ಸರ್‌ ಎಂ.ವಿಶ್ವೇಶ್ವರಯ್ಯ ಓದಿದ ಶಾಲೆ ವಕ್ಫ್‌ ಆಸ್ತಿ | ಪ್ರತಿರೋಧಕ್ಕೆ ಜಗ್ಗಿದ ಆಡಳಿತ: ದಾಖಲೆ ತಿದ್ದುಪಡಿಗೆ ಆದೇಶ

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯೇ ವಕ್ಫ್ ಆಸ್ತಿಯಾಗಿ ಬದಲಾಗಿದೆ. ಸರ್ಕಾರಿ ಶಾಲೆ ದಾಖಲೆ ತಿದ್ದುಪಡಿಗೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ.;

Update: 2024-11-09 13:25 GMT
ಸರ್‌ ಎಂ ವಿಶ್ವೇಶ್ವರಯ್ಯ ಓದಿದ ಶಾಲೆ

ʼವಕ್ಫ್ ಆಸ್ತಿಗಳ ಇಂಡೀಕರಣʼ ಗದ್ದಲದ ನಡುವೆಯೇ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳಗಳ ಮೇಲೂ ವಕ್ಫ್ ಮಂಡಳಿ ತನ್ನ ಹಕ್ಕು ಸ್ಥಾಪಿಸಲು ಹೊರಟಿದೆ.

ಮೈಸೂರು ದಿವಾನರಾಗಿದ್ದ ಸರ್. ಎಂ.ವಿಶ್ವೇಶ್ವರಯ್ಯ ಅವರ ಹುಟ್ಟೂರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯೇ ವಕ್ಫ್ ಆಸ್ತಿಯಾಗಿ ಬದಲಾಗಿದೆ. ಸರ್ಕಾರಿ ಶಾಲೆ ದಾಖಲೆ ತಿದ್ದುಪಡಿಗೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ.

ಸರ್ ಎಂ ವಿಶ್ವೇಶ್ವರಯ್ಯ ಸರ್ಕಾರಿ ಶಾಲೆ ಇರುವ ಕಂದವಾರ ಗ್ರಾಮದ ಸರ್ವೇ ನಂ.1ರ 19 ಗುಂಟೆ ಜಮೀನು ದಾಖಲೆಗಳಲ್ಲಿ ದಾವೂದ್ ಷಾ ವಲ್ಲೀ ದರ್ಗಾ ಸುನ್ನಿ ವಕ್ಫ್ ಎಂದು ನಮೂದಾಗಿತ್ತು. ಸರ್ ಎಂ. ವಿಶ್ವೇಶ್ವರಯ್ಯ ಅವರು ಪ್ರಾಥಮಿಕ ಶಾಲಾ ಶಿಕ್ಷಣ ಪಡೆದ ಅವಧಿಯಲ್ಲಿ ಈ ಶಾಲೆಯಲ್ಲೇ ತಂಗಿದ್ದರು. ಅದರ ನೆನಪಿಗಾಗಿ ಇಂದಿಗೂ ಶಾಲೆಯ ಕೊಠಡಿಗೆ ವಿಶ್ವೇಶ್ವರಯ್ಯ ತಂಗುದಾಣ ಎಂದು ಹೆಸರಿಡಲಾಗಿದೆ.

2018ರ ನಂತರ ಶಾಲೆಯ ದಾಖಲೆಯಲ್ಲಿ ವಕ್ಫ್ ಆಸ್ತಿ ಎಂದು ಇಂಡೀಕರಣ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಪ್ರಕರಣ ಬೆಳಕಿಗೆ ಬಂದು, ಸಾಕಷ್ಟು ಹೋರಾಟ ನಡೆಸಿದ್ದರೂ ದಾಖಲೆ ತಿದ್ದುಪಡಿ ಆಗಿರಲಿಲ್ಲ. ಪ್ರಸ್ತುತ ರಾಜ್ಯಾದ್ಯಂತ ವಕ್ಫ್ ವಿವಾದ ತಾರಕಕ್ಕೇರಿರುವ ಸಂದರ್ಭದಲ್ಲಿ ಮುದ್ದೇನಹಳ್ಳಿ ಶಾಲೆ ಪರಾಭಾರೆ ವಿವಾದ ಪ್ರತಿಧ್ವನಿಸಿತು. ಕಂದಾಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ಸ್ಥಳೀಯರಿಂದ ತೀವ್ರ ಆಕ್ರೋಶ ಎದುರಾಯಿತು. ಪರಿಣಾಮ ವಕ್ಫ್ ಆಸ್ತಿ ಹೆಸರು ತೆಗೆದು ಮೊದಲಿನಂತೆ ಸರ್ಕಾರಿ ಶಾಲೆ ಹೆಸರು ಸೇರಿಸಲು ಕಂದಾಯ ಇಲಾಖೆ ನಿರ್ಧರಿಸಿದೆ. ರಾಜ್ಯಾದ್ಯಂತ ವಕ್ಫ್ ಬೋರ್ಡ್ ಹೆಸರಿಗೆ ವರ್ಗಾವಣೆಯಾಗಿರುವ ಆಸ್ತಿಗಳ ಪೈಕಿ ಮರಳಿ ಪಡೆದ ಮೊದಲ ಆಸ್ತಿಯ ಎಂಬ ಹೆಗ್ಗಳಿಕೆ ಮುದ್ದೇನಹಳ್ಳಿ ಶಾಲೆಗೆ ಸೇರಲಿದೆ.

ಪ್ರಕರಣದ ಹಿನ್ನೆಲೆ ಏನು?

ಕಂದವಾರ ಗ್ರಾಮದ ಸರ್ವೇ ನಂ.1ರ ಪಕ್ಕದಲ್ಲಿ ಸರ್ವೇ ನಂ. 200 ರಲ್ಲಿ ದಾವೂದ್ ಷಾ ವಲೀ ದರ್ಗಾಗೆ ಸೇರಿದ 76x19 ಅಡಿಗಳ ಜಾಗ ಇತ್ತು. ಟಿಪ್ಪು ಸುಲ್ತಾನ್ ಅವಧಿಯಲ್ಲಿ ಗೋರಿಯನ್ನು ನಿರ್ಮಿಸಲಾಗಿತ್ತು. ಕ್ರಮೇಣ ಕಾಂಪೌಂಡ್ ನಿರ್ಮಿಸಿ, ಸಣ್ಣ ಕೊಠಡಿ ಸಹ ಕಟ್ಟಲಾಗಿದೆ. 2018 ರಲ್ಲಿ ಸರ್ಕಾರಿ ಶಾಲೆಯ 19ಗುಂಟೆ ಜಮೀನು ಸರ್ಕಾರದ ಗೆಜೆಟ್ ಅಧಿಸೂಚನೆ ಅನ್ವಯ ವಕ್ಫ್ ಆಸ್ತಿಯಾಗಿ ಬದಲಾಗಿತ್ತು. ಈ ಬಗ್ಗೆ ಮೂರ್ನಾಲ್ಕು ವರ್ಷಗಳಿಂದ ಸ್ಥಳೀಯರು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ವಕ್ಫ್ ಹೆಸರಿಗೆ ವರ್ಗಾವಣೆಯಾಗಿದ್ದ ಶಾಲೆಯ ಸ್ವತ್ತನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮುದ್ದೇನಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾದ್ಯಾಯ ಶ್ರೀನಿವಾಸ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಮುದ್ದೇನಹಳ್ಳಿ ಗ್ರಾಮದ ಕುಕ್ಕಲ ದೊಡ್ಡನರಸಿಂಹಯ್ಯ ಅವರು ಶಾಲೆಗೆ ವಿಶ್ವೇಶ್ವರಯ್ಯ ಅವರ ಅವಧಿಯಲ್ಲಿ 9 ಗುಂಟೆ ಜಮೀನನ್ನು ದಾನವಾಗಿ ನೀಡಿದ್ದರು. ಇದೇ ಕಾರಣಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ಅವರು ಕುಕ್ಕಲ ದೊಡ್ಡ ನರಸಿಂಹಯ್ಯ ಅವರನ್ನು ಮೈಸೂರಿಗೆ ಕರೆದೋಯ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸನ್ಮಾನ ಕೂಡ ಮಾಡಿಸಿದ್ದರು ಎಂದು ಅವರು ಸ್ಮರಿಸಿದರು.

ಫಲ ನೀಡಿದ ಸ್ಥಳೀಯರ ಹೋರಾಟ

ಇನ್ನು ಶಾಲೆಯ ಆಸ್ತಿ ಪರಾಭಾರೆ ಕುರಿತಂತೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಂದವಾರದ ರಾಮಸ್ವಾಮಿ ಅವರು ನಡೆಸಿದ ಹೋರಾಟದ ಫಲವಾಗಿ ಇಂದು ಶಾಲೆಯ ಜಾಗ ಮತ್ತೆ ಶಾಲೆಗೆ ಸೇರಿದೆ.

ಈ ಕುರಿತು ‘ದ ಫೆಡರಲ್ ಕರ್ನಾಟಕ’ದೊಂದಿಗೆ ಮಾತನಾಡಿದ ರಾಮಸ್ವಾಮಿ ಅವರು, ನಾನು ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಶಾಲೆಯ ಪಕ್ಕದಲ್ಲೇ ಇರುವ ನಮ್ಮ ಜಮೀನಿನ ಪಹಣಿ ತೆಗೆಯುವಾಗ ಶಾಲೆಯ ದಾಖಲೆಯನ್ನೂ ಪರಿಶೀಲಿಸಿದೆ. ಶಾಲೆಯ ದಾಖಲೆಯಲ್ಲಿ ದಾವೂದ್ ಷಾ ವಲೀ ಸುನ್ನಿವಕ್ಫ್ ಬೋರ್ಡ್ ಎಂದು ನಮೂದಾಗಿರುವುದು ನೋಡಿ ದಿಗ್ಭ್ರಮೆಯಾಯಿತು. ಕೂಡಲೇ ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿ, ಲೋಕಾಯುಕ್ತರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಹೇಳಿದರು.

ಬ್ರಿಟೀಷರ ಕಾಲದಲ್ಲಿ ನಡೆದಿದ್ದ ಜಂಟಿ ಸರ್ವೇ ವೇಳೆ (1908 ಕ್ಕೂ ಮುಂಚೆ) ಸರ್ಕಾರಿ ಸ್ಕೂಲ್ ಎಂದು ನಮೂದಾಗಿತ್ತು. 2017-18ರವರೆಗೂ ಶಾಲೆ ಹೆಸರಿನಲ್ಲಿ ಪಹಣಿ ಬರುತ್ತಿತ್ತು. ಇದೇ ಶಾಲೆಯ ಸರ್ ಎಂ. ವಿಶ್ಚೇಶ್ವರಯ್ಯ ಅವರು ಓದಿದ್ದರೆಂಬ ಮಾಹಿತಿ ಇದೆ. ಅಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯ ಮೊದಲ ಐಎಎಸ್ ಅಧಿಕಾರಿ ಕಟಾರಿ ನಾರಾಯಣಸ್ವಾಮಿ (ಕೆ.ನಾರಾಯಣ್) ಸೇರಿದಂತೆ ಅನೇಕ ಗೆಜೆಟೆಡ್ ಅಧಿಕಾರಿಗಳು ಈ ಶಾಲೆಯಲ್ಲಿ ಓದಿದ್ದಾರೆ ಎಂದು ರಾಮಸ್ವಾಮಿ ಸ್ಮರಿಸಿದರು.

ಕಂದವಾರ ಗ್ರಾಮದ ಸರ್ವೇ ನಂ.250 ರಲ್ಲಿ ಟಿಪ್ಪು ಸುಲ್ತಾನರ ಕಾಲದ ಸಮಾಧಿ ಇದೆ. ಇದನ್ನು ನ್ಯಾಯಾಲಯದ ಮೂಲಕ ಸರ್ವೇ ಮಾಡಿಸುವಂತೆ ಮನವಿ ಸಲ್ಲಿಸಿದ್ದೇನೆ. ಮುಸ್ಲಿಂ ಸಮುದಾಯದ ಗೋರಿ ಇರುವ ಸರ್ವೇ ನಂಬರ್ ಗೊಂದಲ ಪರಿಹರಿಸಿಕೊಳ್ಳಲು ಸರ್ವೇ ಅಗತ್ಯವಿದೆ ಎಂದರು.

ದಾಖಲೆ ನೀಡಲು ಅಧಿಕಾರಿಗಳ ಹಿಂದೇಟು

ಶಾಲೆಯ ಸ್ವತ್ತು ಬದಲಾವಣೆ ಕುರಿತಂತೆ ಸಾಕಷ್ಟು ಬಾರಿ ದಾಖಲೆ ಕೇಳಿದ್ದರೂ ಅಧಿಕಾರಿಗಳು ನೀಡಿರಲಿಲ್ಲ. ಈ ಕುರಿತು ಲೋಕಾಯುಕ್ತರಿಗೂ ದೂರು ನೀಡಲಾಗಿತ್ತು. ಇನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರೇ ಖುದ್ದು ಸ್ಥಳಕ್ಕೆ ಬಂದು ನ್ಯಾಯ ಪಂಚಾಯ್ತಿ ಮಾಡಿದ್ದರು. ಕಂದಾಯ ಇಲಾಖೆ ಹಾಗೂ ವಕ್ಫ್ ಮಂಡಳಿ ಅಧಿಕಾರಿಗಳಿಗೆ ದಾಖಲೆ ತಿದ್ದುಪಡಿಗೆ ಸೂಚಿಸಿದ್ದರು. ಅಂದು ಕೂಡ ವಕ್ಫ್ ಮಂಡಳಿಯವರು ಈ ಜಾಗ ನಮ್ಮದಲ್ಲ ಎಂದು ಹೇಳಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೂ ಅಧಿಕಾರಿಗಳು ಯಾವುದೇ ದಾಖಲೆ ತಿದ್ದುಪಡಿ ಮಾಡಿರಲಿಲ್ಲ ಎಂದು ರಾಮಸ್ವಾಮಿ ದೂರಿದರು.

2017-18ರಲ್ಲಿ ಒಂದೇ ದಿನ ಮುದ್ದೇನಹಳ್ಳಿ ಶಾಲೆ ಸೇರಿದಂತೆ 16 ಜಾಗಗಳಿಗೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಗಮನ ಸೆಳೆದಾಗ ಮ್ಯುಟೇಷನ್ ಒದಗಿಸುವಂತೆ ಸೂಚನೆ ನೀಡಿದ್ದರು. ಆದರೆ, ಈವರೆಗೂ ಅಧಿಕಾರಿಗಳು ದಾಖಲೆ ನೀಡಿರಲಿಲ್ಲ ಎಂದರು.

ದಾಖಲೆ ತಿದ್ದುಪಡಿಗೆ ಕ್ರಮ

ಕಂದವಾರ ಗ್ರಾಮದ ಸ.ನಂ.1 ರ 19 ಗುಂಟೆ ಜಮೀನು ಪಹಣಿಯಲ್ಲಿ 2001-02 ರಿಂದ 2018-19 ನೇ ಸಾಲಿನವರೆಗೂ ಕಾಲಂ 9 ರಲ್ಲಿ ಶಾಲೆ ಎಂಬುದಾಗಿಯೇ ನಮೂದಾಗಿತ್ತು. 2018ರಲ್ಲಿ ಅಂದಿನ ಉಪವಿಭಾಗಾಧಿಕಾರಿ ಆದೇಶ (ಆರ್.ಆರ್.ಟಿ.(ವಕ್ಫ್/ಸಿಆರ್/1449/2018 ಹಾಗೂ ಸರ್ಕಾರಿ ಅಧಿಸೂಚನೆಯಂತೆ (MVW(19)11/ 1964) ಪ್ರಸ್ತಾವಿತ ಸರ್ವೇ ನಂಬರಿನಲ್ಲಿ 76*19 ಅಡಿ ವಿಸ್ತೀರ್ಣದ ಜಾಗವನ್ನು ದಾವೂದ್ ಷಾ ವಲೀ ದರ್ಗಾ ಸುನ್ನಿ ವಕ್ಸ್ ಸ್ವತ್ತು ಎಂಬುದಾಗಿ ನಮೂದು ಮಾಡಲು ಆದೇಶಿಸಲಾಗಿತ್ತು. ಆದರೆ, ಕಂದಾಯ ಇಲಾಖೆಯ ಭೂಮಿ ಶಾಖೆಯಲ್ಲಿ ಉಪವಿಭಾಗಾಧಿಕಾರಿಗಳ ಆದೇಶವನ್ನು ಗಣಕೀಕರಣ ಸಮಯದಲ್ಲಿ ಅದು 0-19 ಗುಂಟೆ ಎಂದು ನಮೂದಾಗಿದೆ. ಅಲ್ಲದೇ ಶಾಲೆಯ ವಿಸ್ತೀರ್ಣ ಕೈಬಿಟ್ಟು ವಕ್ಫ್ ಸ್ವತ್ತು ಎಂದು ಸೇರಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಕುಮಾರ್ ಅವರು ‘ದ ಫೆಡರಲ್ ಕರ್ನಾಟಕ’ಕ್ಕೆ ತಿಳಿಸಿದರು.

ಶಾಲೆಯ ವಿಸ್ತೀರ್ಣ ಕೈ ಬಿಟ್ಟಿರುವುದು ಎಂ.ಆರ್.ಎಚ್ ಹೆಚ್ 30/2018-19 ರ ಮುಟೇಷನ್ ಪ್ರತಿಯಿಂದ ಕಂಡು ಬಂದಿದೆ. ಪ್ರಕರಣದ ಬಗ್ಗೆ ಮಾಧ್ಯಮಗಳಿಂದ ತಿಳಿದುಬಂದ ತಕ್ಷಣವೇ ಸರ್ವೇ ನಂಬರಿನ ದಾಖಲೆಗಳನ್ನು ಪರಿಶೀಲಿಸಿ, ದಾವೂದ್ ಷಾ ವಲೀ ದರ್ಗಾ ಸುನ್ನಿ ವಕ್ಸ್ ಸ್ವತ್ತು ಹಾಗೂ ಶಾಲೆಯ ಸ್ವತ್ತನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಉಪವಿಭಾಗಾಧಿಕಾರಿಗಳು ಪರಿಶೀಲಿಸಿದ್ದು, ಪಹಣಿ ತಿದ್ದುಪಡಿಗೆ ಆದೇಶ ನೀಡಿದ್ದಾರೆ. ಭೂಮಿ ತಂತ್ರಾಂಶದಲ್ಲಿ ಪಹಣಿ ತಿದ್ದುಪಡಿಗೆ ಆಟೊ ಜನರೇಟ್ ಚೆಕ್ ಲಿಸ್ಟ್ ತೆಗೆದು, ಲಾಗಿನ್ ಅನುಮೋದನೆ ಮಾಡಲು 24 ರಿಂದ 48 ಗಂಟೆ ಸಮಯ ಹಿಡಿಯಲಿದೆ. ಸೋಮವಾರ ಅಥವಾ ಮಂಗಳವಾರ ಪಹಣಿ ತಿದ್ದುಪಡಿ ಮಾಡಲಾಗುವುದು ಎಂದು ಅನಿಲ್ ಕುಮಾರ್ ತಿಳಿಸಿದರು.

Tags:    

Similar News