Congress Conflict| ಹೈಕಮಾಂಡ್ ತೀರ್ಮಾನವನ್ನು ಡಿ.ಕೆ ಶಿವಕುಮಾರ್ ಪಾಲಿಸಬೇಕು: ಸಿದ್ದರಾಮಯ್ಯ

"ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ತೀರ್ಮಾನವನ್ನು ಡಿ.ಕೆ ಶಿವಕುಮಾರ್ ಕೂಡ ಪಾಲಿಸಬೇಕಾಗುತ್ತೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.;

Update: 2025-07-16 09:37 GMT

"ನಾನೇ ಪೂರ್ಣಾವಧಿ ಸಿಎಂ" ಎಂದು ದೆಹಲಿಯಲ್ಲಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ,   ಹೈಕಮಾಂಡ್‌ ನಿರ್ದೇಶನವನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಪಾಲಿಸಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಮತ್ತೊಮ್ಮೆ ಹೇಳಿದ್ದಾರೆ.

ರಾಷ್ಟ್ರೀಯ ಕಾಂಗ್ರೆಸ್‌ನ ಒಬಿಸಿ ಸಲಹಾಮಂಡಳಿಯ ಮೊದಲ ಸಭೆ ಬೆಂಗಳೂರಿನಲ್ಲಿ ನಡೆದಿದ್ದು, ಆ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿದ್ದರಾಮಯ್ಯ ಸಭೆಯ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಉತ್ತರಿಸುತ್ತಾ ಈ ರೀತಿ ಹೇಳಿದ್ದಾರೆ.

"ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ತೀರ್ಮಾನವನ್ನು  ಡಿ.ಕೆ ಶಿವಕುಮಾರ್ ಕೂಡ ಪಾಲಿಸಬೇಕಾಗುತ್ತೆ," ಎಂದು ಮುಖ್ಯಮಂತ್ರಿ ಬದಲಾವಣೆಯಿಲ್ಲ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗುವ ಕನಸು ಈಡೇರುವುದಿಲ್ಲ ಎಂದು ಪರೋಕ್ಷವಾಗಿ ಸಂದೇಶ ನೀಡಿದ್ದಾರೆ.

"ನಾಯಕತ್ವ ಬದಲಾವಣೆ ವಿಚಾರ ಈ ಸಭೆಗೆ ಸಂಬಂಧಿಸಿದ್ದಲ್ಲ," ಎಂದೂ ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದಾರೆ.  ಕಾಂಗ್ರೆಸ್‌ನ ಪ್ರಮುಖ ಒಬಿಸಿ ಹಾಗೂ ಅಹಿಂದ ನಾಯಕರಾಗಿರುವ ಸಿದ್ದರಾಮಯ್ಯ ಅವರ ಕೈಬಲಪಡಿಸುವ ಸಂಬಂಧ ಹಾಗೂ ಒಬಿಸಿ ನಾಯಕತ್ವಕ್ಕೆ ಯಾವುದೇ ಅಪಸ್ವರ ಕೇಳಬಾರದು ಎಂಬ ವಿಚಾರಗಳು ಈ ಸಭೆಯಲ್ಲಿ ಚರ್ಚೆಯಾಗಬಹುದು ಎಂದು  ವಿಶ್ಲೇಷಿಸಲಾಗಿತ್ತು.

ನಾನೇ ಐದೂ ವರ್ಷ ಸಿಎಂ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತ ಚರ್ಚೆಗಳು  ನಡೆದ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ದೆಹಲಿಯಲ್ಲಿ ನೀಡಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ ಎಂದು ಹೇಳುವ ಮೂಲಕ, ತಾವೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ತಮ್ಮ ಇಂಗಿತವನ್ನು ಮತ್ತೊಮ್ಮೆ ವ್ಯಕ್ತಪಡಿಸಿರುವುದನ್ನು ನೆನಪಿಸಬಹುದು.

 "ನಾನೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ," ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಸ್ಥಾನದ ಕುರಿತು ಯಾವುದೇ ಅಧಿಕಾರ ಹಂಚಿಕೆ ಒಪ್ಪಂದವಾಗಿಲ್ಲ ಎಂದೂ ಅವರು ಪುನರುಚ್ಚರಿಸಿ, ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಹೇಳಿಕೊಂಡಿದ್ದರು.  " ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಾವೂ ಸೇರಿದಂತೆ ಡಿ.ಕೆ. ಶಿವಕುಮಾರ್ ಎಲ್ಲರೂ ಬದ್ಧರಾಗಿರಬೇಕು," ಎಂದು ಹೇಳಿದ್ದರು. ಈಗ ಮತ್ತೆ ಅದೇ ವಿಚಾರವನ್ನು ಪುನರುಚ್ಚರಿಸಿದ್ದಾರೆ.

ಎರಡು ವಾರದ ಹಿಂದೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಮುನ್ನ ನಂದಿ ಗ್ರಾಮದ ಭೋಗ ನಂದೀಶ್ವರ ದೇವಸ್ಥಾನಲ್ಲಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ್ದ ಸಿದ್ದರಾಮಯ್ಯ ಅವರು, ನಾನೇ ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದರು. ಇದು ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ನನ್ನ ಮುಂದೆ ಯಾವುದೇ ಆಯ್ಕೆಗಳಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇನೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. 

Tags:    

Similar News