ಸರ್ಕಾರದ ಸಾಧನಾ ಸಮಾವೇಶ: ಖರ್ಗೆ ಎದುರಲ್ಲೇ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವೈಮನಸ್ಸು ಸ್ಫೋಟ
ಸಿದ್ದರಾಮಯ್ಯ ಭಾಷಣದ ಆರಂಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಹೊರತುಪಡಿಸಿ ಉಳಿದ ಎಲ್ಲ ಹೆಸರುಗಳನ್ನೂ ಒಂದೊಂದಾಗಿ ಹೇಳಿಕೊಂಡು ಬಂದರು. "ಡಿ.ಕೆ. ಶಿವಕುಮಾರ್ ಕಾರ್ಯಕ್ರಮದಲ್ಲಿಲ್ಲ. ಇರುವವರ ಹೆಸರು ಮಾತ್ರ ಹೇಳುತ್ತೇನೆ. ಮನೆಯಲ್ಲಿದ್ದವರ ಹೆಸರುಗಳನ್ನೆಲ್ಲಾ ಹೇಳಲಾಗವುದಿಲ್ಲ," ಎಂದು ನೇರವಾಗಿ ಹೇಳಿದರು.;
ಮೈಸೂರಿನಲ್ಲಿ ರಾಜ್ಯ ಸರ್ಕಾರ ನಡೆಸಿದ ಎರಡನೇ ವರ್ಷದ ಸಾಧನಾ ಸಮಾವೇಶ ಕಾರ್ಯಕ್ರಮ ಅಕ್ಷರಷಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ವೈಮನಸ್ಸಿನ ವೇದಿಕೆಯಾಗಿ ಪರಿಣಮಿಸಿತು.
ಕಾಂಗ್ರೆಸ್ ವರಿಷ್ಠ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಎದುರಿನಲ್ಲೇ ಈ ಘಟನಾವಳಿ ನಡೆದಿದೆ. ಸಾಧನಾ ಸಮಾವೇಶದಲ್ಲಿ ಸರ್ಕಾರದ ಎರಡು ಪ್ರಮುಖ ನಾಯಕರು ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸಿದ ಸಂದರ್ಭದಲ್ಲಿ ಅಲ್ಲಿಂದ ತೆರಳಿ ಒಂದು ರೀತಿಯ ಅಸಮಾಧಾನ ವ್ಯಕ್ತಪಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಹೇಳದೆ, ನೇರವಾಗಿ ಕಡ್ಡಿ ತುಂಡುಮಾಡಿದಂತೆ ಅವರ ಹೆಸರು ಹೇಳದೇ ಇರುವುದಕ್ಕೆ ಕಾರಣವನ್ನೂ ನೀಡಿದರು.
ತಮ್ಮ ಭಾಷಣದ ಆರಂಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಹೊರತುಪಡಿಸಿ ಉಳಿದ ಎಲ್ಲ ಹೆಸರುಗಳನ್ನೂ ಒಂದೊಂದಾಗಿ ಹೇಳಿಕೊಂಡು ಬಂದರು. ಈ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು ಸಿದ್ದರಾಮಯ್ಯ ಬಳಿ ತೆರಳಿ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪಿಸದ ಬಗ್ಗೆ ಗಮನ ಸೆಳೆದರು.
ಅಲ್ಲೇ ಆ ಮುಖಂಡನತ್ತ ಗದರಿದ ಸಿದ್ದರಾಮಯ್ಯ, "ಡಿ.ಕೆ. ಶಿವಕುಮಾರ್ ಕಾರ್ಯಕ್ರಮದಲ್ಲಿಲ್ಲ. ಇರುವವರ ಹೆಸರು ಮಾತ್ರ ಹೇಳುತ್ತೇನೆ. ಮನೆಯಲ್ಲಿದ್ದವರ ಹೆಸರುಗಳನ್ನೆಲ್ಲಾ ಹೇಳಲಾಗವುದಿಲ್ಲ," ಎಂದು ನೇರವಾಗಿ ಆ ವ್ಯಕ್ತಿಗೆ ಹೇಳಿದರು. ಅವರ ಮಾತುಗಳು ಧ್ವನಿವರ್ಧಕದಲ್ಲಿ ಇಡೀ ಸಭೆಗೇ ಕೇಳಿದ್ದು ಅರಿವಾದ ಸಿದ್ದರಾಮಯ್ಯ ಮತ್ತೆ ಸಭೆಯನ್ನು ಉದ್ದೇಶಿಸಿ "ಅವರು ಪಾಪ.. ಡಿ.ಕೆ. ಶಿವಕುಮಾರ್ ಹೆಸರು ಹೇಳಿ ಅಂತ ಹೇಳ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿಗೆ ಹೋಗ್ತೀನಂತ ಹೋದ್ರು. ಅದರಿಂದ ಅವರ ಹೆಸರು ಪ್ರಸ್ತಾಪ ಮಾಡಿಲ್ಲ," ಎಂದು ಮತ್ತೆ ತಮ್ಮ ಮಾತನ್ನು ಸಮರ್ಥಿಸಿಕೊಂಡರು.
ಆ ಮೂಲಕ, ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆದ ಬಳಿಕ ದೆಹಲಿಯಲ್ಲಿ ʼನಾನೇ ಪೂರ್ಣಾವಧಿ ಸಿಎಂ" ಎಂದು ಹೇಳಿ ಡಿ.ಕೆ. ಶಿವಕುಮಾರ್ ಅವರ ಸಿಎಂ ಆಗುವ ಆಸೆಗೆ ಹಾಗೂ ಆ ವಿಷಯದ ಸುತ್ತ ನಡೆದ ಚರ್ಚೆಗಳಿಗೆ ನೇರವಾಗಿ ಸಂದೇಶ ನೀಡಿದ್ದರು.
ಈಗ ಸರ್ಕಾರದ ಸಾಧನಾ ಸಮಾವೇಶವನ್ನು ತಮ್ಮ ತವರು ಮೈಸೂರಿನಲ್ಲೇ ನಡೆಸಿದ ಸಿದ್ದರಾಮಯ್ಯ ನೇರವಾಗಿ ಡಿ.ಕೆ. ಶಿವಕುಮಾರ್ ಅವರು ಸಭೆ ಬಿಟ್ಟು ಬೆಂಗಳೂರಿಗೆ ತೆರಳಿದ್ದನ್ನು ತಮ್ಮದೇ ರೀತಿಯಲ್ಲಿ ಪ್ರಸ್ತಾಪಿಸಿದ್ದೇ ಅಲ್ಲದೆ ಅವರ ಹೆಸರು ಹೇಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಅದಕ್ಕೆ ಮುನ್ನ ಸಮಾವೇಶ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ನೇರವಾಗಿ ಜನರತ್ತ ಕೈಬೀಸುತ್ತಾ ವೇದಿಕೆಯತ್ತ ಬರುತ್ತಿದ್ದಾಗ, ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಹಿಂದಿನಿಂದ ನಡೆದುಬರುತ್ತಿದ್ದ ದೃಶ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿತು.
ಬಳಿಕ ಭಾಷಣ ಆರಂಭಿಸಿದ ಡಿ.ಕೆ. ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆಯವರ ಹಾಗೂ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸಿ ತಮ್ಮ ಭಾಷಣ ಆರಂಭಿಸಿದರೂ, ಸಿದ್ದರಾಮಯ್ಯ ಅವರ ಭಾಷಣದ ವೇಳೆ ಸಭೆಯಿಂದ ʼಬೆಂಗಳೂರಿನ ಕಾರ್ಯಕ್ರಮʼದ ನಿಮಿತ್ತ ತೆರಳಿದರು. ಆ ಬಳಿಕ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ಡಿ.ಕೆ. ಶಿವಕುಮಾರ್ ಹೆಸರು ಹೇಳದೆ, ಕೊನೆಗೆ ಯಾಕೆ ಹೆಸರು ಹೇಳಿಲ್ಲ ಎಂಬ ಬಗ್ಗೆಯೂ ಸ್ಪಷ್ಟವಾಗಿ ಹೇಳಿದ್ದು ಮುಂದಿನ ದಿನಗಳ ʼರಾಜಕೀಯ ಸಮರʼದ ಮುನ್ಸೂಚನೆಯಂತೆ ಕಂಡುಬಂದಿದೆ.
ಸಿದ್ದರಾಮಯ್ಯ , ಡಿ.ಕೆ. ಶಿವಕುಮಾರ್ ಶೀತಲ ಸಮರ ಸ್ಫೋಟ!
ಈ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಶೀತಲ ಸಮರ ಮೈಸೂರಿನಲ್ಲೇ ಸ್ಫೋಟಗೊಂಡಿದೆ. ಸರ್ಕಾರದ ಸಾಧನಾ ಸಮಾವೇಶ , ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ವೈರುಧ್ಯ ನಡವಳಿಕೆಗಳಿಗೆ ವೇದಿಕೆಯಾಯಿತು.
ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಶ್ರಮಿಸಿದ್ದರು ಹಾಗೂ ಚುನಾವಣೆಗೆ ಮುನ್ನ ತಾವಿಬ್ಬರೂ ಒಂದಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗುತ್ತಿದ್ದಂತೆ ಸಿಎಂ ಬದಲಾವಣೆ ಚರ್ಚೆ ಕಾಂಗ್ರೆಸ್ ಪಕ್ಷದಲ್ಲೇ ಆರಂಭವಾಗಿದ್ದಲ್ಲದೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೆಂಗಳೂರಿಗೆ ಬಂದು ಠಿಕಾಣಿ ಹೂಡಿ ಶಾಸಕರ ಜತೆ ಒನ್ ಟು ಒನ್ ಸಭೆ ನಡೆಸಿ ಅಸಮಾಧಾನಗಳ ಪಟ್ಟಿ ಮಾಡಿದ್ದರು. ಹಾಗೂ ಸಚಿವರನ್ನೂ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದರು.
ಸುರ್ಜೇವಾಲ ಅವರ ನಡೆ ಸಿದ್ದರಾಮಯ್ಯ ಅವರ ಬಣದ ನಾಯಕರಿಗೆ ಅಸಮಾಧಾನ ತಂದಿದ್ದು, ಕೆಲವರು ಅದನ್ನು ಪ್ರದರ್ಶಿಸಿದ್ದರು ಕೂಡಾ. ಈಗ ಸರ್ಕಾರ ʼಸಾಧನಾ ಸಮಾವೇಶʼ ಹೆಸರಿನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಬಲ ಪ್ರದರ್ಶನದ ವೇದಿಕೆಯಾಗಿ ಪರಿವರ್ತನೆಯಾದಂತಾಗಿದೆ.