ಮೈಸೂರು ಚಲೋ ಸಮಾರೋಪ | ಸಿದ್ದರಾಮಯ್ಯ ರಾಜೀನಾಮೆಗೆ ಮೈತ್ರಿ ನಾಯಕರ ಒಕ್ಕೊರಲ ಆಗ್ರಹ

Update: 2024-08-10 13:43 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸಿದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪದಲ್ಲಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ-ಜೆಡಿಎಸ್‌ ಪಕ್ಷದ ನಾಯಕರು ಒಕ್ಕೊರಲಿನ ದನಿ ಮೊಳಗಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್​ ನಾಯಕರು 6 ದಿನಗಳ ಕಾಲ ಬೆಂಗಳೂರಿನಿಂದ ಮೈಸೂರು ಚಲೋ ಪಾದಯಾತ್ರೆ ನಡೆಸಿದರು. ಪಾದಯಾತ್ರೆ ಉದ್ದಕ್ಕೂ ಬಿಜೆಪಿ-ಜೆಡಿಎಸ್​ ನಾಯಕರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದರು. ಈ ಪಾದಯಾತ್ರೆಗೆ ಶನಿವಾರ ತೆರೆ ಬಿದ್ದಿದ್ದು, ಸಮಾರೋಪ ಸಮಾವೇಶವನ್ನು ಮೈಸೂರಿನ ಮಹಾರಾಜ ಮೈದಾನದಲ್ಲಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಪ್ರತಿಪಕ್ಷ ಮೈತ್ರಿ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರಕ್ಕೆ ಹಗರಣಗಳ ಕಪ್ಪು ಚುಕ್ಕೆ: ಪ್ರಲ್ಹಾದ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ʻʻಕರ್ನಾಟಕದಲ್ಲಿ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದೆ. ಹಗರಣಗಳ ಕಪ್ಪು ಚುಕ್ಕೆಗಳಿಂದ ತುಂಬಿ ಹೋಗಿದೆ. ಹಗರಣಗಳಲ್ಲಿ ಸಿಲುಕಿದೆ. ಇದನ್ನು ಪ್ರಶ್ನಿಸಿ ನಾವು ಹೋರಾಟಕ್ಕೆ ಇಳಿದರೆ ಅದನ್ನು ಪ್ರಶ್ನಿಸುತ್ತಾರೆ. ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಗುರಾಣಿ ಹಿಡಿದು ಬರುತ್ತಾರೆ. ಅವರಂತೆಯೇ ಹಿಂದುಳಿದ ವರ್ಗಗಳ ನಾಯಕರಾದ ನರೇಂದ್ರ ಮೋದಿ ಅವರು ಮೂರನೇ ಬಾರಿಯೂ ಪ್ರಧಾನಿಯಾಗಿದ್ದಾರೆ ಎನ್ನುವುದನ್ನು ಮರೆಯಬಾರದು. ಕರ್ನಾಟಕ ಸರ್ಕಾರವನ್ನು ಕಿತ್ತು ಹಾಕಲು ನಾವು ಹಿಂಜರಿಯುವುದಿಲ್ಲʼʼ ಎಂದು ಹೇಳಿದರು.

ಸದನದಲ್ಲಿ ಉತ್ತರ ಕೊಡದೆ ಓಡಿ ಹೋಗಿದ್ರಿ‌: ಆರ್‌ ಅಶೋಕ್

‌ʻʻನಿಂಗ 1 ರೂಪಾಯಿಗೆ ಕೆಸರೆ ಗ್ರಾಮದ ಆ ಜಮೀನು ತಗೊಂಡಿದ್ದರು. ಅವರ ಬಾಮೈದ 5 ಲಕ್ಷಕ್ಕೆ ಬರೆಸಿಕೊಂಡಿದ್ದರು. 1 ರೂಪಾಯಿಂದ 62 ಕೋಟಿಗೆ ಹೋಗಿದೆ. ಕ್ಲೀನ್ ಕ್ಲೀನ್ ಎಂದು ಹೇಳುತ್ತೀರಾ, ವಿಧಾನಸಭೆಯಲ್ಲಿ ಫ್ರಂಟ್‌ ಲೈನ್ ನಲ್ಲಿ ಕುಳಿತು ಪ್ರಾಮಾಣಿಕ ಎಂದು ಹೇಳುವ ನೀವು ಸದನದಲ್ಲಿ ಉತ್ತರ ಕೊಡದೆ ಓಡಿ ಹೋಗಿದ್ದೀರಿʼʼ ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ವಾಗ್ದಾಳಿ ನಡೆಸಿದರು.

ʻʻನೀವು ಅಲ್ಲೇ ಉತ್ತರ ಕೊಟ್ಟಿದ್ದರೇ, ಪಾದಯಾತ್ರೆ ಮಾಡಬೇಕಾ ಬೇಡವಾ ಎಂದು ನಾವು ಯೋಚನೆ ಮಾಡುತ್ತಿದ್ದವು. ಎಲ್ಲಿವರೆಗೂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲವೋ ಅಲ್ಲಿವರೆಗೂ ನಾವೂ ಹೋರಾಟ ನಿಲ್ಲಿಸಲ್ಲʼʼ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ತೊಲಗಲೇಬೇಕು: ಜಿ ಟಿ ದೇವೇಗೌಡ

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಮಾತನಾಡಿ, ʻʻರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಆಗಮಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೊಲಗಲೇಬೇಕು. ಮುಂದಿನ ದಿನಗಳಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ೧೪ ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಮುಡಾ ಹೋರಾಟದಲ್ಲಿ ಗೆಲುವಾಗಲೇಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ತೊಲಗಲೇಬೇಕುʼʼ ಎಂದರು.

ಹಿಂದುಳಿದ ವರ್ಗದವರಿಗೆ ಅನ್ಯಾಯ: ನಿಖಿಲ್‌ ಕುಮಾರಸ್ವಾಮಿ

ʻʻಅಹಿಂದ ವರ್ಗದ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಮಲ್ಲಿಕಾರ್ಜುನ್‌ ಖರ್ಗೆ ಅವರು ರಾಜ್ಯದಲ್ಲಿ ಇದ್ದರೆ ನಿಮಗೆ ಸಿಎಂ ಸ್ಥಾನ ದಕ್ಕುವುದಿಲ್ಲ ಎನ್ನುವ ಕಾರಣಕ್ಕೆ ಅವರನ್ನು ದೆಹಲಿಗೆ ಓಡಿಸಿದ್ದೀರಿ. ಡಾ. ಜಿ ಪರಮೇಶ್ವರ್‌ ಅವರನ್ನು ಈ ಹಿಂದೆ ಚುನಾವಣೆಯಲ್ಲಿ ಸೋಲಿಸಿದ್ದೀರಿ. ಇದೇನಾ ನೀವು ಹಿಂದುಳಿದ ವರ್ಗಗಳಿಗೆ ಕೊಡುವ ನ್ಯಾಯ?" ಎಂದು ನಿಖಿಲ್‌ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ʻʻಡಿಸಿಎಂ ಡಿಕೆ ಶಿವಕುಮಾರ್‌ ಅವರು ಲೋಕಸಬಾ ಚುನಾವಣೆ ಬಳಿಕ ಹತಾಶರಾಗಿದ್ದಾರೆ. ಹಾಗಾಗಿ ಅವರು ಕುಮಾರಸ್ವಾಮಿ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ, ದೇವೇಗೌಡರ ಬಗ್ಗೆಯೂ ನೀವು ಮಾತನಾಡುತ್ತಿದ್ದೀರಿ... ನೀವು ರಾಜಕೀಯವಾಗಿ ವಿರೋಧ ಮಾಡುವ ಹಾಗಿದ್ದರೆ ವಿಷಯಾಧಾರಿತವಾಗಿ ಚರ್ಚೆ ಮಾಡಿ. ನಮ್ಮ ಜೆಡಿಎಸ್‌ ಪಕ್ಷ ಅದಕ್ಕೆ ಸಿದ್ಧವಿದೆ. ಆದರೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲʼʼ ಎಂದು ಹೇಳಿದರು.

ಹಿಂದಿನ ಪಾದಯಾತ್ರೆ ನೆನೆದ ಶ್ರೀರಾಮುಲು

ಮಾಜಿ ಸಚಿವ ಬಿ. ಶ್ರೀರಾಮುಲು ಮುಡಾ ಪಾದಯಾತ್ರೆಯ ಸಮಾರೋಪ ವೇದಿಕೆಯಲ್ಲಿ ಈ ಹಿಂದೆ ಕಾಂಗ್ರೆಸ್‌ ನಡೆಸಿದ್ದ ಬಳ್ಳಾರಿ ಪಾದಯಾತ್ರೆಯನ್ನು ನೆನೆದರು.

ʻʻಬಳ್ಳಾರಿಗೆ 14 ವರ್ಷದ ಹಿಂದೆ ಇದೇ ಸಿದ್ದರಾಮಯ್ಯ ಪಾದಯಾತ್ರೆ ನಡೆಸಿದ್ದಾಗ ಯಡಿಯೂರಪ್ಪ ಸ್ವಯಂಪ್ರೇರಿತರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇಂದು ಕಾಲ ಬದಲಾಗಿದ್ದು, ಅದೇ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ. ಎಲ್ಲಿಯವರೆಗೆ ಅವರು ರಾಜೀನಾಮೆ ಕೊಡುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲದು. ಎಂತಹ ಬಂಡೆಯನ್ನೂ ಪುಡಿಪುಡಿ ಮಾಡುವ ಶಕ್ತಿ ನಮ್ಮಲ್ಲಿದೆ' ಎಂದರು.

Tags:    

Similar News