ಮುನಿರತ್ನ ತನಿಖೆಗೆ ಎಸ್‌ಐಟಿ ರಚನೆ ಬೇಡಿಕೆ: ಸಿದ್ದರಾಮಯ್ಯ

Update: 2024-09-18 11:39 GMT

ಜಾತಿ ನಿಂದನೆ, ಮಹಿಳೆಯರ ಬಗ್ಗೆ ಅಸಭ್ಯ ಮಾತು  ಮತ್ತು  ಗುತ್ತಿಗೆದಾರನಿಗೆ  ಬೆದರಿಕೆ  ಆರೋಪದಲ್ಲಿ ಜೈಲು ಸೇರಿರುವ  ಮಾಜಿ ಸಚಿವ, ರಾಜರಾಜೇಶ್ವರಿನಗರ ಕ್ಷೇತ್ರದ  ಬಿಜೆಪಿ ಶಾಸಕ ಮುನಿರತ್ನಂ ವಿರುದ್ಧ   ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕೆಂಬ ಬೇಡಿಕೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪತ್ರಕರ್ತರ ಜತೆ ಮಾತನಾಡಿದ ಅವರು,  "ನಾಲಗೆ ಗರಿಬಿಟ್ಟು ಮಹಿಳಾ ಸಮುದಾಯವನ್ನು, ದಲಿತ ಜನಾಂಗವನ್ನು, ಒಕ್ಕಲಿಗ ಸಮುದಾಯವನ್ನು ಅತ್ಯಂತ ಕೆಟ್ಟದಾಗಿ ಅವಹೇಳನ ಮಾಡಿರುವ ಬಿಜೆಪಿ  ಶಾಸಕ ಮುನಿರತ್ನ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎನ್ನುವ ಬೇಡಿಕೆ ಇದೆ . ಸದ್ಯಕ್ಕೆ ಮುನಿರತ್ನಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ," ಎಂದು ಹೇಳಿದ್ದಾರೆ.

ಪೊಲೀಸರು ತನಿಖೆ ನಡೆಸಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಮುನಿರತ್ನಂ ಅವರನ್ನು ಜೈಲಿಗೆ ಒಪ್ಪಿಸಿದೆ ಎಂದರು. ಮುನಿರತ್ನ ಹಿಂದೆ ಸಿದ್ದರಾಮಯ್ಯ ಅವರ ಮೊದಲ ಬಾರಿಯ ಸರ್ಕಾರ ( 2013-2018 ) ಸಂದರಭದಲ್ಲಿ ಸಿದ್ದರಾಮಯ್ಯ ಆಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಬಂದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ  ಹದಿನೇಳು ಶಾಸಕರ ಗುಂಪಿನಿಲ್ಲಿ ಗುರುತಿಸಿ ಬಿಜೆಪಿ ಸೇರಿ ಯಡಿಯೂರಪ್ಪ ಸರ್ಕಾರ ರಚನೆಗೆ ಕಾರಣರಾಗಿದ್ದರು. ಬಳಿಕ ಬಿಜೆಪಿಯಿಂದಲೇ ಎರಡನೇ ಬಾರಿ ಮತ್ತೆ ಶಾಸಕರಾಗಿದ್ದನ್ನು ನೆನಪಿಸಿಕೊಳ್ಳಬಹುದು.

ಇತ್ತೀಚೆಗೆ ಕಾಂಗ್ರೆಸ್‌ನ ಒಕ್ಕಲಿಗ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಿಜೆಪಿ ಮುಖಂಡ ಮುನಿರತ್ನ ನಾಯ್ಡು ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದರು. ಒಕ್ಕಲಿಗ ಸಮುದಾಯ ಹಾಗೂ ಒಕ್ಕಲಿಗ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ನಿಂದನೆ ಮಾಡಿರುವ ಮುನಿರತ್ನ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದರು. 

ಪ್ರಕರಣವೇನು?

ಶಾಸಕ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದ ಗುತ್ತಿಗೆದಾರ ಚಲುವರಾಜು, ಮುನಿರತ್ನ ಅವರಿಂದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದಂತೆ ಕೊಲೆ ಮಾಡುವ ಜೀವ ಬೆದರಿಕೆ ಹಾಗೂ ಕಿರುಕುಳವಿದೆ ಎಂದು ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ಕುರಿತು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ ಅವರಿಗೂ ಲಿಖಿತ ದೂರು ಸಲ್ಲಿಸಿದ್ದು, ಮುನಿರತ್ನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು. "ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿದೇವಿನಗರ ವಾರ್ಡ್‌ನ ಡಿ ದೇವರಾಜು ಅರಸು ಟ್ರಕ್‌ ಟರ್ಮಿನಲ್‌ ಪ್ರದೇಶದ ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದೆ. ಶಾಸಕ ಮುನಿರತ್ನ 36 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ," ಎಂದು ಚಲುವರಾಜು ಆರೋಪಿಸಿದ್ದರು.

ಶಾಸಕ ಮುನಿರತ್ನ ಅವರ ಧ್ವನಿಯದ್ದು ಎನ್ನಲಾದ ಆಡಿಯೋದಲ್ಲಿ ನಿರ್ದಿಷ್ಟ ಸಮುದಾಯದ ಜಾತಿ ನಿಂದನೆ ನಡೆದಿದೆ. ಅಶ್ಲೀಲ ಪದಗಳನ್ನು ಬಳಸಲಾಗಿದೆ. ಚಲವರಾಜು ಅವರ ಕುಟುಂಬದ ಹೆಣ್ಣಮಕ್ಕಳ ಕುರಿತಾಗಿಯೂ ಬೈಗುಳದ ಮಾತುಗಳನ್ನಾಡಲಾಗಿದೆ. ಈ ನಡುವೆ ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು ಲಂಚಕ್ಕೆ ಬೇಡಿಕೆ, ಕೊಲೆ ಬೆದರಿಕೆ, ಜಾತಿ ನಿಂದನೆ, ಮಹಿಳೆಯರ ವಿರುದ್ದ ಅಶ್ಲೀಲ ಭಾಷೆ ಬಳಕೆ ಸಂಬಂಧದ ಆರೋಪದಡಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮುನಿರತ್ನ ಸಹಾಯಕರಾದ ವಿಜಿ ಕುಮಾರ್‌, ಅವರ ಭದ್ರತಾ ಸಿಬ್ಬಂದಿ ಅಭಿಷೇಕ್‌ ಹಾಗೂ ವಸಂತ್‌ ಕುಮಾರ್‌ ವಿರುದ್ಧವೂ ದೂರು ದಾಖಲಾಗಿತ್ತು. 

Tags:    

Similar News