ಕೆ.ಎಚ್‌.ಮುನಿಯಪ್ಪ ಮನೆ ಸತೀಶ್‌ ಭೇಟಿ | ಜಾತಿಗಣತಿ ವರದಿ ವಿರೋಧಿಸುವವರಿಗೆ ತಿರುಗೇಟು ನೀಡಲು ಪ್ಲಾನ್‌?

ವಿಶೇಷ ಸಂಪುಟ ಸಭೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರ ಸಚಿವರ ವಿರೋಧಕ್ಕೆ ಹಿಂದುಳಿದ ಹಾಗೂ ದಲಿತ ಸಮುದಾಯದ ಸಚಿವರು ಆಕ್ಷೇಪ ವ್ಯಕ್ತಪಡಿಸಿ, ವರದಿ ಜಾರಿಗೆ ಪಟ್ಟು ಹಿಡಿದಿದ್ದರು. ಹಾಗಾಗಿ ಈ ನಾಯಕರ ಸಭೆ ಮಹತ್ವ ಪಡೆದುಕೊಂಡಿದೆ.;

Update: 2025-04-18 11:19 GMT

ಜಾತಿಗಣತಿ ವರದಿಗೆ ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮನೆಗೆ ಭೇಟಿ ನೀಡಿ ಉಪಾಹಾರ ಕೂಟದಲ್ಲಿ ಭಾಗಿಯಾಗಿರವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಜಾತಿಗಣತಿ ವಿರೋಧಿಸುತ್ತಿರುವ ಪ್ರಬಲ ಸಮುದಾಯಗಳಿಗೆ ಒಗ್ಗಟ್ಟಾಗಿ ಠಕ್ಕರ್ ನೀಡಲು ದಲಿತರು ಹಾಗೂ ಹಿಂದುಳಿದ ಸಚಿವರು ಮುಂದಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮದ್ ಕೂಡ ಕೆ.ಎಚ್.ಮುನಿಯಪ್ಪ ಅವರ ಮನೆಗೆ ಭೇಟಿ ನೀಡಿ  ಮಾತುಕತೆ ನಡೆಸಿದ್ದರು. ಈಗ ಸತೀಶ್ ಜಾರಕಿಹೊಳಿ ಕೂಡ ಭೇಟಿ ನೀಡುವುದು ಇಂತಹ ಚರ್ಚೆಗಳಿಗೆ ಕಾರಣವಾಗಿದೆ.

ಗುರುವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ವರದಿ ಜಾರಿಗೆ ಲಿಂಗಾಯತ ಹಾಗೂ ಒಕ್ಕಲಿಗರ ಸಚಿವರ ವಿರೋಧ ವ್ಯಕ್ತಪಡಿಸಿದರೆ, ಹಿಂದುಳಿದ ಹಾಗೂ ದಲಿತ ಸಮುದಾಯದ ಸಚಿವರು ವರದಿ ಜಾರಿಗೆ ಪಟ್ಟು ಹಿಡಿದಿದ್ದರು. ಹಾಗಾಗಿ ಈ ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ.

ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತರು ಹಾಗೂ ಒಕ್ಕಲಿಗರಿಲ್ಲದೇ ಸರ್ಕಾರ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಅಲ್ಲದೇ ಲಿಂಗಾಯತರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಒಕ್ಕಲಿಗರು ಎರಡನೇ ಸ್ಥಾನದಲ್ಲಿದ್ದಾರೆ ಎಂದು ಹೇಳುವ ಮೂಲಕ ವರದಿಯ ಅಂಕಿ ಅಂಶಗಳನ್ನು ತಿರಸ್ಕರಿಸಿದ್ದರು. ಇನ್ನೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆದಿದ್ದ ಒಕ್ಕಲಿಗರ ಸಭೆಯಲ್ಲಿ ಜಾತಿಗಣತಿ ವರದಿ ಜಾರಿ ಮಾಡಿದರೆ ಸರ್ಕಾರ ಬೀಳಿಸುವುದಾಗಿ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದರು. ಶಿವಕುಮಾರ್ ಅವರು ಕೂಡ ಸಂಪುಟ ಸಭೆಯಲ್ಲಿ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಜಾತಿಗಣತಿ ವಿಚಾರದಲ್ಲಿ ಪ್ರಬಲ ಜಾತಿಗಳು ಒಂದಾಗುತ್ತಿರುವುದನ್ನು ಗಮನಿಸಿದ ದಲಿತ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಸಚಿವರು ಒಗ್ಗಟ್ಟಾಗಿ ವರದಿ ಜಾರಿಗೆ ಪಟ್ಟು ಹಿಡಿಯಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆ.ಎಚ್.ಮುನಿಯಪ್ಪ ಹೇಳಿದ್ದೇನು?

ಜಾತಿಗಣತಿ ವರದಿ ಜಾರಿಯಿಂದ ಲಿಂಗಾಯತರಿಗಾಗಲಿ, ಒಕ್ಕಲಿಗರಿಗಾಗಲಿ ಯಾವುದೇ ತೊಂದರೆ ಆಗುವುದಿಲ್ಲ. ವರದಿಯ ಬಗ್ಗೆ ಇನ್ನಷ್ಟು ಚರ್ಚೆ ನಡೆಸಿ, ಎಲ್ಲರೂ ಒಪ್ಪುವಂತಹ ತೀರ್ಮಾನ ಕೈಗೊಳ್ಳಲಾಗುವುದು. ಸತೀಶ್ ಜಾರಕಿಹೊಳಿ ಅವರು, ನಾವು ಆಗಾಗ್ಗೆ ಸೇರುತ್ತಿರುತ್ತೇವೆ, ನನ್ನ ಕ್ಷೇತ್ರಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಹಾಗಾಗಿ ಅವರನ್ನು ಉಪಾಹಾರಕ್ಕೆ ಆಹ್ವಾನಿಸಿದ್ದೆ. ಈ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಮ್ಮ ಕ್ಷೇತ್ರದಲ್ಲಿ ಏ.28ಕ್ಕೆ ಮುಖ್ಯಮಂತ್ರಿಗಳ ಕಾರ್ಯಕ್ರಮವಿದೆ. ಈ ಕುರಿತು ಚರ್ಚಿಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಸತೀಶ ಜಾರಕಿಹೊಳಿ ಹೇಳಿದ್ದೇನು?

ಸಿಎಂ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆ.ಎಚ್.ಮುನಿಯಪ್ಪ ಅವರು ಆಹ್ವಾನ ನೀಡಿದ್ದರು. ಅದರಂತೆ ಮನೆಗೆ ಬಂದು ಉಪಾಹಾರ ಸೇವಿಸಿದ್ದೇನೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 100ಕ್ಕೂ ಹೆಚ್ಚು ಕಿ.ಮೋ ರಸ್ತೆ ಕೊಟ್ಟಿದ್ದೇವೆ. ಹಾಗಾಗಿ ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಜಾತಿಗಣತಿ ವರದಿ ಜಾರಿ ಇನ್ನೂ ಒಂದು ವರ್ಷ ತೆಗೆದುಕೊಳ್ಳಬಹುದು. ಇದು ಒಂದು ಜಟಿಲ ಸಮಸ್ಯೆ. ಸಾಕಷ್ಟು ಚರ್ಚೆಯಾಗಬೇಕಿದೆ. ವರದಿ ಸ್ವೀಕಾರಕ್ಕೆ ಹತ್ತು ವರ್ಷ ತೆಗೆದುಕೊಳ್ಳಲಾಗಿದೆ. ಹೀಗಾಗಿ ಅದರ ದತ್ತಾಂಶ, ಇನ್ನಿತರೆ ಆಕ್ಷೇಪಗಳ ಇತ್ಯರ್ಥಕ್ಕೆ ಒಂದು ವರ್ಷವಾದರೂ ಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂಕಿ ಸಂಖ್ಯೆಯನ್ನು ಜನರೇ ಬರೆಸಿಮ ಸಹಿ ಮಾಡಿದ್ದಾರೆ. ಈಗ ಅವರೇ ಸಹಿ ಮಾಡಿದವರೆ ವಿರೋಧ ಮಾಡುತ್ತಿದ್ದಾರೆ. ಸಾದರ ಸಮುದಾಯವನ್ನು ಕಡಿಮೆ ತೋರಿಸಲಾಗಿದೆ. ಮೂರು ಜಿಲ್ಲೆಗಳಲಿ ಕೇವಲ 64 ಸಾವಿರ ಜನಸಂಖ್ಯೆ ಮಾತ್ರ ತೋರಿಸಿದ್ದಾರೆ, ಹೀಗಾಗಿ ಅವರು ದನಿ ಎತ್ತಿರುವುದರಲ್ಲಿ ಅರ್ಥವಿದೆ ಎಂದು ಹೇಳಿದ್ದಾರೆ.

ಮೀಸಲಾತಿ ಹೆಚ್ಚಳ ಅಸಾಧ್ಯ

ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳಕ್ಕೆ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿದೆ. ಆದರೆ, ಈಗ ಮೀಸಲಾತಿ ಹೆಚ್ಚಳ ಮಾಡುವುದು ಅಸಾಧ್ಯ. ಮೊದಲು ಅಂಕಿ ಅಂಶಗಳನ್ನು ಸರಿ ಮಾಡಬೇಕು. ಅದಕ್ಕೆ ಸಾಕಷ್ಟು ಸಮಯಾವಕಾಶ ನೀಡಬೇಕು. ಸರಿಯಾಗಿ ವರದಿ ಅನುಷ್ಠಾನ ಮಾಡದೇ ಹೋದರೆ ಹಿಂದಿನ ಸರ್ಕಾರಕ್ಕಾದಂತೆ ನಮಗೂ ತೊಂದರೆ ಆಗಲಿದೆ. ಯಾವುದೇ ಸಮಾಜಕ್ಕೆ ನೋವಾಗಬಾರದು. ಎಲ್ಲಾ ಸಮುದಾಯಗಳು ಒಪ್ಪುವಂತಹ ವರದಿ ನೀಡುವುದು ನಮ್ಮ ಉದ್ದೇಶ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

Tags:    

Similar News