ನಿರ್ದೇಶಕನ ಮೇಲೆ ಕೊಲೆ ಯತ್ನ: ಧಾರಾವಾಹಿ ನಟ ತಾಂಡವ್ ರಾಮ್ ಅರೆಸ್ಟ್
ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್ ಅವರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಡಿಹಕ್ಕಿ ಖ್ಯಾತಿಯ ಕಿರುತೆರೆ ನಟ ತಾಂಡವ್ ರಾಮ್ ಅವರನ್ನು ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ.;
ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಡಿಹಕ್ಕಿ ಖ್ಯಾತಿಯ ಕಿರುತೆರೆ ನಟ ತಾಂಡವ್ ರಾಮ್ ಅವರನ್ನು ಬೆಂಗಳೂರಿನ ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಚಂದ್ರಲೇಔಟ್‌ನಲ್ಲಿ ಈ ಘಟನೆ ಸಂಭವಿಸಿದ್ದು, ತಾಂಡವ್ ರಾಮ್ ಲೈಸೆನ್ಸ್ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ತಾಂಡವ್ ರಾಮ್ ಒಂದು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಸಿನಿಮಾ ಅರ್ಧಕ್ಕೆ ನಿಲ್ಲಿಸಿದ ಕಾರಣಕ್ಕೆ ಗಲಾಟೆ ಮಾಡಿ ಕೊಲೆ ಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸ್ ಕಮೀಷನರ್ ಬಿ. ದಯಾನಂದ್ ಈ ಪ್ರಕರಣ ಕುರಿತು ಮಾತನಾಡಿದ್ದಾರೆ. ಇದು ನಿನ್ನೆ ಆಗಿರುವ ಘಟನೆ. ಲೈಸೆನ್ಸ್ ಗನ್ ಸೀಜ್ ಮಾಡಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಉದ್ದೇಶ ಪೂರ್ವಕವಾಗಿ ಮಾಡಿರುವುದು ಗೊತ್ತಾಗಿದೆ. ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ನಿರ್ದೇಶಕ ಭರತ್ ಜೊತೆಗೂಡಿ ತಾಂಡವ್ ರಾಮ್ ಸಿನಿಮಾ ಮಾಡುತ್ತಿದ್ದರು. ಚಿತ್ರಕ್ಕೆ ನಿರ್ಮಾಪಕರು ಸಿಗದ ಹಿನ್ನೆಲೆಯಲ್ಲಿ ನಿರ್ದೇಶಕ ಭರತ್‌ಗೆ ತಾಂಡವ್ ರಾಮ್ ತಾವೇ ಹಣ ನೀಡಿದ್ದರು. ಹಂತ ಹಂತವಾಗಿ ತಾಂಡವ್ ರಾಮ್ ಆರು ಲಕ್ಷ ಹಣ ನೀಡಿದ್ದರು ಎನ್ನಲಾಗಿದೆ. ನಂತರ ಚಿತ್ರಕ್ಕೆ ಹಾಸನ ಮೂಲದ ಕುಮಾರಸ್ವಾಮಿ ಬಂಡವಾಳ ಹಾಕಿದ್ದರು ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಎರಡು ವರ್ಷ ಕಳೆದರೂ ತ್ವರಿತಗತಿಯಲ್ಲಿ ನಿರ್ದೇಶಕ ಚಿತ್ರ ಪೂರ್ಣಗೊಳಿಸಲಿಲ್ಲ ಎನ್ನಲಾಗಿದೆ.
ಬಳಿಕ ತಾವು ಹಾಕಿದ್ದ ಆರು ಲಕ್ಷ ಹಣ ಮರಳಿಸುವಂತೆ ತಾಂಡವ್ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಇದೇ 18 ರಂದು ನಿರ್ಮಾಪಕರ ಕಚೇರಿಯಲ್ಲಿ ಇದರ ಬಗ್ಗೆ ಮಾತುಕತೆ ಕೂಡ ಆಗಿತ್ತು. ಸಂಜೆ 6.30 ರಲ್ಲಿ ಈ ಬಗ್ಗೆ ಸಭೆ ಸೇರಿ ಚರ್ಚೆ ಕೂಡ ಆಗಿತ್ತು. ಈ ವೇಳೆ ಭರತ್ ಮೇಲೆ ತಾಂಡವ್ ರಾಮ್ ಗುಂಡು ಹಾರಿಸಿದ್ದಾರೆ. ನಿರ್ದೇಶಕ ಭರತ್ ಗುಂಡಿನಿಂದ ತಪ್ಪಿಸಿಕೊಂಡಿದ್ದಾರೆ. ಭರತ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಘಟನೆ ಸಂಬಂಧ ಬಿಎನ್ಎಸ್ 109, ಕಲಂ 3,27, 30 ಇಂಡಿಯನ್ ಆರ್ಮ್ಸ್ ಅಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ದೇಶಕ ಭರತ್ 2021ರಲ್ಲಿ ರವಿಚಂದ್ರನ್ ಅವರ ಹಿರಿ ಮಗ ಮನೋರಂಜನ್ ನಾಯಕನಾಗಿ ನಟಿಸಿದ್ದ ಮುಗಿಲ್‌ಪೇಟೆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ಜೋಡಿಹಕ್ಕಿ, ಭೂಮಿಗೆ ಬಂದ ಭಗವಂತ ಸೇರಿದಂತೆ ಹಲವು ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲಿ ತಾಂಡವ್ ರಾಮ್ ನಟಿಸಿದ್ದಾರೆ.