ಧರ್ಮಸ್ಥಳ ಪ್ರಕರಣ | ಒಂದು ಕಡೆ ಅಸ್ಥಿಪಂಜರ, ಇನ್ನೊಂದು ಕಡೆ ಮೂಳೆಗಳು ಪತ್ತೆ, ಇತರ ಕಡೆ ಮಣ್ಣಿನ ಮಾದರಿಗಳ ವಿಶ್ಲೇಷಣೆ: ಸರ್ಕಾರದ ಸ್ಪಷ್ಟ ಉತ್ತರ
ಅಸ್ಥಿಪಂಜರ, ಮೂಳೆಗಳು ಸಿಕ್ಕಿರುವ ಜಾಗದಲ್ಲಿ ವಿಶ್ಲೇಷಣೆ ಆಗಬೇಕು. ಇಲ್ಲಿಯವರೆಗೆ ಆಗಿರುವುದು ಬರೀ ಶೋಧ ಕಾರ್ಯಾಚರಣೆ. ಇನ್ನು ಮುಂದೆ ಇರುವುದೇ ನಿಜವಾದ ತನಿಖೆ. ಸ್ಯಾಂಪಲ್, ಡಿಎನ್ಎ, ಮಣ್ಣಿನ ವಿಶ್ಲೇಷಣೆ ಆಧಾರದ ಮೇಲೆ ತನಿಖೆ ಆರಂಭವಾಗಲಿದೆ ಎಂದು ಪರಮೇಶ್ವರ್ ಹೇಳಿದರು.;
ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಕುರಿತು ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಧ್ಯಪ್ರವೇಶಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣ ಕುರಿತಂತೆ ಸ್ಪಷ್ಟನೆ ನೀಡಿದ ಅವರು, ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವುದೇ ಸರ್ಕಾರದ ಉದ್ದೇಶ ಎಂದು ಹೇಳಿದರು.
ಶವ ಹೂತಿಟ್ಟಿರುವ ಕುರಿತು ದೂರು ಸಾಕ್ಷಿದಾರ ನೀಡಿರುವ ಹೇಳಿಕೆ ಆಧರಿಸಿ ಎಸ್‌ಐಟಿ ಹಲವು ಜಾಗಗಳಲ್ಲಿ ಶೋಧ ನಡೆಸಿದೆ. ಒಂದು ಜಾಗದಲ್ಲಿ ಅಸ್ಥಿಪಂಜರ ಸಿಕ್ಕಿದೆ. ಮತ್ತೊಂದು ಜಾಗದಲ್ಲಿ ಮೂಳೆಗಳು ಸಿಕ್ಕಿವೆ. ಈ ಎಲ್ಲಾ ನಮೂನೆಗಳನ್ನು ಎಫ್ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಮತ್ತೊಂದು ಕೆಂಪು ಮಣ್ಣು (Laterite soil - ಎಲುಬು ಕರಗುವ ಆಸಿಡಿಕ್ ಅಂಶವಿರುವ ಮಣ್ಣು) ಜಾಗದಲ್ಲಿ ಮಣ್ಣಿನ ಮಾದರಿ ಸಂಗ್ರಹಿಸಿ ಎಫ್ಎಸ್ಎಲ್‌ಗೆ ಕಳುಹಿಸಲಾಗಿದೆ. ಅದರ ವಿಶ್ಲೇಷಣೆ ಆಗಬೇಕು. ಅಸ್ಥಿಪಂಜರ, ಮೂಳೆಗಳು ಸಿಕ್ಕಿರುವ ಜಾಗದಲ್ಲಿ ವಿಶ್ಲೇಷಣೆ ಆಗಬೇಕು. ಇಲ್ಲಿಯವರೆಗೆ ಆಗಿರುವುದು ಬರೀ ಶೋಧ ಕಾರ್ಯಾಚರಣೆ. ಇನ್ನು ಮುಂದೆ ಇರುವುದೇ ನಿಜವಾದ ತನಿಖೆ. ಸ್ಯಾಂಪಲ್, ಡಿಎನ್ಎ, ಮಣ್ಣಿನ ವಿಶ್ಲೇಷಣೆ ಆಧಾರದ ಮೇಲೆ ತನಿಖೆ ಆರಂಭವಾಗಲಿದೆ ಎಂದು ಹೇಳಿದರು.
ಅನಾಮಿಕ ವ್ಯಕ್ತಿಯು ದೂರು ನೀಡುವಾಗ ತಲೆಬುರುಡೆ ತಂದು ಕೊಟ್ಟಿದ್ದ. ಅದನ್ನೂ ಎಫ್ಎಸ್ಎಲ್‌ಗೆ ಕಳುಹಿಸಿಕೊಡಲಾಗಿದೆ. ಅದರ ವರದಿ ಇನ್ನೂ ಬಂದಿಲ್ಲ. ಈ ಮಧ್ಯೆ, ದಿನನಿತ್ಯ ಅನಾಮಿಕನನ್ನು ವಕೀಲರ ಜೊತೆ ಕರೆದೋಯ್ದು, ಕರೆತರುವ ಕೆಲವಾಗುತ್ತಿದೆ. ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆಗಳು ಪ್ರಸ್ತಾಪವಾಗಿವೆ. ಸಾಕ್ಷಿದಾರ ವ್ಯಕ್ತಿಗೆ ವಿಟ್ನೆಟ್ ಪ್ರೊಟೆಕ್ಷನ್ ಆಕ್ಟ್(ಸಾಕ್ಷ್ಯ ರಕ್ಷಣೆ ಅಧಿನಿಯಮ) ಅಡಿ ಭದ್ರತೆ ಒದಗಿಸಲಾಗಿದೆ. ಮ್ಯಾಜಿಸ್ಟ್ರೇಟ್ ಆದೇಶ ನೀಡಿರುವುದರಿಂದ ಪೊಲೀಸರು ಸುಪರ್ದಿಗೆ ಪಡೆಯಲು ಆಗಿಲ್ಲ ಎಂದು ವಿವರಿಸಿದರು.
ಪ್ರಧಾನ ಜಿಲ್ಲಾ ನ್ಯಾಯಾಧೀಶ ನೇತೃತ್ವದ ಸಮಿತಿಯು ಅನಾಮಿಕ ಹಾಗೂ ಆತನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಆದೇಶಿಸಿದೆ. ಆತನ ದೂರವಾಣಿ ಕರೆ, ಇಮೇಲ್ ಸಂದೇಶ ಮೇಲ್ವಿಚಾರಣೆ, ಸೂಕ್ತ ಭದ್ರತಾ ಕ್ರಮಗಳು ಹಾಗೂ ಗುರುತು ಬಹಿರಂಗಪಡಿಸದಂತೆಯೂ ಸೂಚಿಸಿದೆ. ಆತನಿಗೆ ʼವಿʼ ಎಂದು ಹೆಸರು ನೀಡಲಾಗಿದೆ. ಸಾಕ್ಷಿದಾರನನ್ನು ಕರೆತರಲು ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗಿದೆ. ಒಟ್ಟು ಅರವತ್ತು ದಿನಗಳವರೆಗೆ ಈ ಸೌಲಭ್ಯ ನೀಡುವಂತೆ ಸಮಿತಿ ಆದೇಶದಲ್ಲಿ ತಿಳಿಸಿದೆ. ಹಾಗಾಗಿ ಅವರನ್ನು ಬಂಧಿಸುವುದಕ್ಕಾಗಲಿ, ನಮ್ಮ ದುಪರ್ದಿಯಲ್ಲಿ ಇಟ್ಟುಕೊಳ್ಳುವುದಕ್ಕಾಗಲಿ ಅವಕಾಶವಿಲ್ಲ. ಈಗ ತನಿಖೆ ಗಂಭೀರವಾಗಿ ನಡೆಯುತ್ತಿದೆ ಎಂದು ಪರಮೇಶ್ವರ್ ಹೇಳಿದರು.
ನ್ಯಾಯಸಮ್ಮತ ತನಿಖೆಯಷ್ಟೇ ಉದ್ದೇಶ
ಪ್ರಕರಣದಲ್ಲಿ ಯಾರನ್ನೂ ಕೂಡ ರಕ್ಷಿಸುವ ಪ್ರಮೇಯ ಇಲ್ಲ. ನ್ಯಾಯಸಮ್ಮತವಾಗಿ ತನಿಖೆ ನಡೆಸಲಾಗುತ್ತಿದೆ. ಆ ವ್ಯಕ್ತಿ ತೋರಿಸಿರುವ ಕಡೆಗಳಲ್ಲಿ ಶೋಧ ನಡೆಸಲಾಗುತ್ತಿದೆ. ಹಾಗಂತ ಆ ವ್ಯಕ್ತಿ ಇಡೀ ಧರ್ಮಸ್ಥಳ ಪೂರ್ತಿ ತೋರಿಸಿದರೆ ಅಗೆಯಲು ಆಗುವುದಿಲ್ಲ. ತನಿಖೆ ಮುಂದುವರಿಸಬೇಕಾ, ಬೇಡವಾ ಎಂಬ ತೀರ್ಮಾನವನ್ನು ಸರ್ಕಾರ ಮಾಡುವುದಿಲ್ಲ. ಎಸ್ಐಟಿ ಮಾತ್ರವೇ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ತನಿಖೆಯ ವರದಿ ಬರುವವರೆಗೂ ಕಾಯಬೇಕು. ಇಂದು ಬಹಳಷ್ಟು ವಿಚಾರಗಳು ವದಂತಿಗಳ ಮೇಲೆ ನಡೆಯುತ್ತಿವೆ. ಮಾಧ್ಯಮದವರಿಗೆ ವಿನಂತಿಸುವುದೇನೆಂದರೆ ಇದು ಅತ್ಯಂತ ಸೂಕ್ಷ್ಮ ವಿಚಾರ, ಕೋಟ್ಯಂತರ ಭಕ್ತರ ಮನಸ್ಸಿನಲ್ಲಿ ಆತಂಕ ಮೂಡಿದೆ. ಬಹಳ ಎಚ್ಚರಿಕೆಯಿಂದ ನಾವು ತೀರ್ಮಾನ ಮಾಡಬೇಕಾಗಿದೆ ಎಂದರು.
ಕೆಲ ವಿರೋಧ ಪಕ್ಷಗಳು ಕೂಡ ಎಸ್ಐಟಿ ರಚನೆ ಸ್ವಾಗತಿಸಿವೆ. ಈಗ ವಿರೋಧ ಪಕ್ಷದ ನಾಯಕರು ಏಕಾಏಕಿ 15ದಿನಗಳಿಂದ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವುದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದರು.
ತನಿಖೆ ಸರಿಯಾಗಿ ಆಗಬೇಕಾ, ಆಗಬಾರದಾ?, ಒಂದು ವೇಳೆ ಏನೂ ನಡೆದಿಲ್ಲ ಎಂದರೆ ಧರ್ಮಸ್ಥಳದ ಗೌರವ ಹೆಚ್ಚುವುದಿಲ್ಲವೇ, ನಂಬಿಕೆ ಹೆಚ್ಚುವುದಿಲ್ಲವೇ ಎಂದ ಪರಮೇಶ್ವರ್ ಅವರು, ಒಂದು ವೇಳೆ ಆಗಿದೆ ಎಂದಾದರೆ ಸಂತ್ರಸ್ಥರ ಕುಟುಂಬಕ್ಕೆ ನ್ಯಾಯ ಸಿಗುತ್ತದೆಯಲ್ಲವೇ, ಅದಕ್ಕೆ ರಾಜಕೀಯ ಬೆರೆಸುವುದನ್ನು ಬಿಡಿ ಎಂದು ಕೇಳಿಕೊಂಡರು.
ಪ್ರಕರಣದಲ್ಲಿ ನ್ಯಾಯ ಸಿಗುವುದಾದರೆ ಸ್ವಾಗತಿಸೋಣ, ಸತ್ಯ ಆಚೆ ಬರಲಿ, ನೀವಾಗಲಿ, ನಾವಾಗಲಿ ಒಪ್ಪಿಕೊಳ್ಳಬೇಕಾಗುತ್ತದೆ. ಜನರು ಒಪ್ಪಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿದರು.
ತನಿಖೆಗೆ ಕಾಲಮಿತಿ ವಿಧಿಸಲ್ಲ
ಪ್ರಕರಣದ ಕುರಿತು ಶೀಘ್ರವಾಗಿ ತನಿಖೆ ನಡೆಸಬೇಕು ಎಂದು ಎಸ್ಐಟಿಗೆ ಹೇಳಿದ್ದೇವೆ. ಆದರೆ, ಕಾಲಮಿತಿ ವಿಧಿಸುವುದಿಲ್ಲ. ಆದ್ದರಿಂದ, ಎಲ್ಲರೂ ಕೂಡ ತನಿಖೆಗೆ ಸಹಕರಿಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿದರು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲ. ನಾವು ಏನನ್ನೂ ಮುಚ್ಚಿಡುವುದಿಲ್ಲ. ಅದರ ಅಗತ್ಯವೂ ಸರ್ಕಾರಕ್ಕಿಲ್ಲ. ನ್ಯಾಯಸಮ್ಮತ, ಪಕ್ಷಾತೀತವಾಗಿ ತನಿಖೆ ಆಗಬೇಕೆಂಬುದಷ್ಟೇ ನಮ್ಮ ಉದ್ದೇಶ. ಇಷ್ಟು ವಿಚಾರವನ್ನು ಸದನದ ಮುಂದೆ ಇಡಲಾಗಿದೆ. ಇದನ್ನು ಹೊರತುಪಡಿಸಿ ಬೇರೆ ವಿಚಾರದ ಬಗ್ಗೆ ಮಾತನಾಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಇದಕ್ಕೂ ಮುನ್ನ ಘಟನೆಯ ಬಗ್ಗೆ ವಿವರವಾಗಿ ಹೇಳಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಧರ್ಮಸ್ಥಳಕ್ಕೆ ಕೋಟ್ಯಂತರ ಜನ ಭಕ್ತರಿದ್ದಾರೆ. ಅದಕ್ಕೆ ಅದರದ್ದೇ ಆದ ಸ್ಥಾನವಿದೆ. ಅದರ ಚಟುವಟಿಕೆಗಳು ಕೂಡ ಜನಮಾನಸದಲ್ಲಿವೆ. ಧರ್ಮಸ್ಥಳಕ್ಕೆ ಸುಮಾರು 800ವರ್ಷದ ಇತಿಹಾಸವಿದೆ ಎಂದು ಹೇಳುತ್ತಾರೆ. ಇಂತಹ ಕ್ಷೇತ್ರದಲ್ಲಿ ಅಸಹಜ ಸಾವುಗಳ ಕುರಿತು 3-7-2025 ರಂದು ಒಬ್ಬ ಅನಾಮಿಕ ವ್ಯಕ್ತಿ ಧರ್ಮಸ್ಥಳ ಠಾಣೆಗೆ ಹೋಗಿ ದೂರು ನೀಡುತ್ತಾನೆ. ನನಗೆ ನಿರಂತರ ಪ್ರಾಣ ಬೆದರಿಕೆವೊಡ್ಡಿ ಧರ್ಮಸ್ಥಳ ಹಾಗೂ ಸುತ್ತಮುತ್ತ ಕೊಲೆಯಾದ, ಅತ್ಯಾಚಾರಕ್ಕೆ ಒಳಗಾದ ಸಾಕಷ್ಟು ಮೃತದೇಹಗಳನ್ನು ಬಲವಂತವಾಗಿ ಹೂತು ಹಾಕಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಜು.4ರಂದು ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಆ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ,164 ಅಡಿ ಹೇಳಿಕೆ ದಾಖಲಿಲಿಸಿದರು. ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಮಾಡಿದೆ. ಈ ಮಧ್ಯೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮಾಧ್ಯಮಗಳ ವರದಿ ಪ್ರಸ್ತಾಪಿಸಿ ವಿಶೇಷ ತನಿಖಾ ತಂಡ ರಚನೆಗೆ ಮನವಿ ಮಾಡಿದ್ದರು. ಅದರಂತೆ ಎಸ್‌ಐಟಿ ರಚಿಸಲಾಯಿತು ಎಂದು ವಿವರಿಸಿದರು.
ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20ವರ್ಷಗಳಲ್ಲಿ ಅಸ್ವಾಭಾವಿಕ ಸಾವು, ಮಹಿಳೆಯರ ಅತ್ಯಾಚಾರ, ಕೊಲೆ ಪ್ರಕರಣಗಳ ಬಗ್ಗೆ ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಜು.19 ರಂದು ಎಸ್ಐಟಿ ರಚನೆ ಮಾಡಲಾಗಿದೆ ಎಂದು ಪರಮೇಶ್ವರ್ ಹೇಳಿದರು.