MUDA Scam| ತನಿಖೆಗೆ ವಿಚಾರಣಾ ಆಯೋಗ ರಚನೆ; ವಿಧಾನಮಂಡಲ ಅಧಿವೇಶನದಲ್ಲಿ ಮುಜುಗರ ತಪ್ಪಿಸಲು ಮುಂದಾದ ಸಿದ್ದರಾಮಯ್ಯ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ಸೋಮವಾರ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಆಡಳಿತಾರೂಢ ಸರ್ಕಾರಕ್ಕೆ ಬಿಸಿ ತಟ್ಟುತ್ತಿರುವ ಬೆನ್ನಿಗೇ ಅಧಿವೇಶನದ ಮುನ್ನಾದಿನ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.;
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ಸೋಮವಾರ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಆಡಳಿತಾರೂಢ ಸರ್ಕಾರಕ್ಕೆ ಬಿಸಿ ತಟ್ಟುತ್ತಿರುವ ಬೆನ್ನಿಗೇ ಅಧಿವೇಶನದ ಮುನ್ನಾದಿನ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭಾನುವಾರ ರಾತ್ರಿ ವಿಚಾರಣಾ ಆಯೋಗ ರಚಿಸಿ ಆದೇಶ ಪ್ರತಿ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಸರ್ಕಾರ, ನಿವೃತ್ತ ನ್ಯಾಯಾಧೀಶ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಆದೇಶ ಪತ್ರ ಬಿಡುಗಡೆ ಮಾಡಿದೆ. ತನಿಖಾ ವರದಿಯನ್ನು ಆರು ತಿಂಗಳ ಒಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದೆ.
ಆದೇಶ ಪ್ರತಿಯಲ್ಲೇನಿದೆ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಷಯದಲ್ಲಿ ಆರೋಪಗಳು ಸರ್ಕಾರದ ಗಮನಕ್ಕೆ ಬಂದಿರುವುದಲ್ಲದೇ, ಈ ಕುರಿತು ದಿನ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿರುತ್ತದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು, Commission Of Inquiry Act, 1952ರ (ವಿಚಾರಣಾ ಆಯೋಗ ಕಾಯ್ದೆ 1952) ನಿಮಯು 3ರ ಉಪನಿಯಮ (1) ಅನ್ವಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗ ರಚಿಸಲು ಸರ್ಕಾರ ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಆರೋಪಗಳ ಬಗ್ಗೆ, ವಿಚಾರಣೆಯನ್ನು ನಡೆಸಲು Commission Of Inquiry Act, 1952ರ ನಿಮಯು 3ರ ಉಪನಿಯಮ (1) ಅನ್ವಯ ಪ್ರದತ್ತವಾದ ಅಧಿಕಾರದನ್ವಯ ಸರ್ಕಾರವು ನಿವೃತ್ತ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ, ಅವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದೆ.
ಸದರಿ ವಿಚಾರಣಾ ಆಯೋಗವು Commission Of Inquiry Act, 1952 ಹಾಗೂ Code Of Civil Procedure (ಸಿವಿಲ್ ಪ್ರೊಸೀಜರ್ ಕೋಡ್ 1952) ನಲ್ಲಿನ ಅವಕಾಶದ ಅಡಿ ವಿಚಾರಣೆ ನಡೆಸಲು ಎಲ್ಲಾ ಅಧಿಕಾರ ಹೊಂದಿರುತ್ತದೆ. ತನಿಖೆಯನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕೆಂದು ಸರ್ಕಾರವು ಅಪೇಕ್ಷಿಸುತ್ತದೆ. ವಿಚಾರಣಾ ಆಯೋಗದ ಉಲ್ಲೇಖ ನಿಯಮಗಳನ್ನು ಪ್ರತ್ಯೇಕವಾಗಿ ಹೊರಡಿಲಾಗುತ್ತದೆ.
ಈ ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ / ದಾಖಲೆಗಳನ್ನು ಒದಗಿಸಿ ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು/ಆರ್ಥಿಕ ಸಲಹೆಗಾರರು/ ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸತಕ್ಕದ್ದು. ವಿಚಾರಣಾ ಆಯೋಗಕ್ಕೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಇಲಾಖೆಯ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಆಯೋಗವು ಕಾಲಾನುಕಾಲಕ್ಕೆ ವಿಚಾರಣೆಗಾಗಿ ಅಪೇಕ್ಷಿಸುವ ಎಲ್ಲಾ ಕಡತಗಳು/ ದಾಖಲಾತಿಗಳು/ ಇತ್ಯಾದಿಗಳನ್ನು ಒದಗಿಸತಕ್ಕದ್ದು ಹಾಗೂ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು, ವಿಚಾರಣಾ ಆಯೋಗದೊಂದಿಗೆ ಸಂಪೂರ್ಣವಾಗಿ ಸಹಕರಿಸತಕ್ಕದ್ದು ಎಂದು ತಿಳಿಸಿರುವ ಆದೇಶ ಪ್ರತಿಗೆ ಸರ್ಕಾರದ ಅಧೀನ ಕಾರ್ಯದರ್ಶಿ (ಒಳಾಡಳಿತ ಇಲಾಖೆ ) ಸಹಿ ಹಾಕಿದ್ದಾರೆ.
ಹಗರಣ
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ದಿ ನಿವೇಶನಗಳನ್ನು ಅಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಮತ್ತು ಇತರರು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ. ಇನ್ನೊಂದೆಡೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬವೂ ,ಮುಡಾದಿಂದ ಅಕ್ರಮ ನಿವೇಶನಗಳನ್ನು ಪಡೆದಿದೆ ಎಂದು ಕಾಂಗ್ರೆಸ್ ಅರೋಪಿಸಿದೆ. ಬಿಜೆಪಿ ಕೆಲ ಮುಖಂಡರೂ ಈ ಹಗರಣದಲ್ಲಿ ಭಾಗಿಗಳೆಂದು ಕಾಂಗ್ರೆಸ್ ಆರೋಪಿಸಿದೆ.
ಆದರೆ, ಸಿದ್ದರಾಮಯ್ಯ ಅವರು ತಮ್ಮ ಕುಟುಂಬ ಪಡೆದಿರುವ ನಿವೇಶನಗಳ ಬಗ್ಗೆ ಮತ್ತು ಭಾರೀ ಆಕ್ರಮ ನಡೆದಿದೆ ಎಂಬ ಆರೋಪ ಈಗ ರಾಜಕೀಯವಾಗಿ ಕಾಂಗ್ರೆಸ್‌ಗೆ ಭಾರೀ ಮುಜುಗರ ಸೃಷ್ಟಿಸಿದೆ. ಬಗ್ಗೆ ಎಷ್ಟೇ ಸ್ಪಷ್ಟೀಕರಣ ನೀಡಿದರೂ, ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರ ವಿಷಯದಲ್ಲಿ ಸರಿಯಾದ ಸ್ಪಷ್ಟನೆ ನೀಡಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಜೆಡಿಎಸ್, ಬಿಜೆಪಿ ನಾಯಕರೂ ಇಂತಹುದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂಬ ಪ್ರತ್ಯಾರೋಪ ಮಾಡುತ್ತಿದೆ.
ಈಗ ವಿಧಾನ ಮಂಡಲ ಅಧಿವೇಶನ ನಡೆಯಲು ಕ್ಷಣಗಣನೆ ಆರಂಭವಾಗಿರುವುದರಿಂದ ಮತ್ತು ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಮುಜುಗರ ತಪ್ಪಿಸುವ ದೃಷ್ಟಿಯಿಂದ ವಿಚಾರಣಾ ಆಯೋಗ ರಚನೆಗೆ ಕೊನೆ ಕ್ಷಣದಲ್ಲಿ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.