Channapatna By-Election| ಸಾಲು ಸಾಲು ಒಕ್ಕಲಿಗರನ್ನು ಮುಗಿಸಿದ ದೇವೇಗೌಡ: ಸಿದ್ದರಾಮಯ್ಯ

ದೇವೇಗೌಡರು ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ಮಾಡುತ್ತಿದ್ದಾರೆ, ಈಗ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನೂ ಮುಗಿಸುವ ಪ್ರಯತ್ನ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಕಟಕಿಯಾಡಿದ್ದಾರೆ.

Update: 2024-11-11 12:05 GMT

"ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಒಬ್ಬೇ ಒಬ್ಬ ಒಕ್ಕಲಿಗರನ್ನೂ ಬೆಳೆಯಲು ಬಿಡಲ್ಲ. ದೇವೇಗೌಡರೇ ನಿಮ್ಮ ಪಾಳೆಗಾರಿಕೆ-ಹೊಟ್ಟೆಯುರಿ ನಿಮ್ಮನ್ನೇ ಸುಡತ್ತೆ. ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಪರ ದೊಡ್ಡ ಮಳೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ, "ನಾನು ಹಿಂದುಳಿದವನು ಅಂತ ನನ್ನನ್ನು ವಿರೋಧಿಸ್ತಾರೆ, ಓಕೆ. ಆದರೆ, ವೈ.ಕೆ.ರಾಮಯ್ಯ, ನಾಗೇಗೌಡ, ಬಚ್ಚೇಗೌಡ, ವರದೇಗೌಡ, ಪಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ, ಭೈರೇಗೌಡ, ಕೆ.ಆರ್.ಪೇಟೆ ಚಂದ್ರಶೇಖರ್ ಸೇರಿ ಸಾಲು ಸಾಲು ಒಕ್ಕಲಿಗರನ್ನು ರಾಜ್ಯದಲ್ಲಿ ದೇವೇಗೌಡರು ಮುಗಿಸಿದರು. ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ಮಾಡುತ್ತಿದ್ದಾರೆ," ಎಂದು ಟೀಕಿಸಿದ್ದಾರೆ.

ಆ ಮೂಲಕ ಒಕ್ಕಲಿಗ ನಾಯಕತ್ವ ಒಂದೇ ಕುಟುಂಬಕ್ಕೆ ಸೀಮಿತವಲ್ಲ ಎಂದು ಸಂದೇಶ ಸಾರಿರುವ ಅವರು, ಒಕ್ಕಲಿಗ ಪ್ರಾಬಲ್ಯದ ಚನ್ನಪಟ್ಟಣ ಕ್ಷೇತ್ರದಲ್ಲಿ ಒಕ್ಕಲಿಗ ಜಾತಿ ಕಾರ್ಡನ್ನು ರಾಜಕೀಯ ದಾಳವಾಗಿ ಸಿದ್ದರಾಮಯ್ಯ ಉರುಳಿಸಿದ್ದಾರೆ.

ಮಂಡ್ಯ ಲೋಕಸಭೆಯಲ್ಲಿ, ರಾಮನಗರ ವಿಧಾನಸಭೆಯಲ್ಲಿ ನಿಖಿಲ್ ಸೋತಿದ್ದಾರೆ. ಈಗ ಚನ್ನಪಟ್ಟಣಕ್ಕೆ ಕರೆತಂದು ನಿಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಭಾವ, ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರ ಗೆಲುವಿಗೆ ಯೋಗೇಶ್ವರ್ ಅವರು ಬಹಳ ಶ್ರಮಿಸಿದರು. ಆಗಲೇ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಬೆಂಬಲಿಸಿ ಗೆಲ್ಲಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಬಂದಾಗ ಕೈ ಕೊಟ್ಟರು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಬುದ್ದವಂತ ಒಕ್ಕಲಿಗರು, ರಾಜಕೀಯ ಪ್ರಜ್ಞೆ ಇರುವ ಒಕ್ಕಲಿಗರು ಯಾರನ್ನೂ ದೇವೇಗೌಡರು ಬೆಳೆಯಲು ಬಿಡದೆ ಮುಗಿಸ್ತಾರೆ. ಈಗ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನೂ ಮುಗಿಸುವ ಪ್ರಯತ್ನ ಮಾಡ್ತಿದ್ದಾರೆ. ಆದರೆ ಇದು ಆಗಲ್ಲ. ನಾನು ಜಿ.ಟಿ.ದೇವೇಗೌಡರಿಗೂ ಎಚ್ಚರಿಸಿದ್ದೀನಿ. ಅಲ್ಲಿದ್ದರೆ ಮುಗಿಸ್ತಾರೆ. ಬೇಗ ಹೊರಗೆ ಬಂದ್ರೆ ನಿಮಗೆ ಒಳ್ಳೆಯದು ಎಂದು ಎಚ್ಚರಿಸಿದ್ದೀನಿ. ಮನೆ ಮಗ ಅಂತಿದ್ದ ಬಿ.ಎಲ್.ಶಂಕರ್, ವೈ.ಕೆ.ರಾಮಯ್ಯ ಅವರನ್ನೇ ಮುಗಿಸಿದವರು ಇನ್ನು ಯೋಗೇಶ್ವರ್ ಅವರನ್ನು ಸಹಿಸ್ತಾರಾ ಎಂದು ಪ್ರಶ್ನಿಸಿದರು.



Tags:    

Similar News