BIFFes 2025 | ಲಂಕೇಶರ ʻಬಿರುಕುʼ ಎಂಬ ಕಥೆ ʻಪಲ್ಲವಿ ʼ ಚಲನಚಿತ್ರವಾದ ಕಥನ...
ಎಷ್ಟೋ ಕಷ್ಟಗಳನ್ನು ದಾಟಿ ʻಬಿರುಕುʼ ಹಾಗೂ ಹೀಗೂ ʻಪಲ್ಲವಿʼಯ ರೂಪ ಪಡೆದು, ದೂರದರ್ಶನದ ಕತ್ತರಿಗೆ ಸಿಕ್ಕು ಮೈಕೈಎಲ್ಲ ಗಾಯ ಮಾಡಿಕೊಂಡು, ಈಗ ಮತ್ತೆ NFDC-NFAI ನೆರವಿನಿಂದ ಮತ್ತೆ ಪೂರ್ಣರೂಪ ಪಡೆದುಕೊಂಡು Biffes ನಲ್ಲಿ ಪ್ರೇಕ್ಷಕರನ್ನು ತಟ್ಟಲಿದೆ.;
“ಸುಮ್ಮನೆ ಕೂತು ಯೋಚಿಸಿದೆ. ಇಡೀ ದೇಶ ಒಂದರ್ಥದಲ್ಲಿ, ನಾನು ವೈಯಕ್ತಿಕವಾಗಿ ಇನ್ನೊಂದು ಅರ್ಥದಲ್ಲಿ ಹೊಸ ಬಗೆಯ ಬಿಡುಗಡೆಗಾಗಿ ಕಾತರಿಸತೊಡಗಿದಂತೆ ಅನ್ನಿಸಿತು…” ತಮ್ಮ ಮೊದಲ ಚಿತ್ರ ʼಪಲ್ಲವಿʼ ನಿರ್ಮಾಣ-ನಿರ್ದೇಶನಕ್ಕೆ ತೊಡಗಿದಾಗ ಪಿ. ಲಂಕೇಶ್ ಅವರ ಮನಸ್ಥಿತಿ ಹೇಗಿತ್ತು ಎಂಬುದನ್ನು ತಮ್ಮ ʻಹುಳಿ ಮಾವಿನ ಮರʼ- ಒಂದು ಆತ್ಮಕಥನದಲ್ಲಿ ವಿವರಿಸಿದ ರೀತಿ ಇದು.
ಸುಮಾರು ಐವತ್ತು ವರ್ಷಗಳ ಹಿಂದೆ ಸಿದ್ಧವಾಗಿ, ಮೂರು ರಾಷ್ಟ್ರಪ್ರಶಸ್ತಿ ಗಳಿಸಿದರೂ, ಕನ್ನಡದ ಜನಮಾನಸದಿಂದ ಮರೆಯಾಗಿದ್ದ ʼಪಲ್ಲವಿʼ ಚಿತ್ರ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFes 2025ದ ಹದಿನಾರನೇ ಆವೃತ್ತಿಯಲ್ಲಿ ಪ್ರದರ್ಶನಗೊಳ್ಳಲಿದೆ.
ಆಗ 16 ಎಂಎಂ ಫಿಲಂನಲ್ಲಿ ಚಿತ್ರೀಕರಿಸಿ, ನಂತರ 35 ಎಂಎಂಗೆ ವಿಸ್ತರಿಸಿದ ಈ ಚಿತ್ರ ನಮ್ಮೆಲ್ಲರ ಊಹೆಗೂ ಮಿರಿ ಸವೆದು ಚಿಪ್ಪಾಗಿತ್ತು. “35 ಎಂಎಂ ರೀಲ್ ನಲ್ಲಿ ಶೂಟಿಂಗ್ ಮಾಡಿದರೆ ಖರ್ಚು ಜಾಸ್ತಿಯಾಗುತ್ತದೆ ಎಂಬ ಕಾರಣಕ್ಕೆ 16 ಎಂಎಂನಲ್ಲಿ ಶೂಟ್ ಮಾಡಿ ಅಮೇಲೆ ಅದನ್ನು ಬ್ಲೋಅಪ್ ಮಾಡಿ 35ಎಂಎಂ ಮಾಡುವ ಐಡಿಯಾ ಹಾಕಿಕೊಂಡಿದ್ದೆವು” ಎಂದು ʻಪಲ್ಲವಿʼ ಚಿತ್ರದ ನಾಯಕರಾದ ಟಿ ಎನ್ ಸೀತಾರಾಮ್ ನೆನಪಿಸಿಕೊಳ್ಳುತ್ತಾರೆ.
ಇಂಥ ಹಲವು ಚಿತ್ರಗಳನ್ನು National Film Development Corporation (NFDC) ಮತ್ತು National Film Archives of India (NFAI) ಜೊತೆಯಾಗಿ ಸಂಸ್ಕರಿಸಿ, ನವೀಕರಿಸಿದ ಕೆಲವು ಚಿತ್ರಗಳ ಪೈಕಿ ʻಪಲ್ಲವಿʼ ಕೂಡ ಒಂದು. ಪಿ. ಲಂಕೇಶ್ 1967ರಲ್ಲಿ ಬರೆದ ʻಬಿರುಕುʼ ಕಥೆ 1976ರಲ್ಲಿ ʻಪಲ್ಲವಿʼ ಚಿತ್ರವಾದ ಕಥೆಯೇ ಒಂದು ಸಿನಿಮಾ ಚಿತ್ರಕಥೆಯಾಗುವ ಎಲ್ಲ ಗುಣಗಳನ್ನು ಹೊಂದಿದೆ ಎಂದು ಚಿತ್ರವಾದ ಬಗೆಯನ್ನು ಅರ್ಥಮಾಡಿಕೊಂಡಾಗ ಅನ್ನಿಸದೇ ಇರುವುದಿಲ್ಲ.
ಕನಸಿನ 70ರ ದಶಕ
ಎಪ್ಪತ್ತರ ದಶಕದ ಯುವ ಜನಾಂಗದ ಕನಸು, ಕನಲಿಕೆ, ಕಾಡಿದ ನಿರುದ್ಯೋಗ ಸಮಸ್ಯೆ, ಸಮಾಜವಾದಿ, ಎಡಪಂಥೀಯ ಚಿಂತನೆಗಳಿಂದ ಪಕ್ವವಾದ ಮನಸ್ಸಿನ ಹೋರಾಟದ ತುಡಿತಗಳು, ಸಾಮಾಜಿಕ ಕ್ರಾಂತಿಯ ತಹತಹ…ಇವೆಲ್ಲವುಗಳಿಗೆ ಅಭಿವ್ಯಕ್ತಿ ನೀಡಿದ ಚಿತ್ರ, ಒಂದು ರೀತಿ ಬಂಡಾಯ ಮನಸ್ಸಿನ ಲಂಕೇಶ್ ನಿರ್ದೇಶಿಸಿದ ʼಪಲ್ಲವಿʼ. ಈ ಚಿತ್ರವನ್ನು ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ನಿರ್ಮಿಸಿದರು.
ಅಂದಿನ ಕಾಲದ ಬಹುತೇಕ ಕಲಾತ್ಮಕ ಚಿತ್ರಗಳಿಗೆ ಕ್ಯಾಮೆರಾ ಹಿಡಿದ ಎಸ್. ರಾಮಚಂದ್ರ ಈ ಚಿತ್ರದ ಸಿನಿಮೆಟೋಗ್ರಾಫರ್. ಈ ಚಿತ್ರದಲ್ಲಿ, ಸ್ವತಃ ಲಂಕೇಶ್ ಅವರೇ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಬೇಕಾಗಿ ಬಂದ ಸಂದರ್ಭ, ಅವರ ಗೆಳೆಯರಾದ ಬರಹಗಾರ, ನಾಟಕಕಾರ, ಟಿ.ಎನ್. ಸೀತಾರಾಂ ಮತ್ತು ಚಿತ್ರರಂಗದ ಆದಿ ಅಂತ್ಯಗಳ ಯಾವುದೇ ಅರಿವಿರದ ವಿಮಲ ನಾಯ್ಡು ಎಂಬ ಹುಡುಗಿ….ಇವರೆಲ್ಲರ ಒಟ್ಟು ಪ್ರಯತ್ನದ ಫಲ ʻʼಪಲ್ಲವಿ”. “ಈ ಚಿತ್ರದ ಚಿತ್ರೀಕರಣ ನಡೆದಾಗ ನಾನಿನ್ನು ಚಿಕ್ಕವಳು. ನಾನು ವಿಮಲ ನಾಯ್ಡು ಜೊತೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದೆ” ಎಂದು ತಂದೆಯನ್ನೇ ಮೀರಿಸುವಂಥ ನಿರ್ದೇಶಕಿಯಾಗಿರುವ ಕವಿತಾ ಲಂಕೇಶ್ ನೆನಪಿಸಿಕೊಳ್ಳುತ್ತಾರೆ.
“ನೀನಿರುವುದು ನಿಜವಾದರೂ, ನಿನ್ನ ಸಂಗ ಸಿಹಿಯಾದರೂ, ಏಕಾಂಗಿ ನಾನು”, ಈ ಹಾಡು ಲಂಕೇಶ್ ತಮ್ಮ ʼಅನುರೂಪʼ ಚಿತ್ರಕ್ಕಾಗಿ ಬಂದರೂ, ನಿಜಕ್ಕೂ ಹೊಂದಿಕೆಯಾಗುವಂಥದ್ದು, ʼಪಲ್ಲವಿʼಗೆ ಎಂದು ಇಂದಿಗೂ ಅನ್ನಿಸುತ್ತಿದೆ. ʼಪಲ್ಲವಿʼಗೆ ಸಂಗೀತ ನೀಡಿದವರು ಅಂದಿನ ಕಾಲಕ್ಕೆ ಸರೋದ್ ಮಾಂತ್ರಿಕ ಎಂದು ಕರೆಸಿಕೊಂಡ ಇಂದು ನಮ್ಮೊಂದಿಗಿಲ್ಲದ ರಾಜೀವ್ ತಾರಾನಾಥ್. ಈ ಚಿತ್ರಕ್ಕೆ 1977 ರ ಎರಡನೇಯ ಅತ್ಯುತ್ತಮ ಕಥಾಚಿತ್ರ, ಕನ್ನಡದ ಅತ್ಯುತ್ತಮ ಕಥಾ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶನಕ್ಕಾಗಿ ಮೂರು ರಾಷ್ಟ್ರಪ್ರಶಸ್ತಿ ಬಂದದ್ದು, ಈಗ ಇತಿಹಾಸ.
ಪಿ.ಲಂಕೇಶ್
ರಾಜಕೀಯ ಸೂಕ್ಷ್ಮ ಪರಿಸ್ಥಿತಿ; ಕಮ್ಯುನಿಸ್ಟ್ ರ ಚಿಂತನೆ
ಈ ʻಪಲ್ಲವಿʼ ಚಿತ್ರವಾದ ಸಂದರ್ಭ ಕೂಡ ರಾಜಕೀಯವಾಗಿ ಸೂಕ್ಷ್ಮ ಸನ್ನಿವೇಶವಿದ್ದ ಕಾಲದಲ್ಲಿ. ಒಂದು ಕಾಲಕ್ಕೆ ಎಡಪಂಥೀಯರಾಗಿ, ಸಮಾಜವಾದಿಯೂ ಆಗಿ, ನಂತರ ಹಲವು ರಾಜಕೀಯ ರೂಪಾಂತರಗಳ ನಂತರ ಕಾಂಗ್ರೆಸ್ ಪಕ್ಷ ಸೇರಿ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ಗೆಳೆಯ ಕೊಂಡಜ್ಜಿ ಮೋಹನ್ ಒಂದು ಕಾಲಕ್ಕೆ ಸಿನಿಮಾ ನಿರ್ಮಾಪಕರೂ ಆಗಿದ್ದರೆಂಬುದು ಬಹು ಮಂದಿಗೆ ಗೊತ್ತಿರಲಿಕ್ಕಿಲ್ಲ. ಇವರು ಲಂಕೇಶ್ ಅವರ ʻಎಲ್ಲಿಂದಲೋ ಬಂದವರುʼ ಚಿತ್ರವನ್ನು ನಿರ್ಮಿಸಿದವರು.
ಅವರು ʼಪಲ್ಲವಿʼ ಚಿತ್ರವಾದ ಕಾಲದ ಬಗ್ಗೆ, ʻದ ಫೆಡರಲ್-ಕರ್ನಾಟಕʼದೊಂದಿಗೆ ಮಾತನಾಡುತ್ತಾ ನೆನಪಿಸಿಕೊಂಡದ್ದು..ಹೀಗೆ; “ನಾನು ಲಂಕೇಶ್ ಸಂಪರ್ಕಕ್ಕೆ ಬಂದದ್ದು ಒಂದು ವಿಕ್ಷಿಪ್ತ ಸಂದರ್ಭದಲ್ಲಿ. ಅದೊಂದು ರೀತಿಯ ಕಾಕತಾಳೀಯ ಘಟನೆ. ಸಾಂಸ್ಕೃತಿಕವಾಗಿ ದ್ರಾವಿಡ ಚಳವಳಿ ಗಟ್ಟಿಯಾಗಿ ಅಧಿಕಾರ ಹಿಡಿದಿತ್ತು.
ದ್ರಾವಿಡ ಸಾಂಸ್ಕೃತಿಕ ರಾಜಕಾರಣ
ಸಿನಿಮಾ ದ್ರಾವಿಡ ಪಕ್ಷದ ರಾಜಕಾರಣ ಪ್ರವೇಶಕ್ಕೆ ಹೆದ್ದಾರಿಯಾಗಿತ್ತು. ಚಿತ್ರರಂಗದಿಂದ ಬಂದ ಎಂಜಿಆರ್, ಕರುಣಾನಿಧಿ, ಜಯಲಲಿತ ಮುಂತಾದವರು ಮುಂದೆ ರಾಜಕಾರಣ, ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಕೇರಳದ ಕಮ್ಯುನಿಸ್ಟ್ ರು ಈ ದಾರಿ ಹಿಡಿಯಲು ಪ್ರಯತ್ನವೊಂದನ್ನು ನಡೆಸಿದ್ದರು.
ಜಯಪಾಲ್ ಮೆನನ್ ಎಂಬ ಕಮ್ಯುನಿಸ್ಟ್ ವಕೀಲ ಚಿತ್ರಗಳ ನಿರ್ಮಾಣ, ಉತ್ತಮ ಚಿತ್ರಗಳನ್ನು ಪಡೆದುಕೊಳ್ಳುವ ಜವಾಬ್ದಾರಿ ಹೊತ್ತು ಕೊಂಡಿದ್ದರು. ನಾನಾಗ ಎಸ್ ಎಫ್ ಐ ನಾಯಕತ್ವ ಸ್ಥಾನದಲ್ಲಿ ಇದ್ದ ಕಾರಣ. ಆಗ ಹುಟ್ಟಿದ ಚಲನಚಿತ್ರ ನಿರ್ಮಾಣ ಸಂಸ್ಥೆ ʻನವಶಕ್ತಿ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಗೆ ಸಹಜವಾಗಿಯೇ ಈ ಸಂಸ್ಥೆಯ ನಿರ್ವಾಹಕ ನಿರ್ದೇಶಕನಾದೆ. ಹಾಗಾಗಿ ಆಗ ಲಂಕೇಶ್ ಅವರ ʻಪಲ್ಲವಿʼ ಚಿತ್ರವನ್ನು ʻನವಶಕ್ತಿ ಫಿಲಂಸ್ ಪ್ರೈವೇಟ್ ಲಿಮಿಟೆಡ್ʼ ಖರೀದಿಸಿತು.
ಇಪ್ಪತ್ತೈದು ಸಾವಿರಕ್ಕೆ ಮಾರಾಟವಾದ ಸಿನಿಮಾ
ಲಂಕೇಶ್ ಅವರು ತಮ್ಮ ಸಿನಿಮಾ ಕುರಿತು ಬರೆದ ಬರಹಗಳ ಸಂಕಲನ ʻಈ ನರಕ…ಈ ಪುಲಕʼ ಪುಸ್ತಕದಲ್ಲಿ ʻಪಲ್ಲವಿʼ ನಿರ್ಮಾಣವಾದ ಕಾಲದ ಬಗ್ಗೆ ದಾಖಲಿಸುತ್ತಾ, ಹೇಳಿರುವುದು ಹೀಗೆ; “ಕೇರಳದ ಕಮ್ಯುನಿಸ್ಟ್ ಮಿತ್ರರು ಕೆಲವರು ಒಂದು ಚಿತ್ರ ಸಂಸ್ಥೆ ಮಾಡಿಕೊಂಡು ಹೊಸ ಅಲೆಯ ಚಿತ್ರಗಳನ್ನು ಕೊಂಡುಕೊಳ್ಳುತ್ತಿದ್ದರು. ನನ್ನ ʻಪಲ್ಲವಿʼಗಾಗಿ ಕೇಳಿದರು. ಹಣದ ತೊಂದರೆಯಲ್ಲಿದ್ದ ನಾನು ಅದನ್ನು ಸುಮಾರು ರೂ. 25000 ಕ್ಕೆ ಮಾರಿದೆ. ಅಷ್ಟರಲ್ಲಿ ಆ ಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ಬಂದಿದ್ದವು. ಬಹುಮಾನದ ರೂಪದಲ್ಲಿಯೇ ಒಂದೂ ಕಾಲು ಲಕ್ಷ ಬಂದಿತ್ತು. ಚಿತ್ರ ಮುಗಿಸಲು ಮಾಡಿದ ಸಾಲವನ್ನೆಲ್ಲ ತೀರಿಸಿದೆ. ಆದ್ದರಿಂದ ಈ ಚಿತ್ರ ಮುಂದಕ್ಕೆ ಉಪಯೋಗಕ್ಕೆ ಬರಬಹುದೆಂಬ ನಿರೀಕ್ಷೆ ಇರಲಿಲ್ಲ. ಭವಿಷ್ಟದ ಬಗ್ಗೆ ಅಷ್ಟೆಲ್ಲ ಚಿಂತಿಸುವ ಮನುಷ್ಯ ಕೂಡ ನಾನಲ್ಲ.
ನಿಮ್ಮ ಹಣ. ನೀವೇ ಪಡೆದುಕೊಳ್ಳಿ
ಬರೀ ಹಣದ ವಿಚಾರವನ್ನೇ ಮುಂದುವರಿಸಿದರೆ, ಆಮೇಲೆ ದೂರದರ್ಶನ ಜನಪ್ರಿಯವಾಯಿತು. ನನ್ನ ಚಿತ್ರವನ್ನು ಕೊಂಡುಕೊಂಡಿದ್ದ ಕೇರಳದ ಮಿತ್ರರು ನಮ್ಮೆಲ್ಲರ ಚಿತ್ರಗಳಿಂದ ಹಣವನ್ನೇನೂ ಮಾಡಿರಲಿಲ್ಲ. ಅದಕ್ಕೆ ಬದಲು ಅವರು ಪಡೆದಿದ್ದ ಎಲ್ಲ ಚಿತ್ರಗಳಿಂದ ಏಳೆಂಟು ಲಕ್ಷ ರೂಪಾಯಿ ಸಾಲ ಮಾಡಿ ಅದರ ಬಡ್ಡಿಯ ನರಕದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ನನ್ನ ಸ್ನೇಹಿತರು ʻಪಲ್ಲವಿʼಯನ್ನು ಸ್ವಲ್ಪ ಹೆಚ್ಚಿನ ಹಣ ಕೊಟ್ಟು ಹಿಂದಕ್ಕೆ ಪಡೆದು ಟಿವಿಗೆ ಕೊಟ್ಟು ಹಣ ಮಾಡಬಹುದೆಂದು ಸೂಚಿಸಿದರು.
ಅವರಿಗೆ ಹಣ ಹಿಂದಿರುಗಿಸಿ ಚಿತ್ರ ಪಡೆದು ಟಿವಿಯಿಂದ ದುಡ್ಡು ಮಾಡುವುದು ಹೆಚ್ಚಲ್ಲ. ಆದರೆ ಕೆಲವು ತೊಂದರೆಗಳಿದ್ದವು. ಸರ್ಕಾರದ ಮುಂದೆ ಬೇಡಿಕೊಳ್ಳಬೇಕಿತ್ತು. ಅದು ನನ್ನಿಂದ ಆಗದ ಕೆಲಸ. ಅಲ್ಲದೆ ಕೇರಳದ ಮಿತ್ರರಿಗೆ ಹಣದ ಅವಶ್ಯಕತೆ ಇತ್ತು. ನಾನು ಅವರಿಗೆ ಹೇಳಿದೆ. ʼನನಗೆ ಕಷ್ಟವಿದ್ದಾಗ ನನ್ನ ಚಿತ್ರ ಕೊಂಡಿದ್ದೀರಿ; ಆ ಬಗ್ಗೆ ಈಗ ನಾನು ಯೋಚಿಸಲು ಕೂಡ ಆಗುವುದಿಲ್ಲ. ಈ ಚಿತ್ರದಿಂದ ನಿಮಗೆ ಎರಡು ಲಕ್ಷವೇ ಬರಲಿ. ಹತ್ತು ಲಕ್ಷವೇ ಬರಲಿ ಅದು ನಿಮ್ಮ ಹಣ. ನೀವೇ ಪಡೆದುಕೊಳ್ಳಿ ಎಂದು ಹೇಳಿ ಕಳುಹಿಸಿದೆ..ʼ
ಏನೇ ಆದರೂ, ʻಪಲ್ಲವಿʼ ಚಿತ್ರದ ನಿರ್ಮಾಪಕಿಯಾಗಿದ್ದವರು ಲಂಕೇಶ್ ಅವರ ಹೆಂಡತಿ ಇಂದಿರಾ ಲಂಕೇಶ್. ಈ ಬಾರಿ Biffes ನಲ್ಲಿ ಈ ಚಿತ್ರ ಪ್ರದರ್ಶಿಸಬೇಕೆಂದರೆ NFAI ಗೆ ಚಿತ್ರದ ಮೇಲೆ ಹಕ್ಕು ಹೊಂದಿರುವವರ ನಿರಪೇಕ್ಷಣ ಪತ್ರ ಬೇಕಿತ್ತು. “ಆ ಚಿತ್ರದ ಹಕ್ಕು ನನ್ನ ಬಳಿಯೇ ಇದೆ. ಅದನ್ನು ಕೊಡುವುದಾಗಿ ನಾನು ಹೇಳಿದ್ದೇನೆ” ಎಂದು ಕೊಂಡಜ್ಜಿ ಮೋಹನ್ ಹೇಳಿದರು.
ಸೀರೆ ಉಟ್ಟರೆ ಹೆಂಗಸಿನ ಭ್ರಮೆ ಹುಟ್ಟಿಸುತ್ತಿದ್ದ ವಿಮಲಾ
ʻಪಲ್ಲವಿʼ ಚಿತ್ರೀಕರಣದ ಸಂದರ್ಭವನ್ನು ಲಂಕೇಶ್ ನೆನಪಿಸಿಕೊಳ್ಳುವುದು ಹೀಗೆ; “ನನಗೆ ಇನ್ನೂ ನೆನಪಿದೆ. ಭಾರತಕ್ಕೆ ತುರ್ತಪರಿಸ್ಥಿತಿ ಬಂದ ದಿನವೇ ಅದರ ಚಿತ್ರೀಕರಣ ಶುರುವಾಯಿತು. ಅಷ್ಟರಲ್ಲಿ ಚಿತ್ರಕಥೆ ತಯಾರಿಸಿದ್ದೆ. ಹಣ ಸ್ವಲ್ಪ ಇತ್ತು. ಈ ಚಿತ್ರದ ಬಜೆಟ್ ಶೂಟಿಂಗ್ ಮುಂತಾದವುಗಳನ್ನು ಕೇಳಿದರೆ ವಿದೇಶಿಯರು ನಗುತ್ತಾರೆ. ನನ್ನ ಸಾಹಿತ್ಯ ಪ್ರೇಮಿಗಳಾದ ಹುಡುಗರು, ನನ್ನ ವಿದ್ಯಾರ್ಥಿಗಳಾಗಿದ್ದವು ನನ್ನೊಂದಿಗಿದ್ದರು. ಸುಮಾರು ಒಂದು ತಿಂಗಳ ಕಾಲ ಹುಡುಕಿ ನಮ್ಮ ಚಿತ್ರಕ್ಕೆ ನಾಯಕಿಯನ್ನು ಆರಿಸಿದ್ದೆವು. ಈಕೆ ಕಣ್ಣಿಗೆ ಕಾಣಿಸದಷ್ಟು ಸಣ್ಣ ಇದ್ದ ಹುಡುಗಿ, ವಿಮಲಾ.
ಸೀರೆ ಉಟ್ಟರೆ ಹೆಂಗಸಿನ ಭ್ರಮೆ ಹುಟ್ಟಿಸುತ್ತಿದ್ದ, ಬೇರೆ ಡ್ರೆಸ್ ನಲ್ಲಿದ್ದರೆ ಹೈಸ್ಕೂಲಿನ ಹೆಣ್ಣು ಮಗಳಂತೆ ಕಾಣುತ್ತಿದ್ದ ಹೆಣ್ಣು ಮಗಳು. ಮಲ್ಲೇಶ್ವರದ ರಂಗನಾಥಪ್ಪರ ಚಿಕ್ಕ ಮನೆಯಲ್ಲಿದ್ದ ಈಕೆ ಜಾಣೆ. ಕಂಡದ್ದು, ಕೇಳಿದ್ದು ಮರೆಯದಂಥ ಜ್ಞಾಪಕ ಈಕೆಗೆ. ನಾನು ಚಿತ್ರರಂಗಕ್ಕೆ ಹೊಸಬ. ಅನೇಕ ಚಿತ್ರಗಳನ್ನು ನೋಡಿದ್ದರೂ, ಚಿತ್ರಗಳ ಮೂಲ ಮಂತ್ರ ಗೊತ್ತಿದ್ದರೂ ಒಂದು ವಿಚಿತ್ರವಾಗುತ್ತದೆ. ವಾಸ್ತವ ಜಗತ್ತು, ಕಲೆಯ ಜಗತ್ತು ಸೇರುವಾಗ ಕೆಲವು ಒತ್ತಡ ಹೇರುತ್ತದೆ.
ಚಿತ್ರದ ಪೂರ್ಣ ಅಂತಿಮ ಪರಿಣಾಮ ಗೊತ್ತಿರುವುದು ನಿರ್ದೇಶಕನಿಗೆ ಮಾತ್ರ. ಒಂದು ಚಿತ್ರ ಶೂಟ್ ಮಾಡುವುದಕ್ಕೆ ಸಾಮಾನ್ಯವಾಗಿ ನಲವತ್ತು ರೋಲ್ ಫಿಲಂ ಬಳಸುತ್ತಾರೆ; ನಾವು ಇಪ್ಪತ್ತಾರು ರೋಲ್ ಬಳಸಿದ್ದೆವು. ಇಂಥ ಚಿತ್ರ ಶೂಟ್ ಮಾಡಲು ಒಂದು ತಿಂಗಳಾದರೂ ಬೇಕು. ನಾವು ಇಪ್ಪತ್ತು ದಿನದಲ್ಲಿ ಮುಗಿಸಿದ್ದೆವು. …ಇದೆಲ್ಲ ಎಂದೋ ನಡೆದಂತೆ, ಕನಸಿನಂತೆ ಈಗ ನನಗೆ ಕಾಣಿಸುತ್ತಿದೆ.ಈ ಚಿತ್ರ ದೋಷಯುಕ್ತವಾಗಿರಬಹುದಾದರೂ, ಭಿನ್ನವಾಗಿರಬಹುದು ಎಂಬ ಆಶೆ ಮಾತ್ರ ನನ್ನದು. ..” ಎಂದಿರುವ ಲಂಕೇಶ್ “ಈ ಚಿತ್ರವನ್ನು ಹೊಗಳುವವರ ಪಕ್ಷದಲ್ಲಿ ಆರ್. ಕೆ. ನಾರಾಯಣ್, ಬ್ರಿಟೀಷ್ ಚಿತ್ರ ವಿಮರ್ಶಕರು, ಕನ್ನಡದ ಬುದ್ದಿಜೀವಿಗಳಲ್ಲನೇಕರು ಇದ್ದಾರೆ.
ಟೀಕಿಸುವವರಿಗೆ ಈ ಚಿತ್ರ ಬೇರೆ ಚಿತ್ರಗಳಂತಲ್ಲದೆ, ಹರಿದು ಹಂಚಿಹೋದಂತೆ ಕಂಡಿದೆ. ಇಲ್ಲಿ ಕಥೆ ನಿರೂಪಿಸುವ ಕ್ರಮ, ದೃಶ್ಯ ಜೋಡಣೆ, ಪಾತ್ರ ಪೋಷಣೆ ಮುಂತಾದವುಗಳೆಲ್ಲವೂ ಸಂಪ್ರದಾಯಕ್ಕೆ ತಕ್ಕಂತೆ ಇರದೆ ವಿಚಿತ್ರವಾಗಿದೆ”..ಎಂದು ಒಪ್ಪಿಕೊಂಡಿದ್ದಾರೆ.
ಇಬ್ರಾಹಿ ಬಂಧನ, ಚಿತ್ರೀಕರಣ ನಿಲುಗಡೆ
“ ಈ ಚಿತ್ರದ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಇಂದಿನ ಖ್ಯಾತ ರಾಜಕಾರಣಿ ಸಿ.ಎಂ. ಇಬ್ರಾಹಿಂ. ಅವರು ಲಂಕೇಶ್ ಮೇಷ್ಟ್ರ ಅಭಿಮಾನಿ. ಹಾಗಾಗಿ ಲಂಕೇಶ್ ಅವರನ್ನೇ ಆ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ವಿರೇಂದ್ರ ಪಾಟೀಲರ ಶಿಶ್ಯರಾಗಿದ್ದ ಇಬ್ರಾಹಿಂ ಆ ಹೊತ್ತಿಗೆ ಸಂಸ್ಥಾ ಕಾಂಗ್ರೆಸ್ ನಿಂದ ಚಾಮರಾಜನಗರದ ಉಪಚುನಾವಣೆಯಲ್ಲಿ ನಿಂತು ಅಲ್ಪ ಮತಗಳ ಅಂತರದಿಂದ ಸೋಲಪ್ಪಿದ್ದರು.
ಲಂಕೇಶರ ಮಾತಿಗೆ ಒಪ್ಪಿಕೊಂಡು ಚಿತ್ರದಲ್ಲಿ ನಟಿಸಲು ಬಂದಿದ್ದರು. ಬೆಂಗಳೂರಿನ ಅಂದಿನ ವಾರ್ತಾ ಇಲಾಖೆ ಪಕ್ಕದಲ್ಲೊಂದು ಹೊಟೆಲ್ ಇತ್ತು. ಅದರ ಹೆಸರು ಪರಾಗ್. ಅಲ್ಲಿ ಶೂಟಿಂಗ್. ಎರಡು ದಿನ ಶೂಟಿಂಗ್ ನಿರಾತಂಕವಾಗಿ ನಡೆಯಿತು. ಮೂರನೇ ದಿನ ದೇಶದಲ್ಲಿ ತುರ್ತು ಸ್ಥಿತಿ ಘೋಷಣೆಯಾಗಿತ್ತು. ಯಾರೆಲ್ಲ ಆಡಳಿತವನ್ನು ವಿರೋಧ ಮಾಡುತ್ತಿದ್ದರೋ ಅವರೆಲ್ಲರನ್ನೂ ಮೀಸಾ ಕಾಯ್ದೆಯಡಿ ಬಂಧಿಸಲು ಸೂಚಿಸಲಾಗಿತ್ತು. ರಾಮಕೃಷ್ಣ ಹೆಗಡೆ, ದೇವೇಗೌಡರು ಎಲ್ಲರನ್ನೂ ಅರೆಸ್ಟ್ ಮಾಡಲಾಯಿತು.
ಎಲ್ಲಕ್ಕಿಂತ ಮುಖ್ಯವಾದ ವಿಚಾರವೆಂದರೆ ನಮ್ಮ ಚಿತ್ರದ ಮುಖ್ಯ ಪಾತ್ರದಾರಿ ಸಿ.ಎಂ. ಇಬ್ರಾಹಿಂ ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ದರು. ಸುಮಾರು ಒಂದೂವರೆ ವರ್ಷ ಕಾಲ ಅವರು ಜೈಲಿನಲ್ಲೇ ಇದ್ದರು…” ಎಂದು ʻಪಲ್ಲವಿʼ ಚಿತ್ರದ ಒಂದರ್ಥದ ಪ್ರತಿನಾಯಕನ ಪಾತ್ರ ಮಾಡಿದ ಇಂದಿನ ನಟ, ನಿರ್ದೇಶಕ, ಸಾಹಿತಿ. ಟಿ.ಎನ್. ಸೀತಾರಾಮ್. ಈ ನೆನಪನ್ನು ಅವರು ತಮ್ಮ ʻನೆನಪಿನ ಪುಟಗಳುʼ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆʼ (ಈ ಪುಸ್ತಕ ಕುರಿತು ದ ಫೆಡರಲ್ ಕರ್ನಾಟಕ ಲೇಖನವೊಂದನ್ನು ಪ್ರಕಟಿಸಿದೆ).
ಪಿ.ಲಂಕೇಶ್
ಲಂಕೇಶ್ ಮತ್ತೆ ನಟರಾದದ್ದು..
“ಇಬ್ರಾಹಿಂ ಜೈಲಿಗೆ ಹೋಗುತ್ತಿದ್ದಂತೆ ಲಂಕೇಶ್ ಚಿಂತಾಕ್ರಾಂತರಾಗಿ ʻಆ ಪಾತ್ರಕ್ಕೆ ಈಗ ಏನ್ರೀ ಮಾಡೋದುʼ ಎಂದು ಕೇಳಿದರು. ನಾನು ತಕ್ಷಣ ʼಆ ಪಾತ್ರವನ್ನು ನೀವೇ ಮಾಡಿಬಿಡಿ ಸಾರ್ʼ ಎಂದೆ. ಅವರು ಅವರದೇ ಶೈಲಿಯಲ್ಲಿ ʼನಾನಾ? ಮಾಡಬಹುದಾ? ಎಂದು ನಗುತ್ತಲೇ ಸುಳ್ಳು ಆತಂಕ ಪ್ರಕಟಿಸಿದರು. ಕೊನೆಗೆ ಅವರೇ ಆ ಪಾತ್ರ ಮಾಡಿದರು”, ಎಂದು ಸೀತಾರಾಮ್ ನೆನಪಿಸಿಕೊಳ್ಳುತ್ತಾರೆ.
ಸೀತಾರಾಮ್ ನಾವೂ ಒಂದು ಸಿನಿಮಾ ಯಾಕೆ ತೆಗೆಯಬಾರದು?
ʻನೆನಪಿನ ಪುಟಗಳುʼ ಪುಸ್ತಕದ ʻಲಂಕೇಶರ ಸಿನಿಮಾ ಪಲ್ಲವಿʼ ಅಧ್ಯಾಯದಲ್ಲಿ ಅವರು ಈ ಚಿತ್ರ ನಿರ್ಮಾಣವನ್ನು ಕುರಿತು ವಿವರವಾಗಿ ನೆನಪಿಸಿಕೊಂಡಿದ್ದಾರೆ. “ಲಂಕೇಶ್ ಬದುಕಿನ ಸೂಕ್ಷ್ಮಗಳನ್ನು ಗ್ರಹಿಸಿ ಬರೆಯುತ್ತಿದ್ದ ಮನುಷ್ಯ. ಅಸಮಾನರಿಗೆ, ಅಸಹಾಯಕರಿಗೆ ನ್ಯಾಯ ಸಿಗಬೇಕು ಎನ್ನುವಂತೆ ಅವರ ಬರಹಗಳು ಇರುತ್ತಿದ್ದವು. ಅವರಿಗೆ ತಾವೂ ಸಿನಿಮಾ ಮಾಡಬೇಕು ಎಂಬ ಆಸೆ ಸಹಜವಾಗಿತ್ತು. ಆಗ ಅವರು ಸೆಂಟ್ರಲ್ ಕಾಲೇಜಿನಲ್ಲಿ ಪ್ರೊಫೇಸರ್ ಆಗಿದ್ದರು.
ಒಂದು ದಿನ ನಾನು ಅವರ ಜೊತೆ ಇದ್ದಾಗ; ʼರೀ ಸೀತಾರಾಮ್, ನಾವೂ ಒಂದು ಸಿನಿಮಾ ಯಾಕೆ ತೆಗೆಯಬಾರದುʼ ಎಂದು ಕೇಳಿದರು. ನಾನು ʼತೆಗೆಯಬಹುದು ಸಾರ್.. ಆದರೆ ದುಡ್ಡು ಹೇಗೆ? ಎಂದೆ. ʼಹೇಗೋ ಮ್ಯಾನೇಜ್ ಮಾಡೋಣʼ ಎಂದರು.
ನೀವೇ ನಿಮ್ಮಂಥವರೇ ನನ್ನ ಸಿನಿಮಾದ ಹೀರೋ ಕಣ್ರೀ
“ಆಗ ನಾನು ಗೌರಿಬಿದನೂರಿನಲ್ಲಿ ವ್ಯವಸಾಯ ನೋಡಿಕೊಳ್ಳುತ್ತಿದ್ದೆ. ಒಂದು ದಿನ ಗೆಳೆಯ ಕೃಷ್ಣಪ್ಪ ನನ್ನ ಹುಡುಕಿಕೊಂಡು ಬಂದು ʻಮೇಷ್ಟ್ರು ಕರಿತಿದ್ದಾರೆ. ಅವರು ಸಿನಿಮಾ ತೆಗೆಯೋ ಯೋಚನೆಯಲ್ಲಿದ್ದಾರೆʼ ಎಂದ. ನಾನೇನೋ ನನ್ನನ್ನು ಅಸಿಸ್ಟೆಂಟ್ ಡೈರೆಕ್ಟರ್ ಆಗಲು ಕರೆಯುತ್ತಿದ್ದಾರೆ ಎಂದು ಯೋಚಿಸಿಕೊಂಡು ಬೆಂಗಳೂರಿಗೆ ಬಂದೆ. ಅವರ ಮನೆಗೆ ಹೋದೆ. ನಾವು ಮಾತನಾಡುತ್ತಾ ಇದ್ದಾಗ. , ʻನಾನೊಂದು ಸಿನಿಮಾ ಮಾಡುತ್ತಿದ್ದೇನೆ ಕಣ್ರೀ, ನೀವೇ ಸಿನಿಮಾದ ಹೀರೋ ಎಂದರು. ನಾನು ಅವಕ್ಕಾದೆ. ʻನಾನಾ, ಏನ್ ಸಾರ್ ನೀವು, ನೋಡೋಕೆ ಹೀಗಿದ್ದೇನೆ, ಸೊಟ್ಟಗಾಲು ಹಾಕುತ್ತೇನೆ. ನಾನೊಬ್ಬ ಹಳ್ಳಿಯವನು, ಎಂಥೆಂಥವರೆಲ್ಲ ಹೀರೋಗಳಿದ್ದಾರೆ. ನಾನ್ಯಾವ ಹೀರೋ ಸಾರ್ʼ ಎಂದು ನಕ್ಕೆ.
ಲಂಕೇಶ್ ಮೇಷ್ಟ್ರು ಗಂಭೀರವಾಗಿ ʻನನ್ನ ಸಿನಿಮಾದಲ್ಲಿ ನಿಮ್ಮಂಥ ಹಳ್ಳಿಯವನೇ ಹೀರೋ, ಸೊಟ್ಟಗಾಲು ಹಾಕ್ತೀರಲ್ಲ ಅವರೇ ನನ್ನ ಹೀರೋಗಳು, ಇಂಗ್ಲಿಷ್ ಬರೊಲ್ವಲ್ಲ ಅವರೇ ನನ್ನ ಹೀರೋಗಳು. ಕೀಳರಿಮೆಯಿಂದ ನರಳ್ತಾರಲ್ಲ ಅವರೇ ನನ್ನ ಹೀರೋಗಳು. ನೀವೇ ನನ್ನ ಹೀರೋʼ ಎಂದರು. ಲಂಕೇಶರ ನಿಲುವು ಅಂಥಾದ್ದಾಗಿತ್ತು”.
ಕ್ಯಾಮರಾ ಟೆಸ್ಟ್
ʼಸಂಸ್ಕಾರʼ ಚಿತ್ರದಲ್ಲಿ ನಾರಣಪ್ಪನ ಪಾತ್ರದಲ್ಲಿ ಅಭಿನಯಿಸಿದ್ದ ಲಂಕೇಶ್ ಗೆ ಪಟ್ಟಾಭಿರಾಮರೆಡ್ಡಿ ಜೊತೆ ಒಳ್ಳೆ ಸಂಬಂಧ ಇತ್ತು. ಆಗ ಅವರು ʻಚಂಡಮಾರುತʼ ಅನ್ನೋ ಸಿನಿಮಾ ನಿರ್ದೇಶಿಸುತ್ತಿದ್ದರು. “ನನ್ನನ್ನು ಪಟ್ಟಾಭಿ ಬಳಿಗೆ ಕರೆದುಕೊಂಡು ಹೋದರು. ʼಸಂಸ್ಕಾರʼ ಚಿತ್ರದ ಕ್ಯಾಮರಾಮನ್ ಆಗಿದ್ದ ಟಾಮ್ ಕೊವೆನ್ ರಿಗೆ ನನ್ನ ತೋರಿಸಿ ʼಇವರಿಗೊಂದು ಕ್ಯಾಮರಾ ಟೆಸ್ಟ್ ಕೊಡಿʼ ಎಂದರು. ಟಾಮ್ ಕೆಲವು ಕಾಲ ನನ್ನನ್ನು ಕ್ಯಾಮರಾದಲ್ಲಿ ನೋಡಿ ಹೆಬ್ಬೆರಳನ್ನು ಮೇಲೆತ್ತಿ, ಗುಡ್ ಗುಡ್ ಎಂದ. ʼ ಇನ್ನೇನು ಬನ್ರಿ, ನೀವೇ ಹೀರೋ ಎಂದು ಲಂಕೇಶರು ನನ್ನನ್ನು ಕರೆದುಕೊಂಡು ಬಂದರುʼ ಎಂದು ಸೀತಾರಾಮ್ ನೆನಪಿಸಿಕೊಳ್ಳುತ್ತಾರೆ.
ನನ್ನ ಮೊದಲ ಚಿತ್ರದಲ್ಲಿ ನನ್ನ ಧ್ವನಿಯೇ ಇರಲಿಲ್ಲ.
ಅಂತಿಮವಾಗಿ ಕೊಂಚ ವ್ಯಥೆಯಿಂದ ಎಂಬಂತೆ; “ಚಿತ್ರೀಕರಣ ಮುಗಿದು ಡಬ್ಬಿಂಗ್ ಶುರುವಾಯಿತು. ನನ್ನನ್ನು ಕರೆಯಲಿಲ್ಲ. ಕೊನೆಗೊಂದು ದಿನ ಸ್ಟುಡಿಯೋಗೆ ಹೋಗಿ ನೋಡಿದರೆ, ನನ್ನ ಪಾತ್ರಕ್ಕೆ ರಮೇಶ್ ಭಟ್ ಕೈಲಿ ಡಬ್ ಮಾಡಿಸುತ್ತಿದ್ದರು. ಮೇಷ್ಟ್ರಿಗೆ ಚೆನ್ನಾಗಿ ಡಬ್ ಮಾಡಲು ಬರುತ್ತಿರಲಿಲ್ಲ. ಹಾಗಾಗಿ ಟಿ ಎಸ್ ರಂಗಾ ಕೈಲಿ ಡಬ್ ಮಾಡಿಸಿದರು. ನಾನೇನೂ ಮಾತನಾಡದೆ ಮಂಕಾಗಿ ಆಚೆಗೆ ಬಂದೆ. ನನ್ನ ಮೊದಲ ಚಿತ್ರದಲ್ಲಿ ನನ್ನ ಧ್ವನಿಯೇ ಇರಲಿಲ್ಲ” ಎಂದರು ಸೀತಾರಾಮ್.
ದೂರದರ್ಶನಕ್ಕೆ ಕತ್ತರಿ ಪ್ರಯೋಗ
….ಹೀಗೆ ಅಂತೂ ಇಂತೂ ಸಿದ್ಧವಾದ ಸಿನಿಮಾ ಬಿಡುಗಡೆಯಾಯಿತು. ಮೂರು ರಾಷ್ಟ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಎಷ್ಟೋ ವರ್ಷಗಳ ಮೇಲೆ ದೂರದರ್ಶನದಲ್ಲಿಯೂ ಪ್ರಸಾರವಾಯಿತು. ದೂರದರ್ಶನದಲ್ಲಿ ʻಪಲ್ಲವಿʼ ಪ್ರಸಾರವಾದಾಗ, ಲಂಕೇಶ್ ಹೀಗೆ ಬರೆದಿದ್ದರು. “ಮೊನ್ನೆ ದೂರದರ್ಶನದಲ್ಲಿ ಪ್ರಸಾರವಾದ ನನ್ನ ʻಪಲ್ಲವಿʼ ಚಿತ್ರವನ್ನು ಕೆಲವರಾದರೂ ನೋಡಿರಬಹುದು. ದೂರದರ್ಶನದ ವೇಳೆಗಾಗಿ ಧಾರಾಳವಾಗಿ ಕತ್ತರಿ ಹಾಕಿಸಿಕೊಂಡ ಹಲವಾರು ಸಹಾಯಕ ದೃಶ್ಯಗಳನ್ನೇ ಕಳೆದುಕೊಂಡು ಅಲ್ಲಲ್ಲಿ ವಿರೂಪಗೊಂಡ ಚಿತ್ರ ಪ್ರಸಾರವಾಯಿತೆಂದು ನೋಡಿದವರು ಹೇಳಿದರು. ಪ್ರೇಮದಂತೆಯೇ ವಿಶ್ವಾಸಕ್ಕೆ ದೃಷ್ಟಿ ಮಂದ. ಹಲವಾರು ಊರುಗಳ ಜನ ಇದನ್ನೇ ನೋಡಿ ಪ್ರೀತಿಯ ಮಾತುಗಳನ್ನು ನನಗೆ ಬರೆದರು…”
…ಹೀಗೆ ಎಷ್ಟೋ ಕಷ್ಟಗಳನ್ನು ದಾಟಿ ʻಬಿರುಕುʼ ಹಾಗೂ ಹೀಗೂ ʻಪಲ್ಲವಿʼಯ ರೂಪ ಪಡೆದು, ದೂರದರ್ಶನದ ಕತ್ತರಿಗೆ ಸಿಕ್ಕು ಮೈಕೈಎಲ್ಲ ಗಾಯ ಮಾಡಿಕೊಂಡು, ಈಗ ಮತ್ತೆ NFDC NFAI ನೆರವಿನಿಂದ ಮತ್ತೆ ಪೂರ್ಣರೂಪ ಪಡೆದುಕೊಂಡು Biffes ನಲ್ಲಿ ಪ್ರೇಕ್ಷಕರನ್ನು ತಟ್ಟಲಿದೆ. ಹಾಗಾಗಿ ಇದರ ಕಥೆಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನೀವೇ ನೋಡಿ, ವಿರೂಪಗೊಂಡು ಮತ್ತು ಸ್ವರೂಪ ಪಡೆದುಕೊಂಡ ʼಪಲ್ಲವಿʼ ಯನ್ನು….!