Congress Infighting | ಖರ್ಗೆ ಹೇಳಿಕೆ ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೆ ಕಾವೇರಿತು ʼಸಿಎಂ ಕುರ್ಚಿʼ ವಾಕ್ಸಮರ
ಕಾಂಗ್ರೆಸ್‌ನಲ್ಲಿ ದಿಢೀರ್ ಚಟುವಟಿಕೆಗಳು ಜೋರಾಗಿರುವ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ವಿಚಾರವು ಡಿಕೆಶಿ ಹಾಗೂ ಸಿಎಂ ಬಣದ ನಡುವೆ ಮತ್ತೊಂದು ಸುತ್ತಿನ ಸಮರಕ್ಕೆ ವೇದಿಕೆ ಕಲ್ಪಿಸಿದೆ;
ಅಧಿಕಾರ ಹಂಚಿಕೆ ಕುರಿತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗಳಿಗೆ ಠಕ್ಕರ್ ನೀಡಲು ತಂತ್ರಗಾರಿಕೆ ರೂಪಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದ ಸಚಿವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಬಲ ಲಾಬಿ ಆರಂಭಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಗಲಿಗೆ ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ವಹಿಸುವ ಕುರಿತ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಕಳೆದ ಸೋಮವಾರ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುಮಾರು ಒಂದು ತಾಸು ಮಾತುಕತೆ ನಡೆಸಿದ್ದ ಸತೀಶ್ ಜಾರಕಿಹೊಳಿ ಅವರು, ಮರುದಿನವೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೂ ಸಮಾಲೋಚನೆ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಂತೆಯೇ ಸತೀಶ್ ಜಾರಕಿಹೊಳಿ ಅವರೊಂದಿಗೆ ವರಿಷ್ಠರು ಚರ್ಚಿಸಿದ್ದು, ಶೀಘ್ರದಲ್ಲೇ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಸಾರಥ್ಯ ವಹಿಸಲಿದ್ದಾರೆ ಎಂದು ಅವರ ಆಪ್ತ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್‌ನಲ್ಲಿ ದಿಢೀರ್ ಚಟುವಟಿಕೆಗಳು ಜೋರಾಗಿರುವ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ವಿಚಾರವು ಡಿಕೆಶಿ ಹಾಗೂ ಸಿಎಂ ಬಣದ ನಡುವೆ ಮತ್ತೊಂದು ಸುತ್ತಿನ ಸಮರಕ್ಕೆ ವೇದಿಕೆ ಕಲ್ಪಿಸಿದೆ.
ಬುಧವಾರ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷ ಸ್ಥಾನದ ವಿಚಾರವಾಗಿ ನೀಡಿದ ಹೇಳಿಕೆಯು ಈ ಚರ್ಚೆಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ
ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಬದಲಾವಣೆ ಕುರಿತ ಎಐಸಿಸಿ ಅಧ್ಯಕ್ಷರ ಹೇಳಿಕೆಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರು ಒಬ್ಬೊಬ್ಬರಾಗಿ ಮುಖ್ಯಮಂತ್ರಿ ಗಾದಿಯ ಕುರಿತ ಹೇಳಿಕೆಗಳನ್ನು ನೀಡತೊಡಗಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಆಪ್ತ ಸಚಿವ ಡಾ ಎಂ ಬಿ ಪಾಟೀಲ್, ದೇವರಾಜ ಅರಸು ಅವರು ಏಳು ವರ್ಷ ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಅವರು ಪೂರ್ಣಾವಧಿ ಇರುತ್ತಾರೆ. ಕೇವಲ ಏಳು ವರ್ಷಗಳಲ್ಲ ಹತ್ತು ವರ್ಷವೂ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡಿದೆ. ಹಾಗಾಗಿ ಈಗ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳುವ ಮೂಲಕ ಡಿ ಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಅಲ್ಲದೆ, ಗೃಹ ಸಚಿವ ಡಾ ಜಿ ಪರಮೇಶ್ವರ್ ಕೂಡ ಸಿದ್ದರಾಮಯ್ಯ ಅವರ ಸಿಎಂ ಗಿರಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್, ಶಾಸಕಾಂಗ ಪಕ್ಷದ ನಾಯಕರನ್ನಾಗಿ ಎಲ್ಲಾ ಶಾಸಕರು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದರು. ಆ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ಯಾವುದೇ ಮಾತುಕತೆ ನಡೆಸಿರಲಿಲ್ಲ. ಹಾಗಾಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಒಪ್ಪಿಕೊಳ್ಳುತ್ತೇವೆ. ಎಐಸಿಸಿ ಹೊಸ ಕಚೇರಿ ಉದ್ಘಾಟನೆಯ ವೇಳೆ ಎಐಸಿಸಿ ಪುನಾರಚನೆ ಆಗಬೇಕು ಅಂದಿದ್ದರು. ಕೆಲ ರಾಜ್ಯಗಳಲ್ಲಿ ಪಕ್ಷ ಸೋತಿದೆ, ಪಕ್ಷ ಸಂಘಟನೆ ದೃಷ್ಟಿಯಿಂದ ಖರ್ಗೆಯವರು ಈ ರೀತಿ ಹೇಳಿರಬಹುದು ಎಂದೂ ಅವರು ಹೇಳಿದ್ದಾರೆ.
ʼಲಾಂಗೆಸ್ಟ್ ಸಿಎಂ ಆಫ್ ಕರ್ನಾಟಕʼ ಆಗುವಾಸೆ
ಈ ಬೆಳವಣಿಗೆಗಳ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ‘ದೀರ್ಘಾವಧಿಯ ಮುಖ್ಯಮಂತ್ರಿʼ ಎಂಬ ಹೆಗ್ಗಳಿಕೆ ಹೊಂದುವ ಅಭಿಲಾಷೆ ವ್ಯಕ್ತಪಡಿಸಿರುವುದು ಸಂಚಲನ ಮೂಡಿಸಿದೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರು, "ನಾನು ‘ಲಾಂಗೆಸ್ಟ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ’ ಎಂಬ ದಾಖಲೆ ಬರೆಯುವೆ. ಸದ್ಯಕ್ಕೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ" ಎಂದು ಹೇಳಿದ್ದಾರೆ.
2023 ಮೇ 20 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಧ್ಯೆ ಅಧಿಕಾರ ಹಂಚಿಕೆ ಒಪ್ಪಂದ ನಡೆದಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಒಪ್ಪಂದದಂತೆ 2025 ನವೆಂಬರ್‌ಗೆ ಸಿದ್ದರಾಮಯ್ಯ ಅವರ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು. ಆದರೆ, ದೀರ್ಘಾವಧಿಯ ಮುಖ್ಯಮಂತ್ರಿ ಎನಿಸಿಕೊಳ್ಳಲು 2025 ಡಿಸೆಂಬರ್‌ವರೆಗೆ ಸಿದ್ದರಾಮಯ್ಯ ಅವರು ಪದವಿಯಲ್ಲಿ ಇರಬೇಕಾಗುತ್ತದೆ. ಆಗ ಮಾಜಿ ಸಿಎಂ ದಿವಂಗತ ದೇವರಾಜು ಅರಸು ಅವರ ಹೆಸರಿನಲ್ಲಿರುವ ದೀರ್ಘಾವಧಿ ಮುಖ್ಯಮಂತ್ರಿ ದಾಖಲೆ ಮೀರಿಸಲಿದ್ದಾರೆ. ಮಾಜಿ ಸಿಎಂ ದಿವಂಗತ ದೇವರಾಜ ಅರಸು ಅವರು ಏಳು ವರ್ಷ ಏಳು ತಿಂಗಳ ಕಾಲ ಸಿಎಂ ಆಗಿ ಅಧಿಕಾರ ನಡೆಸಿದ್ದರು.
ಸಿಎಂ ಸಿದ್ದರಾಮಯ್ಯ ಅವರ ಒತ್ತಾಸೆಗೆ ಡಿ.ಕೆ. ಶಿವಕುಮಾರ್ ಅವರು ಅಡ್ಡಿಯಾಗಿರುವುದು ಸಿಎಂ ಆಪ್ತ ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ.
ಸಿಎಂ ಬದಲಾವಣೆ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗಳಿಂದ ಕುಪಿತಗೊಂಡಿರುವ ಸಿಎಂ ಆಪ್ತ ಬಳಗದ ಸಚಿವರು ಕಳೆದ ಆರೇಳು ತಿಂಗಳಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಚೆಕ್‌ಮೇಟ್ ನೀಡಿದ್ದಾರೆ. ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಡಾ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಸಚಿವರು ಹಾಗೂ ಶಾಸಕರು ಡಿಕೆಶಿ ವಿರುದ್ಧವಾಗಿ ರಾಜಕೀಯ ದಾಳ ಉರುಳಿಸುತ್ತಿರುವುದು ಬಣ ರಾಜಕಾರಣಕ್ಕೆ ಕಾರಣವಾಗುತ್ತಿದೆ.
ಮತ್ತೆ ಶುರುವಾದ ಬಣಗಳ ವಾಗ್ದಾಳಿ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಆಪ್ತ ವಲಯದ ಸಚಿವರು ದೆಹಲಿ ಮಟ್ಟದಲ್ಲಿ ಒತ್ತಡ ಹೇರುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ರಾಜಣ್ಣ ದೊಡ್ಡವರು, ಅವರ ಬಗ್ಗೆ ಮಾತಾಡಲ್ಲ. ಅಧ್ಯಕ್ಷರ ಬದಲಾವಣೆ ಕುರಿತು ಖರ್ಗೆ ಹೇಳಿಕೆಯೂ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಸಚಿವ ರಾಜಣ್ಣ, ಇಲ್ಲಿ ದೊಡ್ಡ ನಾಯಕರು, ಸಣ್ಣ ನಾಯಕರು ಅನ್ನೋದು ಬೇರೆ, ನಾವು ಕುಬೇರರ ಮಾತಿಗೆ ಪ್ರತಿಕ್ರಿಯಿಸಲ್ಲ ಎಂದು ಹೇಳುವ ಮೂಲಕ ವ್ಯಂಗ್ಯವಾಗಿ ತಿವಿದಿದ್ದಾರೆ.
ಈ ನಡುವೆ, ಟಿ ನರಸೀಪುರದ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಡಿ ಕೆ ಅವರು ಅಲ್ಲಿನ ಪೂಜೆಯ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಪ್ರಯತ್ನ ವಿಫಲವಾಗಬಹುದು, ಆದರೆ, ಪ್ರಾರ್ಥನೆಗೆ ಗೆಲುವು ನಿಶ್ಚಿತ ಎಂದು ಪೋಸ್ಟ್ ಮಾಡಿರುವುದು ಕೂಡ ಸದ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುತೂಹಲ ಮೂಡಿಸಿದೆ.