ಸಿದ್ದರಾಮಯ್ಯ ಈಗ ರಾಜೀನಾಮೆ ನೀಡುವುದು ಅನಿವಾರ್ಯ: ಜಗದೀಶ್‌ ಶೆಟ್ಟರ್‌

Update: 2024-08-17 08:52 GMT

ʻʻಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿ.ಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆದಿದ್ದು ಕಾನೂನು ಬಾಹಿರ. ಅವರು ತನಿಖೆ ಆರಂಭವಾದ ನಂತರ ರಾಜೀನಾಮೆ ಕೊಡುತ್ತಾರೊ, ಈಗಲೇ ರಾಜೀನಾಮೆ ನೀಡುತ್ತಾರೆ ಎಂಬುದನ್ನು ನೋಡಬೇಕು. ರಾಜೀನಾಮೆ ನೀಡುವುದು ಅನಿವಾರ್ಯ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻʻಪದೇ ಪದೇ ನಾನು ಪ್ರಾಮಾಣಿಕ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನಿಮ್ಮ‌ ಪ್ರಾಮಾಣಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ʻʻಸದನದಲ್ಲಿ ಮುಡಾ ಹಗರಣದ ಬಗ್ಗೆ ನಿಲುವಳಿ ಸೂಚಿಸಿದಾಗ ಚರ್ಚೆಗೆ ಅವಕಾಶ ಕೊಡಲಿಲ್ಲ. ಮಾಧ್ಯಮಗೋಷ್ಠಿ ನಡೆಸಿ ಉತ್ತರ ಕೊಟ್ಟಿದ್ದೀರಿ. ಇದೆಲ್ಲವನ್ನೂ ನೋಡಿದಾಗ ನೀವು ತಪ್ಪು ಮಾಡಿರುವುದು ಗೊತ್ತಾಗುತ್ತದೆʼʼ ಎಂದರು.

ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರಿಂದ ಬಹಳಷ್ಟು ಜನ ಕಾಂಗ್ರೆಸ್‌ ನಾಯಕರು ಒಳಗೊಳಗೆ ಖುಷಿ ಪಡುತ್ತಿದ್ದಾರೆ. ಅರ್ಕಾವತಿ ಪ್ರಕರಣದಲ್ಲಿ ಅವರು ಪಾರಾಗಿದ್ದರು. ಈ ಬಾರಿ ಸಿದ್ದರಾಮಯ್ಯ ಪಾರಾಗಲು ಸಾಧ್ಯವಿಲ್ಲ. ಅವರು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಗೆ ಹೋಗಬಹುದು. ಅಲ್ಲಿನ ತೀರ್ಪು ಆಧರಿಸಿ ಮುಂದಿನ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ʻʻಪ್ರತಿಪಕ್ಷವಾಗಿ ನಾವು ಸರ್ಕಾರ ಮಾಡಿದ ತಪ್ಪನ್ನು ಪಾದಯಾತ್ರೆ ಮೂಲಕ ಜನರ ಬಳಿ ಹೋಗಿ ಜಾಗೃತಿ ಮೂಡಿಸಿದ್ದೇವೆ. ಮುಡಾ, ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ನೇರ ಪಾತ್ರ ಇದೆ. ಹಾಗಾಗಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದೇವೆʼʼ ಎಂದರು.

ʻʻರಾಜ್ಯಪಾಲರು ಸಂವಿಧಾನಬದ್ಧವಾಗಿ ಕ್ರಮ ಕೈಗೊಂಡೊದ್ದಾರೆ. ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕಾನೂನು ತಿಳಿದುಕೊಂಡಿದ್ದೇನೆ ಎಂದು ಹೇಳುವ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಅವರು ಏಕೆ ಧ್ವನಿ ಎತ್ತಲಿಲ್ಲ?ʼʼ ಎಂದು ಪ್ರಶ್ನಿಸಿದರು.

ʻʻಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಕ್ಕೆ ಜಾತಿ ಬಣ್ಣ ಬಳಿಯಬಾರದು. ಅಹಿಂದ ನಾಯಕರಾದರೆ ಈ ರೀತಿ ಮಾಡಬಹುದಾ? ಅವರು ತಪ್ಪು ಮಾಡಿಲ್ಲ ಎಂದಾದರೆ ಏಕೆ ಹೆದರಬೇಕು? ಪ್ರಧಾನಿ ನರೇಂದ್ರ ಮೋದಿ ಸಹ ಹಿಂದುಳಿದ ವರ್ಗಗಳ ನಾಯಕ. ಪ್ರಧಾನಿಯಾಗಿ ಹತ್ತು ವರ್ಷ ಆಡಳಿತ ನಡೆಸಿದ್ದಾರೆ. ಅವರ ಮೇಲೆ ಹಗರಣಗಳ ಆರೋಪವಿದೆಯೇ? ನೀವು ಅವರ ರೀತಿ ಪ್ರಾಮಾಣಿಕ ಆಡಳಿತ ನಡೆಸಬಹುದಿತ್ತುʼʼ ಎಂದರು.

Tags:    

Similar News