ಸಂಡೂರು ಫಲಿತಾಂಶ | ಸವಾಲು- ಪ್ರತಿ ಸವಾಲಿನ ಕಣದಲ್ಲಿ ಪ್ರತಿಷ್ಠೆಗೆ ಪೆಟ್ಟು ಕೊಟ್ಟ ಮತದಾರ
ಉಪ ಚುನಾವಣೆ ನಡೆದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಮತ್ತು ಎಚ್ಡಿಕೆ ಕುಟುಂಬದ ನಡುವೆ ʼಗೌಡರ ಗದ್ದಲʼದ ಕಾರಣಕ್ಕೆ ಆ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. ಆದರೆ, ಅಸಲಿಗೆ ರಾಜಕಾರಣದ ಸೇಡು ಮತ್ತು ಗಂಭೀರ ಸಂಘರ್ಷದ ಕಾರಣಕ್ಕೆ ಗಮನ ಸೆಳೆದದ್ದು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಳ್ಳಾರಿ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಸಂಡೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಉಪ ಚುನಾವಣೆ ನಡೆದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಮತ್ತು ಎಚ್ಡಿಕೆ ಕುಟುಂಬದ ನಡುವೆ ʼಗೌಡರ ಗದ್ದಲʼದ ಕಾರಣಕ್ಕೆ ಆ ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು. ಆದರೆ, ಅಸಲಿಗೆ ರಾಜಕಾರಣದ ಸೇಡು ಮತ್ತು ಗಂಭೀರ ಸಂಘರ್ಷದ ಕಾರಣಕ್ಕೆ ಗಮನ ಸೆಳೆದದ್ದು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರ.
2010ರಲ್ಲಿ ಬಳ್ಳಾರಿ ಗಣಿ ರೆಡ್ಡಿಗಳ ವಿರುದ್ಧದ ರಾಜಕೀಯ ಸಮರದ ಭಾಗವಾಗಿ ಸಿದ್ದರಾಮಯ್ಯ ಆರಂಭಿಸಿದ್ದ ಬಳ್ಳಾರಿ ಪಾದಯಾತ್ರೆ, ಬಳಿಕ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭಾರೀ ಬಹುಮತ ತಂದುಕೊಟ್ಟಿದ್ದು ಮಾತ್ರವಲ್ಲ; ಸ್ವತಃ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೇರಲು ಕೂಡ ಅದೇ ಪಾದಯಾತ್ರೆ ಏಣಿಯಾಯ್ತು. ಅಸಲಿಗೆ ಆ ಪಾದಯಾತ್ರೆಯ ನಿರ್ಧಾರ ಕೈಗೊಳ್ಳಲು ಕಾರಣವಾಗಿದ್ದು, 2010ರ ಜುಲೈನಲ್ಲಿ ವಿಧಾನಸಭೆಯಲ್ಲಿ ಅಂದಿನ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತ ಪಕ್ಷ ಬಿಜೆಪಿ ಶಾಸಕರ ನಡುವೆ ನಡೆದ ಸಂಘರ್ಷ ಮತ್ತು ಆ ಸಂಘರ್ಷದ ಹಿಂದೆ ಇದ್ದ ಗಾಲಿ ಜನಾರ್ದನ ರೆಡ್ಡಿ. ರೆಡ್ಡಿ ಪಾಳೆಯದ ಬಳ್ಳಾರಿ ಮತ್ತು ರಾಯಚೂರಿನ ಶಾಸಕರು ಪ್ರತಿಪಕ್ಷ ಶಾಸಕರ ಮೇಲೆ ತೋಳೇರಿಸಿಕೊಂಡು ಹೋಗಿದ್ದರು. ಬಳ್ಳಾರಿಗೆ ಬನ್ನಿ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆ ವೇಳೆ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ತಮ್ಮ ಶಾಸಕರ ನೆರವಿಗೆ ಧಾವಿಸಿ, ತೊಡೆ ತಟ್ಟಿ, “ಬಳ್ಳಾರಿಗೆ ಬರುತ್ತೇವೆ, ರೆಡ್ಡಿ ಮನೆ ಮುಂದೆಯೇ ಮೆರವಣಿಗೆ ನಡೆಸುತ್ತೇವೆ” ಎಂದು ಪ್ರತಿ ಸವಾಲು ಹಾಕಿದ್ದರು.
ಮುಂದೆ ಆ ಸವಾಲೇ ಬಳ್ಳಾರಿ ಪಾದಯಾತ್ರೆಗೆ ಕಾರಣವಾಗಿತ್ತು. ಆ ಪಾದಯಾತ್ರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೊಸ ಜನಬೆಂಬಲ ತಂದಿತ್ತು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನಾದೇಶವನ್ನೂ ನೀಡಿತು. ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರವನ್ನೂ ಪಡೆದಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿದ್ದರು.
ಸಿದ್ದರಾಮಯ್ಯ ಮತ್ತು ಜನಾರ್ದನ ರೆಡ್ಡಿ ನಡುವಿನ ಆ ರಾಜಕೀಯ ವೈಷಮ್ಯ ಮತ್ತು ಸೇಡು ಈ ಬಾರಿಯ ಸಂಡೂರು ವಿಧಾನಸಭಾ ಉಪ ಚುನಾವಣೆಯಲ್ಲೂ ಭಾರೀ ಸದ್ದು ಮಾಡಿತ್ತು. ರೆಡ್ಡಿಗಳನ್ನು ಸೋಲಿಸಿ, ಬಳ್ಳಾರಿ ಉಳಿಸಿ ಎಂಬ ಕಾಂಗ್ರೆಸ್ ಘೋಷಣೆ ಈ ಬಾರಿಯೂ ಸಂಡೂರಿನಲ್ಲಿ ಮೊಳಗಿತ್ತು. ಬಳ್ಳಾರಿ ಗಣಿಗಾರಿಕೆಯ ಕೇಂದ್ರಬಿಂದು ಸಂಡೂರಿನ ಉಪ ಚುನಾವಣೆಗೆ ಕೆಲವೇ ದಿನಗಳ ಮುನ್ನ 13 ವರ್ಷಗಳ ಬಳಿಕ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಿಸಲು ಕೋರ್ಟ್ ಅನುಮತಿ ನೀಡಿತ್ತು. ಆ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಈ ಚುನಾವಣೆ, ಕಳೆದ ಒಂದೂವರೆ ದಶಕದಲ್ಲಿ ತಮ್ಮ ಕೈತಪ್ಪಿರುವ ಬಳ್ಳಾರಿ ರಾಜಕಾರಣದ ಮೇಲೆ ಮತ್ತೆ ಹಿಡಿತ ಸಾಧಿಸುವ ಅವಕಾಶವಾಗಿ ಒದಗಿ ಬಂದಿತ್ತು.
ಹಾಗಾಗಿಯೇ ರೆಡ್ಡಿ ಈ ಚುನಾವಣೆಯನ್ನು ತಮ್ಮ ವೈಯಕ್ತಿಕ ಪ್ರತಿಷ್ಠೆಯ ಸಂಗತಿಯಾಗಿ ತೆಗೆದುಕೊಂಡು ಕಳೆದ ಒಂದೂವರೆ ಎರಡು ತಿಂಗಳಿನಿಂದ ಹಗಲಿರುಳೂ ಶ್ರಮಿಸಿದ್ದರು. ಬಳ್ಳಾರಿ ರಾಜಕಾರಣದ ಮೇಲೆ ಹಿಡಿತದೊಂದಿಗೆ, ರಾಜ್ಯ ಬಿಜೆಪಿಯಲ್ಲಿ ಕಳೆದ ಒಂದೂವರೆ ದಶಕದಿಂದ ತಪ್ಪಿಹೋಗಿರುವ ತಮ್ಮ ಹಿಡಿತವನ್ನೂ ಪುನರ್ ಸ್ಥಾಪಿಸುವುದು ಅವರ ಆ ಶ್ರಮದ ಹಿಂದಿನ ಲೆಕ್ಕಾಚಾರವಾಗಿತ್ತು. ಅದರಲ್ಲೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಕಾಲ ಮುಗಿದ ಬಳಿಕ ತಲೆದೋರಿರುವ ನಾಯಕತ್ವದ ಸಂಘರ್ಷದ ಲಾಭ ಪಡೆದು ಸಂಪೂರ್ಣ ರಾಜ್ಯ ಬಿಜೆಪಿಯ ಮೇಲೆ ಅಧಿಪತ್ಯ ಸ್ಥಾಪಿಸುವ ದೂರಾಲೋಚನೆ ಕೂಡ ಅವರಿಗಿತ್ತು.
ಆ ಕಾರಣದಿಂದಲೇ ಸಂಡೂರು ಚುನಾವಣೆಯನ್ನು ಹೈ ವೋಲ್ಟೇಜ್ ಕಣವಾಗಿ ಪರಿವರ್ತಿಸುವ ಉದ್ದೇಶದಿಂದ ನೇರವಾಗಿ ಸಿದ್ದರಾಮಯ್ಯ ವಿರುದ್ಧ ಏಕವಚನದ ಪದಪ್ರಯೋಗ, ಮೇಲಿಂದ ಮೇಲೆ ಸವಾಲು ಹಾಕುವುದು, ಮತ್ತು ಕೊನೆಗೆ ಮುಖ್ಯಮಂತ್ರಿಗಳ ಪ್ರಚಾರದ ವೇಳೆ ಅವರ ವಾಹನಕ್ಕೇ ಎದುರಾಗಿ ಪ್ರೋಟೋಕಾಲ್ ಗಾಳಿಗೆ ತೂರಿ ಕಾರು ಚಲಾಯಿಸಿದ್ದು, ಸೇರಿದಂತೆ ಇನಿಲ್ಲದ ಪ್ರಯತ್ನಗಳನ್ನು ನಡೆಸಿದರು.
ಪರಿಣಾಮವಾಗಿ ಸಿದ್ದರಾಮಯ್ಯ ಕೂಡ ರೆಡ್ಡಿ ಸವಾಲನ್ನು ಗಂಭೀರವಾಗಿಯೇ ಸ್ವೀಕರಿಸಿ ತಮ್ಮ ನೆಚ್ಚಿನ ಸಚಿವ ಸಂತೋಷ್ ಲಾಡ್ ಅವರಿಗೆ ಚುನಾವಣೆಯ ಹೊಣೆ ವಹಿಸಿದ್ದಲ್ಲದೆ, ಸ್ವತಃ ತಾವೇ ಮೂರು ದಿನಗಳ ಕಾಲ ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ʼಸಿದ್ದಾಸುರ ವಧೆʼ ಮಾಡಲಾಗುವುದು. ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲಾಗುವುದು ಎಂದು ರೆಡ್ಡಿ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ರೆಡ್ಡಿಯ ಯೋಗ್ಯತೆಯ ಪ್ರಸ್ತಾಪ ಮಾಡಿ ಬಳ್ಳಾರಿ ಮತ್ತೆ ರಿಪಬ್ಲಿಕ್ ಆಫ್ ಬಳ್ಳಾರಿ ಆಗಬಾರದು, ಭಯ ಮತ್ತು ಭೀತಿಯಲ್ಲಿ ಬದುಕುವ ಸ್ಥಿತಿ ಬರಬಾರದು ಎಂದರೆ ಈ ಚುನಾವಣೆಯಲ್ಲಿ ರೆಡ್ಡಿಯನ್ನು ಒದ್ದೋಡಿಸಿ ಎಂದು ಕರೆ ನೀಡಿದ್ದರು.
ಇನ್ನು ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡಲ್ಲೂ ಸತತ ಸೋಲು ಕಂಡು ಭಾರೀ ರಾಜಕೀಯ ಹಿನ್ನಡೆ ಅನುಭವಿಸಿರುವ ಬಿಜೆಪಿ ಮಾಜಿ ಸಚಿವ ಬಿ ಶ್ರೀರಾಮುಲು ಅವರಿಗೂ ಈ ಚುನಾವಣೆ ನಿರ್ಣಾಯಕವಾಗಿತ್ತು. ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಮೂಲಕ ಪಕ್ಷದೊಳಗೆ ತಮ್ಮ ಸ್ಥಾನಮಾನ ಹೆಚ್ಚಿಸಿಕೊಳ್ಳುವ ಅವಕಾಶಕ್ಕಾಗಿ ಶ್ರೀರಾಮುಲು ಕಾದಿದ್ದರು. ಆದರೆ, ಅವರ ಆಪ್ತ ದೇವೇಂದ್ರಪ್ಪ ಅವರಿಗೆ ಟಿಕೆಟ್ ನೀಡದೇ ಇರುವ ಬಗ್ಗೆ ಅಸಮಾಧಾನಗೊಂಡಿದ್ದ ಅವರು ಹೆಚ್ಚು ಆಸಕ್ತಿ ವಹಿಸಿರಲಿಲ್ಲ ಎಂಬ ಮಾತೂ ಇದೆ.
ಇದೀಗ, ಸಂಡೂರಿನ ಮತದಾರ ಮತ್ತೆ ತಮ್ಮ ಮೂರು ಬಾರಿಯ ಶಾಸಕ ಹಾಗೂ ಹಾಲಿ ಸಂಸದ ಇ ತುಕಾರಾಂ ಅವರಿಗೇ ಮಣೆ ಹಾಕಿದ್ದಾರೆ. ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಅವರನ್ನು ವಿಧಾನಸಭೆಗೆ ಕಳಿಸಿದ್ದಾರೆ.
ಆ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ವಿರುದ್ಧ ತೊಡೆ ತಟ್ಟಿದ್ದ ರೆಡ್ಡಿ ಪಾಳೆಯಕ್ಕೆ ಚುನಾವಣಾ ಫಲಿತಾಂಶದ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗಿಂತ ಚುನಾವಣಾ ಸೋಲು ಜನಾರ್ದನ ರೆಡ್ಡಿ ಮತ್ತು ಬಿ ಶ್ರೀರಾಮುಲು ಅವರಿಗೆ ದುಬಾರಿಯಾಗಿದೆ.
ಮತ್ತೊಂದು ಕಡೆ, ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದ ವಾಲ್ಮೀಕಿ ಹಗರಣ ಕೂಡ ಈ ಚುನಾವಣೆಯಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಹಗರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಿ ಜೈಲಿಗೆ ಹೋಗಿಬಂದಿರುವ ಮತ್ತು ಅದೇ ಕಾರಣಕ್ಕೆ ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದ ಬಿ ನಾಗೇಂದ್ರ ಕೂಡ ಚುನಾವಣೆಯ ಜವಾಬ್ದಾರಿ ನಿರ್ವಹಿಸಿದ್ದರು. ಹಾಗಾಗಿ ಚುನಾವಣಾ ಗೆಲುವು ಅವರಿಗೂ ಒಂದು ನಿರಾಳ ತಂದಿದೆ.
ಅದೇ ಕಾರಣಕ್ಕೆ ಸಿಎಂ ಮತ್ತು ಡಿಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು, ಈ ಚುನಾವಣಾ ಗೆಲುವನ್ನು ಬಿಜೆಪಿಯ ಅಪಪ್ರಚಾರ, ಷಢ್ಯಂತ್ರ ಮತ್ತು ವಂಚನೆಯ ರಾಜಕಾರಣದ ವಿರುದ್ಧದ ಜನರ ತೀರ್ಪು ಎಂದೇ ವ್ಯಾಖ್ಯಾನಿಸುತ್ತಿದ್ದಾರೆ.