ಧರ್ಮಸ್ಥಳ ಪ್ರಕರಣ |ಎಸ್‌ಐಟಿ ತನಿಖೆ ಷಡ್ಯಂತ್ರಕ್ಕಷ್ಟೇ ಸೀಮಿತವಾಯ್ತೇ? ನೆರೆ ರಾಜ್ಯಗಳಿಗೂ ತನಿಖೆ ವಿಸ್ತರಣೆಯಾಗಲಿದೆಯೇ?

ಅನಾಮಿಕ ವ್ಯಕ್ತಿ ಹಾಗೂ ಸುಜಾತಾ ಭಟ್‌ ಇಬ್ಬರೂ ಕೂಡ ತಾವು ಆಮಿಷಕ್ಕೆ ಒಳಗಾಗಿ ಹೇಳಿಕೆ ನೀಡಿದ್ದೇವೆ ಎಂದು ಉಲ್ಟಾ ಹೊಡೆದ ಬಳಿಕ ಇಡೀ ಪ್ರಕರಣವೇ ಹೊಸ ತಿರುವು ಪಡೆದಿದೆ.;

Update: 2025-08-30 00:30 GMT

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತು ವಿಶೇಷ ತನಿಖಾ ದಳ (ಎಸ್‌ಐಟಿ) ನಡೆಸುತ್ತಿರುವ ತನಿಖೆ ದಿನೇ ದಿನೇ ರೋಚಕತೆ ಪಡೆಯುತ್ತಿದೆ. ಧರ್ಮಸ್ಥಳದಲ್ಲಿ ಎರಡು ದಶಕಗಳಿಂದ ನೂರಾರು ಶವ ಹೂತಿಟ್ಟಿದ್ದ ಕುರಿತು ಹೇಳಿಕೆ ನೀಡಿದ್ದ ́ಭೀಮʼನನ್ನೇ ಈಗ ಪ್ರಮುಖ ಆರೋಪಿಯನ್ನಾಗಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಆಕ್ರೋಶ, ಧರ್ಮಸ್ಥಳಕ್ಕೆ ಕಾರುಗಳ ರ್ಯಾಲಿ ನಡೆಸಿ ಒತ್ತಡ ಹೇರಿದ ಬಳಿಕ ಎಲ್ಲವೂ ತಲೆಕೆಳಗಾದಂತೆ ಕಂಡುಬರುತ್ತಿದೆ.

ಅನಾಮಿಕ ವ್ಯಕ್ತಿ ಹಾಗೂ ಸುಜಾತಾ ಭಟ್‌ ಇಬ್ಬರೂ ಕೂಡ ತಪ್ಪೊಪ್ಪಿಗೆ ನೀಡಿದ ಬಳಿಕ ಇಡೀ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಮಧ್ಯೆ, ಅನಾಮಿಕನಿಗೆ ನೆರವಾದ, ಷಡ್ಯಂತ್ರ ರೂಪಿಸಿದ ಅರೋಪದ ಮೇಲೆ ಸೌಜನ್ಯ ಪರ ಹೋರಾಟಗಾರರಾದ ಮಹೇಶ್‌ ತಿಮರೋಡಿ, ಗಿರೀಶ್‌ ಮಟ್ಟಣ್ಣವರ್‌, ಜಯಂತ್‌ ಟಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅನಾಮಿಕ ತಪ್ಪೊಪ್ಪಿಗೆಯನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷಗಳು ಹಾಗೂ ಧರ್ಮಸ್ಥಳ ಪರವಿರುವವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಕೆಲ ಶಾಸಕರು ಕೂಡ ಧರ್ಮಸ್ಥಳದ ಬೆಂಬಲಕ್ಕೆ ನಿಂತಿರುವುದು ಎಸ್‌ಐಟಿ ತನಿಖೆಯ ಮೇಲೆ ಪ್ರಭಾವ ಬೀರಿದೆ ಎಂಬ ಮಾತುಗಳು ಹರಿದಾಡುತ್ತಿವೆ.   

ಕಳೇಬರಗಳ ಶೋಧ ಕಾರ್ಯಾಚರಣೆ ಅವಧಿಯಲ್ಲಿ ಮನೆ ಮಾಡಿದ್ದ ಪ್ರಕರಣದ ನಿಗೂಢತೆ ಈಗ ಇಲ್ಲವಾಗಿದೆ. ಬದಲಿಗೆ ಧರ್ಮಸ್ಥಳದ ವಿರುದ್ಧ ಭಾರೀ ಷಡ್ಯಂತ್ರ ನಡೆದಿದೆ ಎಂದು ಬಿಂಬಿತವಾಗುತ್ತಿದೆ.  ಹದಿನೇಳು ಸ್ಥಳಗಳ ಪೈಕಿ ಎರಡು ಕಡೆ ಮಾತ್ರ ಅಸ್ಥಿಪಂಜರ, ಮೂಳೆಗಳು ದೊರೆತಿದ್ದು, ಇದರ ಬಗ್ಗೆ ಯಾರೊಬ್ಬರೂ ಚಕಾರ ಎತ್ತದಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ. ಎಸ್‌ಐಟಿ ತನಿಖೆ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನೀಡಿದ ಹೇಳಿಕೆಗೂ, ತನಿಖೆಗೂ ಸಂಬಂಧ ಇಲ್ಲದಂತಾಗಿದೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡಿದೆ. 

ಗೃಹ ಸಚಿವರು ಹೇಳಿದ್ದೇನು?

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ವಿಧಾನಸಭೆ ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣ ಕುರಿತಂತೆ ಸುದೀರ್ಘವಾಗಿ ಮಾತನಾಡಿದ್ದರು. ದೂರು ಸಾಕ್ಷಿದಾರ ನೀಡಿರುವ ಹೇಳಿಕೆ ಆಧರಿಸಿ ಎಸ್‌ಐಟಿ ಅಧಿಕಾರಿಗಳು ಹಲವು ಜಾಗಗಳಲ್ಲಿ ಶೋಧ ನಡೆಸಿದ್ದಾರೆ. ಒಂದು ಜಾಗದಲ್ಲಿ ಅಸ್ಥಿಪಂಜರ ಸಿಕ್ಕಿದೆ. ಮತ್ತೊಂದು ಜಾಗದಲ್ಲಿ ಮೂಳೆಗಳು ಸಿಕ್ಕಿವೆ. ಈ ಎಲ್ಲಾ ನಮೂನೆಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ.

ಮತ್ತೊಂದು ಸ್ಥಳದಲ್ಲಿ ಕೆಂಪು ಮಣ್ಣು (Laterite soil - ಎಲುಬು ಕರಗುವ ಆಸಿಡಿಕ್ ಅಂಶವಿರುವ ಮಣ್ಣು) ಜಾಗದಲ್ಲಿ ಮಣ್ಣಿನ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅದರ ವಿಶ್ಲೇಷಣೆ ಆಗಬೇಕು. ಅಸ್ಥಿಪಂಜರ, ಮೂಳೆಗಳು ಸಿಕ್ಕಿರುವ ಜಾಗದಲ್ಲಿ ವಿಶ್ಲೇಷಣೆ ಆಗಬೇಕು. ಇಲ್ಲಿಯವರೆಗೆ ಆಗಿರುವುದು ಬರೀ ಶೋಧ ಕಾರ್ಯಾಚರಣೆ. ಇನ್ನು ಮುಂದೆ ನಿಜವಾದ ತನಿಖೆ ನಡೆಯಲಿದೆ. ಸ್ಯಾಂಪಲ್, ಡಿಎನ್‌ಎ, ಮಣ್ಣಿನ ವಿಶ್ಲೇಷಣೆ ಆಧಾರದ ಮೇಲೆ ತನಿಖೆ ಆರಂಭವಾಗಲಿದೆ ಎಂದು ಪರಮೇಶ್ವರ್‌ ಹೇಳಿದ್ದರು. ಆದರೆ, ಈಗ ಇಡೀ ತನಿಖೆ ಷಡ್ಯಂತ್ರದ ಕುರಿತು ನಡೆಯುತ್ತಿದೆ ಎನ್ನಲಾಗಿದೆ.

ನೆರೆ ರಾಜ್ಯಗಳಿಗೂ ತನಿಖೆ ವಿಸ್ತರಣೆ?

1995ರಿಂದ 2014ರ ನಡುವೆ ಧರ್ಮಸ್ಥಳದಲ್ಲಿ ಕಾಣೆಯಾದವರ ಕುರಿತಂತೆ ಕರ್ನಾಟಕದ ಬೇರೆ ಬೇರೆ ಜಿಲ್ಲೆ, ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಗೋವಾದಲ್ಲಿ ದಾಖಲಾಗಿರುವ ಪ್ರಕರಣಗಳ ಪರಿಶೀಲನೆಗೂ ಎಸ್‌ಐಟಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. 

2018ರಲ್ಲಿ ಮಾಜಿ ಶಾಸಕ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ತಜ್ಞರ ಸಮಿತಿ  ನೀಡಿದ್ದ 5,000 ಪುಟಗಳ ವರದಿಯಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಮಹಿಳೆಯರು ಮತ್ತು ಯುವತಿಯರ ಕಾಣೆಯಾದ ಪ್ರಕರಣಗಳು ಹಾಗೂ ಅಸಹಜ ಸಾವುಗಳ ಕುರಿತು ಆತಂಕ ವ್ಯಕ್ತಪಡಿಸಲಾಗಿತ್ತು. ಈ ಪ್ರಕರಣಗಳ ಪತ್ತೆಗೆ ವಿಶೇಷ ಪೊಲೀಸ್ ಪಡೆ ಮತ್ತು ಬೆಳ್ತಂಗಡಿಯಲ್ಲಿ ವಿಶೇಷ ಸೆಲ್ ಸ್ಥಾಪನೆಗೂ ಶಿಫಾರಸು ಮಾಡಿತ್ತು.

ಈಗ ಎಸ್‌ಐಟಿಗೆ ಬಂದಿರುವ ದೂರುಗಳನ್ನು ಪರಿಶೀಲಿಸುತ್ತಿದ್ದು, ಕೆಲವನ್ನು ಶವಪರೀಕ್ಷೆ ನಡೆಸದೇ ಸಮಾಧಿ ಮಾಡಲಾಗಿದೆ ಎಂಬ ಆರೋಪಗಳ ಕುರಿತಂತೆಯೂ ತನಿಖೆ ನಡೆಸಲಾಗುವುದು. ಇನ್ನು ಕೆಲ ಪ್ರಕರಣಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ. 

ಧರ್ಮಸ್ಥಳದ ಲ್ಯಾಟರೈಟ್‌ ಮಣ್ಣಿನಲ್ಲಿ ಹಳೆಯ ಅವಶೇಷಗಳು ಕರಗಿರಬಹುದು ಎಂದಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗ ಸಂಗ್ರಹಿಸಿರುವ ಮಣ್ಣಿನಲ್ಲಿ ಫಾಸ್ಫೇಟ್, ನೈಟ್ರೇಟ್, ಲಿಪಿಡ್‌ ಅಥವಾ ಡಿಎನ್‌ಎ ತುಣುಕುಗಳಂತಹ ರಾಸಾಯನಿಕಗಳಿಂದ ಸುಳಿವು ಸಿಗಬಹುದು ಎಂದು ಹೇಳಲಾಗಿದೆ.  

ಎರಡು ದಿನ ಸೌಜನ್ಯ ಹೋರಾಟಗಾರ ಮಹೇಶ್ ತಿಮರೋಡಿ ಮನೆಯಲ್ಲಿ ಮಹಜರು ಪ್ರಕ್ರಿಯೆ ನಡೆದಿದೆ. ಸೌಜನ್ಯಪರ ಹೋರಾಟಗಾರರೇ ಷಡ್ಯಂತ್ರ ರೂಪಿಸಿ ಮುಸುಕುಧಾರಿಯನ್ನು ಕಳುಹಿಸಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. 

ಈ ಮಧ್ಯೆ ಹೋರಾಟಗಾರರು ಕೂಡ ನಮ್ಮ ಮೇಲೆಯೂ ತನಿಖೆ ನಡೆಯಲಿ. ಹಣಕಾಸು ಮೂಲದ ಬಗ್ಗೆಯೂ ತನಿಖೆ ನಡೆಸಿದರೂ ಸ್ವಾಗತಿಸುತ್ತೇವೆ. ಏನೇ ಆದರೂ ಎಸ್‌ಐಟಿ ತನಿಖೆ ಮೇಲೆ ಸಂಪೂರ್ಣ ಭರವಸೆ ಇದೆ ಎಂದು ಹೇಳುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

ಕಳೇಬರ ಶೋಧದ ವೇಳೆ ಎಸ್ಐಟಿಗೆ ಹಲವು ಪೂರಕ ಸಾಕ್ಷಿಗಳು ಸಿಕ್ಕಿರುವುದರಿಂದ ಇದು ಆರಂಭಿಕ ತನಿಖೆಯಷ್ಟೇ. ಎರಡನೇ ಹಂತದಲ್ಲಿ ಬೇರೆ ಬೇರೆ ವ್ಯಕ್ತಿಗಳು ತನಿಖೆ ಎದುರಿಸಬೇಕಾಗುತ್ತದೆ. ಕಾನೂನಿನ ಪ್ರಕಾರ ಅನು ಅನಿವಾರ್ಯವೂ ಕೂಡ. ಆದರೆ, ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ಮಾಧ್ಯಮಗಳು ಕೆಲವರನ್ನು ತನಿಖೆಯಿಂದ ತಪ್ಪಿಸಲು ಸಮಾಜಕ್ಕೆ ತಪ್ಪು ಮಾಹಿತಿ ನೀಡುತ್ತಿವೆ ಎಂಬ ಆರೋಪಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. 

ಎಸ್‌ಐಟಿಯ ಮುಂದುವರಿದ ತನಿಖೆಯಲ್ಲಿ ಧರ್ಮಸ್ಥಳ ಅಸಹಜ ಸಾವುಗಳ ವಿಚಾರವೂ ಮುನ್ನೆಲೆಗೆ ಬರುವ ಭೀತಿಯಲ್ಲಿ ಕೆಲವರು ಪ್ರತಿರೋಧ ತೋರುತ್ತಿದ್ದಾರೆ. ಜತೆಗೆ ಸಿಬಿಐ ಅಥವಾ ಎನ್‌ಐಎ ತನಿಖೆಗೆ ಆಗ್ರಹಿಸುತ್ತಿದ್ದಾರೆ.  ಅಸಹಜ ಸಾವುಗಳ ಆರೋಪಕ್ಕೆ ಸಂಭಂಧಿಸಿದಂತೆ ಎಸ್‌ಐಟಿ ಬಳಿ ಪೂರಕ ಸಾಕ್ಷಿಗಳಿರುವುದೇ ವಿರೋಧಕ್ಕೆ ಕಾರಣವಾಗಿದೆ.  ಮುಂದಿನ ಎರಡು ವಾರಗಳಲ್ಲಿ ತನಿಖೆಯ ದಿಕ್ಕು ಬದಲಾಗಬಹುದು ಎಂದು ಮೂಲಗಳು ಹೇಳಿವೆ. 

Tags:    

Similar News