ದಿನಗೂಲಿ ನೌಕರರ ಸೇವೆ ಕಾಯಂಗೆ ಅರ್ಹ: ಹೈಕೋರ್ಟ್ ಮಹತ್ವದ ಆದೇಶ

ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ಮಂಜೂರಾಗದ ಹುದ್ದೆಗಳಿಗೆ 10 ವರ್ಷಗಳಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದವರು ಕಾಯಂ ಸೇವೆಗೆ ಅರ್ಹರು ಎಂದು ಹೈಕೋರ್ಟ್ ಆದೇಶಿಸಿದೆ.

Update: 2024-08-22 13:20 GMT
ಕರ್ನಾಟಕ ಹೈಕೋರ್ಟ್‌

'ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ಮಂಜೂರಾಗದ ಹುದ್ದೆಗಳಿಗೆ 10 ವರ್ಷಗಳಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದವರು ಕಾಯಂ ಸೇವೆಗೆ ಅರ್ಹರು' ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಡಕೋಳ ಗ್ರಾಮದ ಶಾಂತಲಕ್ಷ್ಮಿ ಕೋಂ ಗುಂಡೂರಾವ್ ಸೇರಿದಂತೆ 30ಕ್ಕೂ ಹೆಚ್ಚು ನೌಕರರು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, 'ಅರ್ಜಿದಾರರನ್ನು ಮೂರು ತಿಂಗಳ ಒಳಗಾಗಿ ಸೂಕ್ತ ಹುದ್ದೆಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಬೇಕು' ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

'ಅರ್ಜಿದಾರರು ಕಾಯಂ ಸೇವೆಗೆ ಅರ್ಹರಲ್ಲ' ಎಂದು 2010ರ ಜೂನ್ 14 ಮತ್ತು 2012ರ ಜೂನ್ 15ರಂದು ನೀಡಿದ್ದ ಸಂಬಂಧಿಸಿದ ಇಲಾಖೆಗಳ ಹಿಂಬರಹಗಳನ್ನು ರದ್ದುಗೊಳಿಸಿರುವ ನ್ಯಾಯಪೀಠ, 'ಅರ್ಜಿದಾರರು 2002/2005ರ ನಿಯಮಗಳಂತೆ ಕಾಯಂ ಸೇವೆಗೆ ಅರ್ಹರು' ಎಂದು ಘೋಷಿಸಿದೆ.

'ಒಂದೇ ಬಗೆಯ ಉದ್ಯೋಗ ಮಾಡುವವರನ್ನು ಭಿನ್ನ ರೀತಿಯಲ್ಲಿ ನೋಡಲಾಗದು. ಅರ್ಜಿದಾರರು 10 ವರ್ಷಗಳಿಂದ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಹಂಗಾಮಿ ನೌಕರರಾಗಿಯೇ ಮುಂದುವರಿಸಲಾಗದು. ಅವರಿಗೆ ಅರ್ಹ ವೇತನ ಮತ್ತು ಭತ್ಯೆಗಳನ್ನು ನೀಡಬೇಕಾಗುತ್ತದೆ' ಎಂದು ಆದೇಶದಲ್ಲಿ ವಿವರಿಸಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲ ವಿ.ಲಕ್ಷ್ಮಿನಾರಾಯಣ ವಾದ ಮಂಡಿಸಿದ್ದರು ಹಾಗೂ ಬಿ.ಎಲ್.ವಿಕ್ರಮ್ ಬಾಲಾಜಿ ವಕಾಲತ್ತು ವಹಿಸಿದ್ದರು.

Tags:    

Similar News