ಒಂದು ದೇಶ- ಒಂದು ಚುನಾವಣೆ: ಮೋದಿ ಸರ್ಕಾರದ ದುಷ್ಟ ಉದ್ದೇಶ ಎಂದ ಸಿಎಂ

Update: 2024-09-18 14:00 GMT

ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ‘‘ಒಂದು ದೇಶ- ಒಂದು ಚುನಾವಣೆ’’ ಯ ಪ್ರಸ್ತಾವ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಮಾತ್ರವಲ್ಲ ‘‘ಅನುಷ್ಠಾನಗೊಳಿಸಲು ಕೂಡಾ ಅಸಾಧ್ಯವಾದುದು’’. ಇಂತಹದ್ದೊಂದು ಮಹತ್ವದ ಪ್ರಸ್ತಾವದ ಬಗ್ಗೆ ವಿರೋಧ ಪಕ್ಷಗಳ ಜೊತೆ ಸಮಾಲೋಚನೆಯನ್ನೂ ಮಾಡದೆ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿರುವುದು ನರೇಂದ್ರ ಮೋದಿ ಸರ್ಕಾರದ ದುಷ್ಠ ಉದ್ದೇಶವನ್ನು ಅನಾವರಣಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಒಂದು ಸರ್ಕಾರದ ಆದ್ಯತೆಗಳು ಏನಿರಬೇಕೆಂಬ ಸಾಮಾನ್ಯ ಜ್ಞಾನವೂ ಕೇಂದ್ರ ಸರ್ಕಾರಕ್ಕಾಗಲಿ, ಪ್ರಧಾನಮಂತ್ರಿಯವರಿಗಾಗಲಿ ಇದ್ದ ಹಾಗೆ ಕಾಣುವುದಿಲ್ಲ. ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ, ಹಣದುಬ್ಬರದಿಂದ ದೇಶದ ಆರ್ಥಿಕತೆ ತತ್ತರಿಸುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನ ಬವಣೆಪಡುತ್ತಿದ್ದಾರೆ. ದೇಶಾದ್ಯಂತ ಕಾನೂನು ಸುವ್ಯವಸ್ಥೆ ಮೇಲಿನ ನಿಯಂತ್ರಣ ತಪ್ಪಿಹೋಗಿದ್ದು, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ಮಿತಿಮೀರಿ ಹೋಗುತ್ತಿದೆ. ಈ ಬಗ್ಗೆ ಯೋಚನೆ ಮಾಡಲು ಕೂಡಾ ಪುರುಸೊತ್ತಿಲ್ಲದ ಪ್ರಧಾನ ಮಂತ್ರಿಗಳು ‘‘ಒಂದು ದೇಶ ಒಂದು ಚುನಾವಣೆ’’ ಎಂಬ ಗಿಮಿಕ್ ಮೂಲಕ ಜನರ ಗಮನವನ್ನು ಬೇರೆ ಕಡೆ ಸೆಳೆದು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

ಆಡಳಿತಾರೂಢ ಬಿಜೆಪಿ ಪಕ್ಷದ ಗುಪ್ತ ಅಜೆಂಡಾವನ್ನು ಒಳಗೊಂಡಿರುವ "ಒಂದು ದೇಶ ಒಂದು ಚುನಾವಣೆ" ಪ್ರಸ್ತಾವವನ್ನು ಸಂಸತ್ ನ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಎದುರಿಸಲಿದೆ. ದೇಶದ ಜನಾಭಿಪ್ರಾಯವೂ ‘‘ಒಂದು ದೇಶ ಒಂದು ಚುನಾವಣೆ’’ ವ್ಯವಸ್ಥೆಗೆ ವಿರುದ್ಧವಾಗಿದೆ. ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೆ ವಿಧಾನಸಭೆಯಲ್ಲಿ ಆಡಳಿತಾರೂಢ ಪಕ್ಷ ವಿಶ್ವಾಸಮತ ಗಳಿಸಲು ಸೋತುಹೋಗುವ ಸಂದರ್ಭದಲ್ಲಿ ಎದುರಾಗುವ ಬಿಕ್ಕಟ್ಟಿಗೆ ಪ್ರಸ್ತಾವದಲ್ಲಿ ಪರಿಹಾರ ಇಲ್ಲ. ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಯೊಂದೇ ಯೋಗ್ಯ ಪರಿಹಾರವಾಗಿದೆ. ಇದರ ಬದಲಿಗೆ ಸದನದಲ್ಲಿ ವಿಶ್ವಾಸ ಮತ ಗಳಿಸಲು ವಿಫಲವಾದ ಅಲ್ಪಸಂಖ್ಯಾತ ಪಕ್ಷ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುವ ದ್ರೋಹವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ-ಸಾಮರ್ಥ್ಯ ನಮ್ಮ ಈಗಿನ ಚುನಾವಣಾ ಆಯೋಗಕ್ಕೆ ಇಲ್ಲ. ಇದಕ್ಕಾಗಿ ನಮ್ಮ ಚುನಾವಣಾ ವ್ಯವಸ್ಥೆಯನ್ನು ದುಪ್ಪಟ್ಟು ಪ್ರಮಾಣದಲ್ಲಿ ವಿಸ್ತರಿಸಬೇಕಾಗುತ್ತದೆ. ಇವೆಲ್ಲವೂ ಅವಸರದಿಂದ ಮಾಡುವ ಕೆಲಸ ಅಲ್ಲ. ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ. ಇದರ ಜೊತೆಗೆ ಸಂವಿಧಾನದ ಕನಿಷ್ಠ ಐದು ಪರಿಚ್ಛೇದಗಳಿಗೆ ತಿದ್ದುಪಡಿ ತರಬೇಕಾಗಿದೆ. ಈಗಿನ ವ್ಯವಸ್ಥೆಯಲ್ಲಿ ಸಂವಿಧಾನ ತಿದ್ದುಪಡಿಗೆ ಬೇಕಾದಷ್ಟು ಸದಸ್ಯರ ಸಂಖ್ಯೆಯನ್ನು ಹೊಂದಿಸಿಕೊಳ್ಳುವುದು ಎನ್‌ಡಿಎ ಗೆ ಕೂಡಾ ಕಷ್ಟ ಸಾಧ್ಯ. ಇವೆಲ್ಲವೂ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದ್ದರೂ ಕೇವಲ ಜನರಲ್ಲಿ ಗೊಂದಲವನ್ನು ಹುಟ್ಟುಹಾಕಿ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಈ ಪ್ರಸ್ತಾವವನ್ನು ಸಚಿವ ಸಂಪುಟ ಅಂಗೀಕರಿಸಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Tags:    

Similar News