ಡಿನ್ನರ್ ರಾಜಕೀಯದ ಬಳಿಕ ಈಗ ವಿದೇಶ ಪ್ರವಾಸ: ಸತೀಶ್‌ ಜಾರಕಿಹೊಳಿ ಮತ್ತು 25 ಶಾಸಕರಿಂದ ದುಬೈ ಯಾತ್ರೆ?

ಸುಮಾರು 25 ಮಂದಿ ಆಪ್ತ ಶಾಸಕರು ದುಬೈ ಪ್ರವಾಸಕ್ಕೆ ತೆರಳುತ್ತಿದ್ದು, ಇದರ ನೇತೃತ್ವವನ್ನು ಸತೀಶ್ ಜಾರಕಿಹೊಳಿ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.;

Update: 2025-01-30 04:00 GMT

ಔತಣ ಕೂಟ ರಾಜಕೀಯ ಬಳಿಕ ಈಗ ರಾಜ್ಯ ಕಾಂಗ್ರೆಸ್‌ನಲ್ಲಿ ವಿದೇಶ ಪ್ರವಾಸ ರಾಜಕೀಯ ಆರಂಭವಾಗಿದೆ.  ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ಕಾಂಗ್ರೆಸ್‌ನಲ್ಲಿ ಎಲ್ಲವೂ ತಣ್ಣಗಾಗಿದೆ ಎನ್ನುವ ಹಂತದಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸುಮಾರು 25 ಶಾಸಕರು ದುಬೈ ಪ್ರವಾಸಕ್ಕೆ ಮುಂದಾಗಿದ್ದಾರೆ.

ಆ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಗೊಂದಲ ಆರಂಭವಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಒಳಗೊಳಗೇ ತಂತ್ರ ಹೂಡುತ್ತಿರುವ ಹಾಗೂ ಮುಂದೊಂದು ದಿನ ಮುಖ್ಯಮಂತ್ರಿಯಾಗಬೇಕೆನ್ನುವ  ಇಚ್ಛೆ ಹೊಂದಿರುವ ಸತೀಶ್‌  ಜಾರಕಿಹೊಳಿ  ಅವರ ಈ ನಡವಳಿಕೆ ಕಾಂಗ್ರೆಸ್‌ಗೆ  ಬಿಸಿತುಪ್ಪವಾಗಿ ಪರಿಣಮಿಸಿದೆ.

ಈ ಮೊದಲು ಕಳೆದ ದಸರಾ ಮಹೋತ್ಸವದ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿಯವರು ಪ್ರತ್ಯೇಕ ಪ್ರವಾಸದ ಪ್ರಯತ್ನ ಆರಂಭಿಸಿದ್ದರೂ, ಹೈಕಮಾಂಡ್‌ ಆದೇಶದ ಬಳಿಕ ಆ ಪ್ರಯತ್ನಕ್ಕೆ ಅಲ್ಪ ವಿರಾಮ ನೀಡಿದ್ದರು. ಈಗ ಆಪ್ತ ಶಾಸಕರೊಂದಿಗೆ ದುಬೈ ಪ್ರವಾಸಕ್ಕೆ ತೆರಳಲು ಜಾರಕಿಹೊಳಿ ಮುಂದಾಗಿದ್ದಾರೆ. 

ಹಿಂದೊಮ್ಮೆ ಸತೀಶ್ ಜಾರಕಿಹೊಳಿಯವರ ಪ್ರವಾಸ ಖಚಿತಗೊಂಡಿತ್ತಾದರೂ ಪೂರ್ತಿ ರದ್ದುಕೊಂಡಿರಲಿಲ್ಲ. ಇತ್ತೀಚೆಗೆ ಕಾಂಗ್ರೆಸ್ನಲ್ಲಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶಾಸಕರು ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದರು. ಹೈಕಮಾಂಡ್ ಅದಕ್ಕೂ ಬ್ರೇಕ್ ಹಾಕಿತ್ತು.

ಒಂದು ಹಂತದಲ್ಲಿ ಜಿದ್ದಾಜಿದ್ದಿನ ರಾಜಕಾರಣ ಕೈಬಿಟ್ಟಂತೆ ಕಾಣಿಸಿಕೊಂಡ ಸತೀಶ್ ಜಾರಕಿಹೊಳಿ ಒಳಗೊಳಗೇ ಬೆಂಬಲಿಗರನ್ನು ವಿದೇಶಿ ಪ್ರವಾಸಕ್ಕೆ ಪ್ರಚೋದಿಸಿದ್ದಾರೆ ಎನ್ನಲಾಗಿದೆ. ಸುಮಾರು 25 ಮಂದಿ ಆಪ್ತ ಶಾಸಕರು ದುಬೈ ಪ್ರವಾಸಕ್ಕೆ ತೆರಳುತ್ತಿದ್ದು, ಇದರ ನೇತೃತ್ವವನ್ನು ಸತೀಶ್ ಜಾರಕಿಹೊಳಿ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಔತಣಕೂಟ

ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ, ಮುಖ್ಯಮಂತ್ರಿ ಸ್ಥಾನ ಬದಲಾವಣೆ  ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆ ಜೋರಾಗಿರುವಾಗಲೇ ಹೊಸ ವರ್ಷಾಚರಣೆ ನೆಪದಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ, ಸಹೋದ್ಯೋಗಿ ಸಚಿವರು ಹಾಗೂ ಶಾಸಕರಿಗೆ ಜನವರಿ ಮೊದಲವಾರ  ಔತಣಕೂಟ ನೀಡಿದ್ದರು. ಆದರೆ, ಔತಣಕೂಟಕ್ಕೆ ಡಿ.ಕೆ.ಶಿವಕುಮಾರ್‌ ಗೈರಾಗಿದ್ದರು.

ಬೆಂಗಳೂರಿನ ಸತೀಶ್‌ ಜಾರಕಿಹೊಳಿ ಅಧಿಕೃತ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ ಸೇರಿ ಏಳು ಮಂದಿ ಸಚಿವರು, 35 ಮಂದಿ ಶಾಸಕರು ಭಾಗವಹಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ದಿಢೀರ್‌ ಔತಣಕೂಟ ಆಯೋಜಿಸಿದ ಹಿಂದಿನ ಉದ್ದೇಶಗಳ ಬಗ್ಗೆ ರಾಜಕೀಯ ವಲಯದಲ್ಲಿ ಊಹಾಪೋಹಗಳು ಕೇಳಿಬಂದಿದ್ದವು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಚಿವ ಸತೀಶ್‌ ಜಾರಕಿಹೊಳಿ ನಡುವೆ ದೀರ್ಘ ಕಾಲದಿಂದಲೂ ವೈಮನಸ್ಸಿದೆ. ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್‌ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಅಸಮಾಧಾನ ಸತೀಶ್‌ ಜಾರಕಿಹೊಳಿ ಅವರಿಗಿತ್ತು. ಅದೇ ವಿಷಯದಲ್ಲಿ ಕಳೆದ ಒಂದು ದಶಕದಿಂದಲೂ ಕಾಂಗ್ರೆಸ್‌ನ ಈ ಇಬ್ಬರೂ ಹಿರಿಯ ನಾಯಕರ ನಡುವೆ ಪರೋಕ್ಷ ವಾಕ್ಸಮರ ಚಾಲ್ತಿಯಲ್ಲಿದೆ ಎಂಬುದೂ ಗುಟ್ಟೇನಲ್ಲ.

ಸಿಎಂ ಸ್ಥಾನ ಬದಲಾವಣೆ ಚರ್ಚೆ

ಸಿಎಂ ಸ್ಥಾನದ ಅಧಿಕಾರ ಹಂಚಿಕೆಗೆ ಸಂಬಂಧಿಸಿ ಈಚೆಗೆ ಡಿಕೆ ಶಿವಕುಮಾರ್‌ ಪ್ರಸ್ತಾಪಿಸಿದ್ದ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಅಲ್ಲದೇ ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಪ್ರತಿಪಕ್ಷಗಳಿಂದ ಒತ್ತಡ ಹೆಚ್ಚಿದಾಗ ತಾವೂ ಕೂಡ ಸಿಎಂ ಆಕಾಂಕ್ಷಿ ಎಂಬುದನ್ನು ಸತೀಶ್‌ ಜಾರಕಿಹೊಳಿ ಹೇಳಿಕೊಂಡಿದ್ದರು. ಒಂದು ವೇಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾದರೆ ತಮ್ಮ ಆಪ್ತರಾದ ಜಾರಕಿಹೊಳಿ ಅವರಿಗೇ ಪಟ್ಟ ಕಟ್ಟುವ ಕುರಿತಂತೆ ಸಿದ್ದರಾಮಯ್ಯ ಕೂಡ ಯೋಚಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಸತೀಶ್‌ ಜಾರಕಿಹೊಳಿ ಅವರು ಸಿಎಂ ಹಾಗೂ ಸಚಿವರಿಗೆ ಔತಣ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಆದ ಡಿ ಕೆ ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿರುವಾಗಲೇ ಇತ್ತ ಸಿಎಂ ಸಿದ್ದರಾಮಯ್ಯ ನಡೆಸಿದ ಸಚಿವರು ಮತ್ತು ಶಾಸಕರ ಡಿನ್ನರ್ ಮೀಟ್ ನಡೆಸಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಪರಮೇಶ್ಬರ್‌ ಡಿನ್ನರ್

ಬಳಿಕ ಗೃಹ ಸಚಿವ ಪರಮೇಶ್ವರ್ ಅವರು ಎಸ್ಸಿ/ ಎಸ್ಟಿ ಶಾಸಕರು ಮತ್ತು ಸಚಿವರ ಡಿನ್ನರ್ ಮೀಟ್ ಕರೆದಿದ್ದರು. ಸ್ವತಃ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಇರುವ ನಾಯಕರು ಹೀಗೆ ಸರಣಿ ಡಿನ್ನರ್ ಮೀಟ್ ನಡೆಸುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಸಭೆಗಳು ನಡೆಯುತ್ತಿವೆ ಎಂಬ ವಿಶ್ಲೇಷಣೆಗೆ ಕಾರಣವಾಗಿತ್ತು.

ಪಕ್ಷದ ಮುಂಚೂಣಿ ನಾಯಕರ ಈ ಡಿನ್ನರ್ ಪೊಲಿಟಿಕ್ಸ್ ಪಕ್ಷದ ವರ್ಚಸ್ಸು ಮತ್ತು ಸರ್ಕಾರದ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಮುನ್ನೆಚ್ಚರಿಕೆ ವಹಿಸಿದ ಕಾಂಗ್ರೆಸ್ ಹೈಕಮಾಂಡ್  ದಿಢೀರನೇ ಪರಮೇಶ್ವರ್ ಅವರ ಡಿನ್ನರ್  ಸಭೆಗೆ ಬ್ರೇಕ್‌ ಹಾಕಿತ್ತು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರ ಸೂಚನೆ ಮೇರೆಗೆ ಡಾ ಪರಮೇಶ್ವರ್ ಅವರ ಡಿನ್ನರ್ ಮೀಟ್ ರದ್ಧಾಗಿದ್ದು, ಈ ಬಗ್ಗೆ ಖುದ್ದು ಗೃಹ ಸಚಿವರೇ ಮಾಧ್ಯಮ ಪ್ರಕಟಣೆ ಹೊರಡಿಸಿ ಔತಣಕೂಟದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಿದ್ದರು.

Tags:    

Similar News