Muniratna Case | ಶಾಸಕ ಮುನಿರತ್ನ ವಿರುದ್ಧ ಎರಡನೇ ಎಫ್‌ಐಆರ್‌ ಎಸ್‌ಐಟಿಗೆ ವರ್ಗಾವಣೆ

ಜಾತಿ ನಿಂದನೆ ಪ್ರಕರಣ ಎದುರಿಸುತ್ತಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕೊಲೆ ಯತ್ನ, ಸುಪಾರಿ ಕುರಿತ ಆರೋಪದಡಿ ಶನಿವಾರ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ಪ್ರಕರಣವನ್ನು ಸಿಐಡಿಯ ಎಸ್ಐಟಿಗೆ ವರ್ಗಾವಣೆ ಮಾಡಲಾಗಿದೆ.;

Update: 2024-12-02 08:16 GMT
Muniratna Case | ಶಾಸಕ ಮುನಿರತ್ನ ವಿರುದ್ಧ ಎರಡನೇ ಎಫ್‌ಐಆರ್‌ ಎಸ್‌ಐಟಿಗೆ ವರ್ಗಾವಣೆ
ಬಿಜೆಪಿ ಶಾಸಕ ಮುನಿರತ್ನ

ಜಾತಿ ನಿಂದನೆ ಪ್ರಕರಣ ಎದುರಿಸುತ್ತಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕೊಲೆ ಯತ್ನ, ಸುಪಾರಿ ಕುರಿತ ಆರೋಪದಡಿ ಶನಿವಾರ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ಪ್ರಕರಣವನ್ನು ಸಿಐಡಿಯ ಎಸ್ಐಟಿಗೆ ವರ್ಗಾವಣೆಯಾಗಿದೆ.

ನನ್ನ ಕುಟುಂಬದವರನ್ನು ಹನಿಟ್ರಾಪ್ ಮಾಡಲು ಯತ್ನಿಸಿದರಲ್ಲದೆ ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ, ಕೊಲೆ ಯತ್ನ, ಸುಪಾರಿ ಕುರಿತು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮಂಜುಳಾ ಪತಿ ಲಗ್ಗೆರೆ ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮುನಿರತ್ನ ಹಾಗೂ ಇತರರ ವಿರುದ್ಧ ಹೊಸ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಲಗ್ಗೆರೆ ನಾರಾಯಣಸ್ವಾಮಿ ಕಳೆದ ವರ್ಷ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಮುನಿರತ್ನ ಅವರ ಮೇಲಿನ ಎಲ್ಲಾ ಪ್ರಕರಣಗಳ ತನಿಖೆಗಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿದ್ದು, ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಅಲ್ಲಿಗೆ ವರ್ಗಾವಣೆ ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರರಾದ ವೇಲು ನಾಯ್ಕರ್ ಸೆ.13 ರಂದು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ಜಾತಿನಿಂದನೆ ದೂರು ದಾಖಲಿಸಿದ್ದರು. ಸೆ. 14ರಂದು ಕೋಲಾರದ ಸಮೀಪ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದರು. ಎರಡೂ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿತ್ತು. ದೂರುದಾರ ವೇಲು ನಾಯ್ಕರ್ ನೀಡಿದ ಮುನಿರತ್ನ ಆಡಿಯೊ ತುಣುಕನ್ನು ಸಿಐಡಿ ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ಕಳುಹಿಸಿದ್ದರು. ಇದರ ಜೊತೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ಧ್ವನಿಯನ್ನೂ ಒದಗಿಸಿದ್ದರು. ಎರಡೂ ಧ್ವನಿಗಳು ಮುನಿರತ್ನ ಅವರದ್ದೇ ಎಂದು ಎಫ್‌ಎಸ್ಎಲ್ ವರದಿಯಲ್ಲಿ ಸಾಬೀತಾಗಿದೆ. 

ದೋಷಾರೋಪ ಪಟ್ಟಿ ಸಲ್ಲಿಕೆ

ಬಿಜೆಪಿ ಶಾಸಕರಿಗೆ ಸಂಬಂಧಿಸಿದ ಸರಣಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆಯಲ್ಲಿ ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು 590 ಪುಟಗಳ ದೋಷಾರೋಪ ಪಟ್ಟಿಯನ್ನು ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಜಾತಿ ನಿಂದನೆ ಪ್ರಕರಣದ ಆಡಿಯೋ ಕುರಿತ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಆಡಿಯೋದಲ್ಲಿರುವ ಧ್ವನಿ ಶಾಸಕ ಮುನಿರತ್ನ ಅವರದ್ದೇ ಎಂಬುದು ದೃಢಪಟ್ಟಿದೆ. ಆ ಮೂಲಕ ಮುನಿರತ್ನ ವಿರುದ್ಧದ ಪ್ರಕರಣದಲ್ಲಿ ಕಾನೂನು ಕುಣಿಕೆ ಇನ್ನಷ್ಟು ಬಿಗಿಯಾಗಿದೆ.

Tags:    

Similar News