ಪೆನ್‌ಡ್ರೈವ್‌ ಪ್ರಕರಣ | ಪ್ರಜ್ವಲ್ ರೇವಣ್ಣನನ್ನು ಮತ್ತೆ ವಶಕ್ಕೆ ಪಡೆದ ಎಸ್‌ಐಟಿ

ಎಸ್‌ಐಟಿ ಪೊಲೀಸರು ಬುಧವಾರ ಬಾಡಿ ವಾರೆಂಟ್ ಮೂಲಕ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಿ ಕೋರ್ಟ್‌ ಮುಂದೆ ಹಾಜರುಪಡಿಸಿದ್ದಾರೆ.

Update: 2024-06-13 07:08 GMT
ಪ್ರಜ್ವಲ್‌ ರೇವಣ್ಣನ್ನು ಮತ್ತೆ ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ.

ಹಾಸನದ ಮಾಜಿ ಸಂಸದ, ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ತಮ್ಮ ವಿರುದ್ಧದ ಮೂರು ಪ್ರಕರಣಗಳಲ್ಲಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಅದರ ಬೆನ್ನಲ್ಲೇ ಎಸ್‌ಐಟಿ ಮತ್ತೆ ಪ್ರಜ್ವಲ್ ರೇವಣ್ಣರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದೆ.

ಜೂ.10ರಂದು ಪ್ರಜ್ವಲ್ ರೇವಣ್ಣರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪೊಲೀಸರು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದರು. ಎಸ್‌ಐಟಿ ಪೊಲೀಸರು ಬುಧವಾರ (ಜೂ.12) ಬಾಡಿ ವಾರೆಂಟ್ ಮೂಲಕ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ವಹಿಸುವಂತೆ ಕೋರಿ ಕೋರ್ಟ್‌ ಮುಂದೆ ಹಾಜರುಪಡಿಸಿದ್ದರು.

ಮೈಸೂರಿನ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಎಚ್. ಡಿ. ರೇವಣ್ಣ, ಭವಾನಿ ರೇವಣ್ಣ, ರೇವಣ್ಣ ಆಪ್ತ ರಾಜಗೋಪಾಲ್ ಆರೋಪಿಗಳು. ಎಸ್ಐಟಿ ಅಧಿಕಾರಿಗಳು ಇದೇ ಪ್ರಕರಣದಲ್ಲಿ ಎಚ್. ಡಿ. ರೇವಣ್ಣ ಬಂಧಿಸಿದ್ದರು. ಸದ್ಯ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಕಳೆದ ವಾರ ಎಸ್‌ಐಟಿ ಕಛೇರಿಯಲ್ಲಿ ಇದೇ ಪ್ರಕರಣದ ಸಂಬಂಧ ಪಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ವಿಚಾರಣೆ ನಡೆದಿತ್ತು.

Tags:    

Similar News