BJP Infighting | ಪ್ರತಾಪ್ ಸಿಂಹ ಉಚ್ಚಾಟನೆಗೆ ಸ್ವಕ್ಷೇತ್ರದಲ್ಲೇ ಮೊಳಗಿತು ಕೂಗು!
ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದಿಂದ 2ಬಾರಿ ಸಂಸದರಾಗಿ ರಾಷ್ಟ್ರಮಟ್ಟದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಪ್ರತಾಪ್ ಸಿಂಹ ಉಚ್ಛಾಟನೆಗೆ ಸ್ವಕ್ಷೇತ್ರದಲ್ಲೇ ಒತ್ತಡ ಹೆಚ್ಚುತ್ತಿದೆ.;
ಬಿಜೆಪಿ ಫೈರ್‌ಬಾಂಡ್ ನಾಯಕರಾಗಿ ಗುರುತಿಸಿಕೊಂಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನೇ ಪಕ್ಷದಿಂದ ಹೊರ ಹಾಕುವಂತೆ ಸ್ವಪಕ್ಷೀಯರೇ ಪತ್ರ ಬರೆದಿದ್ದಾರೆ.
ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಪ್ರತಾಪ್ ಸಿಂಹ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಏಕಾಏಕಿ ಟಿಕೆಟ್ ನಿರಾಕರಿಸಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಗೆಲ್ಲಿಸಲಾಗಿತ್ತು.
ಚುನಾವಣಾ ಟಿಕೆಟ್ ಕೈತಪ್ಪಿದ ಬಳಿಕ ತೀವ್ರ ಅಸಮಾಧಾನಗೊಂಡಿದ್ದ ಪ್ರತಾಪ್, ಆ ಬಳಿಕ ಆಗಾಗ ಪಕ್ಷದ ರಾಜ್ಯ ನಾಯಕತ್ವ ಮತ್ತು ಹೊಂದಾಣಿಕೆ ರಾಜಕಾರಣದ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದರು. ಪಕ್ಷದಲ್ಲಿ ನಿಷ್ಠಾವಂತರನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿವೆ. ವಂಶ ರಾಜಕಾರಣ ಹೆಚ್ಚುತ್ತಿದೆ ಎಂಬ ಆರೋಪಗಳನ್ನು ಕೂಡ ಮಾಡಿದ್ದರು.
ಇತ್ತೀಚೆಗೆ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಅಕ್ರಮ ಪ್ರಕರಣದ ವಿಷಯದಲ್ಲಿ ಕೂಡ ಪಕ್ಷದ ರಾಜ್ಯ ನಾಯಕತ್ವಕ್ಕೆ ವಿರುದ್ಧವಾಗಿ ಪ್ರತಾಪ್ ತಮ್ಮದೇ ನಿಲುವು ಪ್ರಕಟಿಸಿದ್ದಲ್ಲದೆ, ಮೈಸೂರಿನ ರಸ್ತೆಯೊಂದಕ್ಕೆ ಸಿದ್ದರಾಮಯ್ಯ ಹೆಸರು ನಾಮಕರಣ ವಿಷಯದಲ್ಲಿ ಕೂಡ ಸಿಎಂ ಪರ ಬ್ಯಾಟಿಂಗ್ ಮಾಡಿ ಪಕ್ಷದ ಒಳಗೇ ಕೆಂಗಣ್ಣಿಗೆ ಗುರಿಯಾಗಿದ್ದರು.
ಅದರಲ್ಲೂ ಮುಖ್ಯವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಮೈಸೂರು ಸಂಸದ ಯದುವೀರ್ ಒಡೆಯರ್ ವಿಷಯದಲ್ಲಿ ಅವರು ಮತ್ತೆಮತ್ತೆ ಅಸಮಾಧಾನ ಹೊರಹಾಕುತ್ತಲೇ ಇದ್ದರು. ಆ ಹಿನ್ನೆಲೆಯಲ್ಲಿ ಮಾಜಿ ಸಂಸದರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ, ಬಿಜೆಪಿ ತೊರೆಯುವ ಸೂಚನೆಗಳಿವೆ ಎಂಬ ಚರ್ಚೆಗೂ ಅವರ ನಡೆ ಗ್ರಾಸವಾಗಿತ್ತು.
ಇದೀಗ ಅವರ ತವರು ಕ್ಷೇತ್ರ ಮೈಸೂರಿನಿಂದಲೇ ಅವರನ್ನ ಪಕ್ಷದಿಂದ ಉಚ್ಚಾಟಿಸಿ ಎಂಬ ಆಗ್ರಹದ ಪತ್ರ ಪಕ್ಷದ ಮುಖಂಡರಿಗೆ ರವಾನೆಯಾಗಿದೆ.
ಬಿಜೆಪಿ ಮೈಸೂರು ನಗರಾಧ್ಯಕ್ಷ ಎಲ್ ನಾಗೇಂದ್ರ ಹಾಗೂ ಮೈಸೂರು ಗ್ರಾಮಾಂತರ ಘಟಕದ ಅಧ್ಯಕ್ಷರಾದ ಮಹದೇವಸ್ವಾಮಿ ಅವರಿಗೆ ಪಕ್ಷದ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಉಪಾಧ್ಯಕ್ಷ ಕುಮಾರ್ ಗೌಡ, ಪರಿಶಿಷ್ಟ ಪಂಗಡಗಳ ಮೋರ್ಚಾದ ಮಾಜಿ ಅಧ್ಯಕ್ಷ ಮೈ.ಕಾ ಪ್ರೇಮ್ ಕುಮಾರ್ ಅವರುಗಳು ಈ ಪತ್ರ ಬರೆದಿದ್ದು, ಪಕ್ಷಕ್ಕೆ ಮುಜಗರ ತರುವ ಕೆಲಸ ಮಾಡುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.
. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಆಗಿದ್ದ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಮಾಡದೆ ವರುಣಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಿ ಅಲ್ಲಿನ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾದರು. ವಕ್ಫ್ ವಿವಾದದ ಹೋರಾಟದಲ್ಲಿ ಕೂಡ ಪಕ್ಷದ ಬ್ಯಾನರ್ ಅಡಿ ಪ್ರತಿಭಟನೆ ನಡೆಸದೇ ಪ್ರತ್ಯೇಕ ತಂಡದೊಂದಿಗೆ ಪ್ರತಿಭಟನೆ ನಡೆಸಿದರು ಎಂಬುದೂ ಸೇರಿ ಹಲವು ವಿಷಯಗಳನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.