಿಚಾರಣೆಗೆ ಪ್ರಜ್ವಲ್ ಹಾಜರಾಗದೆ ಇರುವ ಹಿನ್ನೆಲೆಯಲ್ಲಿ ಇದೀಗ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎಸ್ ಐಟಿ ಗುರುವಾರ(ಮೇ.2) ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಸಂಬಂಧ ರಾಜ್ಯ ಮಹಿಳಾ ಆಯೋಗ ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಕಳೆದ ಏ.28 ರಂದು ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಎಸ್ ಐಟಿ ರಚಿಸಿತ್ತು. ಆದರೆ, ಮಹಿಳಾ ಆಯೋಗ ಪತ್ರ ಬರೆಯುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಪ್ರಜ್ವಲ್, ಲೋಕಸಭಾ ಚುನಾವಣೆಯ ಮತದಾನದ ಮಾರನೇ ದಿನ ಬೆಳಗಿನ ಜಾವವೇ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಪರಾರಿಯಾಗಿದ್ದರು.
ಈ ನಡುವೆ, ಕಳೆದ ಭಾನುವಾರ ಸರ್ಕಾರ ಎಸ್ ಐಟಿ ರಚಿಸಿದ ಬೆನ್ನಲ್ಲೇ ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯರ ಒಬ್ಬ ಮಹಿಳೆ ದೂರು ದಾಖಲಿಸಿ ಜೆಡಿಎಸ್ ಮುಖಂಡ ಮತ್ತು ಶಾಸಕ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ದೂರಿನ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಿಕೊಂಡು ಸ್ಥಳೀಯ ಪೊಲೀಸರು ಪ್ರಕರಣವನ್ನು ತನಿಖೆಗಾಗಿ ಎಸ್ ಐಟಿಗೆ ಹಸ್ತಾಂತರಿಸಿದ್ದರು.
ವಿದೇಶದಲ್ಲಿ ಪ್ರಜ್ವಲ್ ಇರುವುದನ್ನು ಖಚಿತಪಡಿಸಿಕೊಂಡಿರುವ ಎಸ್ ಐಟಿ, ಆತನ ಪತ್ತೆಗಾಗಿ ವಿಮಾನ ನಿಲ್ದಾಣಗಳು ಮತ್ತು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಲುಕ್ ಔಟ್ ನೋಟೀಸ್ ಕಳಿಸಿಕೊಟ್ಟಿದ್ದಾರೆ. ಈಗಲೂ ಆರೋಪಿ ಪ್ರಜ್ವಲ್ ಹಾಜರಾಗದೇ ಇದ್ದಲ್ಲಿ ನ್ಯಾಯಾಲಯದ ಮೂಲಕ ಜಾಮೀನುರಹಿತ ವಾರಂಟ್ ಹೊರಡಿಸುವ ಸಾಧ್ಯತೆ ಇದೆ.