Assembly Session | ಕೆರೆಗಳಿಗೆ ಬಫರ್ ಜೋನ್ ನಿಗದಿ; ಸದನ ಸಮಿತಿ ರಚನೆಗೆ ವಿಪಕ್ಷಗಳ ಪಟ್ಟು
ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸದಸ್ಯರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹಲವು ಬದಲಾವಣೆಗಳನ್ನು ತಿದ್ದುಪಡಿ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.;
ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಹತ್ತು ಪ್ರಮುಖ ವಿಧೇಯಕಗಳನ್ನು ಮಂಡಿಸಿ, ಚರ್ಚೆಗೆ ಅವಕಾಶ ನೀಡಲಾಯಿತು. ಕಲಾಪದಲ್ಲಿ ಮೊದಲಿಗೆ ನಡೆಯುವ ಪ್ರಶ್ನೋತ್ತರ ಅವಧಿಯನ್ನು ಕೈಬಿಟ್ಟು, ವಿಧೇಯಕಗಳ ಪರ್ಯಾಲೋಚನೆಗೆ ವಿಶೇಷ ಆದ್ಯತೆ ನೀಡಲಾಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ವಿಧೇಯಕಗಳನ್ನು ಮಂಡಿಸಿದರು. ಎಚ್.ಕೆ. ಪಾಟೀಲ್ ಅವರು ಮಂಡಿಸಿದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕದ ಮೇಲೆ ಸದಸ್ಯರು ಸುದೀರ್ಘ ಚರ್ಚೆ ನಡೆಸಿ, ಲೋಪಗಳನ್ನು ಪ್ರಸ್ತಾಪಿಸಿ ಸಚಿವರಿಂದ ಸ್ಪಷ್ಟೀಕರಣ ಪಡೆದರು.
ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸದಸ್ಯರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹಲವು ಬದಲಾವಣೆಗಳನ್ನು ತಿದ್ದುಪಡಿ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಮಂಡನೆಯಾದ ಇತರೆ ವಿಧೇಯಕಗಳು
ನಗರದ ನಿರ್ವಹಣಾ ವ್ಯವಸ್ಥೆ ಸುಧಾರಿಸಿ, ದೊಡ್ಡ ನಗರಾಡಳಿತಕ್ಕೆ ಹೆಚ್ಚುವರಿ ಅಧಿಕಾರ ಮತ್ತು ಜವಾಬ್ದಾರಿ ನೀಡುವ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ತಿದ್ದುಪಡಿ ವಿಧೇಯಕ ಮಂಡಿಸಲಾಯಿತು. ಈ ವಿಧೇಯಕವು ಆರೋಗ್ಯ, ಸಾರಿಗೆ, ವಿದ್ಯುತ್ ಮುಂತಾದ ಸಾರ್ವಜನಿಕ ಜೀವನಕ್ಕೆ ಅವಿಭಾಜ್ಯವಾದ ಸೇವೆಗಳ ನಿರಂತರ ಕಾರ್ಯನಿರ್ವಹಣೆಯನ್ನು ಖಚಿತಪಡಿಸಲು ಕಾನೂನು ಬದಲಾವಣೆ ಮಾಡಲಾಗಿದೆ.
ನಗರ ಪ್ರದೇಶಗಳ ಸ್ಥಳೀಯ ಆಡಳಿತ ಬಲಪಡಿಸಿ, ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕಗೊಳಿಸಲು ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ಅದೇ ರೀತಿ ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ, ಕರ್ನಾಟಕ ಬಂದರುಗಳ (ಸರಕು ಇಳಿಕೆ ಮತ್ತು ಹಡಗು ಶುಲ್ಕ) ತಿದ್ದುಪಡಿ ವಿಧೇಯಕ, ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ, ವಿನಿಯಮ ಹಾಗೂ ನಿಯಂತ್ರಣ) ತಿದ್ದುಪಡಿ ವಿಧೇಯಕ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಲಾಯಿತು.
ವಿಧಾನಸಭೆಗೆ ಆರು ಬಾರಿ ಸದಸ್ಯನಾಗಿ ಆಯ್ಕೆಯಾಗಿರುವ ನನಗೆ ಸದನದ ಕೊನೆಯ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಮುಂದಿನ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಬೇಕು ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸವನಗೌಡ ಯತ್ನಾಳ್ ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಶಾಸಕ ಎಸ್.ಟಿ. ಸೋಮಶೇಖರ್, ಶಾಸಕ ಶಿವರಾಮ ಹೆಬ್ಬಾರ್ ಹಾಗೂ ನಾನು ಹಿರಿಯ ಶಾಸಕರಾಗಿದ್ದೇವೆ. ಸಭೆಯಲ್ಲಿ ಇರುವುದು 224 ಸ್ಥಾನಗಳ ಮಾತ್ರ. ಆದರೆ 225 ಮತ್ತು 226ನೇ ಆಸನದ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಇದು ಬೋಗಸ್ ಎಂದಾಗುತ್ತದೆ. ನಮಗೆ ನಾನ್ ಅಡ್ಜಸ್ಟ್ಮೆಂಟ್ ಪ್ರತಿಪಕ್ಷ ಎಂದು ಆಸನವನ್ನು ಮುಂದಿನ ಸಾಲಿನಲ್ಲಿ ಕೊಡಿ ಎಂದು ತಿಳಿಸಿದರು.
ಬಿಜೆಪಿ ವಿರೋಧದ ನಡುವೆಯೂ 2025ನೇ ಸಾಲಿನ ʼಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿʼ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿದೆ.
ವಿಧೇಯಕದ ಕುರಿತು ಬಿಜೆಪಿ ಶಾಸಕ ಸುರೇಶ್ ಕುಮಾರ್ ಸುದೀರ್ಘವಾಗಿ ಚರ್ಚೆ ಮಾಡಿದರು. ವಿಧೇಯಕದಲ್ಲಿ ರಿಯಲ್ ಎಸ್ಟೇಟ್ ಪರವಾದ ಅಂಶಗಳಿವೆ ಎಂಬ ಆರೋಪ ಮಾಡಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಗಿಗ್ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ʼಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕಕ್ಕೆʼ ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧೇಯಕದ ಕುರಿತು, ಪ್ರಮುಖ ಅಂಶಗಳು, ಮಂಡಳಿ ರಚನೆ, ಸೆಸ್ ಸಂಗ್ರಹ, ಕಾರ್ಮಿಕರಿಗೆ ಸಿಗುವ ಸಾಮಾಜಿಕ ಸೇವಾ ಸೌಲಭ್ಯಗಳು ಮತ್ತಿತರ ಅಂಶಗಳನ್ನು ಸದನದ ಗಮನಕ್ಕೆ ತಂದರು.
ಈ ವಿಧೇಯಕವನ್ನು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಸ್ವಾಗತಿಸಿದರು.
ಬೆಂಗಳೂರು ನಗರ ವಿಶ್ವ ವಿದ್ಯಾಲಯಕ್ಕೆ ಮಾಜಿ ಪ್ರಧಾನಿ, ದಿವಂಗತ ಡಾ. ಮನಮೋಹನ್ ಸಿಂಗ್ ಅವರ ಹೆಸರಿಡುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಪ್ರಸ್ತಾಪ ಮಾಡಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ನಮಗೇನು ತಕರಾರು ಇಲ್ಲ. ಹಳೆಯ ವಿಶ್ವ ವಿದ್ಯಾಲಯಕ್ಕೆ ಅವರ ಹೆಸರು ಏಕೆ ಇಡುತ್ತೀರಿ. ಹೊಸ ವಿಶ್ವವಿದ್ಯಾಲಯಕ್ಕೆ ಹೆಸರು ಇಡಿ ಎಂದು ಸಲಹೆ ನೀಡಿದರು.
ವಿಧಾನಸಭೆ ಅಧಿವೇಶನದಲ್ಲಿ 2025 ನೇ ಸಾಲಿನ ಕರ್ನಾಟಕ ಮುನಿಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ ವಿಧೇಯಕ ಮಂಡನೆ ಮಾಡಲು ಸಚಿವ ರಹೀಂ ಖಾನ್ ತಡವರಿಸಿದ್ದಾರೆ. ಈ ವೇಳೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ಬೆಂಬಲಕ್ಕೆ ನಿಂತು ಧೈರ್ಯ ತುಂಬಿದ್ದಾರೆ.
ಸಚಿವ ರಹೀಂ ಖಾನ್ ನಮಗೆ ಬಹಳ ಬೇಕಾದವರು.15 ವರ್ಷಗಳಿಂದ ಗೊತ್ತು, ಶಾಸಕ ಮುನಿರತ್ನ ಅವರು ಮೊದಲ ಬಾರಿ ಸಚಿವರಾಗಿದ್ದಾಗ ಬಿಲ್ ವಿವರಣೆ ನೀಡಲು ಹಿಂದೇಟು ಹಾಕಿದ್ದರು. ನಾನೇ ಅವರಿಗೆ ಸದನದಲ್ಲಿ ಮಾತನಾಡಲು ಧೈರ್ಯ ತುಂಬಿದ್ದೆ. ನಾನು ವಿಪಕ್ಷ ನಾಯಕನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನೀವು ಸಭಾಧ್ಯಕ್ಷನಾಗುತ್ತೇನೆ ಎಂದು ನಿಮಗನಿಸಿತ್ತೆ ಎಂದು ಪ್ರಶ್ನಿಸಿದರು.
ತಪ್ಪು ಸಹಜ, ಆದರೆ ಕಲಿಯಬೇಕು. ಅವರು ಬಿಲ್ ಬಗ್ಗೆ ವಿವರಣೆ ನೀಡಲಿ, ಅಭ್ಯಾಸ ಮಾಡಲಿ ಎಂದು ಆರ್.ಅಶೋಕ್ ಧೈರ್ಯ ತುಂಬಿದರು.
ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕದ ಬಗ್ಗೆ ಚರ್ಚೆ ನಡೆಸುತ್ತಿದ್ದ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಮುನಿರತ್ನ ರಾಜಕೀಯ ವಾಕ್ಸಮರ ನಡೆಸಿದ್ದಾರೆ.
ಚರ್ಚೆ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್, ಮಿಸ್ಟರ್ ಅವರ ಹೆಸರೇನು ಎಂದು ಶಾಸಕ ಮುನಿರತ್ನರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ. ಈ ವೇಳೆ ನನ್ನ ಹೆಸರು ನಿಮಗೆ ಗೊತ್ತಿಲ್ಲವೇ ಎಂದು ಮುನಿರತ್ನ ಕೇಳಿದರು. ಪಾಪ ನೀವು ತನಿಖೆಗೆ ಹೋಗುತ್ತಿದ್ದಿರಲ್ಲ, ಇನ್ನೂ ನಿಮ್ಮತನಿಖೆ ಬಾಕಿ ಇದೆ. ಆದ್ದರಿಂದ ನಿಮ್ಮ ಹೆಸರು ಮರೆತಿದ್ದೇನೆ ಎಂದು ಡಿಕೆಶಿ ತಿಳಿಸಿದರು.
ಈ ವೇಳೆ ಡಿಸಿಎಂ ಡಿಕೆಶಿಗೆ ತಿರುಗೇಟು ಕೊಟ್ಟ ಮುನಿರತ್ನ, ಒಂದೇ ಬಾರಿ ಸಿಬಿಐಗೆ ಕೊಡಿ. ನನ್ನ ಹಾಗೂ ನಿಮ್ಮ ಪ್ರಕರಣಗಳನ್ನೂ ಸಿಬಿಐಗೆ ಕೊಡಿ. ಇಲ್ಲವೇ ಅದಕ್ಕಿಂತ ದೊಡ್ಡದಿದ್ದರೆ ಅದಕ್ಕೆ ಕೊಡಿ ಎಂದು ಮುನಿರತ್ನ ಹೇಳಿದರು.
ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಪರ ಬಿಜೆಪಿ ಉಚ್ಚಾಟಿತ ಸದಸ್ಯ ಎಸ್. ಟಿ. ಸೋಮಶೇಖರ್ ಮಾತನಾಡಿದ್ದು, ಸದನದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಶ್ಲಾಘನೆ ಸಲ್ಲಿಸಿದ್ದಾರೆ.
ಒಬ್ಬ ಕಾರ್ಪೊರೇಷನ್ ಕಮೀಷನರ್ 28 ವಿಧಾನಸಭೆ ಕ್ಷೇತ್ರಗಳನ್ನು ನಿರ್ವಹಣೆ ಮಾಡಲು ಆಗುವುದಿಲ್ಲ. ಹಾಗಾಗಿ ಐದು ಪಾಲಿಕೆಗಳನ್ನು ಮಾಡಿರುವುದು ಐತಿಹಾಸಿಕ ನಿರ್ಣಯ. ಬಿಬಿಎಂಪಿಯನ್ನು ಐದು ಪಾಲಿಕೆ ಮಾಡಿದ ಡಿಕೆಶಿ ಅವರಿಗೆ ಅಭಿನಂದನೆಗಳು. ಅವರ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದರು.
ಗ್ರೇಟರ್ ಬೆಂಗಳೂರು ಬೇಡ ಎಂದು ನಾವು ತಿಳಿಸಿದ್ದೆವು. ಆದರೂ ಡಿಸಿಎಂ ಡಿ.ಕೆ, ಶಿವಕುಮಾರ್ ಜಾರಿ ಮಾಡಿದ್ದಾರೆ. ಬೆಂಗಳೂರು ಐದು ಮಹಾನಗರ ಪಾಲಿಕೆಗಳನ್ನು ಹೊಂದಲಿದೆ ಎಂದು ಶಾಸಕ ಮುನಿರಾಜು ತಿಳಿಸಿದರು.
ಒಂದು ವಿಧಾನಸಭಾ ಕ್ಷೇತ್ರವನ್ನು ಎರಡು ಪಾಲಿಕೆಗೆ ಸೇರಸಿದ್ದಾರೆ. ದಾಸರಹಳ್ಳಿ, ಪದ್ಮನಾಭನಗರ, ಬೊಮ್ಮನಹಳ್ಳಿ ಕ್ಷೇತ್ರವನ್ನು ಎರಡು ಪಾಲಿಕೆಗಳಿಗೆ ಸೇರಿಸಲಾಗಿದೆ. ದಯವಿಟ್ಟು ಈ ರೀತಿಯಲ್ಲಿ ವಿಧಾನಸಭಾ ಕ್ಷೇತ್ರ ಒಡೆಯಬೇಡಿ ಎಂದು ಮನವಿ ಮಾಡಿದರು.
ಸಂವಿಧಾನದ 73 ,74ನೇ ವಿಧಿಯಡಿ ಸ್ಥಳೀಯ ಸಂಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ. ವಿಧಿ 243 ರಂತೆ ಸ್ಥಳೀಯ ಸಂಸ್ಥೆಗಳಿಗೆ ಹಸ್ತಕ್ಷೇಪ ಇರಬಾರದು. ಆದರೆ ಸರ್ಕಾರ ಇಲ್ಲಿಹಸ್ತಕ್ಷೇಪ ಮಾಡಿದೆ ಎಂದು ಶಾಸಕ ಅಶ್ವಥ್ ನಾರಾಯಣ್ ತಿಳಿಸಿದರು.
ಸ್ಥಳೀಯ ಸಂಸ್ಥೆ ಆಡಳಿತವನ್ನು ಸರ್ಕಾರವೇ ತೆಗೆದುಕೊಂಡಿದೆ. ಕಾರ್ಪೋರೇಟರ್ ಕೆಲಸಗಳನ್ನು ಸರ್ಕಾರವೇ ಮಾಡುತ್ತಿದೆ. ಇಲ್ಲಿ ಪೂರ್ಣ ಸ್ವರಾಜ್ಯದ ಕಲ್ಪನೆ ಮಾಯವಾಗಿದೆ. ಇದು ಸ್ವಾಯತ್ತ ಸಂಸ್ಥೆಗಳ ಅವನತಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಅನುಮೋದನೆಗೆ ಅವಕಅಶ ನೀಡುವುದಿಲ್ಲ. ಸರ್ಕಾರದ ಮುಖ್ಯಸ್ಥರೂ ಸಿಎಂ,ಕಾರ್ಪೋರೇಷನ್ ಮುಖ್ಯಸ್ಥರು ಸಿಎಂ ಆಗಿದ್ದಾರೆ. ಇಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸ್ವಾತಂತ್ರ್ಯವೇ ಇಲ್ಲದಾಗಿದ್ದು ಎಲ್ಲವನ್ನೂ ಸರ್ಕಾರವೇ ಕಿತ್ತುಕೊಳ್ಳಲಿದೆ. ಪೂರ್ಣ ಅಧಿಕಾರವನ್ನು ಸ್ತಳೀಯ ಸಂಸ್ಥೆಗಳಿಗೆ ನೀಡಬೇಕು ಎಂದರು.
ಮಂಗಳವಾರ ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕದ ಕುರಿತು ಬೆಂಗಳೂರು ನಗರ ಶಾಸಕರು ಚರ್ಚೆ ನಡೆಸುತ್ತಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ವಿವರಣೆ ನೀಡಿದ್ದಾರೆ.
ಈ ವೇಳೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಮಧ್ಯಪ್ರವೇಶಿಸಿ, ಸಿಟಿ ಕಾರ್ಪೋರೇಷನ್‌ಗಳನ್ನು ಹೇಗೆ ಸೇರಿಸಿದ್ದಿರಾ ಎಂದು ಸರಿಯಾಗಿ ವಿವರಿಸಿ ಎಂದು ತಿಳಿಸಿದರು.
ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದು, ಸದಸ್ಯತ್ವ ವಿಚಾರದಲ್ಲಿ ಯಾವುದೇ ಗೊಂದಲ ಬೇಡ, ಈ ಕಾರಣಕ್ಕೆ ನಾವೇ ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡಿದ್ದೇವೆ. ಅದನ್ನು ತಿದ್ದುಪಡಿ ಮಾಡಿದ್ದೇವೆ ಎಂದು ತಿಳಿಸಿದರು.